ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿ: ಒಮ್ಮತಕ್ಕೆ ಬಾರದ ಎಸ್‌ಪಿ–ಕಾಂಗ್ರೆಸ್

ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಅಖಿಲೇಶ್; ಕಾಂಗ್ರೆಸ್‌ ಹಿಡಿತದ ಕ್ಷೇತ್ರಗಳಲ್ಲೂ ಎಸ್‌ಪಿ ಸ್ಪರ್ಧೆ
Last Updated 20 ಜನವರಿ 2017, 19:39 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಮಾಜವಾದಿ ಪಕ್ಷ (ಎಸ್‌ಪಿ) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಆದರೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಎಸ್‌ಪಿ ಮತ್ತು ಕಾಂಗ್ರೆಸ್‌ಗಳು ಒಮ್ಮತಕ್ಕೆ ಬಂದಿಲ್ಲ.

ರಾಜ್ಯದ ಮುಖ್ಯಮಂತ್ರಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್  ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಮೊದಲ ಮೂರು ಹಂತಗಳಲ್ಲಿ ಒಟ್ಟು 209 ಸ್ಥಾನಗಳಿಗೆ ಸ್ಪರ್ಧೆ ನಡೆಯಲಿದ್ದು, 191 ಅಭ್ಯರ್ಥಿಗಳ ಪಟ್ಟಿಯನ್ನು ಅಖಿಲೇಶ್  ಅಂತಿಮಗೊಳಿಸಿದ್ದಾರೆ. ಒಂದೊಮ್ಮೆ ಎಸ್‌ಪಿ ಜತೆ ಮೈತ್ರಿಗೆ ಮುಂದಾದರೆ ಕಾಂಗ್ರೆಸ್‌ಗೆ ಉಳಿಯುವುದು 18 ಸ್ಥಾನಗಳು ಮಾತ್ರ. ಇದಕ್ಕಿಂತಲೂ ಮುಖ್ಯವಾಗಿ 2012ರ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಗಳಿಸಿದ್ದ ಒಂಬತ್ತು ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಜತೆಗೆ ನಾಲ್ಕು ಮತ್ತು ಐದನೇ ಹಂತದ ಚುನಾವಣೆಗೆ 19 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನೂ ಎಸ್‌ಪಿ ಬಿಡುಗಡೆ ಮಾಡಿದೆ.

‘ಕಾಂಗ್ರೆಸ್‌ನ ಬಿಗಿಹಿಡಿತ ಇರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಎಸ್‌ಪಿ ಒತ್ತಡ ತಂತ್ರ ಅನುಸರಿಸುತ್ತಿದೆ’ ಎಂದು ಕಾಂಗ್ರೆಸ್‌ನ ಮೂಲಗಳು  ಆರೋಪಿಸಿವೆ.

ಆದರೆ ಎಸ್‌ಪಿಯ ಉಪಾಧ್ಯಕ್ಷ ಕಿರಣ್ಮಯ್ ನಂದಾ, ‘ಕಾಂಗ್ರೆಸ್‌ ಜತೆ ಮೈತ್ರಿಗೆ ನಾವು ಉತ್ಸುಕರಾಗಿದ್ದೇವೆ. ಆದರೆ ಆ ಕಡೆಯಿಂದ ಈವರೆಗೆ ಸಕರಾತ್ಮಕ ಪ್ರತಿಕ್ರಿಯೆ ಬಂದಿಲ್ಲ.ಒಂದೊಮ್ಮೆ ಮೈತ್ರಿ ನಡೆದರೆ, ಕೆಲವು ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ವಾಪಸ್‌ ಕರೆಸಿಕೊಳ್ಳಲು ನಾವು ಸಿದ್ಧರಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

ಜತೆಗೆ, ‘ಒಟ್ಟು ಸ್ಥಾನಗಳಲ್ಲಿ  ಕಾಂಗ್ರೆಸ್‌ 100ಕ್ಕೂ ಹೆಚ್ಚು ಸ್ಥಾನಗಳನ್ನು ಕೇಳುತ್ತಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದಿದ್ದು, 26 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚು ಮತ ಪಡೆದ ಎರಡನೇ ಅಭ್ಯರ್ಥಿಗಳಾಗಿದ್ದಾರೆ. ಇದರ ಆಧಾರದಲ್ಲಿ ಕಾಂಗ್ರೆಸ್‌ಗೆ 54 ಸ್ಥಾನಗಳನ್ನು ಬಿಟ್ಟುಕೊಡಲು ನಾವು ಈಗಾಗಲೇ ಒಪ್ಪಿದ್ದೇವೆ.

ಜತೆಗೆ ಹೆಚ್ಚೆಂದರೆ ಒಟ್ಟು 85 ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ. ಮೈತ್ರಿ ನಡೆಯದಿದ್ದರೆ ಎಲ್ಲಾ 403 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುಲಾಯಂ, ಶಿವಪಾಲ್ ಬೆಂಬಲಿಗರಿಗೆ ಟಿಕೆಟ್ ಇಲ್ಲ
ಅಖಿಲೇಶ್‌ ಯಾದವ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ, ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಸ್ಥಾನ ಪಡೆದಿದ್ದಾರೆ. ಆದರೆ ಶಿವಪಾಲ್‌ ಮತ್ತು ಮುಲಾಯಂ ಸಿಂಗ್ ಯಾದವ್ ಅವರ ಬೆಂಬಲಿಗರು ಮತ್ತು ಅನುಯಾಯಿಗಳಲ್ಲಿ ಹೆಚ್ಚಿನವರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

ಶಿವಪಾಲ್‌ ಅವರಿಗೆ ಜಸ್ವಂತ್‌ ನಗರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಆದರೆ ಅವರ ಮಗ ಆದಿತ್ಯ ಯಾದವ್ ಅವರಿಗೆ ಪಟ್ಟಿಯಲ್ಲಿ ಸ್ಥಾನ ದೊರೆತಿಲ್ಲ. ಜತೆಗೆ ಅಖಿಲೇಶ್‌ ಅವರ ಮಲತಾಯಿ ಸಾಧನಾ ಗುಪ್ತಾ ಅವರ ಸಂಬಂಧಿ ಹಾಗೂ ಬಿಧುನಾ ಕ್ಷೇತ್ರದ ಈಗಿನ ಶಾಸಕ ಪ್ರಮೋದ್ ಗುಪ್ತಾ ಅವರಿಗೂ ಟಿಕೆಟ್‌ ನೀಡಿಲ್ಲ. ಮುಲಾಯಂ ಆಪ್ತ ಹಾಗೂ ರಾಜ್ಯ ಸಭಾ ಸದಸ್ಯ ಬೇನಿ ಪ್ರಸಾದ್ ವರ್ಮಾ ಅವರ ಮಗ ರಾಕೇಶ್ ವರ್ಮಾ ಅವರಿಗೂ ಟಿಕೆಟ್‌ ದೊರೆತಿಲ್ಲ. ಈ ಎಲ್ಲಾ ಕ್ಷೇತ್ರಗಳಲ್ಲಿ ಅಖಿಲೇಶ್ ತಮ್ಮ ಆಪ್ತರನ್ನು ಕಣಕ್ಕೆ
ಇಳಿಸಿದ್ದಾರೆ.

ಟಿಕೆಟ್‌ ನಿರಾಕರಿಸು ಮೂಲಕ ಶಿವಪಾಲ್‌ ಮೇಲೆ ಅಖಿಲೇಶ್‌ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಶಿವಪಾಲ್‌ ಬೆಂಬಲಿಗರು ಆರೋಪಿಸಿದ್ದಾರೆ. ಆದರೆ ಅಖಿಲೇಶ್ ಬೆಂಬಲಿಗರು, ‘ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗುತ್ತಿದೆ’ ಎಂದು ಸಮಜಾಯಿಷಿ ನೀಡಿದ್ದಾರೆ.

***
ಮೈತ್ರಿ ನಡೆಯದಿದ್ದರೆ ಸೋನಿಯಾ, ರಾಹುಲ್ ಗಾಂಧಿ ಅವರ ಲೋಕಸಭಾ ಕ್ಷೇತ್ರ ರಾಯ್‌ಬರೇಲಿ ಮತ್ತು ಅಮೇಠಿಗಳ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ
-ಲಕಿರಣ್ಮಯ್‌ ನಂದಾ
ಸಮಾಜವಾದಿ ಪಕ್ಷದ ಉಪಾಧ್ಯಕ್ಷ


***
ಪಕ್ಷದ ಅಭ್ಯರ್ಥಿಗಳನ್ನು ಮುಲಾಯಂ ಸಿಂಗ್ ಆರ್ಶೀವದಿಸಿದ್ದಾರೆ.   ಅಖಿಲೇಶ್ ಯಾದವ್‌ ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಪರ ಪ್ರಚಾರ ಮಾಡಲಿದ್ದು, ರ್‌್ಯಾಲಿಗಳಲ್ಲಿ ಮಾತನಾಡಲಿದ್ದಾರೆ
ಸಮಾಜವಾದಿ ಪಕ್ಷದ ಮೂಲಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT