ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ‘ದೃಷ್ಟಿ ರಾಷ್ಟ್ರೀಯ ನೃತ್ಯೋತ್ಸವ’

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ
ದೂರದರ್ಶನದ ‘ಎ’ ಗ್ರೇಡ್‌ ಕಲಾವಿದೆ ಅನುರಾಧಾ ವಿಕ್ರಾಂತ್‌ ಸದಾ ಭರತನಾಟ್ಯದಲ್ಲಿ ಪ್ರಯೋಗಗಳಿಗೆ ಹೆಸರಾದವರು. ಭರತನಾಟ್ಯದಲ್ಲಿ ಎಂ.ಎ. ಪದವೀಧರರಾಗಿರುವ ಅನುರಾಧಾ ಅವರ ಪತಿ ಟಿ.ಎಂ. ವಿಕ್ರಾಂತ್‌ ಕೂಡಾ ನೃತ್ಯ ಕಲಾವಿದ. ಇಬ್ಬರೂ ಸೇರಿ ಸಹಕಾರನಗರದಲ್ಲಿ ‘ದೃಷ್ಟಿ ಆರ್ಟ್‌ ಫೌಂಡೇಷನ್‌’ ಮೂಲಕ  ನೃತ್ಯ ತರಗತಿ, ನೃತ್ಯ ಕಾರ್ಯಕ್ರಮಗಳನ್ನು  ನಡೆಸುತ್ತಿದ್ದಾರೆ. 
 
ಅವರು 2006ರಿಂದಲೂ ನಡೆಸುತ್ತಾ ಬಂದಿರುವ ‘ದೃಷ್ಟಿ ರಾಷ್ಟ್ರೀಯ ನೃತ್ಯ ಉತ್ಸವ’ದಲ್ಲಿ ಇಬ್ಬರು ಹಿರಿಯ ಕಲಾಸಾಧಕರಿಗೆ ‘ದೃಷ್ಟಿ ಪುರಸ್ಕಾರ’ ನೀಡಿ ಗೌರವಿಸಲಾಗುತ್ತದೆ. ಈ ಬಾರಿ ಜ.21ರಂದು ಉತ್ಸವ ಆಯೋಜಿಸಲಾಗಿದ್ದು.   ಹಿರಿಯ ಕಲಾವಿದೆ ಪದ್ಮಿನಿ ರವಿ ಮತ್ತು ಬಾಲದೇವಿ ಚಂದ್ರಶೇಖರ್‌ ಅವರನ್ನು 2017ರ ದೃಷ್ಟಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
 
ಪದ್ಮಿನಿ ರವಿ: ಬೆಂಗಳೂರಿನ ಪದ್ಮಿನಿ ರವಿ  ನಾಲ್ಕು ದಶಕಗಳಿಂದ ನೃತ್ಯಕ್ಷೇತ್ರದಲ್ಲಿ ಹೆಸರಾದವರು. ನೃತ್ಯ ಗುರುವಾಗಿ ನೂರಾರು ನೃತ್ಯ ಕಲಾವಿದರಿಗೆ ಮಾರ್ಗದರ್ಶನ ಮಾಡಿದ್ದಾರೆ. ಇವರ ವಿದ್ಯಾರ್ಥಿಗಳು ವಿಶ್ವದೆಲ್ಲೆಡೆ ನೃತ್ಯ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಇವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.  
 
ಬಾಲದೇವಿ ಚಂದ್ರಶೇಖರ್‌: ಹೆಸರಾಂತ ಭರತನಾಟ್ಯ ಗುರು ಬಾಲದೇವಿ ಅವರು ಹಿರಿಯ ನೃತ್ಯ ವಿದ್ವಾಂಸರಾದ ಪದ್ಮಾ ಸುಬ್ರಹ್ಮಣ್ಯಂ ಅವರ ಶಿಷ್ಯೆ. ಅಮೆರಿಕದ ನ್ಯೂಜೆರ್ಸಿಯ ಅಕಾಡೆಮಿ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌ನ ಕಲಾ ನಿರ್ದೇಶಕರಾಗಿದ್ದಾರೆ. ಪ್ರದರ್ಶನ ಕಲೆಗೆ ಸಂಬಂಧಿಸಿದಂತೆ ಅಮೆರಿಕದಲ್ಲಿರುವ ದಕ್ಷಿಣ ಏಷ್ಯಾದ ಅನೇಕ ವಿಶ್ವವಿದ್ಯಾಲಯಗಳ ಕಲಾ ವಿಭಾಗಗಳಲ್ಲಿ ಪ್ರಾಧ್ಯಾಪಕಿಯಾಗಿ ಕೆಲಸ ಮಾಡಿದ್ದಾರೆ. 
 
**
ಮಯೂರ ಸಂದೇಶ ಚಿತ್ರನೃತ್ಯ
ನೃತ್ಯೋತ್ಸವದಲ್ಲಿ ಅನುರಾಧಾ ವಿಕ್ರಾಂತ್‌ ಅವರು ಪ್ರತಿವರ್ಷವೂ  ವಿಶಿಷ್ಟ ನೃತ್ಯ ಪ್ರದರ್ಶನ ನೀಡುತ್ತಾರೆ. ಈ ವರ್ಷ ‘ಮಯೂರ ಸಂದೇಶ’ ಎಂಬ ಚಿತ್ರನೃತ್ಯ ಪ್ರದರ್ಶಿಸಲಿದ್ದಾರೆ. ನರ್ತಿಸುವ ನೆಲವನ್ನೇ ಕ್ಯಾನ್‌ವಾಸ್‌ ಮಾಡಿಕೊಂಡು, ಹೆಜ್ಜೆಯ ಮೂಲಕವೇ ನವಿಲಿನ ಚಿತ್ರ ಮೂಡಿಸಲಿದ್ದಾರೆ.  
 
‘ಇದೊಂದು ಹೊಸ ಪ್ರಯೋಗ. ಇಲ್ಲಿ  ಆದಿವಾಸಿಗಳ ನಾಯಕಿ ‘ವಲ್ಲಿ’ ತನ್ನ ಪ್ರಿಯಕರ ‘ಸ್ಕಂದ’ನಿಗೆ ಪ್ರೇಮ ನಿವೇದನೆ ಮಾಡುವ ಪ್ರಸಂಗವಿದೆ. ಈ ನೃತ್ಯ ಪ್ರದರ್ಶನ ಮುಗಿಯುವಾಗ ನೆಲದಲ್ಲಿ ನವಿಲಿನ ಚಿತ್ರ ಮೂಡಿರುತ್ತದೆ’ ಎಂದು ಚಿತ್ರನೃತ್ಯದ ಕುರಿತು ಅನುರಾಧಾ ಮಾಹಿತಿ ನೀಡಿದರು.
 
**
ನೃತ್ಯೋತ್ಸವದಲ್ಲಿ
ದೃಷ್ಟಿ ನೃತ್ಯೋತ್ಸವದಲ್ಲಿ ಚೆನ್ನೈನ ನೃತ್ಯ ಕಲಾವಿದೆ ಗೋಪಿಕಾ ವರ್ಮಾ ಅವರು ‘ಲಾಸ್ಯ ಮೋಹನ’ ಮೋಹಿನಿಯಾಟ್ಟಂ ಪ್ರದರ್ಶಿಸಲಿದ್ದಾರೆ. ನಾಟ್ಯ ಸ್ಟೆಮ್‌ ಡಾನ್ಸ್‌ ಕಂಪೆನಿ ತಂಡ ‘ಆಕಾಶ್‌’ ನೃತ್ಯ ರೂಪಕ ಪ್ರಸ್ತುತಪಡಿಸಲಿದೆ.
 
ಸೃಷ್ಟಿ ನೃತ್ಯ ಅಕಾಡೆಮಿಯ ವಿದ್ಯಾರ್ಥಿಗಳು ‘ಅರ್ಪಣಾ’ ಸಮೂಹ ನೃತ್ಯ ಪ್ರದರ್ಶಿಸಲಿದ್ದಾರೆ. ಪ್ರತಿ ನೃತ್ಯದ 40 ನಿಮಿಷ ಅವಧಿಯದಾಗಿದ್ದು, ಪ್ರವೇಶ ಉಚಿತ. ಆದರೆ, ಆಮಂತ್ರಣ ಪತ್ರಿಕೆ ಇದ್ದವರಿಗೆ ಮಾತ್ರ ಪ್ರವೇಶ. ಹೆಚ್ಚಿನ ಮಾಹಿತಿಗೆ: 98455 55411/ 98455 55422. 
 
ಸ್ಥಳ: ಚೌಡಯ್ಯ ಸ್ಮಾರಕ ಸಭಾಂಗಣ, ವೈಯಾಲಿಕಾವಲ್‌, ಸಂಜೆ 6.15.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT