ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌ ಶಾಖೆ ಸ್ಥಾಪಿಸಲು ರೈತರ ಒತ್ತಾಯ

ಚೆಕ್‌ ಮೂಲಕ ವ್ಯವಹಾರ: ರೈತರಿಗೆ ಅನಾನುಕೂಲ
Last Updated 21 ಜನವರಿ 2017, 5:04 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಗರಿಷ್ಠ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ ನಂತರ ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ರೇಷ್ಮೆ ಗೂಡನ್ನು ಕೊಂಡ ರೀಲರುಗಳು ಚೆಕ್‌ ಮೂಲಕ ವ್ಯವಹಾರ ನಡೆಸುತ್ತಿದ್ದು, ರೈತರಿಗೆ ತೊಂದರೆಯುಂಟಾಗುತ್ತಿದೆ ಎಂದು ರೇಷ್ಮೆ ಹಿತರಕ್ಷಣಾ ವೇದಿಕೆ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಶುಕ್ರವಾರ ಮಾರುಕಟ್ಟೆಯ ಅಧಿಕಾರಿ ರತ್ನಯ್ಯಶೆಟ್ಟಿ ಅವರನ್ನು  ಭೇಟಿ ಮಾಡಿದ ರೇಷ್ಮೆ ಹಿತರಕ್ಷಣಾ ವೇದಿಕೆ ಮತ್ತು ರೈತ ಸಂಘದ ಸದಸ್ಯರು ರೈತರ ತೊಂದರೆಗಳನ್ನು ವಿವರಿಸಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.

ಉತ್ತಮ ಬೆಲೆ ಶಿಡ್ಲಘಟ್ಟದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸಿಗುತ್ತದೆ ಎಂದು ದೂರದ ಊರುಗಳಿಂದ ಹಾಗೂ ನೆರೆಯ ರಾಜ್ಯಗಳಿಂದ ರೈತರು ಬರುತ್ತಾರೆ. ಆದರೆ ಕೆಲವು ರೀಲರುಗಳು ನೀಡುವ ಚೆಕ್‌ಗಳಲ್ಲಿ ಇರುವ ತಪ್ಪುಗಳಿಂದಾಗಿ ಅವರು ತಿರುಗಾಡುವ ಪರಿಸ್ಥಿತಿ ಉಂಟಾಗುತ್ತಿದೆ. ತಾತ್ಕಾಲಿಕವಾಗಿ ಪಾಸ್‌ ನೀಡುವ ಅಧಿಕಾರಿಗಳು ರೀಲರುಗಳು ನೀಡುವ ಚೆಕ್‌ಗಳನ್ನು ಒಮ್ಮೆ ಪರಿಶೀಲಿಸಿ, ತಾವೂ ಅದರ ವಿವರಗಳನ್ನು ಬರೆದಿಟ್ಟುಕೊಂಡು ರೈತರಿಗೆ ನೀಡುವ ವ್ಯವಸ್ಥೆ ಮಾಡಬೇಕು.

ಈ ಹಿಂದೆ ಮಾರುಕಟ್ಟೆ ಅಧಿಕಾರಿಗಳು ರೀಲರುಗಳಿಂದ ಹಣ ಪಡೆದು ಕಮಿಷನ್‌ ಹಣ ಮುರಿದುಕೊಂಡು ರೈತರಿಗೆ ಹಣ ನೀಡುತ್ತಿದ್ದರು. ಅದೇ ರೀತಿಯಾಗಿ ರೀಲರುಗಳಿಂದ ಅಧಿಕಾರಿಗಳು ಚೆಕ್‌ ಪಡೆದು ಸರ್ಕಾರಕ್ಕೆ ಸಲ್ಲಿಸಬೇಕಾದ ಕಮಿಷನ್‌ ಹಣವನ್ನು ತೆಗೆದುಕೊಂಡು ರೈತರಿಗೆ ಸರ್ಕಾರದ ಚೆಕ್‌ ನೀಡುವ ವ್ಯವಸ್ಥೆ ಆಗಬೇಕು ಎಂದು ಒತ್ತಾಯಿಸಿದರು.

ಮಾರುಕಟ್ಟೆಯಲ್ಲಿನ ಸಮಸ್ಯೆಗಳು ಅಧಿಕವಾಗಿದೆ. ಅವನ್ನು ಅಧಿಕಾರಿಗಳು ಸರಿಪಡಿಸಬೇಕು. ರೇಷ್ಮೆ ಗೂಡಿನ ಮಾರುಕಟ್ಟೆಯ ವಹಿವಾಟಿಗೆ ಒಂದು ಬ್ಯಾಂಕ್‌ ಶಾಖೆಯ ಅಗತ್ಯವಿದೆ ಅದರ ಬಗ್ಗೆ ಮೇಲಧಿಕಾರಿಗಳಿಗೆ ಶೀಘ್ರವಾಗಿ ತಿಳಿಸುವಂತೆ ಕೋರಿದರು.

ರೇಷ್ಮೆ ಹಿತರಕ್ಷಣಾ ವೇದಿಕೆ ಸಂಚಾಲಕ ಯಲುವಳ್ಳಿ ಸೊಣ್ಣೇಗೌಡ, ಉಪಾಧ್ಯಕ್ಷ ಮಳ್ಳೂರು ಹರೀಶ್‌, ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ತಾಲ್ಲೂಕು ಘಟಕದ ಅಧ್ಯಕ್ಷ ತಾದೂರು ಮಂಜುನಾಥ್‌, ಮಳಮಾಚನಹಳ್ಳಿ ದೇವರಾಜ್‌, ರಾಮಕೃಷ್ಣಪ್ಪ, ರಾಮಚಂದ್ರಪ್ಪ, ಮಂಜುನಾಥ, ಕೃಷ್ಣಪ್ಪ, ನಂಜಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT