ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1 ಕೋಟಿಗೂ ಹೆಚ್ಚಿನ ಅವ್ಯವಹಾರ ಶಂಕೆ

ತೀರ್ಥಹಳ್ಳಿ ತಾಲ್ಲೂಕು ಹೊನ್ನೆತಾಳು ಸಹಕಾರ ಸಂಘ: ತನಿಖೆಗೆ ಮುಂದಾದ ಸಹಕಾರ ಇಲಾಖೆ
Last Updated 21 ಜನವರಿ 2017, 5:29 IST
ಅಕ್ಷರ ಗಾತ್ರ

ತೀರ್ಥಹಳ್ಳಿ:  ರೈತರ ಆರ್ಥಿಕ ಚಟುವಟಿಕೆಗೆ ನೆರವಾಗಬೇಕಿದ್ದ ತಾಲ್ಲೂಕಿನ ಹೊನ್ನೆತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ, ಎರಡು ವರ್ಷಗಳ ವಹಿವಾಟಿನ ಅವಧಿಯಲ್ಲಿ ₹ 1.50 ಕೋಟಿಗೂ ಮಿಕ್ಕಿದ ಹಣ ದುರುಪಯೋಗವಾಗಿದೆ ಎಂದು ರೈತರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರಾಥಮಿಕ ತನಿಖೆ ನಡೆದಿದ್ದು, ಹಣ ದುರುಪಯೋಗ ಆಗಿರುವುದು ಮೇಲ್ನೋಟಕ್ಕೆ ಪತ್ತೆಯಾಗಿದೆ. ಸಂಘದ ವಹಿವಾಟಿನ ಜವಾಬ್ದಾರಿ ಹೊತ್ತ ಕೆಲವರ ಮೇಲೆ ರೈತರು ಗುಮಾನಿ ವ್ಯಕ್ತಪಡಿಸಿದ್ದಾರೆ. ಹಗರಣ ಕುರಿತು ಸಹಕಾರ ಕಾಯ್ದೆ ಕಲಂ 64ರ ಅನ್ವಯ ವಿಚಾರಣೆ ನಡೆಸಲು ಸಹಕಾರ ಸಂಘಗಳ ಇಲಾಖೆ ಕ್ರಮಕ್ಕೆ ಮುಂದಾಗಿದೆ. ಇದರ ಜತೆಗೇ ಪ್ರಕರಣವನ್ನು ಮುಚ್ಚಿಹಾಕಲು ಹಣ ದುರುಪಯೋಗ ಪಡಿಸಿಕೊಂಡ ಗುಂಪು, ರಾಜಕೀಯ ಪ್ರಭಾವ ಬಳಸಲು ಮುಂದಾಗಿದೆ ಎನ್ನಲಾಗಿದೆ.

2012ರಲ್ಲಿ ರಾಜ್ಯ ಸರ್ಕಾರ ಸಾಲ ಮನ್ನಾ ಯೋಜನೆ ಅಡಿಯಲ್ಲಿ ರೈತರ ಸಾಲ ಮನ್ನಾ ಆದ ಬಾಬ್ತು ₹ 25 ಸಾವಿರ ಹಾಗೂ ಸಂಘದ ಸ್ವಯಂ ಆದಾಯ ಸೇರಿದಂತೆ ವಿವಿಧ ಮೂಲಗಳಿಂದ ಬರಬೇಕಿದ್ದ ಹಣವನ್ನು ಸಂಘದ ಕೆಲವು ಪ್ರಮುಖರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಅನುಮಾನ ವ್ಯಕ್ತವಾಗಿದೆ.

ರೈತರಿಂದ ದೂರು: ಹಣ ದುರುಪಯೋಗ, ಅವ್ಯವಹಾರ ಕುರಿತು ತನಿಖೆ ನಡೆಸುವಂತೆ ಕೋರಿ ರೈತರು 2016ರ ನ.2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಹಕಾರ ಸಚಿವರು, ಸಂಸದ ಬಿ.ಎಸ್‌.ಯಡಿಯೂರಪ್ಪ, ಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರು, ಸಹಕಾರ ಸಂಘಗಳ ನಿಬಂಧಕರು, ಉಪ ನಿಬಂಧಕರಿಗೆ ದೂರು ನೀಡಿದ್ದರು.

ಸಹಕಾರ ಸಂಘದಲ್ಲಿ ಹಲವು ವರ್ಷಗಳಿಂದ ಅವ್ಯವಹಾರ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದ್ದು, ಮಂಗಳೂರು ಮೂಲದವರಿಂದ ಖಾಸಗಿ ಲೆಕ್ಕ ಪರಿಶೋಧನೆಗೆ ಒಳಪಡಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಠೇವಣಿ, ಪಿಗ್ಮಿ, ಲಾಭಾಂಶ, ರೈತರಿಗೆ ಸಂದಾಯವಾಗಬೇಕಿದ್ದ ಸಾಲಮನ್ನಾ ಹಣ ಸೇರಿದಂತೆ ಅನೇಕ ವಹಿವಾಟಿನ ಬಾಬ್ತು ಸುಮಾರು ₹ 2 ಕೋಟಿಗೂ ಹೆಚ್ಚು ಎನ್ನಲಾಗಿದೆ.

ಡಿಸಿಸಿ ಬ್ಯಾಂಕ್‌ನ ತೀರ್ಥಹಳ್ಳಿ ಶಾಖೆಯಲ್ಲಿ 2015 ಏ.10ರಂದು ₹ 12,50,000 ಜಮಾ ಮಾಡಲಾಗಿದೆ ಎಂದು ನಗದು ಪುಸ್ತಕದಲ್ಲಿ ನಮೂದಿ
ಸಲಾಗಿದೆ. ಆದರೆ, ಹಣ ಜಮಾ ಮಾಡಿದ ಚಲನ್‌ ರಸೀದಿ ಸಂಘದಲ್ಲಿ ಇಲ್ಲ. 2015 ಏ.1ರಿಂದ 12ರ ವರೆಗೆ ₹ 1.50 ಕೋಟಿಗೂ ಮಿಕ್ಕಿದ ನಗದು ಶಿಲ್ಕು ದುರುಪಯೋಗ ಬೆಳಕಿಗೆ ಬಂದಿದೆ.  2014–15, 2015–16ನೇ ಸಾಲಿನ ಸಂಪೂರ್ಣ ಹಣಕಾಸು, ಆಡಳಿತಾತ್ಮಕ ವ್ಯವಹಾರದ ಕುರಿತು ಸಮಗ್ರ ತನಿಖೆ ಅಗತ್ಯವಿದೆ ಎಂದು ರೈತರು ಆಗ್ರಹಿಸಿದ್ದಾರೆ.

ಸಹಕಾರ ಸಂಘಗಳ ಕಾಯ್ದೆ 159 ಕಲಂ 64ರ ಅಡಿ ವಿಚಾರಣೆ ನಡೆಸುವುದು ಸೂಕ್ತ ಎಂದು ತೀರ್ಥಹಳ್ಳಿ ಸಹಕಾರ ಅಭಿವೃದ್ಧಿ ಅಧಿಕಾರಿ ವರದಿಯ ಕಾರಣ, ಸಂಘಗಳ ನೋಂದಣಾಧಿಕಾರಿ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು 2016 ಡಿ.12ರಂದು ಸಹಕಾರ ಸಂಘಗಳ ನಿಬಂಧಕರಿಗೆ ಪತ್ರ ಬರೆದಿದ್ದಾರೆ.

2017 ಜ.10ರಂದು ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಉಪ ನಿರ್ದೇಶಕರು ಸಹಕಾರ ಸಂಘಗಳ ಕಾಯ್ದೆ ಕಲಂ 64ರ ಅಡಿ ವಿಚಾರಣೆಗೆ ತೀರ್ಥಹಳ್ಳಿ ಲೆಕ್ಕ ಪರಿಶೋಧಕರಿಗೆ ಸೂಚಿಸಿದ್ದಾರೆ. ಈ ನಡುವೆ ಪ್ರಭಾವಿ ಸಹಕಾರ ಮುಖಂಡರು ಮಧ್ಯಪ್ರವೇಶ ಮಾಡುತ್ತಿರುವುದು ಅನುಮಾನ ಹೆಚ್ಚಿಸಿದೆ ಎಂದು ಹೆಸರು ಹೇಳಲು ಇಚ್ಛಿಸದ ರೈತರು ಹೇಳಿದ್ದಾರೆ.
– ಶಿವಾನಂದ ಕರ್ಕಿ

ಲಕ್ಷಾಂತರ ರೂಪಾಯಿ ವ್ಯತ್ಯಾಸ
2014–15ನೇ ಸಾಲಿನ ಆಡಿಟ್‌ ವರದಿಯಲ್ಲಿ ಆಸ್ತಿ, ಜವಾಬ್ದಾರಿ ತಖ್ತೆ ಅನ್ವಯ 2015 ಮಾರ್ಚ್‌ 31ರ ಅಂತ್ಯದ ವೇಳೆಗೆ ₹ 1,84,06,995 ಅಂತಿಮ ಶಿಲ್ಕು ಇದ್ದು 2015 ಏ.1ಕ್ಕೆ ನಗದು ಪುಸ್ತಕದಲ್ಲಿ ₹ 1,84,06,995 ನಮೂದಾಗಿದೆ.

2015 ಏ.1ರಿಂದ 2015 ಏ.7ಕ್ಕೆ ಜಮಾ ಮೊತ್ತ ₹ 37,48,305 ನಮೂದಿಸಿ ₹ 1,11,100 ಖರ್ಚು ತೋರಿಸಲಾಗಿದೆ. ದಿನದ ಅಂತ್ಯಕ್ಕೆ ಇರಬೇಕಾದ ₹ 2,20,44,200 ನಗದು ಶಿಲ್ಕು ₹ 1,28,02,692 ನಮೂದಾಗಿದೆ. ₹ 92,41,508 ವ್ಯತ್ಯಾಸವಿದ್ದು ಈ ಮೊತ್ತ ದುರುಪಯೋಗವಾದ ಅಂಶ ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.

*
ಸಹಕಾರ ಸಂಘದಲ್ಲಿ ಹಣ ದುರುಪಯೋಗ ಆಗಿರುವುದು ಕಂಡುಬಂದಿದೆ. ಸಹಕಾರ ನಿಬಂಧಕರಿಗೆ ಲೆಕ್ಕ ಪರಿಶೀಲನೆ ನಡೆಸಲು ಮನವಿ ಮಾಡಲಾಗಿದೆ. ₹ 25 ಲಕ್ಷ ಕಟ್ಟಿಸಿಕೊಳ್ಳಲಾಗಿದೆ.
-ಹಸಿರುಮನೆ ಮಹಾಬಲೇಶ್‌,
ಹೊನ್ನೆತಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT