ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವು ಸಾಧ್ಯವಿರುವ ಕ್ಷೇತ್ರ ಮಿತ್ರಪಕ್ಷಗಳಿಗಿಲ್ಲ: ಬಿಜೆಪಿ

ಉತ್ತರ ಪ್ರದೇಶ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೇ ಮಣೆ; ಕಾರ್ಯತಂತ್ರ ಬದಲು
Last Updated 20 ಜನವರಿ 2017, 19:36 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವು ಸಾಧ್ಯವಿರುವ ಕ್ಷೇತ್ರಗಳನ್ನು ಮಿತ್ರ ಪಕ್ಷಗಳಿಗೆ ಬಿಟ್ಟುಕೊಡದಿರಲು ಬಿಜೆಪಿ ನಿರ್ಧರಿಸಿದೆ.  ಅಲ್ಲದೆ ಮಿತ್ರಪಕ್ಷಗಳು ಗೆಲ್ಲುವ ಸಾಧ್ಯತೆ ಇರುವ ಕ್ಷೇತ್ರಗಳನ್ನು ಮಾತ್ರ ಆ ಪಕ್ಷಗಳಿಗೆ ಬಿಟ್ಟುಕೊಡಲು ತೀರ್ಮಾನಿಸಿದೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಿತ್ರಪಕ್ಷಗಳು ಕೇಳಿದಷ್ಟು ಸ್ಥಾನಗಳನ್ನು ಬಿಜೆಪಿ ಬಿಟ್ಟುಕೊಟ್ಟಿತ್ತು. ಆದರೆ ಮಿತ್ರಪಕ್ಷಗಳ ಅಭ್ಯರ್ಥಿಗಳು ನಿರೀಕ್ಷಿತ ಪ್ರಮಾಣದಲ್ಲಿ ಮತಗಳನ್ನು ಪಡೆದಿರಲಿಲ್ಲ, ಗೆಲುವೂ ಸಾಧಿಸಿರಲಿಲ್ಲ. ಹೀಗಾಗಿ ಬಿಜೆಪಿ ಆ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿತ್ತು. ಈ ಕಾರಣದಿಂದಾಗಿ ಉತ್ತರ ಪ್ರದೇಶ ಚುನಾವಣೆ ಎದುರಿಸಲು  ಮಿತ್ರಪಕ್ಷಗಳೊಂದಿಗೆ ಸ್ಥಾನ ಹಂಚಿಕೊಳ್ಳುವಲ್ಲಿ ಬಿಜೆಪಿ ತನ್ನ ಕಾರ್ಯತಂತ್ರ ಬದಲಿಸಿದೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯು ಹಿಂದುಳಿದ ಸಮುದಾಯಗಳ ರಾಜಕೀಯ ಪಕ್ಷಗಳಾದ ಅಪ್ನಾ ದಳ (ಎಪಿ) ಮತ್ತು ಸುಹೇಲ್‌ದೇವ್ ಭಾರತೀಯ ಸಮಾಜ ಪಾರ್ಟಿಗಳ (ಎಸ್‌ಬಿಎಸ್‌ಪಿ) ಜತೆ ಮೈತ್ರಿ ಮಾಡಿಕೊಂಡಿದೆ. 2014ರ ಲೋಕಸಭಾ ಚುನಾವಣೆಯಲ್ಲೂ ಈ ಪಕ್ಷಗಳು ಎನ್‌ಡಿಎ ಮೈತ್ರಿಕೂಟದಲ್ಲಿದ್ದವು.

ಕುಮ್ರಿ ಸಮುದಾಯವನ್ನು ಪ್ರತಿನಿಧಿಸುವ ಎಪಿ 16 ಸ್ಥಾನಗಳಿಗಾಗಿ ಬೇಡಿಕೆ ಇಟ್ಟಿದೆ. ಪಕ್ಷದ ನಾಯಕಿ ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್‌ ಮತ್ತವರ ತಾಯಿಯ ನಡುವೆ ಬಿರುಕು ಉಂಟಾಗಿದೆ. ಇದು ಎರಡು ಬಣಗಳ ನಡುವೆ ಮತಗಳು ಹಂಚಿಹೋಗಲು ಕಾರಣವಾಗುತ್ತದೆ ಎಂದು ಎಣಿಸಿರುವ ಬಿಜೆಪಿ, ಎಪಿಗೆ 6ರಿಂದ 7 ಸ್ಥಾನಗಳನ್ನಷ್ಟೇ ಬಿಟ್ಟುಕೊಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಎಸ್‌ಬಿಎಸ್‌ಪಿಯ ಮುಖ್ಯಸ್ಥ ಓಂ ಪ್ರಕಾಶ್ ರಾಜ್ಭರ್‌ 2012ರ ಚುನಾವಣೆಯಲ್ಲಿ ಸೋತಿದ್ದರು. ಆದರೂ ಅವರು ತಮ್ಮ ಅಭ್ಯರ್ಥಿಗಳಿಗಾಗಿ 15 ಸ್ಥಾನಗಳು ಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮಿತ್ರ ಪಕ್ಷಗಳು ಬೇಡಿಕೆ ಇಟ್ಟಿರುವ ಸ್ಥಾನಗಳಲ್ಲಿ ಅರ್ಧದಷ್ಟನ್ನು ಮಾತ್ರ ಬಿಟ್ಟುಕೊಡಲು ಪಕ್ಷ ನಿರ್ಧರಿಸಿದೆ ಎಂದು ಬಿಜೆಪಿಯ ಮೂಲಗಳು ಸ್ಪಷ್ಟಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT