ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನದ ಚಾರಣಕ್ಕೆ ‘ಕರಿಷ್ಮಾ ಬೆಟ್ಟ’

ಸುತ್ತಾಣ
Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
ಬೆಂಗಳೂರಿನ ಮಂದಿಗೆ ವಾರಾಂತ್ಯ ಬಂದರೆ ಸಾಕು. ಎಲ್ಲಾ ಒತ್ತಡ ಮರೆತು ಎಲ್ಲಾದರೂ ಪ್ರವಾಸ ಹೋಗಲು ಇಷ್ಟಪಡುತ್ತಾರೆ. ಒಂದು ದಿನದ ಚಾರಣಕ್ಕೆ ಹೇಳಿಮಾಡಿಸಿದ ತಾಣ ‘ಕರಿಷ್ಮಾ ಹಿಲ್ಸ್‌’ ಅಥವಾ ತುರಹಳ್ಳಿ ಬೆಟ್ಟ  ಅಂತಹವರಿಗೆ ಉತ್ತಮ ಆಯ್ಕೆಯಾದೀತು.
 
ಕನಕಪುರ ಮುಖ್ಯರಸ್ತೆಯಿಂದ ಮುಂದೆ ವಾಜರಹಳ್ಳಿ ಮೂಲಕ ಸಾಗುವಾಗ ಸಿಗುವ ತುರಹಳ್ಳಿ ಬೆಟ್ಟದ ಪಕ್ಕದಲ್ಲಿಯೇ ತಲೆಯೆತ್ತಿರುವ ಕರಿಷ್ಮಾ ಲೇಔಟ್‌ನಿಂದಾಗಿ ಈ ಪ್ರದೇಶ ಕರಿಷ್ಮಾ ಹಿಲ್ಸ್‌ ಎಂದೇ ಕರೆಸಿಕೊಳ್ಳುತ್ತಿದೆ. ಅಸಲಿಗೆ ಇದು ತುರಹಳ್ಳಿ ಬೆಟ್ಟ.
 
ಸ್ನೇಹಿತರೊಂದಿಗೆ, ಕುಟುಂಬ ಸಮೇತವಾಗಿ ತೆರಳಲು ತುಂಬಾ ಚಿಕ್ಕ ಮತ್ತು  ಹಸಿರಿನಿಂದ ತುಂಬಿದ ಸುಂದರ ಬೆಟ್ಟ ಎಂದೇ ಚಿರಪರಿಚಿತ. ತುರಹಳ್ಳಿ ಕಿರು ಅರಣ್ಯ ಪ್ರದೇಶವು ಕಗ್ಗಲೀಪುರ  ವಲಯಕ್ಕೆ ಸೇರಿದ್ದು, ಹಸಿರಿನೊಂದಿಗೆ ಬಂಡೆಗಳು ಬೆಟ್ಟದ ತುದಿಗೆ ಆಕರ್ಷಿಸುತ್ತವೆ. ರಾಕ್‌ ಕ್ಲೈಂಬರ್ಸ್‌ ಹವ್ಯಾಸ ಇರುವವರು ಇಲ್ಲಿಗೆ ಬಂದು ಅಭ್ಯಾಸ ಮಾಡಬಹುದು.
 
ಸುತ್ತಮುತ್ತಲಿನ ನಿವಾಸಿಗಳ ನೆಚ್ಚಿನ ತಾಣವಾಗಿರುವ ಈ ಬೆಟ್ಟದಲ್ಲಿ, ಹಲವಾರು ಬಗೆಯ  ಪಕ್ಷಿ ಸಂಕುಲ ಅವುಗಳ ಚಿಲಿಪಿಲಿ ಸದ್ದನ್ನು ಆನಂದಿಸಬಹುದು. ನವಿಲು, ಕಾಡು ಕೋಳಿಗಳು ಹಾವುಗಳು ಹೆಚ್ಚಾಗಿ ಇಲ್ಲಿ ವಾಸಿಸುತ್ತವೆ. ಚುಮುಚುಮು  ಚಳಿಗೆ ಮಂಜಾನೆಯ ಮಂಜಿನಲ್ಲಿ ಬೆಟ್ಟದಲ್ಲಿ ಸಾಗುತ್ತಿದ್ದರೆ, ನವಿಲುಗಳ ಹಿಂಡು ಎದುರಾಗುತ್ತದೆ.
 
ಬೆಟ್ಟದ ಮೇಲೆ ಶನೀಶ್ವರ ಸ್ವಾಮಿ ದೇವಸ್ಥಾನವಿದ್ದು, ಪ್ರತಿ ಶನಿವಾರ ಇಲ್ಲಿ  ವಿಶೇಷ ಪೂಜೆ ನಡೆಯುತ್ತದೆ. ಇಂತಹ ತಾಣಗಳು ನಗರದಲ್ಲಿ ಕಾಣಲು ಸಿಗುವುದು ತುಂಬಾನೇ ವಿರಳ. ಆಸಕ್ತರು ವಾರಾಂತ್ಯದ  ಬಿಡುವಿನಲ್ಲಿ ತೆರಳಿ ತಮ್ಮ ಕೆಲಸದ ಒತ್ತಡದ ಜಂಜಾಟಕ್ಕೆ ಸ್ವಲ್ಪ ವಿರಾಮ ನೀಡಬಹುದು.
 
ಪರಿಸರವಾದಿಗಳ ಕಳವಳ: ತುರಹಳ್ಳಿ ಕಿರು ಅರಣ್ಯ ಪ್ರದೇಶವು ಸುಮಾರು 350 ಎಕರೆ ಪ್ರದೇಶವನ್ನು ಒಳಗೊಂಡಿದೆ. ಆದರೆ ಈ ಹಸಿರು ಸಂಪತ್ತು ಮತ್ತು ಸೊಂಪಾದ ಭೂಮಿ ಯ ಮೇಲೆ ರಿಯಲ್‌ ಎಸ್ಟೇಟ್‌  ಉದ್ಯಮಿಗಳ  ಕಣ್ಣುಬಿದ್ದಿದೆ. ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಲಾಗುತ್ತಿದ್ದು, ಬೃಹತ್‌ ಅಪಾರ್ಟ್‌ಮೆಂಟ್‌, ಮನೆಗಳನ್ನು ಅರಣ್ಯ ಪ್ರದೇಶದ ಹತ್ತಿರ–ಹತ್ತಿರವೆ ನಿರ್ಮಿಸಲಾಗಿದೆ. ಮುಂದೊಂದು ದಿನ ಈ ಬೆಟ್ಟವು ಮಾಯವಾಗಬಹುದು ಎಂದು ಸ್ಥಳೀಯರು ಹಾಗೂ ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಾರೆ.
 
ಕೆಲವು ಪ್ರವಾಸಿಗರೂ ಬೆಟ್ಟದಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾರೆ. ಇದರಿಂದಾಗಿ ರಾತ್ರಿ ವೇಳೆ ಅಷ್ಟು ಸುರಕ್ಷಿತವಾಗಿ ಉಳಿದಿಲ್ಲ. ಈ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಿದರೆ ತುರಹಳ್ಳಿ ಬೆಟ್ಟ/ ಕರಿಷ್ಮಾ ಹಿಲ್ಸ್‌ ಉತ್ತಮ ಪ್ರವಾಸಿ ತಾಣವಾದೀತು ಎಂಬುದು ಅವರ ಅಭಿಪ್ರಾಯ.
 
**
ಕರಿಷ್ಮಾ ಹಿಲ್ಸ್‌ಗೆ ಹೋಗುವುದು ಹೀಗೆ
ಕೆಂಪೇಗೌಡ ಬಸ್‌ ನಿಲ್ದಾಣದಿಂದ (15 ಕಿ.ಮೀ) 1 ಗಂಟೆ ಪ್ರಯಾಣ.  ಬಸ್‌ ಸಂಖ್ಯೆ–210ಡಬ್ಲ್ಯೂ (ಕೆ.ಆರ್‌. ಮಾರ್ಕೆಟ್‌ನಿಂದ ಬಸ್‌ ಸಂಖ್ಯೆ 210ಸಿ) ಕರಿಷ್ಮಾ ಹಿಲ್ಸ್‌ ನಾಮಫಲಕದ ಬಸ್‌ ಹತ್ತಿ ಕೊನೆಯ ನಿಲ್ದಾಣದಲ್ಲಿ ಇಳಿದರೆ ಬೆಟ್ಟ ಸಮೀಪಿಸಿದಂತಾಗುತ್ತದೆ.
 
ಬೈಕ್‌, ಕಾರ್‌ ಮೂಲಕ ನೇರವಾಗಿ ಬೆಟ್ಟದ ಮೇಲೆ ಸಾಗಲು ಮಾರ್ಗವಿದೆ. ಕನಕಪುರ ಮುಖ್ಯರಸ್ತೆ ಮೂಲಕ ಬನಶಂಕರಿ–ಸಾರಕ್ಕಿ–ಕೋಣನಕುಂಟೆ ಕ್ರಾಸ್‌–ದೊಡ್ಡಕಲ್ಲಸಂದ್ರ–ವಾಜರಹಳ್ಳಿ ಯಿಂದ ಬಲಕ್ಕೆ ತಿರುಗಿ ಅರ್ಧ ಕಿ.ಮೀ ಸಾಗಿದರೆ ತುರಹಳ್ಳಿ ಬೆಟ್ಟದ ಮೇಲೆ ಸಾಗಲು ದಾರಿ ಸಿಗುತ್ತದೆ. ಮಣ್ಣಿನ ರಸ್ತೆಯೇ ಇರುವುದರಿಂದ ವೇಗವಾಗಿ ವಾಹನ ಚಲಾಯಿಸಿದರೆ ಅಪಘಾತ ಸಂಭವಿಸುವ ಸಾಧ್ಯತೆ ಇದೆ.
 
**
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT