ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ: ಮಕ್ಕಳಿಗೆ... ಅಮ್ಮನಿಗೂ!

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

ವಾಕಿಂಗ್ ಬಂದಿದ್ದ ಇಬ್ಬರು ಅಮ್ಮಂದಿರು – ಶೋಭಾ ಮತ್ತು ಅಮೃತಾ ಮಾತಾಡುತ್ತಿದ್ದರು. ಶೋಭಾ: ‘ಹೇಗೆ ಓದುತ್ತಿದ್ದಾನೆ ಮಗ? ಇನ್ನೇನು ಪರೀಕ್ಷೆ ಬಂದೇ ಬಿಡ್ತಲ್ಲ.’ ಅಮೃತಾ: ‘ಓದ್ತೀನಿ ಅಂತಾನೆ; ಬೆಳಿಗ್ಗೆ ಏಳಿಸಮ್ಮ ಅಂತಾನೆ ಏಳಲ್ಲ, ಸಂಜೆ ಸ್ಕೂಲು ಟ್ಯೂಶನ್ ಮುಗಿಸಿಕೊಂಡು ಬಂದು ಪ್ರಾಜೆಕ್ಟ್ ಅಂತಾ ಬರೀತಾ ಕೂತ್ಕೋತಾನೆ. ಗಣಿತ ಅವನಿಷ್ಟದ ವಿಷಯ. ಸಮಾಜ–ವಿಜ್ಞಾನ ಓದು ಅಂದರೆ ಎಲ್ಲ ಬರುತ್ತೆ ಬಿಡಮ್ಮಾ ಅಂತ ಜಾರಿಕೊಳ್ತಾನೆ. ಅವನಕ್ಕ ಹೀಗೆ ಮಾಡ್ತಿರಲಿಲ್ಲ, ತನ್ನಷ್ಟಕ್ಕೆ ತಾನು ಓದ್ಕೊಳ್ಳೋಳು, ಅವಳು ವಿದ್ಯಾಭ್ಯಾಸ ಮುಗಿಸಿದ್ದೇ ಗೊತ್ತಾಗ್ಲಿಲ್ಲ. ಏನು ಮಾಡೋದೋ ಗೊತ್ತಾಗ್ತಿಲ್ಲ. ನಿಮ್ಮ ಮಗಳು ಹೇಗೆ ಓದ್ತಿದ್ದಾಳೆ?’ ಶೋಭಾ: ‘ಓದ್ಕೋತಾ ಇದ್ದಾಳೆ. ಆದರೆ ಟೀವಿ ನೋಡೋದು ಬಿಡೋಲ್ಲ. ಗೆಳತಿಯರ ಜೊತೆ ಚ್ಯಾಟಿಂಗ್. ತುಂಬಾ ಸಮಯ ಹಾಳು ಮಾಡ್ತಾಳೆ. ಅವರಪ್ಪ ಬೈತಾನೇ ಇರ್ತಾರೆ. ಹೀಗಾದ್ರೆ ಒಳ್ಳೆ ಕಾಲೇಜಲ್ಲಿ ಸೀಟ್ ಸಿಗೋಲ್ಲ ಅಂತ. ಆ ಕಡೆ ಅವರಪ್ಪನ್ನ ನೋಡ್ಲೋ, ಇವಳಿಗೆ ಬುದ್ಧಿ ಹೇಳಲೋ ಗೊತ್ತಾಗಲ್ಲ. 

ಪರೀಕ್ಷಾಸಮಯದಲ್ಲಿ ತಾಯಂದಿರ ಸಾಮಾನ್ಯ ಸಂಭಾಷಣೆ ಹೀಗಿರುತ್ತದೆ.
 
ಓದುವ ಮಕ್ಕಳಿರುವ ಮನೆಯಲ್ಲಿ ತಾಯಿಯ ಜವಾಬ್ದಾರಿ ಹೆಚ್ಚು. ಅವರನ್ನು ದೈಹಿಕವಾಗಿ ಭಾವನಾತ್ಮಕವಾಗಿ ಗಟ್ಟಿಗೊಳಿಸುವ ಜವಾಬ್ದಾರಿ ಅವಳ ಮೇಲಿರುತ್ತದೆ. ಪ್ರತಿ ಮಗುವೂ ಅವಳಮ್ಮನ ಕಣ್ಮಣಿ.’
 
ಇತ್ತೀಚಿನ ದಿನಗಳಲ್ಲಿ, ಉತ್ತಮ ನೌಕರಿ ಹಾಗೂ ಆರ್ಥಿಕ ಸಬಲತೆ ಸಾಧಿಸುವುದಕ್ಕೋಸ್ಕರ ವಿದ್ಯಾಭ್ಯಾಸ ಎನ್ನುವಂತಾಗಿದೆ. ಶೈಕ್ಷಣಿಕ ವರ್ಷಗಳಲ್ಲಿ ನಿರಂತರ ಕಲಿಕೆ, ಮಕ್ಕಳಲ್ಲಿರುವ ಪ್ರತಿಭೆಗೆ ಹೊಳಪು ನೀಡುವಂತಾಗಬೇಕು. ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಠರಾಗಬೇಕು. ಜೀವನಯಾನದ ಎಲ್ಲ ಸನ್ನಿವೇಶಗಳನ್ನು ಒಂದು ಅನುಭವದಂತೆ ಕಾಣುವ ಮನೋಧರ್ಮ ಬೆಳೆಯಬೇಕು.
 
ವಿವೇಕಾನಂದರು ಹೇಳುವಂತೆ ‘Education is the manifestation of perfection already existing in man.’ ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ನಿದ್ದೆ, ಹಬ್ಬದ ಸಮಯದಲ್ಲಿ ಹೊಸ ಬಟ್ಟೆ, ಆಟಿಕೆಗಳು, ಪ್ರವಾಸ ಎಂದೆಲ್ಲ ಮಕ್ಕಳ ಕಾಳಜಿ ಮಾಡುವ ತಾಯಿ ಓದಿಸುವ ವಿಷಯದಲ್ಲಿ ‘ಹಿಟ್ಲರ್‌’ನಂತಾಗುತ್ತಾಳೆ ಎಂಬುದು ಅನೇಕ ಮಕ್ಕಳ ಅಭಿಪ್ರಾಯ.
 
ಭಾರತೀಯ ಸಂಜಾತೆ, ಪೆಪ್ಸಿ ಕಂಪನಿಯ ಸಿಇಒ ಇಂದಿರಾ ನೂಯಿಯ ಬಾಲ್ಯದ ಒಂದು ಘಟನೆ ಹೀಗಿದೆ (ಬಿಸಿನೆಸ್ ಇನ್ಸೈಡರ್-2015):  ಇಂದಿರಾ ಮತ್ತು ಅವರ ಅಕ್ಕ ಚಂದ್ರಿಕಾ ಇಬ್ಬರಿಗೂ ಅವರ ಎಂಟು ಮತ್ತು ಹನ್ನೊಂದರ ವಯಸ್ಸಿನಿಂದಲೇ, ಪ್ರತಿದಿನ ಅವರ ತಾಯಿ ಒಂದು ಭಾಷಣ ತಯಾರು ಮಾಡಲು ಹೇಳುತ್ತಿದ್ದರು . ಅದರಲ್ಲಿ ನಾನು ಪ್ರಧಾನ ಮಂತ್ರಿಯಾದರೆ, ರಾಷ್ಟ್ರಾಧ್ಯಕ್ಷಳಾದರೆ, ಕಂಪನಿಯೊಂದರ ಮುಖ್ಯಸ್ಥಳಾದರೆ ಏನು ಮಾಡುತ್ತೇನೆ? ಎನ್ನುವುದನ್ನು ಭಾಷಣದಲ್ಲಿ ಹೇಳಬೇಕಿತ್ತು. ಊಟದ ನಂತರ ತಾಯಿಯು ಒಂದು ಚೀಟಿಯಲ್ಲಿ ಯಾರ ಭಾಷಣವನ್ನು ಅಂದು ಆಯ್ಕೆ ಮಾಡುತ್ತಿದ್ದರೋ ಅವರ ಹೆಸರನ್ನು ಬರೆದುಕೊಡುತ್ತಿದ್ದರು. ಆ ಭಾಷಣವನ್ನು ಕುರಿತು ತಮಾಷೆಯಾಗಿ ನಂತರ ತಾಯಿ ಮಕ್ಕಳು ನಗುತ್ತಿದ್ದುದೂ ಉಂಟು.
 
ಅವರ ತಾಯಿ ಸಾಂಪ್ರದಾಯಿಕ ಮನೆತನದವರಾಗಿದ್ದರೂ ಬಾಲ್ಯದಲ್ಲಿ ಅವರ ಅಜ್ಜನಿಂದ ಕಟ್ಟುನಿಟ್ಟಿನ ಶಿಕ್ಷಣ ದೊರೆತಿತ್ತು. ಅವರ ಅಜ್ಜ ಯಾವುದಾದರೂ ಕೆಲಸ ಹೇಳಿದಾಗ, ಇವರು ಕಾರಣಾಂತರಗಳಿಂದ ಮಾಡಲಾಗದಿದ್ದರೆ ಇನ್ನೂರು ಸಲ ನಾನು ಯಾವುದೇ ನೆವಗಳನ್ನು ಹೇಳುವುದಿಲ್ಲ (ಈ ವಿಲ್ ನಾಟ್ ಮೇಕ್ ಎಕ್ಸ್‌ಕ್ಯೂಸಸ್) ಎಂದು ಬರೆಸುತ್ತಿದ್ದರಂತೆ. ಅವರು ಬೆಳೆದಂತೆ ಈ ಶಿಕ್ಷೆಗಾಗಿ ಅಜ್ಜನಿಗೆ ಋಣಿಯಾದರಂತೆ. 
 
ಅವರ ತಾಯಿಯ ದಿನನಿತ್ಯದ ಈ ಚಟುವಟಿಕೆ ನೂಯಿಯವರಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಮತ್ತು ತಮ್ಮ ಕಾರ್ಯಕ್ಷೇತ್ರದಲ್ಲಿ ನಿಖರತೆಯನ್ನು ಸಾಧಿಸುವಲ್ಲಿ ಸಹಾಯ ಮಾಡಿದುದನ್ನು ನೆನೆಸಿಕೊಳ್ಳುತ್ತಾರೆ. 
 
ತಾಯಿಗೆ ಮನೆಯ ಅನೇಕ ಕೆಲಸಗಳ ಜೊತೆಗೆ ಸಮಾಜಕ್ಕೆ ಭವಿಷ್ಯದ ನಿಧಿಗಳಾದ ಮಕ್ಕಳನ್ನು ಬೆಳೆಸುವುದು ಅತ್ಯಂತ ಜವಾಬ್ದಾರಿಯುತ ಕೆಲಸ. ರಾಜನಾದವನಿಗೆ ತನ್ನ ರಾಜ್ಯದಲ್ಲಷ್ಟೇ ಮರ್ಯಾದೆ, ವಿದ್ಯಾವಂತನಿಗೆ ಜಗತ್ತಿನ ಯಾವುದೇ ಭಾಗದಲ್ಲೇ ಹೋದರೂ ಮನ್ನಣೆ ಎನ್ನುವುದನ್ನರಿತ ಅವಳು ಮಕ್ಕಳ ವಿದ್ಯಾಭ್ಯಾಸಕ್ಕೆ ಮಹತ್ವವನ್ನು ನೀಡುತ್ತಿದ್ದಾಳೆ. ಬಾಲ್ಯದಲ್ಲಿ ಮಕ್ಕಳು ತಾಯಿಯ ಮೇಲೆಯೇ ಹೆಚ್ಚು ಅವಲಂಬಿತರಾಗಿರುವುದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಅವಳ ಪಾತ್ರ ಹಿರಿದು.
 
ವಿಶ್ರಾಂತ ಸದಸ್ಯರು: ಮನೆಯಲ್ಲಿರುವ ಅಜ್ಜಿ ತಾತಂದಿರಿಗೆ ಟೀವಿ ಧಾರಾವಾಹಿಗಳು ಸಮಯ ಕಳೆಯಲು ಇರುವ ಪ್ರಮುಖ ಸಾಧನ. ಅವರ ಆಸಕ್ತಿಯ ಕಾರ್ಯಕ್ರಮಗಳು ಬರುವ ಸಮಯ ರಾತ್ರಿ 7ರಿಂದ 9 (ಪ್ರೈಮ್ ಟೈಮ್) ಅದು ಮಕ್ಕಳು ಓದುವ ಸಮಯ. ಟೀವಿ ಓದಿನಲ್ಲಿ ಗಮನವನ್ನು ಕೇಂದ್ರೀಕರಿಸಲು ಬಿಡುವುದಿಲ್ಲ. ತಾಯಿಯರಿಗೆ ಇದೊಂದು ಧರ್ಮಸಂಕಟದ ವಿಷಯ ಅತ್ತೆ–ಮಾವಂದಿರಿಗೆ ಮಕ್ಕಳು ಓದುವ ಸಮಯದಲ್ಲಿ ಟೀವಿ ನೋಡಬೇಡಿರೆಂದು ಹೇಳುವುದು ಹೇಗೆ? ಮಕ್ಕಳು ಶಾಲೆಗೆ ಹೋಗಿದ್ದಾಗ ಮನೆಯ ಹಿರಿಯರನ್ನು ಕೂರಿಸಿಕೊಂಡು ಮಕ್ಕಳ ತಾಯಿ-ತಂದೆಯರಿಬ್ಬರೂ ಟೀವಿ ವೀಕ್ಷಣೆಯ ಸಮಯವನ್ನು ಬದಲಾವಣೆ ಮಾಡುವುದರ ಕುರಿತು ಮಾತನಾಡಬೇಕು. ಅವರಿಗೆ ಆಗುತ್ತಿರುವ ತೊಂದರೆಯ ಕುರಿತು ಮನದಟ್ಟು ಮಾಡಿಕೊಡಬೇಕು. ತಾಕೀತು ಮಾಡಿ ಹೇಳಿದರೂ ಸರಿಯೇ. 
 
ಓದುವ ಸಮಯ: ಕೆಲವು ಮಕ್ಕಳು ಬೆಳಿಗ್ಗೆ ಬೇಗ ಎದ್ದು ಓದುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಕೆಲವರು ರಾತ್ರಿ ಸಮಯ ಎಷ್ಟು ಹೊತ್ತು ಬೇಕಾದರೂ ಓದಬಲ್ಲರು, ಆದರೆ ಬೆಳಿಗ್ಗೆ ಏಳಲಾರರು. ಒಂದೊಂದು ಮಗುವಿನ ಅಭ್ಯಾಸದ ಮಾದರಿ ಒಂದೊಂದು ರೀತಿಯದು. ಬೆಳಿಗ್ಗೆಯೇ ಎದ್ದು ಓದು, ರಾತ್ರಿ ತುಂಬಾ ಹೊತ್ತು ಓದು ಎಂದು ಒತ್ತಾಯ ಮಾಡದೆ ಅವರವರ ಕ್ರಮದಲ್ಲಿ ಓದಲು ಬಿಡಬೇಕು. ತಾಯಿ ತನ್ನ ಮಕ್ಕಳನ್ನು ಕೊಠಡಿಯಲ್ಲಿ ಓದಲು ಬಿಟ್ಟು ತಾವು ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಾ, ಅಲ್ಲಿಂದಲೇ, ‘ಓದ್ತಾ ಇದೀಯೋ ಮಲಗಿಬಿಟ್ಟೆಯೋ? ಮೊಬೈಲ್ ಆಡ್ತಾ ಇದೀಯಾ?’ ಎಂದೆಲ್ಲಾ ಕೂಗುವುದು ಮಕ್ಕಳನ್ನು ಗೊಂದಲಗೊಳಿಸುತ್ತದೆ. ಕೆಲವು ಮಕ್ಕಳು ತಾವು ಓದುವಾಗ ಅಮ್ಮ ಪಕ್ಕದಲ್ಲಿ ಕುಳಿತಿರಲಿ ಎಂದು ಬಯಸುತ್ತಾರೆ, ಕೆಲವು ಮಕ್ಕಳು ಇಷ್ಟಪಡುವುದಿಲ್ಲ. ಮಕ್ಕಳ ಮನ ಒಲಿಸಿ, ಎರಡರಿಂದ ಮೂರು ತಾಸು ಅವರ ಪಕ್ಕದಲ್ಲೇ ಕೂತು ಅಂದಿನ ವೇಳಾಪಟ್ಟಿಯ ಅನುಸಾರವಾಗಿ ಅಭ್ಯಾಸ ಮಾಡುತ್ತಿದ್ದಾರೆಯೇ ಎಂದು ಸೂಕ್ಷ್ಮವಾಗಿ ಗಮನಿಸಬೇಕು.
 
ಒಂದೆರಡು ದಿನವಲ್ಲ, ಮಕ್ಕಳಿಗೆ ಕಲಿಕೆಯಲ್ಲಿ ಶಿಸ್ತು ಬರಬೇಕೆಂದರೆ ಇದನ್ನು ನಿರಂತರವಾಗಿ ಪಾಲಿಸಬೇಕಾಗುವುದು. ಆ ಸಮಯದಲ್ಲಿ ತಾವೂ ತಮ್ಮ ಆಸಕ್ತಿಯ ಪುಸ್ತಕಗಳನ್ನು ಓದಬಹುದು, ತರಕಾರಿ ಹೆಚ್ಚುವುದು, ಕೈ ಹೊಲಿಗೆ, ಬಟ್ಟೆ ಮಡಿಸಿಡುವುದು ಇತ್ಯಾದಿ ಕೆಲಸಗಳನ್ನು ಮುಗಿಸಿಕೊಳ್ಳಬಹುದು. 
 
ಮೊಬೈಲ್: ಮೊಬೈಲ್‌ಗಳ ಹಾವಳಿಯಂತೂ ಮೇರೆ ಮಿರುತ್ತಿದೆ. ಎಂಟು ತಿಂಗಳ ಮಗುವಿನಿಂದ ಹಿಡಿದು 80 ವರ್ಷದ ವಯೋಮಾನದವರೆಗೂ ಎಲ್ಲರ ಕೈಯಲ್ಲೂ ಅದರದ್ದೇ ಸಾಮ್ರಾಜ್ಯ. ವಿದ್ಯಾರ್ಥಿಗೆ ಇದರ ಅವಶ್ಯಕತೆ ಎಷ್ಟು? ಇತ್ತೀಚೆಗೆ ಒಬ್ಬ ತಾಯಿ ಕೇಳಿದರು – ‘ಎಲ್ಲ ಮಕ್ಕಳೂ ಮೊಬೈಲ್ ಹೊಂದಿರುತ್ತಾರೆ, ನಮಗೆ ಕೊಡಿಸಲು ಸಾಧ್ಯವಿದೆ, ಕೊಡಿಸಿದ್ದೇವೆ, ಬೇರೆ ಮಕ್ಕಳೆದುರಿಗೆ ನಮ್ಮ ಮಗು ಕೀಳರಿಮೆ ಅನುಭವಿಸಬೇಕೆ?’ ಈ ಮನೋಧರ್ಮ, ಕೈಯಾರೆ ಮಕ್ಕಳನ್ನು ಅವನತಿಯತ್ತ ದೂಡುವಂತಿಲ್ಲವೆ? ಮೊಬೈಲನ್ನು ಮಕ್ಕಳಿಗೆ ಕೊಡಿಸಿ, ಅದಕ್ಕೆ ಸಿಮ್ ಕಾರ್ಡ್ ಹಾಕಿಸಿ, DATA pack ಹಾಕಿಸಿ, ಮಕ್ಕಳು ಸದಾ ಮೊಬೈಲ್ ಹಿಡಿದಿರುತ್ತಾರೆ, ಹೇಳಿದ ಮಾತು ಕೇಳುವುದಿಲ್ಲ ಎಂದು ದೂರುವ ಪೋಷಕರಿಗೆ ಈ ಪ್ರಶ್ನೆ, ಮಕ್ಕಳಿಗೆ ಮೊಬೈಲ್ ಯಾಕೆ ಬೇಕು? ಕೊಡಿಸಿದವರಾರು? ಮಕ್ಕಳನ್ನು ವಾಸ್ತವ ಜಗತ್ತಿನಿಂದ ದೂರವಾಗಿಸಿ ಭ್ರಮಾಲೋಕದಲ್ಲಿ ಮುಳುಗಿಸುತ್ತಿದೆ ಈ ಗ್ಯಾಜೆಟ್. ಇದರಿಂದ ಹೊರತರುವ ಪ್ರಯತ್ನವಾಗಿ ಕೆಲವು ಅಮ್ಮಂದಿರು ಹೀಗೆ ಮಾಡುತ್ತಿದ್ದಾರೆ: 
 
* ಬಡಾವಣೆಯ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ. 
 
* ಮನೆಯ ಕೆಲಸಗಳಲ್ಲಿ ಅವರನ್ನು ನಿಯಮಿತವಾಗಿ ತೊಡಗಿಸಿ, ತಮ್ಮ ಊಟದ ತಟ್ಟೆ ತೊಳೆಯುವುದು, ಒಗೆದ ಬಟ್ಟೆಗಳನ್ನು ಮಡಿಸಿಟ್ಟುಕೊಳ್ಳುವುದು. ಊಟದ ಡಬ್ಬಿಗಳನ್ನು ತೊಳೆದಿಡುವಂತೆ ಪ್ರೋತ್ಸಾಹಿಸುವುದು.
 
* ವಾರ್ತಾಪತ್ರಿಕೆಗಳನ್ನು ಮನೆಯಲ್ಲಿ ಪ್ರತಿದಿನ ಓದುವುದು.
 
* ಶಾಲೆಯ ಪ್ರಾಜೆಕ್ಟ್‌ಗಳನ್ನು ಸಮಯವಿರುತ್ತಲೇ ಮುಗಿಸುವುದರತ್ತ ಗಮನ ಹರಿಸುವುದು.
 
ಆಟದ ಸಮಯ: ಮಕ್ಕಳ ಆಸಕ್ತಿಯ ಯಾವುದೇ ಆಟದಲ್ಲಿ ದಿನದ ಅರ್ಧಗಂಟೆ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು. ಉದ್ಯಾನವನದಲ್ಲಿ ಇತರ ಮಕ್ಕಳೊಂದಿಗೆ ಆಡಲು ಬಿಡುವುದೊಳಿತು. ಅಲ್ಲಿಯ ಮಣ್ಣು, ಕಲ್ಲು, ಅಳಿಲು, ಮರಗಳನ್ನು ಮುಟ್ಟಿ ಆಟವಾಡುವುದಕ್ಕೆ ಬಿಡಬೇಕು. ಓಡುವುದು, ಹಗ್ಗದಾಟ (ಸ್ಕಿಪಿಂಗ್), ಸೈಕ್ಲಿಂಗ್ ಹೊಸ ಹುರುಪು ತುಂಬುತ್ತದೆ. ತಾಯಿ, ಮಗ ಕೌನ್ಸಿಲಿಂಗ್‌ಗೆ ಬಂದಿದ್ದರು, ಮಗ ಹೇಳಿದ ನನಗೆ– ‘ವಾರಕ್ಕೆರಡು ದಿನ ಒಂದೊಂದು ತಾಸು ಫುಟ್‌ಬಾಲ್ ಆಡಲು ಬಿಟ್ಟರೆ ಮಾತ್ರ, ಇತರ ದಿನಗಳಲ್ಲಿ ಓದುತ್ತೇನೆ, ನಮ್ಮ ತಾಯಿಗೆ ಇದನ್ನು ಹೇಳಿ ಒಪ್ಪಿಸಿ.’ 
 
ರುಚಿ-ಆರೋಗ್ಯ-ತಾಯಿ: ತಾಯಿಗೆ ಯಾವಾಗಲೂ ತಾನು ಮಾಡುವ ಅಡುಗೆ, ತಿಂಡಿಯ ಮೇಲೇ ನಂಬಿಕೆ, ಹೊಟೇಲ್ ಊಟ, ಪಾನಿಪುರಿ, ಪಿಜ್ಜಾ, ಫ್ರೆಂಚ್ ಫ್ರೈಸ್  ಮುಂತಾದುವನ್ನು ದಿನವೂ ತಿಂದರೆ ಆರೋಗ್ಯ ಹಾಳಾಗುವುದು, ಯಾವ ಎಣ್ಣೆ ಬಳಸಿರುತ್ತಾರೋ, ಯಾವಾಗ ಮಾಡಿರುತಾರೋ – ಎಂದೆಲ್ಲ ಗೊಣಗುವುದು ಅವಳ ಜಾಯಮಾನ. ಆದರೆ ಮಕ್ಕಳನ್ನು ಇವುಗಳಿಂದ ದೂರವಿಡುವುದು ಸುಲಭದ ಮಾತಲ್ಲ. ಸಮತೋಲನವಾದ ಆಹಾರ ಮಕ್ಕಳನ್ನು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿಡುತ್ತದೆ. ಪರೀಕ್ಷೆಯ ಸಮಯದಲ್ಲಿ ಇದರ ಬಗೆಗೆ ಕಟ್ಟುನಿಟ್ಟಾದ ನಿಯಮಗಳನ್ನು ಹಾಕುವುದು ಒಳ್ಳೆಯದು. 
 
ತುಂಬಾ ಒತ್ತಡ ಹಾಕಲ್ಲ: ಇದು ಅನೇಕ ಪೋಷಕರು ಹೇಳುವ ಮಾತು. ಯಾವುದು ಒತ್ತಡ? ಓದಿನಲ್ಲಿ ಶಿಸ್ತು, ಕ್ರಮಬದ್ಧತೆ, ಕಲಿಕೆಯಲ್ಲಿ ಆಸಕ್ತಿ, ಪರೀಕ್ಷೆ ಸಮೀಪಿಸುವಾಗ ಓದಿಗೆ ಹೆಚ್ಚಿನ ಸಮಯ ಮೀಸಲಿಡುವುದು ಇದೆಲ್ಲಾ ಒತ್ತಡವೇ? ಇದನ್ನು ನಿಭಾಯಿಸಲು ಮಕ್ಕಳನ್ನು ತಯಾರು ಮಾಡಬೇಕು. ಜೀವನದ ಅದೆಷ್ಟೋ ಒತ್ತಡಗಳು ಹೇಳದೆ ಬರುತ್ತವೆ. 
 
ಶಿಕ್ಷೆ/ಶಿಕ್ಷಣ-ಇವೆರಡೂ ಬಹುಶಃ ಜೊತೆಜೊತೆಯಲ್ಲೇ ಸಾಗಿದರೆ ಮಕ್ಕಳಿಗೆ ಪರಿಶ್ರಮದ ರುಚಿ ಹತ್ತೀತು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸುವುದು ಸುಲಭದ ಮಾತಲ್ಲ. ಶಾಲೆಯಲ್ಲಿ ಶಿಕ್ಷಕರು, ಮನೆಯಲ್ಲಿ ತಾಯಿ ಈ ಕುರಿತು ಒಮ್ಮತದಿಂದ ಕ್ರಮ ಜರುಗಿಸಬೇಕಾಗಿದೆ.  
10ನೇ ತರಗತಿ, ಎರಡನೇ ಪಿಯು ಮಕ್ಕಳ ತಾಯಂದಿರಿಗೆ ಹೆಚ್ಚಿನ ಜವಾಬ್ದಾರಿ. ಮಗಳನ್ನು/ಮಗನನ್ನು ಟ್ಯೂಶನ್‌ಗೆ ಬಿಡಬೇಕು, ಮನೆಯಲ್ಲಿ ಓದಿಸಬೇಕು ಅದಕ್ಕೇ ನಾನು ನೌಕರಿ ಬಿಟ್ಟಿದ್ದೇನೆ ಎನ್ನುವ ಅಮ್ಮಂದಿರು ಕೆಲವರಾದರೆ, ಪಬ್ಲಿಕ್ ಪರೀಕ್ಷೆ, ಅದಕ್ಕೆ ಮಕ್ಕಳ ಸಂಗೀತ, ನೃತ್ಯ, ಟೇಬಲ್ ಟೆನಿಸ್ ಎಲ್ಲ ತರಗತಿಗಳನ್ನೂ ನಿಲ್ಲಿಸಿದ್ದೇನೆ ಎನ್ನುವವರು ಕೆಲವರು.
 
**
ಪರೀಕ್ಷಾ ಸಮಯದಲ್ಲಿ ಅಮ್ಮಂದಿರು ಪಾಲಿಸಬೇಕಾದ ಕೆಲವು ನಿಯಮಗಳು
* ಮಕ್ಕಳ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು 
 
* ಅವರ ಪೋಷಕರ ದೂರವಾಣಿ ಸಂಖ್ಯೆಯನ್ನೂ ಇಟ್ಟುಕೊಂಡಿರುವುದು
 
* ಎಲ್ಲ ಪೋಷಕ-ಶಿಕ್ಷಕ ಸಭೆ (ಪೇರೆಂಟ್ ಟೀಚರ್ಸ್‌  ಮೀಟಿಂಗ್)ಯಲ್ಲೂ ಭಾಗವಹಿಸುವುದು. ಇದು ಮಕ್ಕಳನ್ನು ಜವಾಬ್ದಾರಿಯುತರನ್ನಾಗಿ ಮತ್ತು ಬದ್ಧತೆಯುಳ್ಳವರನ್ನಾಗಿಸುತ್ತದೆ.
 
* ಊಟದ ಸಮಯದಲ್ಲಿ ಟೀವಿ ಆರಿಸಿ, ಮನೆಯವರೆಲ್ಲರೂ ಜೊತೆಯಲ್ಲಿ ಮಾತನಾಡುತ್ತಾ ಊಟ ಮಾಡುವುದು.
 
* ಹೊಸ ಹೊಸ ಉಪಾಯಗಳು, ಪ್ರಯೋಗಗಳನ್ನು ಪರೀಕ್ಷಾ ಸಮಯದಲ್ಲಿ ಮಾಡದೆ, ಇದುವರೆಗೂ ಮಾಡಿದ ಅಭ್ಯಾಸ/ಚಟುವಟಿಕೆಗಳನ್ನು ಮುಂದುವರೆಸುವುದು.
 
* ಸಾಮಾನ್ಯ ಉಸಿರಾಟವನ್ನು ಗಮನಿಸುವ ಅಭ್ಯಾಸವನ್ನು ಪರೀಕ್ಷೆಗೆ ಹೋಗುವ ಮೊದಲು ಮಾಡಿಸಿದರೆ ಮನಸ್ಸು ಶಾಂತವಾಗಿರಿಸಿಕೊಳ್ಳಲು ಅನುಕೂಲ.
 
* ಪ್ರತಿದಿನ ಪ್ರಾರ್ಥನೆಯನ್ನು ಮಾಡುವ ಪದ್ಧತಿಯು ಪರೀಕ್ಷಾ ಸಮಯದಲ್ಲಿ ಮನೋಬಲವನ್ನು ಹೆಚ್ಚಿಸಿ ಮನಸ್ಸನ್ನು ಸಮಾಧಾನದಲ್ಲಿರಿಸಲು ಸಹಕಾರಿ.
 
* ಮನೆಯ ವಾತಾವರಣ ಶಾಂತವಾಗಿರುವಂತೆ ನೋಡಿಕೊಳ್ಳುವುದು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT