ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ಜಿಲ್ಲೆಯ ವಿವಿಧೆಡೆ ಬಿಸಿಯೂಟ ಮತ್ತು ಅಂಗನವಾಡಿ ನೌಕರರಿಂದ ಮೆರವಣಿಗೆ
Last Updated 21 ಜನವರಿ 2017, 5:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಸೇವಾ ಭದ್ರತೆ, ವೇತನ ಹೆಚ್ಚಳ, ನಿವೃತ್ತಿ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯು ಕರೆ ನೀಡಿದ್ದ ಅಖಿಲ ಭಾರತ ಮುಷ್ಕರದ ಅಂಗವಾಗಿ ಅಂಗನವಾಡಿ ಮತ್ತು ಅಕ್ಷರ ದಾಸೋಹ ನೌಕರರು ಜಂಟಿಯಾಗಿ ಶುಕ್ರವಾರ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

‘ಶೈಕ್ಷಣಿಕ ಪ್ರಗತಿಗೆ ಪೂರಕವಾಗುವಂತೆ ಕೇಂದ್ರ ಸರ್ಕಾರ ರೂಪಿಸಿದ್ದ ಮಹತ್ವಾಕಾಂಕ್ಷೆ ಯೋಜನೆ ಅಕ್ಷರ ದಾಸೋಹ ಯಶಸ್ಸಿಗಾಗಿ ಸೇವೆ ಮಾಡುತ್ತಿರುವ ಅಕ್ಷರ ದಾಸೋಹ ನೌಕರರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಸಂಕಷ್ಟದಲ್ಲಿ ಸೇವೆ ಮಾಡುತ್ತಿರುವ ಇವರಿಗೆ 7ನೇ ವೇತವ ಆಯೋಗದ ಶಿಫಾರಸಿನಂತೆ ₹ 18,000 ಕನಿಷ್ಠ ವೇತನ ನೀಡಬೇಕು’ ಎಂದು ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ಒತ್ತಾಯಿಸಿದರು.

‘45 ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸುಗಳ ಪ್ರಕಾರ ಬಿಸಿಯೂಟದಂತಹ ಯೋಜನೆಗಳ ಅಡಿಯಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೌಕರರು ಎಂದು ಪರಿಗಣಿಸಿ ಇವರಿಗೆ, ಕನಿಷ್ಠ ವೇತನವನ್ನೊಂಳಗೊಂಡಂತೆ ಸಂಪೂರ್ಣ ಭದ್ರತೆಯನ್ನು ಒದಗಿಸುವ ಕೆಲಸ ಸರ್ಕಾರ ಮಾಡಬೇಕು. ಆದರೆ ಸರ್ಕಾರ ಸಮ್ಮೇಳನದ ಶಿಫಾರಸ್ಸುಗಳನ್ನು ಜಾರಿ ಮಾಡದೆ ಬಿಸಿಯೂಟ ಯೋಜನೆಯನ್ನು ಖಾಸಗಿಯವರಿಗೆ ನೀಡುವ ಆಲೋಚನೆಯಲ್ಲಿದೆ.

ಈ ಮೂಲಕ ಸರ್ಕಾರಿ ಶಾಲೆಗಳನ್ನು  ಸಂಪೂರ್ಣ ಮುಚ್ಚಿ ಹಾಕಲು ಹೊರಟಿದೆ. ಇದು ಬಡ, ಮಧ್ಯಮ ವರ್ಗ ಮತ್ತು ಕೃಷಿ ಕೂಲೀಕಾರರ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಕುತಂತ್ರ’ ಎಂದು ಆರೋಪಿಸಿದರು.

‘ಶಾಲೆಯಲ್ಲಿ ಅಡಿಗೆ ಕೆಲಸಕ್ಕೆ ಸೀಮಿತವಾಗಿರುವ ಬಿಸಿಯೂಟದವರನ್ನು ಶಾಲೆಯ ಹಾಜರಾತಿ ಮತ್ತು ಸಣ್ಣ ಪುಟ್ಟ ತಪ್ಪುಗಳಿಗೆ ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಈ ಕ್ರಮವನ್ನು ಕೂಡಲೇ ನಿಲ್ಲಿಸಬೇಕು. ಹಾಗೆ ತೆಗೆದಿರುವ ನೌಕರರನ್ನು ಈ ಕೂಡಲೇ ಕೆಲಸಕ್ಕೆ ಮರು ನೇಮಕ ಮಾಡಿಕೊಳ್ಳಬೇಕು. ಬಿಸಿಯೂಟದವರ ಮೇಲೆ ನಡೆಯುವ ಈ ದಬ್ಬಾಳಿಕೆ ಅಕ್ಷಮ್ಯವಾದುದು’ ಎಂದರು.

‘ಸಂವಿಧಾನದ ಆಶಯದಂತೆ ಸೇವಾ ಭದ್ರತೆಯನ್ನು ಒದಗಿಸಬೇಕಾದ ಸರ್ಕಾರ ಸ್ವತಾ ಶೋಷಿಸಲು ಮುಂದಾಗುತ್ತಿರುವುದು ಸರಿಯಲ್ಲ. ಸರ್ಕಾರ ಅನುಸರಿಸುತ್ತಿರುವ ಕಾರ್ಮಿಕ ವಿರೋಧಿ ನೀತಿಗಳನ್ನು ಈ ಕೂಡಲೆ ನಿಲ್ಲಿಸಬೇಕು. ಅಡುಗೆ ಸಂದರ್ಭದ ಅಪಘಾತವಾದಾಗ ಅಡಿಗೆ ನೌಕರರಿಗೆ ನಿಗದಿಪಡಿಸಿರುವ ವಿಮೆಯ ಮೊತ್ತವನ್ನು ₹ 1 ಲಕ್ಷದಿಂದ ₹ 5 ಲಕ್ಷಕ್ಕೆ ಏರಿಸಬೇಕು’ ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರ ಬೇಡಿಕೆಗಳ ಕುರಿತು ಮಾತನಾಡಿದ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಘಟಕದ ಸಹಕಾರ್ಯದರ್ಶಿ ಐಶಾಬಿ, ‘ಅಂಗನವಾಡಿ ನೌಕರರಿಗೆ ಕನಿಷ್ಠ ಕೂಲಿ ಕಾಯ್ದೆಯ ವ್ಯಾಪ್ತಿಗೆ ತರುವುದು ಮತ್ತು ಸೇವಾ ಭತ್ಯೆಯನ್ನು ಹೆಚ್ಚಿಸುವುದು ಒಳಗೊಂಡಂತೆ ಹಲವಾರು ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದೇವೆ. ಸರ್ಕಾರ ನಮ್ಮ ಸಮಸ್ಯೆಗಳ ಕುರಿತು ಕಿಂಚಿತ್ತೂ ಗಮನ ಹರಿಸುತ್ತಿಲ್ಲ’ ಎಂದು ಆರೋಪಿಸಿದರು.

‘45ನೇ ಕಾರ್ಮಿಕ ಸಮ್ಮೇಳನದ ಶಿಫಾರಸುಗಳ ಅನುಷ್ಠಾನ, ಅಂಗನವಾಡಿ ನೌಕರರಿಗೆ ಪ್ರತ್ಯೇಕ ಸೇವಾ ನಿಯಮಾವಳಿ ರೂಪಿಸಿ ಸಣ್ಣ– ಪುಟ್ಟ ದೋಷಗಳಿಗೆ ನಮ್ಮನ್ನು ಕೆಲಸದಿಂದ ತೆಗೆದು ಹಾಕುವುದನ್ನು ತಪ್ಪಿಸಬೇಕು. ಅಂಗನವಾಡಿ ಮೇಲ್ವಿಚಾರಕರನ್ನು ನೇಮಿಸಿಕೊಳ್ಳುವಾಗ ಶೇ100 ಅಂಗನವಾಡಿ ಕಾರ್ಯಕರ್ತೆಯರಿಗೆ ಆದ್ಯತೆ ನೀಡಬೇಕು. ವಯೋಮಿತಿ ಮತ್ತು ಲಿಖಿತ ಪರಿಕ್ಷೆ ಇರಬಾರದು ಮತ್ತು ಸೇವಾ ಹಿರಿತನದ ಆಧಾರದಲ್ಲಿ ಮುಂಬಡ್ತಿಯನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ಅಕ್ಷರ ದಾಸೋಹ ನೌಕರರ ಸಂಘ ತಾಲ್ಲೂಕು ಘಟಕ ಅಧ್ಯಕ್ಷೆ ಕೆ.ವಿ.ವೆಂಕಟಲಕ್ಷ್ಮಮ್ಮ, ಕಾರ್ಯದರ್ಶಿ ಕೆ.ಆರ್.ಮಂಜುಳಾ, ಖಜಾಂಚಿ ಭಾರತಿ ಮುಖಂಡರಾದ ಪದ್ಮಮ್ಮ, ಸುಜಾತಮ್ಮ, ಮಂಜುಳಾ, ಭಾಗ್ಯಮ್ಮ, ನಾರಾಯಣಮ್ಮ, ಲಕ್ಷ್ಮಿದೇವಮ್ಮ, ಅಂಗನವಾಡಿ ನೌಕರರ ಸಂಘ ತಾಲ್ಲೂಕು ಘಟಕದ ಅಧ್ಯಕ್ಷೆ ಟಿ.ಕೆ.ಗಾಯತ್ರಿ, ಕಾರ್ಯದರ್ಶಿ ಸುಶೀಲಮ್ಮ, ಖಜಾಂಚಿ ಜಿ.ಎಸ್.ಪದ್ಮ, ಮುಖಂಡರಾದ ರತ್ನಮ್ಮ, ಪಾರ್ವತಮ್ಮ, ವೀಣಾ ಇದ್ದರು.

*
ವೇತನ ಹೆಚ್ಚಳದ ಜತೆಗೆ ಬಿಸಿಯೂಟ ನೌಕರರನ್ನು ಸರ್ಕಾರ ‘ಡಿ’ ದರ್ಜೆಯ ನೌಕರರೆಂದು ಪರಿಗಣಿಸಬೇಕು. ಈ ಹಿಂದಿನ ಸರ್ಕಾರ ಘೋಷಿಸಿದ್ದ ಹೆಚ್ಚುವರಿ ಸಂಭಾವನೆ ಈ ಕೂಡಲೇ ಜಾರಿ ಮಾಡಬೇಕು.
-ಬಿ.ಎನ್.ಮುನಿಕೃಷ್ಣಪ್ಪ,
ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿಲ್ಲಾ ಘಟಕದ ಗೌರವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT