ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌ ಪದಾಧಿಕಾರಿಗಳಿಗೆ ಮತ್ತೊಂದು ಅವಕಾಶ

ಲೋಧಾ ಸಮಿತಿ: ಸುಪ್ರೀಂ ಕೋರ್ಟ್‌ ಹಿಂದಿನ ತೀರ್ಪು ಮಾರ್ಪಾಡು
Last Updated 20 ಜನವರಿ 2017, 19:46 IST
ಅಕ್ಷರ ಗಾತ್ರ

ನವದೆಹಲಿ: ಒಂಬತ್ತು ವರ್ಷ ಕ್ರಿಕೆಟ್‌ ಆಡಳಿತದಲ್ಲಿ ಇದ್ದವರು ಮತ್ತೆ ಅಧಿಕಾರಕ್ಕೆ ಏರುವಂತಿಲ್ಲ ಎನ್ನುವ ತನ್ನ ಹಿಂದಿನ ತೀರ್ಪನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಮಾರ್ಪಾಡು ಮಾಡಿದೆ.

ರಾಜ್ಯ ಕ್ರಿಕೆಟ್‌ ಸಂಸ್ಥೆ ಮತ್ತು ಬಿಸಿಸಿಐನಲ್ಲಿ ತಲಾ ಒಂಬತ್ತು ವರ್ಷ ಕಾರ್ಯ ನಿರ್ವಹಿಸಬಹುದು ಎಂದು ಅದು ಹೇಳಿದೆ. ಇದರಿಂದ ಕೆಲ ಕ್ರಿಕೆಟ್‌ ಆಡಳಿತಗಾರರಿಗೆ ಮತ್ತೆ ಅಧಿಕಾರ ಹಿಡಿಯಲು ಹಾದಿ ಸಿಕ್ಕಂತಾಗಿದೆ.

ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಅಥವಾ ಬಿಸಿಸಿಐಯಲ್ಲಿ ಒಟ್ಟು 9 ವರ್ಷ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು ಕೋರ್ಟ್‌ನ ಮೊದಲಿನ ಆದೇಶದ ಪ್ರಕಾರ  ಮತ್ತೆ ಅಧಿಕಾರ ಹಿಡಿಯುವಂತಿರಲಿಲ್ಲ. ಈಗ ಇದರಲ್ಲಿ ಬದಲಾವಣೆ ಮಾಡಿದ್ದು  ರಾಜ್ಯ ಸಂಸ್ಥೆ  ಮತ್ತು ಬಿಸಿಸಿಐನ ಅಧಿಕಾರವನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುತ್ತದೆ. ಅಂದರೆ ರಾಜ್ಯ ಸಂಸ್ಥೆಯಲ್ಲಿ ಗರಿಷ್ಠ 9 ವರ್ಷ, ಬಿಸಿಸಿಐಯಲ್ಲಿ ಗರಿಷ್ಠ 9 ವರ್ಷ, ಹೀಗೆ ಒಟ್ಟು 18 ವರ್ಷ ಪದಾಧಿಕಾರಿಯಾಗಿ ಇರಬಹುದು.

ಆದರೆ 3 ವರ್ಷದ ಒಂದು ಅಧಿಕಾರಾವಧಿ ಪೂರೈಸಿದ ಬಳಿಕ 3 ವರ್ಷ ಅಧಿಕಾರದಿಂದ ದೂರ ಇರಬೇಕು ಎನ್ನುವ ನಿಯಮ ಮೊದಲಿನಂತೆಯೇ ಮುಂದುವರಿಯುತ್ತದೆ.

ಕ್ರಿಕೆಟ್‌ ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದಲ್ಲಿ ಸುಪ್ರೀಂ ಕೋರ್ಟ್‌ ಸಮಿತಿ  ರಚಿಸಿತ್ತು. ಲೋಧಾ ಸಮಿತಿ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕೆಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್ ಅವರನ್ನು ಒಳಗೊಂಡ ಪೀಠ ಜನವರಿ 2ರಂದು ತಾಕೀತು ಮಾಡಿತ್ತು.

‘ಒಟ್ಟು ಒಂಬತ್ತು ವರ್ಷ ಅಧಿಕಾರದಲ್ಲಿದ್ದವರು ಮತ್ತೆ ಕ್ರಿಕೆಟ್‌ ಆಡಳಿತದಲ್ಲಿ ಇರುವಂತಿಲ್ಲ’ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಆ ಆದೇಶವನ್ನು ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ,  ಎ.ಎಂ. ಕನ್ವಿಲ್ಕರ್‌ ಮತ್ತು ಡಿ.ವೈ. ಚಂದ್ರಚೂಡ ಅವರನ್ನು ಒಳಗೊಂಡ ಪೀಠ ಶುಕ್ರವಾರ ಮಾರ್ಪಾಡು ಮಾಡಿತು.
*
24ರಂದು ಆಡಳಿತಾಧಿಕಾರಿಗಳ ನೇಮಕ
ಪದಚ್ಯುತ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮತ್ತು ಪದಚ್ಯುತ ಕಾರ್ಯದರ್ಶಿ ಅಜಯ್‌ ಶಿರ್ಕೆ ಅವರ ಬದಲು ಹೊಸ ಆಡಳಿತಾಧಿಕಾರಿಗಳನ್ನು ಸುಪ್ರೀಂ ಕೋರ್ಟ್‌ ಜನವರಿ 24ರಂದು ನೇಮಕ ಮಾಡಲಿದೆ.

ಈ ಸ್ಥಾನಕ್ಕೆ ಯಾರನ್ನು ನೇಮಕ ಮಾಡಬೇಕು ಎನ್ನುವುದನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್‌ ಹಿರಿಯ ವಕೀಲರಾದ ಅನಿಲ್‌ ದಿವಾನ್‌ ಮತ್ತು ಗೋಪಾಲ್‌ ಸುಬ್ರಮಣಿಯಮ್‌ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿತ್ತು. ಇವರು ಮುಚ್ಚಿದ ಲಕೋಟೆಯಲ್ಲಿ ಒಂಬತ್ತು ಜನರ ಹೆಸರನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.

‘ನಮಗೆ ಲಭಿಸಿರುವ ಲಕೋಟೆಯಲ್ಲಿ ಇರುವ ಹೆಸರುಗಳ ಪೈಕಿ ಕೆಲವನ್ನು 24ರಂದು ಅಂತಿಮಗೊಳಿಸಲಾಗುವುದು. 70 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾದವರ ಹೆಸರುಗಳು ಇದರಲ್ಲಿ ಇಲ್ಲವೆಂದು ಭಾವಿಸಿದ್ದೇವೆ. ಸದ್ಯಕ್ಕಂತೂ ಯಾರ ಹೆಸರನ್ನು ಆಯ್ಕೆ ಮಾಡಬೇಕು, ಯಾರನ್ನು ಕೈ ಬಿಡಬೇಕು ಎನ್ನುವುದನ್ನು ನಿರ್ಧರಿಸಿಲ್ಲ’ ಎಂದು ಪೀಠ ತಿಳಿಸಿದೆ.
*
ಬ್ರಿಜೇಶ್‌ಗೆ ಮತ್ತೆ ಅವಕಾಶ
ಲೋಧಾ ಶಿಫಾರಸಿನ ಪ್ರಕಾರ ಅಧಿಕಾರದಿಂದ ಕೆಳಗಿಳಿದಿರುವ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಹಿಂದಿನ  ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌ ಅವರಿಗೆ ಮತ್ತೆ ಅಧಿಕಾರಕ್ಕೆ ಮರಳಲು ಅವಕಾಶ ಲಭಿಸಿದೆ. ರಾಜ್ಯ ಸಂಸ್ಥೆಯಲ್ಲಿ ಮೂರು ವರ್ಷಗಳ ಅಧಿಕಾರವಧಿ ಮುಗಿಸಿರುವ ಬ್ರಿಜೇಶ್‌ ಒಂದು ಅವಧಿಯ ‘ವಿಶ್ರಾಂತಿ’ಯ ಬಳಿಕ ಬಿಸಿಸಿಐಯಲ್ಲಿ ಅಧಿಕಾರ ಪಡೆಯಲು ಅವಕಾಶವಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT