ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಷ್ಕರಣಿ ನಾಡಿನಲ್ಲಿ ಅಕ್ಷರ ಜಾತ್ರೆ

ಸಂತೇಬೆನ್ನೂರು: ಎರಡು ದಿನಗಳ ಸಮ್ಮೇಳನಕ್ಕೆ ಇಂದು ಚಾಲನೆ
Last Updated 21 ಜನವರಿ 2017, 5:35 IST
ಅಕ್ಷರ ಗಾತ್ರ

ಸಂತೇಬೆನ್ನೂರು(ಚನ್ನಗಿರಿ): ಐತಿಹಾಸಿಕ ಪುಷ್ಕರಣಿ ನಾಡು, ಸಾಹಿತ್ಯಾಸಕ್ತರ, ಕನ್ನಡಾಭಿಮಾನಿಗಳ ಹಾಗೂ ಕ್ರೀಡಾ ಪ್ರೇಮಿಗಳ ಬೀಡಿನಲ್ಲಿ ಜ.21 ಹಾಗೂ 22ರಂದು ನಡೆಯಲಿರುವ 8ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅಂತಿಮ ಹಂತದ ಸಿದ್ಧತೆ ಭರದಿಂದ ನಡೆದಿದೆ.

ಗ್ರಾಮದ ಹೃದಯ ಭಾಗದ ಸರ್ಕಾರಿ ಪ್ರಾಥಮಿಕ ಶಾಲೆಯ ವಿಶಾಲ ಮೈದಾನದಲ್ಲಿ ಎರಡು ದಿನಗಳ ಕಾಲ ಸಾಹಿತ್ಯ ಜಾತ್ರೆ ನಡೆಯಲಿದೆ. ಮೈದಾನದ ಪಶ್ಚಿಮ ದಿಕ್ಕಿನಲ್ಲಿ ಪೂರ್ವಾಭಿ ಮುಖವಾಗಿ ವೇದಿಕೆ ನಿರ್ಮಾಣಗೊ ಳ್ಳುತ್ತಿದೆ. 80 ಅಡಿ ಅಗಲ ಹಾಗೂ 160 ಅಡಿ ಉದ್ದಕ್ಕೆ ಹಾಕಿರುವ ಶಾಮಿಯಾನ ಅದ್ಧೂರಿ ಸಮಾರಂಭಕ್ಕೆ ಸಾಕ್ಷಿಯಾಗಿದೆ.

ಉದ್ಘಾಟನಾ ಸಮಾರಂಭ, ಗೋಷ್ಠಿ, ಸಾಂಸ್ಕೃತಿಕ ಹಾಗೂ ಸಮಾರೋಪ ಕಾರ್ಯಕ್ರಮಗಳಿಗೆ 60 ಅಡಿ ಅಗಲ ಹಾಗೂ 30 ಅಡಿ ಉದ್ದದ ವೇದಿಕೆ ನಿರ್ಮಾಣ ಕೊನೆಯ ಹಂತಕ್ಕೆ ಬಂದಿದೆ. ಕುಡಿಯುವ ನೀರಿನ ಯೋಜನೆಗಳ ತೊಟ್ಟಿಲು ಸೂಳೆಕೆರೆ ನಿರ್ಮಾತೃ ಶಾಂತವ್ವನ ಹೆಸರನ್ನು ವೇದಿಕೆಗೆ ಇಡಲಾಗಿದೆ.

ಸಂತೇಬೆನ್ನೂರಿನ ಪುಷ್ಕರಣಿ ನಿರ್ಮಾತೃ ಕೆಂಗ ಹನುಮಪ್ಪ ನಾಯಕ ಮಹಾದ್ವಾರ ಜಾತ್ರೆಗೆ ಬರುವವರನ್ನು ಸ್ವಾಗತಿಸಲಿದೆ. ಶಾಮಿಯಾನದ ಒಳಗಡೆ 2,500 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಗ್ರಾಮದ ಚತುಷ್ಪಥ ರಸ್ತೆಯ ಮಧ್ಯದಲ್ಲಿ ಮಾಡಿರುವ ರಂಗು–ರಂಗಿನ ವಿದ್ಯುತ್ ದೀಪಾಂಲಕಾರ ಹಬ್ಬದ ವಾತಾವರಣ ಸೃಷ್ಟಿಸಿದೆ. ಚತುಷ್ಪಥ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಪೂರ್ಣಗೊಂಡಿದೆ.

ಮೈದಾನದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಶೌಚಾಲಯದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಶಾಲೆಯ ಕೊಠಡಿಗಳಿಗೆ ಬಣ್ಣ ಹಚ್ಚಲಾಗಿದೆ. ಜಿಲ್ಲಾ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶುಭಕೋರಿ ನೂರಾರು ಫ್ಲೆಕ್ಸ್‌ಗಳನ್ನು ಕನ್ನಡಾಭಿಮಾನಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಿದ್ದಾರೆ. ಗ್ರಾಮದಲ್ಲಿ ಸಾಹಿತ್ಯ ಜಾತ್ರೆಗೆ ಸಕಲ ಸಿದ್ಧತೆ ನಡೆದಿದೆ.

ಗ್ರಾಮದ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಕನ್ನಡಾಭಿಮಾನಿಗಳು ತಂಗಲು ಸುಸಜ್ಜಿತ ಕೊಠಡಿಗಳಿವೆ. ಮಲಗಲು ಹಾಸಿಗೆ ವ್ಯವಸ್ಥೆ ಕಲ್ಪಿಸಲಾ ಗಿದೆ. ಎರಡು ವಸತಿ ನಿಲಯಗಳಲ್ಲಿ ನೀರಿನ ವ್ಯವಸ್ಥೆ ಸಮರ್ಪಕವಾಗಿದೆ.

ಶನಿವಾರ ಬೆಳಿಗ್ಗೆ 9ಕ್ಕೆ ಸಾರೋಟು ವಾಹನದಲ್ಲಿ ಆರಂಭಗೊಳ್ಳುವ ಸಮ್ಮೇಳನದ ಅಧ್ಯಕ್ಷ ಸಾಹಿತಿ ಪ್ರೊ. ಎಸ್‌.ಬಿ. ರಂಗನಾಥ್‌ ಅವರ ಮೆರವಣಿಯಲ್ಲಿ ಶಾಲಾ–ಕಾಲೇಜಿನ ಮಕ್ಕಳು ಭಾಗವಹಿಸಲಿದ್ದಾರೆ. ಪುಷ್ಕರಣಿಯಿಂದ ಮೆರವಣಿಗೆ ಆರಂಭಗೊಳ್ಳಲಿದೆ. ಕೋಟೆ ರಸ್ತೆಯ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ವೇದಿಕೆ ತಲುಪಲಿದೆ.

ಗ್ರಾಮದ ವಿವಿಧ ಸಮಿತಿಗಳ ಸದಸ್ಯರು, ಸಂಘ–ಸಂಸ್ಥೆಗಳ ಸದಸ್ಯರು, ಕ.ಸಾ.ಪ ಸದಸ್ಯರು, ಯುವಕರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಮ್ಮೇ ಳನದ ಯಶಸ್ಸಿಗೆ ಕೈ ಜೋಡಿಸಿದ್ದಾರೆ.

ಪುಷ್ಕರಣಿ ಆಕರ್ಷಕ ಕೇಂದ್ರ: ಪುಷ್ಕರಣಿಯು ಜಿಲ್ಲೆಯ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಸಮ್ಮೇಳನದ ಹಿನ್ನೆಲೆಯಲ್ಲಿ ಸಾವಿರಾರು ಪ್ರವಾಸಿಗರ ದಂಡು ಪುಷ್ಕರಣಿಗೆ ಭೇಟಿ ನೀಡಲಿದೆ. ಹೀಗಾಗಿ ಪುಷ್ಕರಣಿ ಆವರಣ ಹಸಿರಿನಿಂದ ಕಂಗೊಳಿಸಲಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ.

ಸಮ್ಮೇಳನ ಯಶಸ್ಸಿಗೆ 18 ಸಮಿತಿಗಳನ್ನು ರಚಿಸಲಾಗಿದೆ. ನಾಲ್ಕು ಗೋಷ್ಠಿಗಳು, ಒಂದು ಕವಿಗೋಷ್ಠಿ, ಎರಡು ಉಪನ್ಯಾಸ ಮಾಲಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ರಾರಾಜಿಸಲಿವೆ.

ದಾವಣಗೆರೆ ಜಿಲ್ಲೆ ಇತಿಹಾಸ ಹಾಗೂ ಸಂಸ್ಕೃತಿ, ಸಮೂಹ ಮಾಧ್ಯಮಗಳು, ಮಹಿಳೆ ಹಾಗೂ ಸವಾಲುಗಳು ಗೋಷ್ಠಿಗಳ ವಿಷಯಗಳಾಗಿವೆ. ಪ್ರೊ. ಎಸ್‌.ಎಚ್. ಲಕ್ಷ್ಮೀನಾರಾಯಣ ಭಟ್ ಅವರಿಂದ ‘ಮಂಕುತಿಮ್ಮನ nಕಗ್ಗದಲ್ಲಿ ಸಾಮಾಜಿಕ ಪ್ರಜ್ಞೆ’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.

ಊಟಕ್ಕೆ ಗೋಧಿ ಪಾಯಸ, ಲಡ್ಡು
ಸಂತೇಬೆನ್ನೂರು
: ಜ. 21 ಹಾಗೂ 22ರಂದು ನಡೆಯುವ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಹಿತ್ಯ ಪ್ರೇಮಿಗಳ ಹಸಿವು ಇಂಗಿಸಲು ಕೋಟೆ ರಸ್ತೆಯ ವಿಜಯ ಯುವಕ ಸಂಘದಲ್ಲಿ ಸಂಘಟಕರ ವತಿಯಿಂದ ಊಟ ಹಾಗೂ ತಿಂಡಿ ವ್ಯವಸ್ಥೆ ಕಲ್ಪಿಸಲಾಗಿದೆ.

ಶನಿವಾರ ಬೆಳಿಗ್ಗೆ ತಿಂಡಿಗೆ ಚೌಚೌ ಭಾತ್; ಮಧ್ಯಾಹ್ನದ ಭೋಜನಕ್ಕೆ ಗೋಧಿ ಪಾಯಸ, ಲಡ್ಡು, ಅನ್ನ– ಸಾಂಬಾರ್‌, ಚಪಾತಿ ಹಾಗೂ ವಿವಿಧ ಪಲ್ಯಗಳ ವ್ಯವಸ್ಥೆ ಮಾಡಲಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಐದು ಕೌಂಟರ್‌ಗಳಲ್ಲಿ ಅಡಿಕೆ ತಟ್ಟೆಯಲ್ಲಿ ಊಟ ಹಾಗೂ ತಿಂಡಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

*
ಉತ್ತಮ ಸಿದ್ಧತೆ ನಡೆದಿದೆ. ಎಲ್ಲಡೆ ಸಂಭ್ರಮ ಮನೆ ಮಾಡಿದೆ. ಹಬ್ಬದ ವಾತಾವರಣವಿದೆ. ಸಂಘಟಕರ ಶ್ರಮ ಅಪಾರ.
-ಪ್ರೊ.ಎಸ್‌.ಬಿ.ರಂಗನಾಥ್,
ಸಮ್ಮೇಳನದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT