ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಗೆ ಪೋಷಕರ ಅನುಮತಿ ಇರಲಿ...

ಏನಾದ್ರೂ ಕೇಳ್ಬೋದು
Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
* ನಾನು ಪ್ರೀತಿಸುತ್ತಿರುವ ಹುಡುಗ ಅನ್ಯಜಾತಿಯವರು, ಇಬ್ಬರ ಮನೆಯಲ್ಲೂ ಈ ವಿಚಾರ ತಿಳಿಸಿದ್ದೇವೆ. ಹುಡುಗನ ಮನೆಯಲ್ಲಿ ಒಪ್ಪಿದ್ದಾರೆ, ಆದರೆ ನಮ್ಮ ಮನೆಯಲ್ಲಿ ಒಪ್ಪುತ್ತಿಲ್ಲ, ನನ್ನ ತಾಯಿ ತುಂಬಾ ಬೇಜಾರಾಗಿದ್ದಾರೆ. ಅವರಿಗೆ ಹೇಗೆ ಸಮಾಧಾನ ಮಾಡಲಿ?
–ಸುಜಾತಾ
ಅಂತರ್ಜಾತಿ ವಿವಾಹ ಎಂಬುದು ತುಂಬಾ ಸೂಕ್ಷ್ಮ ವಿಚಾರ. ಈಗಲೂ ಅನೇಕ ಮನೆಗಳಲ್ಲಿ ಇದು ಅರಗಿಸಿಕೊಳ್ಳಲು ಆಗದ ವಿಷಯ. ಸಂಪ್ರದಾಯ, ಆಹಾರ, ಭಾಷೆ... ಹೀಗೆ ಎಲ್ಲವೂ ವಿಭಿನ್ನ ಆಗುವ ಕಾರಣ, ಹಲವು ಪೋಷಕರಿಗೆ ಇದನ್ನು ಒಪ್ಪಿಕೊಳ್ಳುವುದು ಕಷ್ಟ. ಮದುವೆ ಎನ್ನುವುದು ಕೇವಲ ಹೆಣ್ಣು–ಗಂಡಿಗೆ ಸಂಬಂಧಿಸಿದ್ದು ಅಲ್ಲ. 
 
ಇದು ಎರಡು ಕುಟುಂಬಗಳಿಗೆ ಸಂಬಂಧಿಸಿದ್ದು.  ಅಪ್ಪ–ಅಮ್ಮ ಎಲ್ಲರನ್ನೂ ಬಿಟ್ಟು ಸ್ನೇಹಿತನ ಜೊತೆ ಇರಲು ಈಗ ನೀವು ಯೋಚಿಸಬಹುದು. ಆದರೆ ನಾಳೆ...? ಮನೆಯವರ ವಿರೋಧ ಕಟ್ಟಿಕೊಂಡು ಬೇರೆಯಾದರೆ ನಿಮ್ಮ ಮಕ್ಕಳಿಗೆ ಅಜ್ಜ–ಅಜ್ಜಿಯಂದಿರು ಸೇರಿದಂತೆ ಕುಟುಂಬದವರ ಪ್ರೀತಿ ಸಿಗುವುದಿಲ್ಲ. ಆಗ ನೀವು ಪರಿತಪಿಸಬೇಕಾಗಬಹುದು. 
 
ಈಗ ನೀವು ಗಟ್ಟಿ ನಿರ್ಧಾರವನ್ನು ಮಾಡಿಯೇ ಬಿಟ್ಟಿದ್ದರೆ ಆ ಬಗ್ಗೆ ನಿಮ್ಮ ಅಮ್ಮನ ಜೊತೆ ಮುಕ್ತವಾಗಿ ಚರ್ಚಿಸಿ. ನಿಮ್ಮ ಸ್ನೇಹಿತನ ಜೊತೆ ತುಂಬಾ ಚೆನ್ನಾಗಿ ಬಾಳುತ್ತೀರಿ ಎಂಬ ಬಗ್ಗೆ ಅವರಲ್ಲಿ ವಿಶ್ವಾಸ ಮೂಡಿಸಿ. ಎಲ್ಲ ಪೋಷಕರು ಬಯಸುವುದು ಅವರ ಮಕ್ಕಳ ಭವಿಷ್ಯ ಚೆನ್ನಾಗಿ ಇರಲಿ ಎನ್ನುವುದು ಮಾತ್ರ. ಆದ್ದರಿಂದ ಅಮ್ಮನನ್ನು ಓಲೈಸಲು ಪ್ರಯತ್ನಿಸಿ ನೋಡಿ.
 
**
* ನನ್ನ ಗೆಳೆಯ ನನ್ನೊಂದಿಗೆ ತುಂಬಾ ಆತ್ಮೀಯನಾಗಿದ್ದ, ಹಲವು ವರ್ಷಗಳ ಸ್ನೇಹ ನಮ್ಮದು, ಈಚೆಗೆ ಆತನ ಮದುವೆ ಆಯಿತು. ಈಗ ಅವನು ನನಗೆ ಹೆಚ್ಚು ಸಮಯ ಕೊಡುತ್ತಿಲ್ಲ, ಮೊದಲಿನ ಪ್ರೀತಿ–ಸ್ನೇಹವನ್ನು ಅವನು ತೋರುತ್ತಿಲ್ಲ. ನನಗೆ ಜೀವನವೇ ಬೇಡ ಅನಿಸುತ್ತಿದೆ. ಏನು ಮಾಡಲಿ?
–ದಿನೇಶ್
ನಿಮ್ಮ ಸ್ನೇಹದ ವಿಷಯ ಕೇಳಿ ತುಂಬಾ ಸಂತೋಷವಾಯಿತು. ಆದರೆ ನಿಮಗಿಬ್ಬರಿಗೂ ನಿಮ್ಮದೇ ಆದ ವೈಯಕ್ತಿಕ ಜೀವನ ಎನ್ನುವುದೂ ಇದೆ ಯಲ್ಲವೇ? ಅದನ್ನು ನೀವು ಗೌರವಿಸಬೇಕು. ಮದುವೆಯಾದ ಮೇಲೆ ಆ ಹೊಸ ಜೀವನಕ್ಕೆ ಹೊಂದಿಕೊಳ್ಳಬೇಕು, ಮನೆಗೆ ಪತ್ನಿ ಬಂದಾಗ ಆಕೆಗೂ ಪ್ರೀತಿ ವಿಶ್ವಾಸ ತೋರಬೇಕಲ್ಲವೇ? ಆಗ ಪ್ರೀತಿ–ವಿಶ್ವಾಸದಲ್ಲಿ ಹಂಚಿಕೆಯಾಗುವುದು ಸಹಜ. ಅಂದ ಮಾತ್ರಕ್ಕೆ ನಿಮ್ಮ ಮೇಲೆ ಅವರ ಗಮನ ಕಡಿಮೆಯಾಗಿದೆ ಎಂದು ಅರ್ಥವಲ್ಲ. ನಿಮ್ಮ ಸ್ನೇಹಿತನಿಗೆ ಈಗಷ್ಟೇ ವಿವಾಹ ಆಗಿರುವ ಕಾರಣ, ವೈವಾಹಿಕ ಜೀವನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಕಾಲಾವಕಾಶ ಕೊಡಿ. ಈ ಸಮಯದಲ್ಲಿ ನೀವು ಕೂಡ ಒಂಟಿಯಾಗಿ ಇರಬೇಡಿ. 
ಯಾವುದಾದರೂ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ‘ಒಂಟಿ ಮನಸ್ಸು ದೆವ್ವದ  ಬೀಡು’ ಎಂಬ ಗಾದೆ ಮಾತು ಇದೆ. ಆದ್ದರಿಂದ ಒಂಟಿಯಾಗಿದ್ದರೆ ಇಂಥ ನಕಾರಾತ್ಮಕ ಯೋಚನೆಗಳು ಬರುತ್ತಿರುತ್ತವೆ. ಆದ್ದರಿಂದ ಕೆಲಸ–ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ.
 
**
* ನಾನು ಮತ್ತು ನನ್ನ ಸ್ನೇಹಿತ ಇಬ್ಬರೂ ಪದವೀಧರರು. ಇಬ್ಬರೂ ಪ್ರೀತಿಸುತ್ತಿದ್ದೇವೆ, ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಅವನಿಗೆ ಕೆಲಸ ಇಲ್ಲ. ಆದರೂ ನಾವಿಬ್ಬರೂ ಒಟ್ಟಿಗೆ ಚೆನ್ನಾಗಿ ಬಾಳುತ್ತೇವೆ ಎಂಬ ವಿಶ್ವಾಸ ಇದೆ. ಅವನಿಗೆ ಕೆಲಸ ಇಲ್ಲದ ಕಾರಣ, ನಮ್ಮ ಮನೆಯವರಿಗೆ ಪ್ರೀತಿ ವಿಷಯ ಹೇಳಿದರೆ ಮದುವೆಗೆ ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ತುಂಬಾ ಗೊಂದಲದಲ್ಲಿ ಇದ್ದೇನೆ.
-ರಜನಿ
ಉತ್ತಮ ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವುದು ಅತಿಮುಖ್ಯ. ಪ್ರೀತಿಯಲ್ಲಿ ಬಿದ್ದಾಗ ಎಲ್ಲರೂ ತುಂಬಾ ಒಳ್ಳೆಯವರು ಎಂದು ಅನಿಸುವುದು ಸಹಜವೇ. ಅದಕ್ಕೇ ಪ್ರೀತಿ ಕುರುಡು ಎನ್ನುವ ಗಾದೆ ಹುಟ್ಟಿದ್ದು. ಆದರೆ ಹೃದಯದ ಬದಲು ಇಂಥ ಸಂದರ್ಭಗಳಲ್ಲಿ ಇಬ್ಬರೂ ಮೆದುಳಿನಿಂದ ಯೋಚಿಸಬೇಕಾಗುತ್ತದೆ. ಒಂದು ವೇಳೆ ಆತ ತುಂಬಾ ಒಳ್ಳೆಯವನು ಎಂದು ಎನಿಸಿದರೆ ಸ್ವಲ್ಪ ತಾಳ್ಮೆ ವಹಿಸಿ ಅವನಿಗಾಗಿ ಕಾಯಬೇಕು. ಈ ಸಂದರ್ಭದಲ್ಲಿ ಮದುವೆಯ ಬಗ್ಗೆ ನಿಮ್ಮ ಪೋಷಕರ ಜೊತೆ ಮಾತನಾಡಿ.
 
ಮದುವೆಯಾದ ಮೇಲೆ ನಿಮ್ಮ ಸಂಸಾರ ಚೆನ್ನಾಗಿ ಇರುತ್ತದೆ ಎಂದು ಭರವಸೆ ಅವರಿಗೂ ಬರಲಿ.  ಇಂಥ ವಿಷಯಗಳಲ್ಲಿ ನಿಧಾನವೇ ಪ್ರಧಾನ. ತರಾತುರಿ ಸಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT