ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಾಬಿಯಲ್ಲಿ ಅರಳಿದ ಗೋಲಗುಮ್ಮಟ

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ
Last Updated 20 ಜನವರಿ 2017, 20:29 IST
ಅಕ್ಷರ ಗಾತ್ರ
ADVERTISEMENT

ಬೆಂಗಳೂರು: ವಿಜಯಪುರದ ಗೋಲಗುಮ್ಮಟದ ಸುಂದರ ಪ್ರತಿರೂಪವೊಂದು ಲಾಲ್‌ಬಾಗ್‌ ಉದ್ಯಾನದ ಗಾಜಿನ ಮನೆಯೊಳಗೆ ತಲೆ ಎತ್ತಿದೆ. ಗಣರಾಜ್ಯೋತ್ಸವ ಪ್ರಯುಕ್ತ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನದ ಸಲುವಾಗಿ ಬಣ್ಣ ಬಣ್ಣದ ಗುಲಾಬಿ ಹೂವುಗಳಿಂದ ನಿರ್ಮಿಸಿದ  ಈ ಗೊಲಗುಮ್ಮಟವು ರಸಿಕರ ಚಿತ್ತ ಸೆಳೆಯುತ್ತಿದೆ.   ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ಬಂದವರು ಈ ಹೂವಿನ ಸೌಧದ ಎದುರು ಸ್ವಂತಿ (ಸೆಲ್ಫಿ) ತೆಗೆದು ಸಂಭ್ರಮಪಟ್ಟರು.

ಏನಿದರ ವಿಶೇಷ: ಕಡುಕೆಂಪು, ಕೇಸರಿ, ಬಿಳಿ, ತಿಳಿಹಳದಿ ಬಣ್ಣದ ಗುಲಾಬಿ ಹೂವುಗಳಿಂದ ಗೋಲಗುಮ್ಮಟವನ್ನು ನಿರ್ಮಿಸಲಾಗಿದೆ. ಒಟ್ಟು 4 ಲಕ್ಷ ಹೂವುಗಳನ್ನು ಇದಕ್ಕಾಗಿ ಬಳಸಲಾಗಿದೆ.  ಈ ಒಟ್ಟು ರಚನೆ 35 ಅಡಿ ಉದ್ದ, 35 ಅಡಿ ಅಗಲ ಹಾಗೂ 35 ಅಡಿ ಎತ್ತರವಿದೆ. 

ಸಿಂಬಿಡಿಯಂ ಸೊಬಗು: ಸಿಕ್ಕೀಂನಲ್ಲಿ ಕಂಡುಬರುವ ಬಗೆ ಬಗೆಯ  ಸಿಂಬಿಡಿಯಂ ಆರ್ಕಿಡ್‌ಗಳು ಪ್ರದರ್ಶನದಲ್ಲಿವೆ.  ಸಮುದ್ರಮಟ್ಟದಿಂದ 5 ಸಾವಿರ ಅಡಿ ಎತ್ತರದಲ್ಲಿ ಬೆಳೆಯುವ ಈ ಬಣ್ಣ ಬಣ್ಣದ ಆರ್ಕಿಡ್‌ ಹೂವುಗಳನ್ನು ಲಾಲ್‌ಬಾಗ್‌ನಲ್ಲೇ ನೋಡಬಹುದು.

ಶೀತವಲಯದ ಹೂಗಳ ಆಕರ್ಷಣೆ: ಶೀತವಲಯದಲ್ಲಿ ಬೆಳೆಯುವ  ಅಜೀಲಿಯ, ಹೈಡ್ರಾಂಜಿಯ ಮತ್ತಿತರ ಜಾತಿಯ ಹೂಗಳು ಪ್ರದರ್ಶನದಲ್ಲಿವೆ. ಇಂತಹ 12 ಬಗೆಯ ಹೂಗಳನ್ನು ಇಲ್ಲಿ ಕಾಣಬಹುದು.

ಬಣ್ಣಬಣ್ಣದ ಸೇವಂತಿ: ಬಣ್ಣಬಣ್ಣದ ಸೇವಂತಿ ಹೂಗಳನ್ನು ಒಂದೇ ಸೂರಿನಡಿ ವೀಕ್ಷಿಸಬಹುದು. ಬಿಳಿ, ಹಳದಿ, ಕಡು ನೀಲಿ, ತಿಳಿಗೆಂಪು ಸೇರಿದಂತೆ ಒಟ್ಟು 13 ಬಣ್ಣ ಗಳ ಸೇವಂತಿ ಹೂಗಳು ಇಲ್ಲಿವೆ.

ಗೋಲಗುಮ್ಮಟ ಪಕ್ಕದಲ್ಲಿ   ಬಗೆ ಬಗೆಯ ಜರೀ ಗಿಡಗಳನ್ನು ಜೋಡಿಸಲಾಗಿದೆ.  ಸಿನರಿಯಂ, ಹೆಲಿಕ್ರೈಸಂ, ಲಾರ್ಕ್ಸ್‌ಪರ್‌, ಅಜಿರೇಟಂ, ಬೊಗೋನಿಯಾ, ಬೋಗನ್‌ವಿಲ್ಲಾ ಮೊದಲಾದ ರಂಗುರಂಗಿನ ಹೂಗಳಿವೆ.

ಸಸ್ಯೋದ್ಯಾನದಲ್ಲಿ ಒಪ್ಪ ಓರಣವಾಗಿ ಜೋಡಿಸಿಟ್ಟ ಹೂಗಳ  ಚೆಲುವನ್ನು  ಪುಟಾಣಿ ಮಕ್ಕಳಿಂದ  ವೃದ್ಧರವರೆಗೆ ವಿವಿಧ ವಯೊಮಾನದವರು ಕಣ್ತುಂಬಿಕೊಂಡರು. ಅನೇಕ ಮಂದಿ ವಿದೇಶಿಯರು ಪ್ರದರ್ಶನ ವೀಕ್ಷಿಸಲು ಬಂದಿದ್ದರು.

‘ನಾನು ಬೆಂಗಳೂರಿಗೆ ಬಂದಾಗ ಲಾಲ್‌ಬಾಗ್‌ ವೀಕ್ಷಿಸಬೇಕು ಎಂದು ಕೊಂಡಿದ್ದೆ. ನಾವು ಇಲ್ಲಿಗೆ ಭೇಟಿ ನೀಡಿದಾಗಲೇ ಫಲಪುಷ್ಪ ಪ್ರದರ್ಶನ ನಡೆಯುತ್ತಿರುವುದು ನಮ್ಮ ಅದೃಷ್ಟ. ಸಾಕಷ್ಟು ಖುಷಿಯನ್ನು ಹೊತ್ತು ತವರಿಗೆ ಮರಳುತ್ತಿದ್ದೇನೆ’ ಎಂದು ಫ್ರಾನ್ಸ್‌ನ ಮರ್ಲಿನ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಫಲಪುಷ್ಪ ಪ್ರದರ್ಶನದ ಅಂಗವಾಗಿ 100ಕ್ಕೂ ಅಧಿಕ ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಹೂವು, ತರಕಾರಿ ಬೀಜ, ತೋಟಗಾರಿಕಾ ಉತ್ಪನ್ನಗಳು, ಸಾವಯವ ಗೊಬ್ಬರ, ಕುಂಡದಲ್ಲಿ ಬೆಳೆಯುವ ಹೂಗಿಡಗಳು, ಸೋಲಾ ಮರದಿಂದ ಮಾಡಿದ ಕೃತಕ ಹೂಗಳು, ಸಿರಿಧಾನ್ಯ, ಅಲೋವೇರಾ ಉತ್ಪನ್ನಗಳು, ಲಾವಂಚದ ಉತ್ಪನ್ನಗಳು ಇಲ್ಲಿ ಮಾರಾಟಕ್ಕಿವೆ.

ಬೋನ್ಸಾಯ್‌ ಗಿಡಗಳು: ಆಯುಷ್‌ ಹರ್ಬ್ಸ್‌ ಸಂಸ್ಥೆ ಬೊನ್ಸಾಯ್‌ ಗಿಡಗಳನ್ನು ಮಾರಾಟಕ್ಕಿಟ್ಟಿದೆ. ₹250ರಿಂದ ಹಿಡಿದು ₹ 20 ಸಾವಿರದ ವರೆಗಿನ ಗಿಡಗಳು ಮಾರಾಟಕ್ಕಿವೆ.

ಸಾರಭೂತ ತೈಲ: ಸೌಖ್ಯ ಅರೋಮಾ ಸಂಸ್ಥೆ 80ಕ್ಕೂ ಹೆಚ್ಚು ಬಗೆಯ ಸಾರಭೂತ ತೈಲಗಳನ್ನು (ಎಸೆನ್ಷಿಯಲ್‌ ಆಯಿಲ್‌) ಪ್ರದರ್ಶನದಲ್ಲಿಟ್ಟಿದೆ. ತುಳಸಿ, ಲ್ಯಾವೆಂಡರ್‌,   ನೀಲಗಿರಿ, ಜಿರಾನಿಯಂ, ಮತ್ತಿತರ ಔಷಧ ಗುಣಗಳಿರುವ ತೈಲಗಳೂ ಇವೆ.

ಸಕ್ಕರೆಗೆ ಪರ್ಯಾಯವಾಗಿ ಬಳಸುವ ಸ್ಟಿವಿಯ  ಸಕ್ಕರೆಯನ್ನು ಮಾರಾಟ ಮಾಡುವ ಮಳಿಗೆಯೂ ಇದೆ. ಎಳೆನೀರು ಹಾಗೂ ಅದರ ಗಂಜಿಯನ್ನು ಒಣಗಿಸಿ ಹರಳುಗಳನ್ನಾಗಿ ಮಾರ್ಪಡಿಸಿ, ಅಗತ್ಯ ಬಿದ್ದಾಗ ಎಳನೀರು  ಜ್ಯೂಸ್‌ ತಯಾರಿಸಬಹುದು. ಶ್ರೀಜಲ ಸಂಸ್ಥೆ ಎಳೆನೀರು ಹರಳಿನ ಸ್ಯಾಷೆಗಳನ್ನು ಮಾರಾಟಕ್ಕಿಟ್ಟಿದೆ.

ತಾರಸಿ ತರಕಾರಿ: ತಾರಸಿ ಮೇಲೆ ಹಾಗೂ ಮನೆಯಂಗಳದಲ್ಲಿ ಬೆಳೆಯಬಹುದಾದ ಸೊಪ್ಪು, ತರಕಾರಿಗಳ ಪ್ರದರ್ಶನವಿದೆ. ಬಟಾಣಿ, ಮೂಲಂಗಿ, ಚೆರ್ರಿ ಟೊಮ್ಯಾಟೊ, ಮುಸುಕು ಬದನೆ, ಸೊರೆಕಾಯಿ, ಬೂದುಗುಂಬಳ, ಬೀಟ್‌ರೂಟ್‌, ಪನ್ನೀರುಪತ್ರೆ, ಕಾಡುದವನ, ಹೊನಗೊನ್ನೆಸೊಪ್ಪು, ಬಸಳೆ ಮತ್ತಿತರ ತರಕಾರಿಗಳು ಹಾಗೂ   ಹಿಪ್ಪಳಿ, ಆಡುಮುಟ್ಟದ ಬಳ್ಳಿ, ಅಮೃತಬಳ್ಳಿಯಂತಹ ಔಷಧಿಯ ಮೂಲಿಕೆಗಳು ಇಲ್ಲಿವೆ.

ಹೂತೋಟದಲ್ಲಿ ಸೋಲಿಗರ ಹಾಡು....

ಗೋರು.. ಗೋರುಕ್ಕ.. ಗೋರುಕ್ಕಾನ...
ದೊಡ್ಡ ಸಂಪಿಗೆ ನನ್ನೊಡೆಯಾ...
ಚಿಕ್ಕ ಸಂಪಿಗೆ ನನ್ನೊಡೆಯಾ....
ಚಿನ್ನದ ಗಿರಿಯಾ ಮಾದಪ್ಪಾನೆ...
ಕಾತು ಕಾಪಾಡಿ ಮಡಗುನಪ್ಪ....

ಲಾಲ್‌ಬಾಗ್‌ ಉದ್ಯಾನದಲ್ಲಿ ಅರಳಿರುವ ಬಣ್ಣ ಬಣ್ಣದ ಹೂಗಳ ಲೋಕದ ನಡುವೆ ಈ ಇಂಪಾದ ಹಾಡು ಕೂಡಾ ಕೇಳಿಬಂತು... ಈ ಬಾರಿಯ ಫಲಪುಷ್ಪ ಪ್ರದರ್ಶನದ ಅಂಗವಾಗಿ ಈ ಸೋಲಿಗರ  ಹಟ್ಟಿಗಳ ಪ್ರತಿಕೃತಿ, ಅವರು ಪೂಜಿಸುವ ಮಲೆಮಹದೇಶ್ವರನ ಗುಡಿ, ಅವರು ಬೆಳೆ ಕಾಯಲು ಬಳಸುವ ಬಿದಿರಿನ  ವೀಕ್ಷಣಾ ಗೋಪುರಗಳನ್ನು ನಿರ್ಮಿಸಲಾಗಿದೆ. ಬುಡಕಟ್ಟು ಜನರ ಜೀವನಶೈಲಿ ಇಲ್ಲಿ ವಸ್ತು ಪ್ರದರ್ಶನದ ಸರಕಾಗಿದೆ.  

ಚಾಮರಾಜನಗರ ತಾಲ್ಲೂಕಿನ ಮೂರು ಸೋಲಿಗರ ಕುಟುಂಬಗಳು ಪ್ರದರ್ಶನದ ಭಾಗವಾಗಿವೆ. ಸಿದ್ದ ಅವರು ಬಿದಿರು ಹಾಗೂ ಮರದಿಂದ ಮಾಡಿರುವ ಪೀನಾಶಿಯಿಂದ (ವಾದ್ಯ ) ಇಂಪಾದ ಸಂಗೀತವನ್ನು ನುಡಿಸಿದಾಗ, ಸೋಲಿಗ ಮಹಿಳೆಯರು, ಹಾಗೂ ಮಕ್ಕಳು  ಹೆಜ್ಜೆ ಹಾಕಿದರು. ಬುಡಕಟ್ಟು ಜನರ ಈ ಹಾಡಿನ ಮಾಧುರ್ಯಕ್ಕೆ, ಅವರ ಹೆಜ್ಜೆಯ ಲಯಕ್ಕೆ ನಗರದ ಜನ ಮಾರುಹೋದರು.

ಸೋಲಿಗರು ಔಷಧಿವಾಗಿ ಬಳಸುವ, ಕಾಡು ಅರಶಿನ, ಪುಡುಮಾವಿನ ಚೆಕ್ಕೆ, ಕಾಡು ಅವರೆಕಾಳು, ಕಾಡುಗೆಣಸು, ಕರಿಕಡ್ಡಿಸೊಪ್ಪು, ಅತ್ತಿ ಚೆಕ್ಕೆ, ಕಂದೆಮರದ ಚೆಕ್ಕೆ ಮುಂತಾದ  ಕೆಲವು ಕಾಡುತ್ಪನ್ನಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.

ಜನ ಏನನ್ನುತ್ತಾರೆ?
‘ಒಮ್ಮೆಯೂ ಪ್ರದರ್ಶನ ತಪ್ಪಿಸಿಕೊಂಡಿಲ್ಲ’

50 ವರ್ಷಗಳಿಂದ ಲಾಲ್‌ಬಾಗ್‌ಗೆ ಬರುತ್ತಿದ್ದೇನೆ. ಒಂದು ವರ್ಷವೂ ಫಲಪುಷ್ಪ ಪ್ರದರ್ಶನವನ್ನು ತಪ್ಪಿಸಿಕೊಂಡಿಲ್ಲ. ವಿದೇಶಗಳಲ್ಲಿನ ಫಲಪುಷ್ಪ ಪ್ರದರ್ಶನಕ್ಕಿಂತ ಇದು ಯಾವುದೇ ರೀತಿಯಲ್ಲೂ ಕಮ್ಮಿ ಇಲ್ಲ. ಪ್ರತಿ ವರ್ಷ ಒಂದೊಂದು ವಿಷಯವನ್ನು ಇಟ್ಟುಕೊಂಡು ಹೂವಿನ ಕಲಾಕೃತಿಗಳನ್ನು ರಚಿಸುವ ಮೂಲಕ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಕೆಲಸವೂ ಇಲ್ಲಿ ಆಗುತ್ತಿದೆ
-ಡಾ.ಪದ್ಮಾ, ಬಿಟಿಎಂ ಬಡಾವಣೆ

***
‘ಸಾರ್ವಜನಿಕರು ಫೋಟೊ ತೆಗೆಯುವುದನ್ನು ನಿಷೇಧಿಸಿ’

ಇತ್ತೀಚಿಗೆ ಹೂಗಳ ಚೆಂದ ನೊಡುವುದಕ್ಕಿಂತ ಅವುಗಳ ಫೋಟೊ ತೆಗೆಯುವುದರಲ್ಲೇ ಜನ ತಲ್ಲೀನರಾಗಿರುತ್ತಾರೆ. ಇಷ್ಟೆಲ್ಲ ಕಷ್ಟಪಟ್ಟು ಹೂಗಿಡಗಳನ್ನು ಬೆಳೆಸಿ, ಒಪ್ಪ ಓರಣವಾಗಿ ಜೋಡಿಸುವುದು ಸುಲಭದ ವಿಷಯವಲ್ಲ. ಮೊದಲು ಅದನ್ನು ಕಣ್ತುಂಬಿಕೊಳ್ಳಬೇಕು. ಮೊದಲ ಎರಡು ದಿನ ಇಲ್ಲಿ ಸಾರ್ವಜನಿಕರು ಫೋಟೊ ಕ್ಲಿಕ್ಕಿಸುವುದನ್ನು ನಿಷೇಧಿಸಬೇಕು
-ಶೈಲೇಶ್, ಉತ್ತರಹಳ್ಳಿ

***

‘ಮನಸ್ಸು ಉಲ್ಲಸಿತವಾಗುತ್ತದೆ’
ಹೂವಿನ ಗೋಲಗುಮ್ಮಟ ಆಕರ್ಷಕವಾಗಿದೆ. ಪ್ರತಿ ಸಲ ಫಲಪುಷ್ಪ ಪ್ರದರ್ಶನಕ್ಕೆ ಬಂದಾಗಲೂ ಮನಸ್ಸು ಉಲ್ಲಸಿತವಾಗುತ್ತದೆ.
-ಎಚ್‌.ಎಸ್‌.ಪ್ರಕಾಶ್‌, ಯಲಹಂಕ ನ್ಯೂಟೌನ್‌

***

‘ಬಣ್ಣದ ಹೂಗಳ ಲೋಕ ಅದ್ಭುತ’
ಇಲ್ಲಿನ ಬಣ್ಣದ ಹೂಗಳ ಲೋಕ ಅದ್ಭುತ. ಎಂಜಿನಿಯರಿಂಗ್‌ ವಿದ್ಯಾರ್ಥಿಯಾಗಿರುವ ನಾನು ಒಂದೂವರೆ ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಈ ಫಲಫುಷ್ಪ ಪ್ರದರ್ಶನದ ಬಗ್ಗೆ ಸ್ನೇಹಿತರಿಂದ ಕೇಳಿ ತಿಳಿದೆವು. ನಾವಿಲ್ಲಿ ಇರುವಷ್ಟು ವರ್ಷ ಈ ಪ್ರದರ್ಶನಕ್ಕೆ ತಪ್ಪದೇ ಬರುತ್ತೇವೆ
–ವೊನಥಾನ್‌, ಮಣಿಪುರ ಮೂಲದ ವಿದ್ಯಾರ್ಥಿ

***
‘ಹೂವಿನ  ಗಿಡ ಬೆಳೆಸಲು ಸ್ಫೂರ್ತಿ’

ಇಲ್ಲಿನ ಹೂಗಳನ್ನು ನೋಡುವುದೇ ಚೆಂದ.  ಪ್ರತಿವರ್ಷವೂ ಪ್ರದರ್ಶನಕ್ಕೆ ಬರುತ್ತಿದ್ದೇನೆ. ಹೂವಿನ ಬೀಜ ಹಾಗೂ ಗಿಡಗಳನ್ನು ಕೊಂಡೊಯ್ದು ಮನೆಯ ಕೈತೋಟದಲ್ಲಿ ಬೆಳೆಸಿ ಖುಷಿ ಪಟ್ಟಿದ್ದೇನೆ.
-ವೆಂಕಟಮ್ಮ, ಜಯನಗರ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT