ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಭೋಲ್ಕರ್‌, ಪಾನ್ಸರೆ ಹತ್ಯೆ: ತನಿಖೆ ವಿಳಂಬಕ್ಕೆ ಅಸಮಾಧಾನ

Last Updated 20 ಜನವರಿ 2017, 19:36 IST
ಅಕ್ಷರ ಗಾತ್ರ

ಮುಂಬೈ : ನರೇಂದ್ರ ದಾಭೋಲ್ಕರ್ ಮತ್ತು ಗೋವಿಂದ ಪಾನ್ಸರೆ ಅವರ ಹತ್ಯೆ ಪ್ರಕರಣಗಳ ತನಿಖೆ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಬಾಂಬೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ತನಿಖೆಯಲ್ಲಿ ನೆರವಾಗಲು ಬ್ರಿಟನ್ ಪೊಲೀಸರು ನಿರಾಕರಿಸಿದ್ದರ ಬಗ್ಗೆ ಸಿಬಿಐ ಮಾಹಿತಿ ನೀಡಿದರೂ ‘ತನಿಖೆ ತೃಪ್ತಿದಾಯಕವಾಗಿ ನಡೆಯುತ್ತಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು.

ಪ್ರಕರಣದ ತನಿಖೆಯಲ್ಲಿ ವಿಳಂಬವಾಗುತ್ತಿರುವುದನ್ನು ಪ್ರಶ್ನಿಸಿ ದಾಭೋಲ್ಕರ್‌ ಮತ್ತು ಪಾನ್ಸರೆ ಅವರ ಕುಟುಂಬಗಳ ಸದಸ್ಯರು ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ದಾಭೋಲ್ಕರ್‌ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಪಾನ್ಸರೆ ಅವರ ಹತ್ಯೆ ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರದ ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿದೆ. ತನಿಖೆಯ ಪ್ರಗತಿ ಬಗ್ಗೆ ಎರಡೂ ಸಂಸ್ಥೆಗಳು ಪೀಠಕ್ಕೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದವು.

ವಿಚಾರಣೆ ಆರಂಭವಾದಾಗ ಸಿಬಿಐ, ‘ದಾಭೋಲ್ಕರ್‌, ಪಾನ್ಸರೆ ಮತ್ತು ಎಂ.ಎಂ. ಕಲಬುರ್ಗಿ ಅವರ ಹತ್ಯೆಗೆ ಬಳಸಿರುವ ಶಸ್ತ್ರಾಸ್ತ್ರಗಳು ಒಂದೇ ರೀತಿಯದ್ದೇ ಎಂಬುದನ್ನು ಪರಿಶೀಲಿಸಿ ವರದಿ ನೀಡುವಂತೆ ಬ್ರಿಟನ್‌ನ ಮೆಟ್ರೊಪಾಲಿಟನ್ ಪೊಲೀಸರನ್ನು ಕೇಳಿಕೊಳ್ಳಲಾಗಿತ್ತು. ಆದರೆ ಅಪರಾಧ ದತ್ತಾಂಶ ಮತ್ತು ಮಾಹಿತಿ ಹಂಚಿಕೆ ಸಂಬಂಧ ಭಾರತ ಮತ್ತು ಬ್ರಿಟನ್ ನಡುವೆ ಯಾವುದೇ ಒಪ್ಪಂದ ಇಲ್ಲ.  ಹೀಗಾಗಿ ಈ ಪ್ರಕರಣದಲ್ಲಿ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿ, ನಮ್ಮ ಮನವಿಯನ್ನು ತಿರಸ್ಕರಿಸಿದರು.

ತನಿಖೆ ವಿಳಂಬವಾಗಲು ಇದೂ ಒಂದು ಕಾರಣ’ ಎಂದು ತಿಳಿಸಿತು. ಜತೆಗೆ, ಹತ್ಯೆಗೆ ಬಳಸಿದ ಶಸ್ತ್ರಾಸ್ತ್ರ ಸಂಬಂಧ ಅಹಮದಾಬಾದ್ ವಿಧಿವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯನ್ನು ಸಿಬಿಐ ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿತು.

ಮತ್ತಷ್ಟು ತನಿಖೆ ನಡೆಸಲು ಇನ್ನೂ ಎಂಟು ವಾರ ಕಾಲಾವಕಾಶ ಬೇಕು ಎಂದು ಎರಡೂ ಸಂಸ್ಥೆಗಳು ಪೀಠವನ್ನು ಕೇಳಿಕೊಂಡವು. ಈ ಕಾಲಾವಕಾಶವನ್ನು ನೀಡಿದ ಪೀಠ, ಮಾಧ್ಯಮಗಳೂ ಸೇರಿದಂತೆ ತನಿಖೆಯ ಮಾಹಿತಿ ಬಹಿರಂಗಪಡಿಸಬಾರದು ಎಂದು ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT