ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೊನಾಲ್ಡ್‌ ಟ್ರಂಪ್‌ ವಿರೋಧಿಸಿ ಅಮೆರಿಕದ ವಿವಿಧೆಡೆ ಪ್ರತಿಭಟನೆ

Last Updated 20 ಜನವರಿ 2017, 19:33 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಒಂದೆಡೆ ಅಮೆರಿಕದ ಲಕ್ಷಾಂತರ ಜನರು ಡೊನಾಲ್ಡ್‌ ಟ್ರಂಪ್‌ ಅವರನ್ನು ಹೊಸ ಅಧ್ಯಕ್ಷರಾಗಿ ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದರೆ, ಇನ್ನೊಂದೆಡೆ ‘ಹೊಸ ಆಡಳಿತ ಒಡೆದಾಳುವ ನೀತಿ ಅನುಸರಿಸುತ್ತದೆ’ ಎಂದು ಆರೋಪಿಸಿ ಸಾವಿರಾರು ಜನರು ಅವರ ವಿರುದ್ಧ ಪ್ರತಿಭಟನೆ ನಡೆಸಿದರು.

ವಿವಿಧೆಡೆ ಇಂಥ ಪ್ರತಿಭಟನೆಗಳು ಜೋರಾಗಿ ನಡೆದಿವೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ನ್ಯಾಷನಲ್‌ ಪ್ರೆಸ್‌ಕ್ಲಬ್‌ ಮುಂದೆ ಪ್ರತಿಭಟನೆಯಲ್ಲಿ ತೊಡಗಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಪೆಪ್ಪರ್‌ ಸ್ಪ್ರೇ ಬಳಸಿದರು. ಕೆಲವಡೆ ಸಣ್ಣ ಪ್ರಮಾಣದ ಹಿಂಸಾಚಾರವೂ ನಡೆದಿದೆ.

‘ಲೂಟಿಕೋರ ಅಧ್ಯಕ್ಷರನ್ನು ತಡೆಯಿರಿ’ಎಂಬ ಫಲಕವೂ ಸೇರಿದಂತೆ ಟ್ರಂಪ್‌ ಅವರನ್ನು ಟೀಕಿಸುವ ಘೋಷಣೆಗಳುಳ್ಳ ಫಲಕಗಳನ್ನು ಪ್ರತಿಭಟನಾಕಾರರು ಪ್ರದರ್ಶಿಸಿದರು.
ಪ್ರಮಾಣವಚನಕ್ಕೂ ಹಲವು ಗಂಟೆಗಳ ಮೊದಲೇ ನಗರದ ಹಲವೆಡೆ ಟ್ರಂಪ್‌ ವಿರೋಧಿ ಪೋಸ್ಟರ್‌, ಬ್ಯಾನರ್‌ಗಳನ್ನು ಹಾಕಲಾಗಿತ್ತು. ಟ್ರಂಪ್‌ ಬೆಂಬಲಿಗರು ಈ ಪೋಸ್ಟರ್‌ಗಳ ಮುಂದಿನಿಂದಲೇ ಪ್ರಮಾಣವಚನ ಸಮಾರಂಭಕ್ಕೆ ಹೋಗುತ್ತಿದ್ದರು.

ಅಮೆರಿಕ ಈಗ ಹಿಂದೆಂದೂ ಕಾಣಿಸದಷ್ಟು ಪ್ರಮಾಣದಲ್ಲಿ ರಾಜಕೀಯವಾಗಿ ಒಡೆದುಹೋಗಿದೆ ಎಂದು ಅಮೆರಿಕದ ಶೇ 86ರಷ್ಟು ಜನರು ಭಾವಿಸಿದ್ದಾರೆ ಎಂದು ಸಂಸ್ಥೆಯೊಂದು ನಡೆಸಿದ ಸಮೀಕ್ಷೆ ಬಹಿರಂಗಪಡಿಸಿದೆ.

ಭಾರತೀಯ ಅಮೆರಿಕನ್‌ ಪ್ರಜೆ ಪ್ರಮೀಳಾ ಜಯಪಾಲ್‌ ಸೇರಿದಂತೆ ಅಮೆರಿಕದ ಹಲವು ಜನಪ್ರತಿನಿಧಿಗಳು ಟ್ರಂಪ್‌ ಅವರ ಪ್ರಮಾಣವಚನ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ತಮ್ಮ ಪಕ್ಷದ ಸಂಸದರ ಈ ನಿರ್ಧಾರದ ಬಗ್ಗೆ ನಿರ್ಗಮಿತ ಅಧ್ಯಕ್ಷ ಬರಾಕ್‌ ಒಬಾಮ ಅವರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪ್ರತಿಭಟನಾಕಾರರ ಆರೋಪಗಳನ್ನು ತಳ್ಳಿಹಾಕಿರುವ ಟ್ರಂಪ್‌ ಪರ ಸಿಬ್ಬಂದಿ, ‘ಹೊಸ ಅಧ್ಯಕ್ಷರ ಬಗ್ಗೆ ರಾಷ್ಟ್ರದಾದ್ಯಂತ ಕುತೂಹಲವಿದೆ. ವಿವಿಧ ಭಾಗಗಳಿಂದ ಸಾವಿರಾರು ಜನರು ಸಮಾರಂಭಕ್ಕೆ ಬಂದಿರುವುದೇ ಇದಕ್ಕೆ ಸಾಕ್ಷಿ’ ಎಂದಿದ್ದಾರೆ.

ಚೀನಾ ಎಚ್ಚರಿಕೆ
ಬೀಜಿಂಗ್‌ (ಪಿಟಿಐ):
ಚೀನಾದ ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸುವ ಅಮೆರಿಕದ ಯೋಚನೆಯನ್ನು ಚೀನಾ ವಿರೋಧಿಸಿದ್ದು, ‘ಇಂಥ ಕ್ರಮಕ್ಕೆ ಮುಂದಾದರೆ ಸೂಕ್ತ ಉತ್ತರ ನೀಡಲಾಗುವುದು’ ಎಂದಿದೆ. ಅಮೆರಿಕದ ವಾಣಿಜ್ಯ ಇಲಾಖೆ ಈಚೆಗೆ ಚೀನಾದ ಕೆಲವು ಉತ್ಪನ್ನಗಳ ಮೇಲೆ ಭಾರಿ ಪ್ರಮಾಣದಲ್ಲಿ  ಸುರಿ ವಿರೋಧಿ ತೆರಿಗೆ ವಿಧಿಸುವುದಾಗಿ ಹೇಳಿತ್ತು.

ಬ್ರಿಟನ್‌ನಲ್ಲೂ ವಿರೋಧ
ಲಂಡನ್‌ (ಪಿಟಿಐ):
ಬ್ರಿಟನ್‌ನಲ್ಲೂ ಟ್ರಂಪ್‌ ವಿರುದ್ಧ ಶುಕ್ರವಾರ ಪ್ರತಿಭಟನೆಗಳು ನಡೆದಿವೆ. ಪ್ರತಿಭಟನಾಕಾರರು ಲಂಡನ್‌ನ ಹಲವೆಡೆ ‘ಸೇತುವೆಗಳನ್ನು ನಿರ್ಮಿಸಿ, ಗೋಡೆಗಳನ್ನಲ್ಲ’ ಎಂಬ ಬ್ಯಾನರ್‌ಗಳನ್ನು ಪ್ರದರ್ಶಿಸಿದ್ದಾರೆ. ‘ವಲಸಿಗರಿಗೆ ನಮ್ಮ ದೇಶದಲ್ಲಿ ಸ್ವಾಗತವಿದೆ’, ‘ವಲಸೆಗೆ ಭಾಷೆಗಿಂತಲೂ ದೊಡ್ಡ  ಇತಿಹಾಸವಿದೆ’ ಎಂಬ ಮುಂತಾದ ಫಲಕಗಳೂ ಕೆಲವೆಡೆ ಕಂಡುಬಂದಿವೆ. ಚುನಾವಣೆಗೂ ಮೊದಲು ಟ್ರಂಪ್‌ ಅವರು ಅಮೆರಿಕಕ್ಕೆ ವಲಸಿಗರ ಪ್ರವೇಶ ತಡೆಯಲು ಮೆಕ್ಸಿಕೊ ಗಡಿಯಲ್ಲಿ ತಡೆಗೋಡೆ ನಿರ್ಮಿಸುವುದಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT