ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿಯಲ್ಲಿ ₹400 ಕೋಟಿ ತೆರಿಗೆ ಖೋತಾ: ಎಎಪಿ ಆರೋಪ

Last Updated 20 ಜನವರಿ 2017, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವ್ಯಾಪಾರ ಪರವಾನಗಿ ತೆರಿಗೆ ಸಂಗ್ರಹದಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಕೈವಾಡದಿಂದ ಸುಮಾರು 400 ಕೋಟಿ ಅವ್ಯವಹಾರ ನಡೆದಿದೆ ಎಂದು ಆಮ್ ಆದ್ಮಿ (ಎಎಪಿ) ಪಕ್ಷ ಆರೋಪ ಮಾಡಿದೆ.

ವ್ಯಾಪಾರ ಮಳಿಗೆಗಳಿಗೆ ಪರವಾನಗಿ ನೀಡಬೇಕಾದ ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು, ವ್ಯಾಪಾರಸ್ಥರು ಪರವಾನಗಿ ಪಡೆಯಲು ಮುಂದಾದರೂ ಅವರಿಗೆ ಪರವಾನಗಿ ನೀಡದೇ ಬಿಬಿಎಂಪಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಎಎಪಿ ರಾಜ್ಯ ಘಟಕದ ಸಹ–ಸಂಚಾಲಕ ಶಿವಕುಮಾರ್ ಚೆಂಗಲರಾಯ ಅವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ಮಾಹಿತಿ ಹಕ್ಕು ಕಾಯ್ದೆಯಡಿ ಬಿಬಿಎಂಪಿ ನೀಡಿದ ಮಾಹಿತಿ ಪ್ರಕಾರ, 2015–16ನೇ ಸಾಲಿನಲ್ಲಿ ನಗರದಲ್ಲಿ ಪರವಾನಗಿ ಪಡೆದ 41,075 ವ್ಯಾಪಾರ ಮಳಿಗೆಗಳಿವೆ. ಪ್ರತಿ ವರ್ಷ ಹೆಚ್ಚಾಗಬೇಕಿದ್ದ ಇವುಗಳ ಸಂಖ್ಯೆ 2016–17ನೇ ಸಾಲಿನಲ್ಲಿ 33,896ಕ್ಕೆ ಇಳಿದಿರುವುದು ಹಾಸ್ಯಾಸ್ಪದ ಮತ್ತು ಅವ್ಯವಹಾರ ನಡೆದಿರುವುದಕ್ಕೆ ಸಾಕ್ಷಿ ಎಂದು  ಅವರು ಹೇಳಿದರು.

ಬಿಬಿಎಂಪಿ ನೀಡಿದ ಅಂಕಿ ಅಂಶದ ಸತ್ಯಾಂಶ ತಿಳಿಯಲೆಂದೇ ಎಎಪಿಯು ನಗರದ 198 ವಾರ್ಡ್‌ ಗಳಲ್ಲೂ ಪ್ರತ್ಯೇಕ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಯಿಂದ ತಿಳಿದುಬಂದ ಮಾಹಿತಿ ಪ್ರಕಾರ ನಗರದಲ್ಲಿ ಅಂದಾಜು 4 ಲಕ್ಷ ವ್ಯಾಪಾರ ಮಳಿಗೆಗಳಿವೆ. ಇವುಗಳಲ್ಲಿ ಬಹುತೇಕ ವ್ಯಾಪಾರಸ್ಥರು ಪರವಾನಗಿ ಪಡೆಯಲು ಸಿದ್ಧರಿದ್ದಾರೆ. ಆದರೆ, ಆರೋಗ್ಯ ಅಧಿಕಾರಿಗಳು ಲಂಚಕ್ಕಾಗಿ ಬೇಡಿಕೆ ಇಟ್ಟು ಪರವಾನಗಿ ನೀಡಲು ಸತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈಗಾಗಲೇ ಪರವಾನಗಿ ಹೊಂದಿರುವ ಅಂಗಡಿಗಳ ಮಾಲೀಕರು ಪ್ರತಿವರ್ಷ ಅಂದಾಜು 9,500 ರೂಪಾಯಿ ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಆರೋಗ್ಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಉದ್ದೇಶಪೂರ್ವಕವಾಗಿಯೇ ವ್ಯಾಪಾರಸ್ಥರು ಪರವಾನಗಿ ಪಡೆಯದಂತೆ ತಡೆಯೊಡ್ಡುತ್ತಿದ್ದಾರೆ. ಈ ನಿಟ್ಟಿನಲ್ಲಿ  ಅಂದಾಜು 4 ಲಕ್ಷ ವ್ಯಾಪಾರ ಮಳಿಗೆಗಳಿಂದ ಪಾಲಿಕೆ ಬೊಕ್ಕಸಕ್ಕೆ ಬರಬೇಕಿದ್ದ ಅಂದಾಜು 400 ಕೋಟಿ ರೂಪಾಯಿ ಭ್ರಷ್ಟರ ಪಾಲಾಗಿದೆ ಎಂದು ಅವರು ಹೇಳಿದರು.

ಡಿ.ಡಿ ಕೊಟ್ಟರೂ ಪರವಾನಗಿ ನೀಡದ ಅಧಿಕಾರಿಗಳು
ನಗರದಲ್ಲಿರುವ ಬಹುತೇಕ ವ್ಯಾಪಾರ ಮಳಿಗೆಗಳ ಮಾಲೀಕರು ಪರವಾನಗಿ ಪಡೆಯಲು ಹಣ ಪಾವತಿಸಿದ ಡಿ.ಡಿ ತಂದು  ಅಧಿಕಾರಿಗಳಿಗೆ ಕೊಟ್ಟರೂ, ಲಂಚಕ್ಕೆ ಬೇಡಿಕೆಯಿಟ್ಟು ಹತ್ತಾರು ದಿನಗಳ ಕಾಲ ಅಲೆದಾಡಿಸಿದಂತಹ ಅನೇಕ ಪ್ರಕರಣಗಳು ಎಎಪಿ ನಡೆಸಿದ ರಿಯಾಲಿಟಿ ಚೆಕ್ ನಲ್ಲಿ ಬೆಳಕಿಗೆ ಬಂದಿವೆ ಎಂದು ಶಿವಕುಮಾರ್ ಅವರು ಹೇಳಿದರು.

ಬೆಂಗಳೂರು ನಗರದಲ್ಲಿ (ಮೆಟ್ರೋ ಪಾಲಿಟನ್ ಎರಿಯಾ ಜೋನ್) ಸುಮಾರು 6 ಲಕ್ಷ  ವ್ಯಾಪಾರ ಮಳಿಗೆಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದಾಗಿ ಬೆಸ್ಕಾಂ ಹೇಳಿದೆ. ಇದು ಅವ್ಯವಹಾರ ನಡೆದಿರುವುದಕ್ಕೆ ಮತ್ತಷ್ಟು ಸಾಕ್ಷ್ಯವನ್ನು ಒದಗಿಸುತ್ತದೆ ಎಂದು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT