ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜರ್‌ ಮಸೂದ್‌ ನಿಷೇಧ ಪ್ರಸ್ತಾಪ ತಳ್ಳಿಹಾಕಲಾಗದು: ರಿಚರ್ಡ್‌ ವರ್ಮಾ

Last Updated 20 ಜನವರಿ 2017, 19:31 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ‘ವಸ್ತುನಿಷ್ಠವಾಗಿ ಹೇಳುವುದಾದರೆ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕರ ಪಟ್ಟಿಗೆ ಸೇರಿಸಬೇಕೆಂಬ ಭಾರತದ ಒತ್ತಾಯವನ್ನು ತಳ್ಳಿಹಾಕಲಾಗದು’ ಎಂದು ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ರಿಚರ್ಡ್‌ ವರ್ಮಾ ಹೇಳಿದ್ದಾರೆ.

ಮಸೂದ್‌ ಅಜರ್‌ನನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭಾರತದ ಪ್ರಯತ್ನಕ್ಕೆ ಅಡ್ಡಿ ಉಂಟುಮಾಡುತ್ತಿರುವ ಚೀನಾಗೆ ಈ ಮೂಲಕ ಅವರು ಸ್ಪಷ್ಟ ಸಂದೇಶ ನೀಡಿದ್ದಾರೆ.

ದೆಹಲಿಯಿಂದ ಅಮೆರಿಕಕ್ಕೆ ಮರಳುವುದಕ್ಕೂ ಕೆಲವೇ ಗಂಟೆಗಳ ಮುನ್ನ ಅವರು ಮಾಧ್ಯಮ ಸಂಸ್ಥೆಗೆ ದೂರವಾಣಿ ಮೂಲಕ ಸಂದರ್ಶನ ನೀಡಿ, ‘ನಾವು ಭಾರತದ ಆಗ್ರಹವನ್ನು ಅರ್ಥಮಾಡಿಕೊಂಡು ಕೆಲಸ ಮಾಡಬೇಕು’ ಎಂದರು.

ಮಸೂದ್‌ ಅಜರ್‌ ವಿಚಾರ ಇನ್ನೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚೆಯಾಗದಿರುವುದು ಅಮೆರಿಕಕ್ಕೆ ನಿರಾಶೆ ಉಂಟುಮಾಡಿದೆ ಎಂದ ಅವರು, ಚೀನಾ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡಲಿಲ್ಲ.

‘ಎಲ್‌ಇಟಿ ಮತ್ತು ಜೆಇಎಂ ಉಗ್ರ ಸಂಘಟನೆಗಳ ಮೇಲೆ ಒತ್ತಡ ಹೇರಬೇಕಾದರೆ ಆ ಸಂಘಟನೆಗಳ  ಇನ್ನೂ ಕೆಲವರ ಮೇಲೆ ನಿಷೇಧ ಹೇರಬೇಕು’ ಎಂದು ವರ್ಮಾ ಅಭಿಪ್ರಾಯಪಟ್ಟಿದ್ದಾರೆ.

ಭಾರತ – ಅಮೆರಿಕದ ನಡುವಿನ ದ್ವೀಪಕ್ಷಿಯ ಮಾತುಕತೆ  ಇತ್ತೀಚಿನ ಕೆಲವು ವರ್ಷಗಳಲ್ಲಿ ಉತ್ತಮವಾಗಿತ್ತು ಎಂದಿರುವ ವರ್ಮಾ ಟ್ರಂಪ್‌ ಅವರ ಆಡಳಿತವೂ ಭಾರತದೊಂದಿಗೆ   ಉತ್ತಮ ಬಾಂಧವ್ಯ ಹೊಂದಲಿದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಎರಡು ವರ್ಷಗಳ ಕಾಲ ಭಾರತದಲ್ಲಿ ಕೆಲಸ ಮಾಡಿರುವ ವರ್ಮಾ, ಅಮೆರಿಕದ ರಾಯಭಾರಿ ಕಚೇರಿಯಲ್ಲಿ ಉನ್ನತ ಹುದ್ದೆಯಲ್ಲಿದ್ದ ಮೊದಲ ಭಾರತೀಯ ಅಮೆರಿಕನ್‌ ವ್ಯಕ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT