ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಬೇರಿಗೆ ಹೊಸ ಚಿಗುರು

Last Updated 20 ಜನವರಿ 2017, 19:30 IST
ಅಕ್ಷರ ಗಾತ್ರ

2000ನೇ ಇಸವಿಯಲ್ಲಿ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಜಾರಿಯಾಗುವವರೆಗೆ ಭಾರತದಲ್ಲಿ ಹಿಂದೂ, ಬೌದ್ಧ, ಸಿಖ್‌ ಮತ್ತು ಜೈನ ಸಮುದಾಯದವರಿಗೆ ಮಾತ್ರ ಮಕ್ಕಳನ್ನು ದತ್ತು ಪಡೆಯುವ ಅವಕಾಶ ಇತ್ತು.

‘ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ– 1956’ರ ಅಡಿಯಲ್ಲಿ ಈ ದತ್ತು ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಭಾರತದಲ್ಲಿ ನೆಲೆಸಿರುವ ಮುಸ್ಲಿಮರು, ಕ್ರೈಸ್ತರು, ಪಾರ್ಸಿಗಳು ಮತ್ತು ಯಹೂದಿ ಸಮುದಾಯದವರಿಗೆ ಯಾವುದೇ ದತ್ತು ಕಾಯ್ದೆ ಇರಲಿಲ್ಲ. ಅವರು ಬ್ರಿಟಿಷರ ಕಾಲದಲ್ಲಿ ಜಾರಿಗೊಂಡ ‘ಗಾರ್ಡಿಯನ್ಸ್‌ ಅಂಡ್‌ ವಾರ್ಡ್ಸ್- 1890ರ ಕಾಯ್ದೆ’ ಅಡಿ ಮಕ್ಕಳನ್ನು ಸಾಕಬಹುದಿತ್ತೇ ವಿನಾ ಅವರು ದತ್ತು ಮಕ್ಕಳು ಆಗುತ್ತಿರಲಿಲ್ಲ.

ಅರ್ಥಾತ್‌, ಹಿಂದೂ ದತ್ತು ಕಾಯ್ದೆ ಅಡಿ ದತ್ತು  ಪಡೆದ ಮಗುವಿಗೆ, ಸ್ವಂತ ಮಗುವಿಗೆ ಇರುವ ಎಲ್ಲಾ ಅನುಕೂಲಗಳೂ, ಹಕ್ಕುಗಳೂ ಸಿಗುತ್ತವೆ. ಆದರೆ ‘ಗಾರ್ಡಿಯನ್ಸ್‌ ಅಂಡ್‌ ವಾರ್ಡ್ಸ್’ ಕಾಯ್ದೆ ಅಡಿ ಸಾಕಲಾಗುವ ಮಗುವಿಗೆ  ಇಂಥ ಹಕ್ಕುಗಳು, ಸೌಲಭ್ಯ ಯಾವುದೂ ಇರುವುದಿಲ್ಲ. ಅಲ್ಲಿ ಇರುವುದು ‘ಪೋಷಕರು ಮತ್ತು ಆಶ್ರಿತರು’ ಎಂಬ ಸಂಬಂಧ ಮಾತ್ರ. ಈ ಮಕ್ಕಳಿಗೆ 21 ವರ್ಷ ಆಗುತ್ತಿದ್ದಂತೆಯೇ ಅವರು ಸ್ವತಂತ್ರರಾಗಿ ಪೋಷಕರ ಆಸ್ತಿಯ ಹಕ್ಕನ್ನೂ ಕಳೆದುಕೊಳ್ಳುತ್ತಾರೆ.

ಹೀಗೆ, ಒಬ್ಬೊಬ್ಬರಿಗೆ ಒಂದೊಂದು ಕಾಯ್ದೆ ಇದ್ದ ಕಾರಣ, ದೇಶದಲ್ಲಿನ ಎಲ್ಲ ಧರ್ಮೀಯರಿಗೂ ಏಕರೂಪದ ದತ್ತು ಕಾಯ್ದೆ ಇರಬೇಕು ಎನ್ನುವ ಉದ್ದೇಶದಿಂದ 2000ನೇ ಸಾಲಿನಲ್ಲಿ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಜಾರಿಗೊಳಿಸಲಾಯಿತು.

ಈ ಕಾಯ್ದೆಯ 41ನೇ ಕಲಮಿನ ಅಡಿ ಸರ್ವ ಧರ್ಮೀಯರಿಗೂ ಅನ್ವಯ ಆಗುವಂಥ ದತ್ತು ನಿಯಮವನ್ನು ಉಲ್ಲೇಖಿಸಲಾಯಿತು. ಆದರೆ ನಿಯಮದಲ್ಲಿ ದತ್ತಕಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಇಲ್ಲದಿದ್ದ ಕಾರಣ, ಅದರಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರವು (ಕಾರಾ) 2015ರಲ್ಲಿ ಈ ಕಲಮಿಗೆ ಕೆಲವು ತಿದ್ದುಪಡಿಗಳನ್ನು ತಂದಿತು. ಆದರೆ ಆಗಲೂ ಕೆಲವೊಂದು ಗೊಂದಲ ಏರ್ಪಟ್ಟಿದ್ದ ಹಿನ್ನೆಲೆಯಲ್ಲಿ ಇದೇ ತಿಂಗಳ 16ರಿಂದ ಅನ್ವಯ ಆಗುವಂತೆ ಹೊಸ ಮಾರ್ಗಸೂಚಿಯನ್ನು ರೂಪಿಸಲಾಗಿದೆ.

ದತ್ತಕದ ಹೆಸರಿನಲ್ಲಿ ಕಳ್ಳವ್ಯವಹಾರ ಅವ್ಯಾಹತವಾಗಿ ನಡೆಯುತ್ತಿರುವ ಕಾರಣ, ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಹೊಸ ಮಾರ್ಗಸೂಚಿಯಲ್ಲಿ ಕಠಿಣ ನಿಯಮಗಳನ್ನು ಅಳವಡಿಸಲಾಗಿದೆ. ಅದೇ ರೀತಿ ದತ್ತು ಬಯಸುವವರಿಗೆ ಅನುಕೂಲ ಆಗುವ ಸಂಬಂಧ ಕೆಲವು ಸರಳ ಯೋಜನೆಗಳನ್ನೂ ರೂಪಿಸಲಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ದತ್ತು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಈ ಹೊಸ ಮಾರ್ಗಸೂಚಿ ನೆರವಾಗಲಿದೆ.

ಹೊಸತು ಏನು?: ಬಾಲ ನ್ಯಾಯ ಕಾಯ್ದೆ- 2000ದಲ್ಲಿ ಅನಾಥರು, ತಂದೆ–ತಾಯಿ ಬಿಟ್ಟುಹೋದ ಹಾಗೂ ದತ್ತು ನೀಡುವ ಉದ್ದೇಶಕ್ಕೆ ಬಿಟ್ಟುಹೋದ ಮಕ್ಕಳನ್ನು ಮಾತ್ರ ದತ್ತು ಪಡೆಯಲು ಅವಕಾಶ ಇತ್ತು. ಆದರೆ ಈಗ ಹೊಸ ಮಾರ್ಗಸೂಚಿ ಅಡಿ, ದತ್ತು ಪಡೆಯಲು ಇಚ್ಛಿಸುವ ಗಂಡ–ಹೆಂಡತಿಯ ಅಣ್ಣ–ತಮ್ಮ, ಅಕ್ಕ–ತಂಗಿ ಅಥವಾ ಅಜ್ಜ–ಅಜ್ಜಿಯರ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಅದೇ ರೀತಿ, ಗಂಡ ಅಥವಾ ಹೆಂಡತಿಗೆ ಹಿಂದಿನ ವಿವಾಹ ಸಂಬಂಧದಲ್ಲಿ ಜನಿಸಿದ್ದ ಮಗು/ಮಕ್ಕಳನ್ನೂ  ದತ್ತು ಪಡೆಯಲು ಮಲತಂದೆ/ಮಲತಾಯಿಗೆ ಅವಕಾಶ ಕಲ್ಪಿಸಲಾಗಿದೆ. ‘ಹಿಂದೂ ದತ್ತು ಮತ್ತು ನಿರ್ವಹಣಾ (ಹಾಮಾ) ಕಾಯ್ದೆ- 1956ರಲ್ಲಿ ಈ ಎರಡೂ ಅವಕಾಶಗಳು ಮೊದಲೇ ಇದ್ದ ಹಿನ್ನೆಲೆಯಲ್ಲಿ, ಈ ಹೊಸ ಮಾರ್ಗಸೂಚಿ ಮುಸ್ಲಿಂ, ಕ್ರೈಸ್ತ, ಪಾರ್ಸಿ ಮತ್ತು ಯಹೂದಿ ಸಮುದಾಯಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಹಿಂದೂ, ಬೌದ್ಧ, ಸಿಖ್‌ ಮತ್ತು ಜೈನ ಸಮುದಾಯದವರಿಗೆ ಈ ಮಾರ್ಗಸೂಚಿಯಿಂದ ಆಗಿರುವ ಅನುಕೂಲ ಎಂದರೆ, ‘ಹಾಮಾ’ ಕಾಯ್ದೆ ಅಡಿ ಅವರು ತಮ್ಮ ಸಮುದಾಯದ ಮಕ್ಕಳನ್ನು ಮಾತ್ರ ದತ್ತು ಪಡೆಯಲು ಹಾಗೂ ದತ್ತಕಕ್ಕೆ ಕೊಡಲು ಅವಕಾಶ ಇತ್ತು. ಆದರೆ ಈಗ ಅವರು ಅಂತರ್‌ಧರ್ಮೀಯ ಮಕ್ಕಳನ್ನೂ ದತ್ತು ಪಡೆಯಬಹುದಾಗಿದೆ.

ಒಂದು ವೇಳೆ ತಮ್ಮ ಸಂಬಂಧಿಗಳಲ್ಲೇ ಈ ಧರ್ಮದವರು ಮಕ್ಕಳನ್ನು ದತ್ತು ಪಡೆಯುವುದು ಅಥವಾ ಕೊಡುವ ಪ್ರಕ್ರಿಯೆ ನಡೆಸುವುದಿದ್ದರೆ ಅವರು ‘ಹಾಮಾ’ ಕಾಯ್ದೆಯ ಅಡಿಯಲ್ಲಿ ಇರುವ ನಿಯಮಗಳನ್ನು ಪಾಲಿಸಬಹುದು. ಆದರೆ ದತ್ತು ಕೇಂದ್ರಗಳಿಂದ ಮಕ್ಕಳನ್ನು ದತ್ತು ಪಡೆಯುವುದಿದ್ದರೆ ಅಲ್ಲಿ ಮಕ್ಕಳ ಧರ್ಮದ ಬಗ್ಗೆ ತಿಳಿಯದಿರುವ ಹಿನ್ನೆಲೆಯಲ್ಲಿ ‘ಬಾಲ ನ್ಯಾಯ (ಜೆ.ಜೆ.) ಕಾಯ್ದೆ’ಯಲ್ಲಿ ಅಳವಡಿಸಲಾಗಿರುವ ನಿಯಮಗಳನ್ನೇ ಪಾಲಿಸಬೇಕು.

‘ಹಾಮಾ’ ಕಾಯ್ದೆ ಅಡಿ ದತ್ತು ಪಡೆಯಲು ಬಯಸುವ  ಈ ಸಮುದಾಯದವರು ಒಂದೇ ಲಿಂಗದ ಮಗುವನ್ನು ದತ್ತು ಪಡೆಯಲು ಅವಕಾಶ ಇಲ್ಲ. ಉದಾಹರಣೆಗೆ: ದತ್ತು ಪಡೆಯಲು ಇಚ್ಛಿಸುವವರಿಗೆ ಹೆಣ್ಣು ಮಗು ಇದ್ದರೆ ಅವರು ಮತ್ತೊಂದು ಹೆಣ್ಣು ಮಗುವನ್ನು ಹಾಗೂ ಗಂಡು ಮಗುವಿದ್ದರೆ ಮತ್ತೊಂದು ಗಂಡು ಮಗುವನ್ನು ದತ್ತು ಪಡೆಯಲು ಸಾಧ್ಯವಿಲ್ಲ. ಆದರೆ ‘ಜೆ.ಜೆ’ ಕಾಯ್ದೆ ಅಡಿ ಈ ಅವಕಾಶ ಕಲ್ಪಿಸಲಾಗಿದೆ. 

‘ಹಾಮಾ’ ಕಾಯ್ದೆಯ ಅಡಿ ಗಂಡಸರು ಹೆಣ್ಣು ಮಗುವನ್ನು ಹಾಗೂ ಹೆಂಗಸರು ಗಂಡು ಮಗುವನ್ನು ದತ್ತಕಕ್ಕೆ ಪಡೆಯುವುದಿದ್ದರೆ ಇಬ್ಬರ ನಡುವೆ 21 ವರ್ಷಗಳ ಅಂತರ ಇರಬೇಕು. ಈ ವಯೋಮಿತಿಯನ್ನು ಹೊಸ ಮಾರ್ಗಸೂಚಿ ಅಡಿ 25 ವರ್ಷಕ್ಕೆ ಏರಿಸಲಾಗಿದೆ.  ಒಂದು ವೇಳೆ ಹಿಂದೂ, ಬೌದ್ಧ, ಸಿಖ್‌ ಮತ್ತು ಜೈನ ಸಮುದಾಯದವರು ‘ಜೆ.ಜೆ.’ ಕಾಯ್ದೆಯ ಅಡಿ ಮಕ್ಕಳನ್ನು ದತ್ತು ಪಡೆಯುವುದಿದ್ದರೆ 25 ವರ್ಷಗಳ ಅಂತರವನ್ನು ಕಾಪಾಡಿಕೊಳ್ಳಬೇಕು. ಅದೇ ರೀತಿ, ‘ಹಾಮಾ’ ಕಾಯ್ದೆಯ ಅಡಿ 15 ವರ್ಷಕ್ಕಿಂತ ಒಳಗಿರುವ ಮಕ್ಕಳನ್ನು ಮಾತ್ರ ದತ್ತು ಪಡೆಯಲು ಅವಕಾಶ ಇದೆ. ಆದರೆ ಈ ಹೊಸ ಮಾರ್ಗಸೂಚಿಯಲ್ಲಿ ಆ ವಯಸ್ಸನ್ನು 18ಕ್ಕೆ ಏರಿಸಲಾಗಿದೆ.

ಹೊರದೇಶಗಳ ಮಕ್ಕಳನ್ನು ದತ್ತು ಪಡೆಯುವ ಪ್ರಕ್ರಿಯೆಯನ್ನು ಹೊಸ ಮಾರ್ಗಸೂಚಿಯಲ್ಲಿ ಸುಲಭಗೊಳಿಸಲಾಗಿದೆ. ಹಿಂದೂ ದತ್ತು ಕಾಯ್ದೆಯ ಅಡಿ ಹಿಂದೂ ಮಕ್ಕಳನ್ನು ಮಾತ್ರ ದತ್ತು ಪಡೆಯಲು ಅವಕಾಶ ಇರುವ ಹಿನ್ನೆಲೆಯಲ್ಲಿ, ಬೇರೆ ದೇಶದ ಮಕ್ಕಳನ್ನು ದತ್ತು ಪಡೆಯುವುದು ತುಂಬಾ ಕಷ್ಟ. ಒಂದು ವೇಳೆ ಹಿಂದಿನ ಮದುವೆಯಿಂದ ಹುಟ್ಟಿದ ಮಕ್ಕಳು ಬೇರೆ ದೇಶದಲ್ಲಿ ನೆಲೆಸಿದ್ದರೂ, ಅವರನ್ನು ದತ್ತು ಪಡೆಯಬೇಕೆಂದರೆ ತುಂಬಾ ಕ್ಲಿಷ್ಟಕರ ಪ್ರಕ್ರಿಯೆ ಅನುಸರಿಸಬೇಕು. ಆದರೆ ಬಾಲ ನ್ಯಾಯ ಕಾಯ್ದೆಯ ಹೊಸ ಮಾರ್ಗಸೂಚಿಯಲ್ಲಿ ಅಂತರ್‌ದೇಶಗಳ ನಡುವಿನ ದತ್ತು ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. ಹೊರದೇಶಗಳಲ್ಲಿ ಇರುವ ಮಕ್ಕಳನ್ನೂ ಸುಲಭದಲ್ಲಿ ದತ್ತು ಪಡೆಯಬಹುದು.

ಅದೇ ರೀತಿ, ದತ್ತು ಪಡೆದ ಮಕ್ಕಳನ್ನು ಹೊರದೇಶಗಳಿಗೆ ಕರೆದುಕೊಂಡು ಹೋಗುವ ನಿಯಮಗಳನ್ನೂ ಸರಳಗೊಳಿಸಲಾಗಿದೆ. ಆದರೆ ಈ ಸಂದರ್ಭದಲ್ಲಿ ಅಕ್ರಮ ಮಾರಾಟ ಆಗುವುದನ್ನು ತಡೆಗಟ್ಟಲು ಕೆಲವು ಹೆಚ್ಚುವರಿ ನಿಯಮಗಳನ್ನು ರೂಪಿಸಲಾಗಿದೆ. ಮಕ್ಕಳನ್ನು ಹೊರದೇಶಗಳಿಗೆ ಕರೆದುಕೊಂಡು ಹೋಗುವುದಿದ್ದರೆ ವಿದೇಶಿ ದತ್ತು ಕೇಂದ್ರವನ್ನು ಸಂಪರ್ಕಿಸಿ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ಸಂಬಂಧಿತ ಅರ್ಜಿಗಳನ್ನು ಭರ್ತಿ ಮಾಡಬೇಕಾಗುತ್ತದೆ.

ಇಲ್ಲದೇ ಹೋದರೆ ಮಕ್ಕಳನ್ನು ಹೊರದೇಶಗಳಿಗೆ ಕರೆದುಕೊಂಡು ಹೋಗುವ ಅವಕಾಶ ಇರುವುದಿಲ್ಲ. ಅದೇ ರೀತಿ, ಮಾನ್ಯತೆ ಪಡೆದ ದತ್ತು ಕೇಂದ್ರಗಳ ಹೊರತಾಗಿ ನರ್ಸಿಂಗ್‌ ಹೋಂಗಳವರು ಅಥವಾ ಇನ್ಯಾರಾದರೂ ದತ್ತು ನೀಡಿದರೆ ಅಂಥವರಿಗೆ ಬಾಲ ನ್ಯಾಯ ಕಾಯ್ದೆಯ 80ನೇ ಕಲಮಿನ ಅಡಿ ಗರಿಷ್ಠ ಏಳು ವರ್ಷಗಳ ಶಿಕ್ಷೆ ಹಾಗೂ ಒಂದು ಲಕ್ಷ ರೂಪಾಯಿಯವರೆಗೆ ದಂಡ ವಿಧಿಸುವ ಬಗ್ಗೆ ಉಲ್ಲೇಖಿಸಲಾಗಿದೆ.

ಒಂದು ವೇಳೆ, ದತ್ತು ಪಡೆದುಕೊಂಡಿರುವ ಮಗು ಕುಟುಂಬದ ಜೊತೆ ಹೊಂದಿಕೊಳ್ಳಲು ಕಷ್ಟವಾದರೆ ದತ್ತು ಪ್ರಕ್ರಿಯೆಯನ್ನು ರದ್ದು ಮಾಡುವ ಅವಕಾಶ ‘ಹಾಮಾ’ ಕಾಯ್ದೆ ಅಡಿಯಾಗಲೀ ಜೆ.ಜೆ. ಕಾಯ್ದೆ ಅಡಿಯಾಗಲೀ ಇರಲಿಲ್ಲ. ಈಗ ಹೊಸ ಮಾರ್ಗಸೂಚಿಯಲ್ಲಿ ಆ ಅವಕಾಶವನ್ನೂ ಕಲ್ಪಿಸಲಾಗಿದೆ.

ಮಗುವನ್ನು ದತ್ತು ಪಡೆಯುವಾಗ ಯಾವೆಲ್ಲಾ ಕಾಯ್ದೆ- ಕಾನೂನುಗಳನ್ನು ಅನುಸರಿಸಲಾಗಿತ್ತೋ, ಅದೇ ರೀತಿ ನ್ಯಾಯಾಲಯಗಳ ಮೂಲಕವೇ ಈ ದತ್ತು ಪ್ರಕ್ರಿಯೆಯನ್ನು ರದ್ದುಗೊಳಿಸಬಹುದಾಗಿದೆ. ಅಂಥ ಸಂದರ್ಭದಲ್ಲಿ ಮಗುವನ್ನು ಎಲ್ಲಿಂದ ದತ್ತು ಪಡೆಯಲಾಗಿತ್ತೋ ಅದೇ ಸಂಸ್ಥೆಗೆ ಅದನ್ನು ವಾಪಸು ಮಾಡಬಹುದು.

ಬಾಲ ನ್ಯಾಯ ಕಾಯ್ದೆಗೆ 2015ರಲ್ಲಿ ತಿದ್ದುಪಡಿ ತಂದು, ದತ್ತು ಪಡೆಯುವ ಪ್ರಕ್ರಿಯೆಯನ್ನು ಸಂಪೂರ್ಣ ಕಂಪ್ಯೂಟರೀಕರಣಗೊಳಿಸಲಾಗಿದೆ. ಈ ವ್ಯವಸ್ಥೆಯಲ್ಲಿ ದತ್ತು ಪಡೆಯಲು ಇಚ್ಛಿಸುವವರು ತಮ್ಮ ಮಾಹಿತಿಯನ್ನು ಆನ್​ಲೈನ್​ನಲ್ಲಿ ನೋಂದಾಯಿಸಿ, ಲಭ್ಯವಿರುವ ಮಕ್ಕಳ ಮಾಹಿತಿಯನ್ನು ಪಡೆಯಬಹುದು.

ಒಮ್ಮೆ ಲಾಗಿನ್‌ ಮಾಡಿದಾಗ ಗರಿಷ್ಠ ಆರು ಮಕ್ಕಳ ಚಿತ್ರ ಹಾಗೂ ಮಾಹಿತಿ ಪಡೆಯುವ ಅವಕಾಶವನ್ನು ಇಲ್ಲಿಯವರೆಗೆ ಕಲ್ಪಿಸಲಾಗಿತ್ತು. ಆದರೆ ಈಗ ದತ್ತು ಪಡೆಯಲು ಇಚ್ಛಿಸುವವರ ಸಂಖ್ಯೆ ಹೆಚ್ಚಿಗೆ ಇದ್ದು ದತ್ತು ಮಕ್ಕಳ ಸಂಖ್ಯೆ ಕಡಿಮೆ ಇರುವ ಕಾರಣದಿಂದ, ಹೊಸ ಕಾಯ್ದೆಯ ಅಡಿ ಮಕ್ಕಳ ಸಂಖ್ಯೆಯನ್ನು ಮೂರಕ್ಕೆ ಇಳಿಸಲಾಗಿದೆ. ಅದೇ ರೀತಿ, ಇಲ್ಲಿಯವರೆಗೆ ಹೊರ ದೇಶಗಳ ಮಕ್ಕಳ ದತ್ತು ಪ್ರಕ್ರಿಯೆಗೆ ಮಾತ್ರ ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಈಗ ಭಾರತದ ಒಳಗೆ ಇರುವ ದತ್ತು ಮಕ್ಕಳ ಬಗ್ಗೆ, ಆನ್‌ಲೈನ್‌ ಮೂಲಕವೇ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

***
ತೃತೀಯ  ಲಿಂಗಿಗಳ  ಉಲ್ಲೇಖವಿಲ್ಲ

2014ರ ಏಪ್ರಿಲ್‌ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ ತೃತೀಯ ಲಿಂಗಿಗಳಿಗೆ  ದತ್ತು ತೆಗೆದುಕೊಳ್ಳುವ ಅಧಿಕಾರವನ್ನು ನೀಡಿತ್ತು. ಆದರೆ ‘ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ– 1956’ರಲ್ಲಿ ಆಗಲಿ, ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ- 2000ರಲ್ಲಿ ಆಗಲಿ ತೃತೀಯ ಲಿಂಗಿಗಳು ದತ್ತು ಪಡೆಯಬಹುದೇ ಬೇಡವೇ ಎಂಬ ವಿಷಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ವಿರೋಧ: ಮುಂಬೈ ಹೈಕೋರ್ಟ್‌ ಮುಂದೆ ಬಂದ ಪ್ರಕರಣವೊಂದರಲ್ಲಿ ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರವು (ಕಾರಾ) ಈ ರೀತಿಯ ದತ್ತು ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿ ಪ್ರಮಾಣಪತ್ರ ಸಲ್ಲಿಸಿತ್ತು. ದೈಹಿಕವಾಗಿ ಹಾಗೂ ಮಾನಸಿಕವಾಗಿ ಶಕ್ತರಾಗಿರುವವರಷ್ಟೇ ದತ್ತು ಪಡೆಯಲು ಸಾಧ್ಯ ಎಂಬುದು ಅದರ ವಾದವಾಗಿತ್ತು. ಆದರೆ ಈಗಾಗಲೇ ಕೆಲವು ತೃತೀಯ ಲಿಂಗಿಗಳು ಮಕ್ಕಳನ್ನು ದತ್ತು ಪಡೆದಿರುವ ಉದಾಹರಣೆಗಳು ಇವೆ. ಅವರ ಬಗ್ಗೆ ಈ ಹೊಸ ಮಾರ್ಗಸೂಚಿಯಲ್ಲಿ ಸ್ಪಷ್ಟತೆ ಇಲ್ಲ.

ಒಂಟಿ ಪುರುಷನಿಗೆ ತಪ್ಪಲಿಲ್ಲ ನಿರ್ಬಂಧ
‘ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆ–1956’ ರ ಅಡಿಯಲ್ಲಿ ಒಂಟಿ ಪುರುಷ ತನಗಿಂತ 21 ವರ್ಷ ಚಿಕ್ಕ ವಯಸ್ಸಿನ ಬಾಲಕಿಯನ್ನು ದತ್ತು ಪಡೆಯಬಹುದು. ಆದರೆ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಅಡಿ ಒಂಟಿ ಪುರುಷ ಹೆಣ್ಣು ಮಗುವನ್ನು ದತ್ತು ಪಡೆಯುವಂತಿಲ್ಲ. ಹೊಸ ಮಾರ್ಗಸೂಚಿಯಲ್ಲಿ ಕೂಡ ಇದನ್ನು ಸ್ಪಷ್ಟಪಡಿಸಲಾಗಿದೆ.

ಮಾರ್ಗಸೂಚಿಯ 5ನೇ ನಿಯಮದಲ್ಲಿ ದತ್ತು ಪಡೆಯಲು ಯಾರು ಯಾರು ಅರ್ಹರು ಎಂಬ ಬಗ್ಗೆ ವಿವರಿಸಲಾಗಿದೆ. 5(2)(ಸಿ) ನಿಯಮದಲ್ಲಿ ಒಂಟಿ ಪುರುಷನ ಬಗ್ಗೆ ಉಲ್ಲೇಖಿಸಲಾಗಿದ್ದು, ಹೆಣ್ಣು ಮಗು ದತ್ತು ಪಡೆಯುವುದನ್ನು ನಿರ್ಬಂಧಿಸಲಾಗಿದೆ.

ಕ್ರೈಸ್ತ ಮಿಷನರಿ ವಿರೋಧ
ಒಂಟಿ ಪೋಷಕರು (ಅವಿವಾಹಿತ ಮತ್ತು ವಿಚ್ಛೇದಿತರು) ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡು ಮಗುವನ್ನು ದತ್ತು ಪಡೆಯಲು ಬಾಲ ನ್ಯಾಯ ಕಾಯ್ದೆ ಅಡಿ ಅವಕಾಶ ಕಲ್ಪಿಸಿರುವುದಕ್ಕೆ ಮದರ್‌ ತೆರೆಸಾ ಕ್ರೈಸ್ತ ಮಿಷನರಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ತಾವು ವಿವಾಹಿತರಿಗೆ ಮಾತ್ರ ಮಗುವನ್ನು ಕೊಡುತ್ತೇವೆ; ಅದು ತಮ್ಮ ಕಾನೂನಿನಲ್ಲಿ ಇದೆ, ಆದರೆ ಒಂಟಿ ಮಹಿಳೆ ಅಥವಾ ಪುರುಷರಿಗೆ ಈ ಅವಕಾಶ ಕಲ್ಪಿಸಿರುವುದು ಸರಿಯಲ್ಲ ಎಂದಿದೆ.

***
ಅನಧಿಕೃತ ದತ್ತಕಕ್ಕೆ ಕಡಿವಾಣ

ಸಂಬಂಧಿಗಳಲ್ಲಿ ದತ್ತು ತೆಗೆದುಕೊಳ್ಳುವುದಕ್ಕೆ ಹೆಚ್ಚು ಪ್ರಾಶಸ್ತ್ಯ ಬಂದರೆ ಅನಾಥ ಮಕ್ಕಳು ದತ್ತು ಹೋಗುವ ಸಂಖ್ಯೆ ಕಡಿಮೆ ಆಗುವ ಭಯ ಇದೆ. ಆದರೆ ಹಿಂದೂ ದತ್ತಕ ಕಾಯ್ದೆಯಡಿ ಹಕ್ಕು ಪಡೆಯುವವರ ಹೊರತಾಗಿ ಬೇರೆ ಧರ್ಮದವರಿಗೂ ದತ್ತು ಪಡೆಯುವ ಹಕ್ಕು ನೀಡಿರುವ ಕಾರಣ, ಅನಧಿಕೃತ ದತ್ತಕಕ್ಕೆ ಕಡಿವಾಣ ಬೀಳುವುದು ಒಳ್ಳೆಯ ಬೆಳವಣಿಗೆ
-ಸುರೇಂದ್ರ ಕೌಲಗಿ, ಜನಪದ ಸೇವಾ ಟ್ರಸ್ಟ್‌ ದತ್ತು ಕೇಂದ್ರ, ಮೇಲುಕೋಟೆ

***
ಗಂಡಸರೆಲ್ಲಾ ಕೆಟ್ಟವರಲ್ಲ

ಒಂಟಿ ಪುರುಷನನ್ನು ಹೆಣ್ಣು ಮಗು ದತ್ತು ಪಡೆಯುವುದರಿಂದ ವಂಚಿತನನ್ನಾಗಿಸಿರುವುದು ಸಂವಿಧಾನದ ಸಮಾನತೆಯ ಹಕ್ಕಿನ ವಿರುದ್ಧವಾಗಿದೆ. ಇದು ಗಂಡು ಸಮುದಾಯಕ್ಕೇ ಅವಮಾನ ಮಾಡಿದಂತೆ.

ದತ್ತು ನಿರಾಕರಿಸುವುದರಿಂದ ಅಥವಾ  ದತ್ತು ತಂದೆ ಮತ್ತು ಮಗುವಿನ ನಡುವಿನ ವಯಸ್ಸಿನ ಅಂತರವನ್ನು ಹೆಚ್ಚಿಸುವುದರಿಂದ ಲೈಂಗಿಕ ಶೋಷಣೆ ತಡೆಯಲು ಆಗುವುದಿಲ್ಲ. ಸ್ವಂತ ತಂದೆ, ಸಂಬಂಧಿಗಳೇ ಲೈಂಗಿಕ ದೌರ್ಜನ್ಯ ಎಸಗಿರುವ ಉದಾಹರಣೆಗಳು ನಮ್ಮ ಮುಂದಿವೆ. ಆದ್ದರಿಂದ ಕಠಿಣ ಶಿಕ್ಷೆ ಹಾಗೂ ಕಾನೂನಿನ ಸಮರ್ಪಕ ಜಾರಿಯಾದಲ್ಲಿ ಬದಲಾವಣೆ ತರಲು ಸಾಧ್ಯ.
-ರಾಜಲಕ್ಷ್ಮಿ ಅಂಕಲಗಿ, ವಕೀಲೆ

***
ಪಾರದರ್ಶಕತೆ ಕಾಪಾಡಬಹುದು

ಬಾಲ ನ್ಯಾಯ ಕಾಯ್ದೆ ಅಡಿ ರೂಪಿಸಿರುವ ಹೊಸ ಮಾರ್ಗಸೂಚಿಯಿಂದ ದತ್ತು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಬಂದಿದೆ.  ದತ್ತು ಪಡೆಯುವ ಹೆಸರಿನಲ್ಲಿ ನಡೆಯುತ್ತಿರುವ ಮಕ್ಕಳ ಅಕ್ರಮ ಸಾಗಾಟ ಹಾಗೂ ಕಳ್ಳ ವ್ಯವಹಾರಗಳನ್ನು ತಡೆಗಟ್ಟಲು ಈ ಮಾರ್ಗಸೂಚಿ ಸಂಪೂರ್ಣ ನೆರವಾಗಲಿದೆ.
-ಸಿಂಧೂ ನಾಯ್ಕ್‌, ಸದಸ್ಯೆ
ಕರ್ನಾಟಕ ರಾಜ್ಯ ಮಕ್ಕಳ ಕ್ಷೇಮಾಭಿವೃದ್ಧಿ ಪರಿಷತ್ತಿನ ದತ್ತು ಪರಿಶೀಲನಾ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT