ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ನೀತಿ ಪರಾಮರ್ಶೆ ಅಗತ್ಯ

ಜೈಪುರ ಸಾಹಿತ್ಯ ಉತ್ಸವದಲ್ಲಿ ಮನಮೋಹನ್‌ ವೈದ್ಯ ವಿವಾದಾತ್ಮಕ ಹೇಳಿಕೆ
Last Updated 20 ಜನವರಿ 2017, 19:43 IST
ಅಕ್ಷರ ಗಾತ್ರ

ಜೈಪುರ:  ‘ಮೀಸಲಾತಿ ನೀತಿಯ ಪರಾಮರ್ಶೆ ಅಗತ್ಯ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಸಹ ಶಾಶ್ವತವಾಗಿ ಮೀಸಲಾತಿ ನೀತಿ ಮುಂದುವರಿಸಿಕೊಂಡು ಹೋಗುವುದರ ಪರ ಇರಲಿಲ್ಲ’ ಎಂದು ಆರ್ಎಸ್‌ಎಸ್‌ನ ಪ್ರಚಾರ ಮುಖ್ಯಸ್ಥ ಮನಮೋಹನ್‌ ವೈದ್ಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೈಪುರದಲ್ಲಿ ನಡೆಯುತ್ತಿರುವ ಸಾಹಿತ್ಯ  ಉತ್ಸವದಲ್ಲಿ ಅವರು ಶುಕ್ರವಾರ ಮಾತನಾಡಿದರು.  

‘ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಮೀಸಲಾತಿಯನ್ನು ನೀಡಿದ್ದೇ ಭಿನ್ನ ಸಂದರ್ಭದಲ್ಲಿ. ಈ ಸಮುದಾಯಕ್ಕಾಗಿದ್ದ ಸಾಮಾಜಿಕ ಅನ್ಯಾಯವನ್ನು ಸರಿಪಡಿಸುವ ಕಾರಣ ಸಾಂವಿಧಾನಿಕ ಪರಿಹಾರವಾಗಿ ನೀಡಲಾಯಿತು. ಇದು ನಮ್ಮೆಲ್ಲರ ಜವಾಬ್ದಾರಿಯಾಗಿತ್ತು’ ಎಂದರು.

‘ಸಂವಿಧಾನ ರಚನೆಯಾಗಿ ಜಾರಿ ಯಾದಾಗಿನಿಂದ ಮೀಸಲಾತಿ ನೀತಿ ಇದೆ. ಆದರೆ ಇದು ಮುಂದುವರಿಯುವುದು ಸರಿಯಲ್ಲ ಎಂದು ಅಂಬೇಡ್ಕರ್ ಅವರೇ ಹೇಳಿದ್ದರು.ಇದಕ್ಕೂ ಒಂದು ಸಮಯದ ಪರಿಮಿತಿ ಇದೆ’ ಎಂದು ಸಂವಾದ ವೊಂದರಲ್ಲಿ ಅವರು ಹೇಳಿದರು.

ವೈದ್ಯ ಅವರ ಹೇಳಿಕೆ ಐದು ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆ ಮೇಲೆ   ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬಿಹಾರ ಚುನಾವಣೆ ವೇಳೆ ಆರ್ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ ಅವರು ಮೀಸಲಾತಿ ಕುರಿತು ನೀಡಿದ್ದ ಹೇಳಿಕೆ ಸಹ ವಿವಾದ ಸೃಷ್ಟಿಸಿತ್ತು.

ವೈದ್ಯ ಅವರ ಹೇಳಿಕೆಗೆ ಉತ್ತರ ನೀಡಿರುವ  ಲಾಲು ಪ್ರಸಾದ್‌, ‘ಆರ್‌ಎಸ್‌ಎಸ್ ಅನ್ನು ಬ್ರಾಹ್ಮಣರು ನಿಯಂತ್ರಣ ಮಾಡುತ್ತಿದ್ದಾರೆ. ಸಂವಿಧಾನದ ಅಡಿಯಲ್ಲಿ ಕೆಲವು ಸಮುದಾಯವನ್ನು ಗುರಿಯಾಗಿರಿಸಿಕೊಂಡು ಮೀಸಲಾತಿ ಸೌಲಭ್ಯ ನೀಡಲಾಗಿದೆ’ ಎಂದು ಹೇಳಿದ್ದಾರೆ.

‘ಮೋದಿಜಿ ನಿಮ್ಮ ಆರ್‌ಎಸ್‌ಎಸ್‌ ವಕ್ತಾರರು ಮತ್ತೊಮ್ಮೆ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ನಾವು ನಿಮ್ಮನ್ನು ಬಿಹಾರದಲ್ಲಿ ಸೋಲಿಸಿದ್ದೇವೆ. ಉತ್ತರ ಪ್ರದೇಶದಲ್ಲಿ ನಿಮಗೆ ಮತ್ತಷ್ಟು ಕಾದಿದೆ’ ಎಂದು ವ್ಯಂಗ್ಯವಾಡಿದ್ದಾರೆ. ‘ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯ ದಲಿತ ವಿರೋಧಿ ಕಾರ್ಯಸೂಚಿಯನ್ನು ವೈದ್ಯ ತೋರಿಸಿದ್ದಾರೆ. ಜಾತಿ ಮತ್ತು ಕೋಮುಭಾವನೆ ಅವರ ಡಿಎನ್‌ಎನಲ್ಲೇ ಇದೆ’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್‌ ಸುರ್ಜೆವಾಲ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT