ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಘಶಾಲಾ ಟ್ರಸ್ಟ್‌ಗೆ ಪ್ರಶಸ್ತಿ

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
ಬೆಂಗಳೂರಿನಲ್ಲಿ ಈಚೆಗೆ ನಡೆದ ಹದಿನಾಲ್ಕನೆಯ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮ ನಗರವಾಸಿಗಳ ನೆನಪಿನಿಂದ ಮರೆಯಾಗಿಲ್ಲ.
 
ಸರ್ಕಾರಿ ಶಾಲೆಗಳ ಶಿಕ್ಷಕರ ಬೋಧನಾ ಗುಣಮಟ್ಟ ಹೆಚ್ಚಿಸಲು ಕೆಲಸ ಮಾಡುತ್ತಿರುವ ಬೆಂಗಳೂರಿನ ಮೇಘಶಾಲಾ ಟ್ರಸ್ಟ್‌ ಕೇಂದ್ರ ಸರ್ಕಾರ ನೀಡುವ ‘ಸಾಮಾಜಿಕ ಆವಿಷ್ಕಾರ ಕುರಿತ ರಾಷ್ಟ್ರೀಯ ಸ್ಪರ್ಧೆ’ಯಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
 
ಸಮಾಜಕ್ಕೆ ಉಪಕಾರವಾಗುವ, ಒಂದಷ್ಟು ಹೊಸತನ ಇರುವ ಸಂಶೋಧನೆಗೆ ನೀಡುವ ಪ್ರಶಸ್ತಿ ಇದು. ಟ್ರಸ್ಟ್‌ ಪರವಾಗಿ, ಶಿಕ್ಷಣ ಕಾರ್ಯಕ್ರಮಗಳ ಉಪಾಧ್ಯಕ್ಷ ಉಲ್ಲಾಸ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.
 
ಪ್ರಶಸ್ತಿ ಬಗ್ಗೆ: ಮಹಾತ್ಮ ಗಾಂಧೀಜಿ ಅವರು 1929ರಲ್ಲಿ ಅಖಿಲ ಭಾರತೀಯ ಚರಕ ಸಂಘದ ಕಾರ್ಮಿಕರ ಸಮಿತಿಯ ಮೂಲಕ ರಾಷ್ಟ್ರವ್ಯಾಪಿ ಸ್ಪರ್ಧೆಯೊಂದನ್ನು ಆಯೋಜಿಸಿದ್ದರು. ಹಗುರವಾಗಿರುವ, ಬಳಸಲು ಸುಲಭ ಆಗಿರುವ ಚರಕವನ್ನು ಸಿದ್ಧಪಡಿಸುವ ಸ್ಪರ್ಧೆ ಅದಾಗಿತ್ತು. ಗಾಂಧೀಜಿ ಆಯೋಜಿಸಿದ್ದ ಸ್ಪರ್ಧೆಯ ನೆನಪಿಗಾಗಿ ವಿದೇಶಾಂಗ ಸಚಿವಾಲಯ, ನೀತಿ ಆಯೋಗ ಜಂಟಿಯಾಗಿ ಸ್ಪರ್ಧೆ ಆಯೋಜಿಸಿದವು.
 
ಆರೋಗ್ಯ, ವಸತಿ, ಶಿಕ್ಷಣ, ಸಮೂಹ ಸಾರಿಗೆ, ಕೌಶಲ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ಉಪಕಾರವಾಗುವಂತಹ ಮಾದರಿಗಳನ್ನು ಅಭಿವೃದ್ಧಿಪಡಿಸಿದವರು ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಮೇಘಶಾಲಾ ಟ್ರಸ್ಟ್‌ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು.
 
ಬೋಧನಾ ವ್ಯವಸ್ಥೆಯ ಅಭಿವೃದ್ಧಿ: ಸರ್ಕಾರಿ ಶಾಲೆಗಳ ಒಂದರಿಂದ ಎಂಟನೆಯ ತರಗತಿವರೆಗಿನ ಶಿಕ್ಷಕರು ತರಗತಿಗಳಲ್ಲಿ ಬಳಸಲು ಅನುಕೂಲ ಆಗುವಂತೆ ಕಲಿಕಾ ಸಾಮಗ್ರಿಗಳನ್ನು ಟ್ರಸ್ಟ್‌ ಅಭಿವೃದ್ಧಿಪಡಿಸಿದೆ.
 
ಪಠ್ಯಕ್ರಮದಲ್ಲಿ ಇರುವ ಪಾಠಗಳನ್ನು ದೃಶ್ಯಾವಳಿ, ಚಿತ್ರ, ವಿವಿಧ ಬಗೆಯ ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಸುವ ಮಾದರಿ ಇದು. ಗಣಿತ, ಇಂಗ್ಲಿಷ್‌, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳನ್ನು ಕಲಿಸುವ ಮಾದರಿಗಳನ್ನು ಟ್ರಸ್ಟ್‌ ಈವರೆಗೆ ಅಭಿವೃದ್ಧಿಪಡಿಸಿದೆ.
 
‘ನಾವು ಸಿದ್ಧಪಡಿಸಿರುವುದು ಸರ್ಕಾರಿ ಶಾಲೆಗಳ ಶಿಕ್ಷಕರ ಬೋಧನಾ ಸಾಮರ್ಥ್ಯವನ್ನು ಹೆಚ್ಚಿಸುವ ಹೊಸ ಬಗೆಯ ಮಾದರಿ. ಪಾಠ ಕಲಿಸುವುದನ್ನು ಇನ್ನಷ್ಟು ಉತ್ತಮಪಡಿಸುವುದು ಹೇಗೆಂಬುದನ್ನು ನಾವು ಶಿಕ್ಷಕರಿಗೆ ಹೇಳಿಕೊಡುತ್ತೇವೆ’ ಎನ್ನುತ್ತಾರೆ ಮೇಘಶಾಲಾದ ಸಂಸ್ಥಾಪಕ ಟ್ರಸ್ಟಿ ಜ್ಯೋತಿ ತ್ಯಾಗರಾಜನ್.
 
ತಾನು ಅಭಿವೃದ್ಧಿಪಡಿಸಿದ ಬೋಧನಾ ಮಾದರಿಯನ್ನು 2020ರ ವೇಳೆಗೆ ಒಟ್ಟು ಒಂದು ಲಕ್ಷ ಶಿಕ್ಷಕರಿಗೆ ಪರಿಚಯಿಸುವುದು ಟ್ರಸ್ಟ್‌ನ ಗುರಿ.
 
ಪಠ್ಯದಲ್ಲಿರುವ ಪ್ರತಿ ಪಾಠವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಕಲಿಸಲು ಟ್ರಸ್ಟ್‌ ‘ಟೀಚ್‌ ಕಿಟ್‌’ ಅಭಿವೃದ್ಧಿಪಡಿಸಿದೆ. ತಜ್ಞರು ಸಿದ್ಧಪಡಿಸಿರುವ ‘ಟೀಚ್‌ ಕಿಟ್‌’ಅನ್ನು ಆ್ಯಂಡ್ರಾಯ್ಡ್‌ ಆ್ಯಪ್‌ ಮೂಲಕ ಪಡೆದುಕೊಳ್ಳಬಹುದು. ಆ್ಯಂಡ್ರಾಯ್ಡ್‌ ಸಾಧನವನ್ನು ವೈಫೈ ಮೂಲಕ ಪ್ರೊಜೆಕ್ಟರ್‌ಗೆ ಜೋಡಿಸಿಕೊಂಡು, ಮಕ್ಕಳಿಗೆ ಪಾಠ ಹೇಳಬಹುದು.
 
ಇಂಟರ್ನೆಟ್‌ ಸಂಪರ್ಕ ಇರುವೆಡೆ ಮಾತ್ರವಲ್ಲದೆ, ಇಂಟರ್ನೆಟ್‌ ಇಲ್ಲದ ಶಾಲೆಗಳಲ್ಲಿಯೂ ಈ ಆ್ಯಪ್‌ ಬಳಸಿಕೊಳ್ಳಬಹುದು ಎಂದು ಟ್ರಸ್ಟ್‌ ಹೇಳಿದೆ. (ಟ್ರಸ್ಟ್ ಜಾಲತಾಣದ ವಿಳಾಸ: www.meghshala.com)
 
**
ಬೆಂಗಳೂರು ನಗರ, ಕೋಲಾರ, ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಪ್ಪಳ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಟ್ರಸ್ಟ್‌ನ ಚಟುವಟಿಕೆಗಳು ಇವೆ. ‘2014ರ ನವೆಂಬರ್‌ನಲ್ಲಿ ಮೂರು ಶಾಲೆಗಳಲ್ಲಿ ಚಟುವಟಿಕೆ ಆರಂಭಿಸಲಾಯಿತು. ಈಗ ನಮ್ಮ ಚಟುವಟಿಕೆಗಳು 102 ಶಾಲೆಗಳಲ್ಲಿವೆ’ ಎಂದು ಟ್ರಸ್ಟ್‌ನ ಕೈಪಿಡಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT