ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೇಷ್ಮೆ ಕೃಷಿಯಿಂದ ಅಧಿಕ ಲಾಭ’

Last Updated 21 ಜನವರಿ 2017, 5:21 IST
ಅಕ್ಷರ ಗಾತ್ರ

ಹೊಳಲ್ಕೆರೆ: ರೇಷ್ಮೆ ಕೃಷಿಯಿಂದ ರೈತರು ಅಧಿಕ ಲಾಭ ಗಳಿಸಬಹುದು ಎಂದು ರೇಷ್ಮೆ ಇಲಾಖೆಯ ಜಿಲ್ಲಾ ಉಪನಿರ್ದೇಶಕ ವಿಶ್ವನಾಥ ಹೇಳಿದರು.
ತಾಲ್ಲೂಕಿನ ಗುಡ್ಡದ ಸಾಂತೇನಹಳ್ಳಿಯಲ್ಲಿ ಶುಕ್ರವಾರ ನಡೆದ ರೇಷ್ಮೆ ಕೃಷಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಾರುಕಟ್ಟೆಯಲ್ಲಿ ರೇಷ್ಮೆಗೆ ಹೆಚ್ಚು ಬೆಲೆ ಇರುವುದರಿಂದ ರೈತರು ಹೆಚ್ಚು ಆದಾಯ ಗಳಿಸಬಹುದು. ಕೆಲವು ನಿಯಮಗಳನ್ನು ಅನುಸರಿಸಿದರೆ ಸುಲಭವಾಗಿ ರೇಷ್ಮೆ ಕೃಷಿ ಮಾಡಬಹುದು. ರೇಷ್ಮೆ ಹುಳುಗಳಿಗೆ ಸೊಪ್ಪು ಬೆಳೆಯಲು ಹೆಚ್ಚು ನೀರಿನ ಅಗತ್ಯವಿಲ್ಲ. ಸರ್ಕಾರವೂ ರೇಷ್ಮೆ ಬೆಳೆಗಾರರಿಗೆ ಸಹಾಯಧನ ನೀಡುವ ಮೂಲಕ ಬೆಳೆ ಬೆಳೆಯಲು ಉತ್ತೇಜಿಸುತ್ತದೆ. ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲೂ ಸಹಾಯಧನ ಪಡೆಯಬಹುದು.

ನಮ್ಮ ಇಲಾಖೆಯ ಅಧಿಕಾರಿಗಳು, ತಜ್ಞರು ರೈತರ ಹೊಲಗಳಿಗೇ ಬಂದು ಸಲಹೆ, ಸೂಚನೆಗಳನ್ನು ನೀಡುತ್ತಾರೆ. ರೇಷ್ಮೆ ಹುಳುಗಳನ್ನು ಚಿಕ್ಕ ಮಕ್ಕಳಷ್ಟೇ ಜವಾಬ್ದಾರಿಯಿಂದ ಬೆಳೆಸಬೇಕು. ರೋಗರಹಿತ ವಾತಾವರಣ ಇರುವಂತೆ ನೋಡಿಕೊಂಡರೆ ಯಶಸ್ಸು ಸಾಧ್ಯ ಎಂದರು.

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕಿ ಸಿ.ಡಿ.ಲತಾ ಮಾತನಾಡಿ, ರೈತರು ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ರಾಸಾ ಯನಿಕಗಳಿಂದ ಕೂಡಿದ ಆಹಾರ ಧಾನ್ಯ, ತರಕಾರಿ, ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯ ಹದಗೆಡುತ್ತದೆ. ದೇಶಕ್ಕೆ ಅನ್ನ ನೀಡುವ ರೈತನ ಬಗ್ಗೆ ಎಲ್ಲರೂ ಅಭಿಮಾನ ಹೊಂದಬೇಕು. ಪಟ್ಟಣದಲ್ಲಿ ಎಷ್ಟೇ ಹಣ ಸಂಪಾದಿಸಿದರೂ ರೈತ ಬೆಳೆದ ಬೆಳೆಯನ್ನೇ ತಿನ್ನಬೇಕು ಎಂದರು.

ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ರಾಜಗೋಪಾಲ ಮಾತನಾಡಿ, ರೇಷ್ಮೆಹುಳುಗಳಿಗೆ ಬೆಳೆಸುವ ಸೊಪ್ಪಿನ ಸಸಿ ಬೇಕಾದರೆ ನಾವೇ ರೈತರ ಮನೆಬಾಗಿಲಿಗೆ ಸರಬರಾಜು ಮಾಡುತ್ತೇವೆ. ರೈತರ ಹೊಲದಲ್ಲಿನ ಮಣ್ಣು ಪರೀಕ್ಷೆ ಮಾಡಿ ಸಲಹೆ ನೀಡುತ್ತೇವೆ.

ಬೆಳೆಯ ಆರಂಭದಿಂದ ಅಂತ್ಯದವರೆಗೂ ಸಲಹೆ ನೀಡುತ್ತೇವೆ. ರೇಷ್ಮೆ ಕೃಷಿ ಹೆಚ್ಚು ಲಾಭದಾಯಕವಾಗಿದ್ದು, ಪ್ರತಿ ಎಕರೆಯಲ್ಲಿ 200ರಿಂದ 300 ಕೆಜಿ ರೇಷ್ಮೆ ಗೂಡು ಉತ್ಪಾದಿಸಬಹುದು.  ರಾಮನಗರ ಮಾರುಕಟ್ಟೆಯಲ್ಲಿ ಈಗ ಪ್ರತಿ ಕೆಜಿಗೆ ₹500 ಬೆಲೆ ಇದ್ದು, ವರ್ಷದಲ್ಲಿ ನಾಲ್ಕೈದು ಬೆಳೆ ತೆಗೆಯಬಹುದು ಎಂದರು.

ಚಳ್ಳಕೆರೆ ಕ್ಲಸ್ಟರ್ ಸಿಡಿಎಫ್ ಶಿವಣ್ಣ, ಹೊಸದುರ್ಗ ತಾಲ್ಲೂಕಿನ ಮೈಲಾರ ಪುರದ ಪ್ರಗತಿಪರ ರೈತ ಮಲ್ಲೇಶ್, ವಲಯಾಧಿಕಾರಿ ನಾಗರಾಜಯ್ಯ, ಫೀಲ್ಡ್ ಆಫೀಸರ್ ಮಂಜುನಾಥ್, ರೈತರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT