ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಂಚಿಗೆ ಮುಂಬೈ ಸವಾಲು

Last Updated 20 ಜನವರಿ 2017, 19:47 IST
ಅಕ್ಷರ ಗಾತ್ರ

ಮುಂಬೈ: ಹಾಕಿ ಇಂಡಿಯಾ ಲೀಗ್‌ನ ಹಿಂದಿನ ಎರಡು ಆವೃತ್ತಿಗಳಲ್ಲಿ ಪ್ರಶಸ್ತಿ ಗೆದ್ದು ಆತ್ಮ ವಿಶ್ವಾಸದ ಉತ್ತುಂಗ ದಲ್ಲಿ ತೇಲುತ್ತಿರುವ ರಾಂಚಿ ರೇಯ್ಸ್‌ ತಂಡ ಈಗ ಮತ್ತೊಂದು ಟ್ರೋಫಿಯ ಮೇಲೆ ಕಣ್ಣು ನೆಟ್ಟಿದೆ.

ಶನಿವಾರ ಐದನೇ ಆವೃತ್ತಿಯ ಲೀಗ್‌ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್‌ ದೋನಿ ಸಹ ಮಾಲೀಕತ್ವದ ರಾಂಚಿ ತಂಡ ದಬಂಗ್‌ ಮುಂಬೈ ಸವಾಲಿಗೆ ಎದೆಯೊಡ್ಡಲಿದೆ.

ಜೂನಿಯರ್‌ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ತಂಡದ ಕೋಚ್‌ ಹರೇಂದ್ರ ಸಿಂಗ್‌ ಅವರ ಮಾರ್ಗದರ್ಶ ನದಲ್ಲಿ ತರಬೇತುಗೊಂಡಿರುವ ರಾಂಚಿ ತಂಡ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠ ವಾಗಿದೆ.

ಇಂಗ್ಲೆಂಡ್‌ನ ಆ್ಯಷ್ಲೆ ಜಾಕ್ಸನ್‌, ಬ್ಯಾರಿ ಮಿಡಲ್‌ಟನ್‌ ಮತ್ತು ಆಸ್ಟ್ರೇಲಿಯಾದ  ಡಿಫೆಂಡರ್‌ ಫರ್ಗ್ಯೂಸ್‌ ಕವನಾಘ್‌ ಅವರು ತಂಡದ ಶಕ್ತಿ ಎನಿಸಿದ್ದಾರೆ.
ಭಾರತದ ಗುರ್ಬಾಜ್‌ ಸಿಂಗ್‌, ಕೊಥಾಜಿತ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌ ಮತ್ತು ಬೀರೇಂದ್ರ ಲಾಕ್ರ ಅವರೂ ಎದುರಾಳಿ ತಂಡದ ರಕ್ಷಣಾ ವ್ಯೂಹವನ್ನು  ಭೇದಿಸುವ ತಾಕತ್ತು ಹೊಂದಿದ್ದಾರೆ.

ಹೋದ ವರ್ಷ ನಡೆದ ರಿಯೊ ಒಲಿಂ ಪಿಕ್ಸ್‌ನಲ್ಲಿ ಕಂಚು ಗೆದ್ದ ಜರ್ಮನಿ ತಂಡ ದಲ್ಲಿದ್ದ  ಕ್ರಿಸ್ಟೋಫರ್‌ ರುಹ್ರ್‌, ಆಸ್ಟ್ರೇ ಲಿಯಾದ ಡಿಫೆಂಡರ್‌ ಟಿಮೋಟಿ ಡೀವಿನ್‌ ಅವರೂ ಎದುರಾಳಿ ತಂಡದ ರಕ್ಷಣಾ ವಿಭಾಗದ ಆಟಗಾರರಿಗೆ ಸವಾ ಲಾಗುವ ಸಾಮರ್ಥ್ಯ ಹೊಂದಿದ್ದಾರೆ.

ಮುಂಬೈಗೆ ತವರಿನ ಅಭಿಮಾನಿಗಳ ಬೆಂಬಲ: ದಬಂಗ್‌ ಮುಂಬೈ ತಂಡ ಇದುವರೆಗೂ ಲೀಗ್‌ನಲ್ಲಿ ಒಮ್ಮೆಯೂ ಸೆಮಿಫೈನಲ್‌ ಪ್ರವೇಶಿಸಿಲ್ಲ. ಈ ಬಾರಿಯ ಲೀಗ್‌ನ ಮೊದಲ ಐದು ಪಂದ್ಯಗಳನ್ನು ತವರಿನ ಅಂಗಳದಲ್ಲೇ ಆಡಲಿರುವ ತಂಡ ಎಲ್ಲಾ ಪಂದ್ಯಗಳಲ್ಲೂ ಗೆದ್ದು ಚೊಚ್ಚಲ ಪ್ರಶಸ್ತಿಯ ಹಾದಿಯನ್ನು ಸುಗಮ ಮಾಡಿಕೊಳ್ಳುವ ಗುರಿ ಹೊಂದಿದೆ.

ನಾಲ್ಕು ಬಾರಿ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ ಆಸ್ಟ್ರೇಲಿಯಾ ತಂಡದಲ್ಲಿದ್ದ ಜೇ ಸ್ಟೇಸಿ ಅವರು ದಬಂಗ್‌ ತಂಡದ ಕೋಚ್‌ ಆಗಿದ್ದಾರೆ. ಈ ತಂಡ ಮುಂಚೂಣಿ ಮತ್ತು ರಕ್ಷಣಾ ವಿಭಾಗದಲ್ಲಿ ಶಕ್ತಿಯುತ ವಾಗಿದೆ. ಜೂನಿಯರ್‌ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಭಾರತ ತಂಡದಲ್ಲಿದ್ದ  ಗೋಲ್‌ಕೀಪರ್‌ ಕೃಷ್ಣ ಪಾಠಕ್‌, ಡ್ರ್ಯಾಗ್‌ ಫ್ಲಿಕ್‌ ಪರಿಣತ ಹರ್ಮನ್‌ಪ್ರೀತ್‌ ಸಿಂಗ್‌, ಮಿಡ್‌ಫೀಲ್ಡರ್‌ಗಳಾದ ನೀಲಕಂಠ ಶರ್ಮಾ, ಮನ್‌ಪ್ರೀತ್‌ ಸಿಂಗ್‌ ಮತ್ತು ಮುಂಚೂಣಿ ಆಟಗಾರ ಗುರ್ಜಾಂತ್‌ ಸಿಂಗ್‌ ಅವರು ಮತ್ತೊಮ್ಮೆ ಮೋಡಿ ಮಾಡುವ ಉತ್ಸಾಹದಲ್ಲಿದ್ದಾರೆ.

ಜರ್ಮನಿಯ ಫ್ಲೋರಿಯನ್‌ ಫಚಸ್‌ ಅವರ ಸಾರಥ್ಯದಲ್ಲಿ ತಂಡ ಗೆಲುವಿನ ಕನಸು ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT