ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಮನೆ ಎದುರೇ ಕಸದ ರಾಶಿ!

ಜೆಡಿಎಸ್‌ನ ರಾಜು ಅಂಬೋರೆ ಪ್ರತಿನಿಧಿಸುವ 12ನೇ ವಾರ್ಡ್‌ನಲ್ಲಿ ಸೂಕ್ತ ವಿಲೇವಾರಿಯಾಗದ ತ್ಯಾಜ್ಯ
Last Updated 21 ಜನವರಿ 2017, 5:40 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾಮಾನ್ಯವಾಗಿ ಜನಪ್ರತಿನಿಧಿಗಳ ಮನೆ ಎದುರು ಮಹಾನಗರ ಪಾಲಿಕೆಯ ಸ್ವಚ್ಛತಾ ಸಿಬ್ಬಂದಿ ಕಸ ಬೀಳದಂತೆ ನೋಡಿಕೊಳ್ಳುತ್ತಾರೆ. ಆದರೆ, ಧಾರವಾಡದ ಹಳೆ ಡಿಎಸ್ಪಿ ವೃತ್ತದ ಬಳಿಯ ಮರಾಠಾ ಕಾಲೊನಿ ರಸ್ತೆಯಲ್ಲಿರುವ ಶಾಸಕ ಅರವಿಂದ ಬೆಲ್ಲದ ಅವರ ಮನೆ ಎದುರು ನಿಂತಾಗ ಈ ನಿಯಮ ಅನ್ವಯಿಸುವುದಿಲ್ಲ!

ಮನೆಯ ಎಡಬದಿಯ ಖಾಲಿ ಜಾಗದಲ್ಲಿ ಕಸವನ್ನು ಹೇಗೆ ಬೇಕೋ ಹಾಗೆ ಬಿಸಾಡಲಾಗಿದ್ದು, ಮಧ್ಯಾಹ್ನವಾದರೂ ವಿಲೇವಾರಿಯಾಗುವುದಿಲ್ಲ ಎಂಬುದು ಇಲ್ಲಿನ ಸುತ್ತಮುತ್ತಲಿನ ನಿವಾಸಿಗಳ ದೂರು.

‘ಶಾಸಕರ ಮನೆಯ ಎದುರಿನ ರಸ್ತೆಯಲ್ಲೇ ಈ ಪಾಟಿ ಕಸ ಬೀಳುತ್ತಿದ್ದರೆ ಇನ್ನು ಜನಸಾಮಾನ್ಯರ ಮನೆ       ಎದುರಿನ ವಾತಾವರಣ ಹೇಗಿರುತ್ತದೆ ಎಂಬುದನ್ನು ಊಹಿಸಬಹುದು. ಅದ ರಲ್ಲೂ ಜನಗಳ ಆರೋಗ್ಯ ಕಾಪಾಡುವ ಜಿಲ್ಲಾ ಆಸ್ಪತ್ರೆ  ಸುತ್ತಲಿನ ಪ್ರದೇಶ, ಕಿಲ್ಲಾ  ಪಕ್ಕದಲ್ಲಿಯೂ ಕಸ ಹಾಗೆಯೇ ಬಿದ್ದಿರುತ್ತದೆ’ ಎಂದು ಕಸ ಸಂಕಟದ ಚಿತ್ರಣ ಮುಂದಿಡುತ್ತಾರೆ ಸೈದಾಪುರ ನಿವಾಸಿ, ಯುವ ಮುಖಂಡ ಮೋಹನ ರಾಮದುರ್ಗ.

ಅಲ್ಲಿಂದ ಮುಂದೆ ಹೋದರೆ ಬುದ್ಧರಕ್ಕಿಥ ಶಾಲೆ ಬರುತ್ತದೆ. ಒಂದಷ್ಟು ಮುಂದೆ ಹೋದರೆ ಈ ವಾರ್ಡ್‌ ಪ್ರತಿನಿಧಿಸುವ ಜೆಡಿಎಸ್‌ನ ರಾಜು ಅಂಬೋರೆ ಮತ್ತು 7ನೇ ವಾರ್ಡ್‌ನ ಪಾಲಿಕೆ ಸದಸ್ಯ ಕಾಂಗ್ರೆಸ್‌ನ ದೀಪಕ ಚಿಂಚೋರೆ ಅವರ ಮನೆಗಳಿವೆ. ಎದುರಿಗೇ ಎಸ್.ಆರ್‌. ರಾಮನಗೌಡರ ಅವರ ಆಸ್ಪತ್ರೆ ಇದೆ. ಹೀಗಾಗಿ, ಮರಾಠಿ ಕಾಲೊನಿ ರಸ್ತೆಗೆ ಒಂದು ಬಗೆಯ ‘ವಿಐಪಿ’ ಸ್ಥಾನ ಬಂದುಬಿಟ್ಟಿದೆ. ಆದಾಗ್ಯೂ, ಸ್ವಚ್ಛತೆ ಕಾಪಾಡುವಲ್ಲಿ ಮಾತ್ರ ಎಂದಿನ ಉದಾಸೀನ ಮುಂದುವರಿದಿದೆ ಎಂಬುದು ಇಲ್ಲಿನ        ನಿವಾಸಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

‘ಕಸದ ಕಂಟೇನರ್‌ಗಳನ್ನು ತೆಗೆದ ಬಳಿಕ ಮನೆ ಮನೆಯಿಂದ ಕಸ ಎತ್ತುವುದನ್ನು ಪರಿಣಾಮಕಾರಿಯಾಗಿಸಬೇಕಿತ್ತು. ಆದರೆ, ಪೌರಕಾರ್ಮಿಕರು ನಿಯಮಿತವಾಗಿ ಮನೆಗೆ ಬರುವುದಿಲ್ಲ. ಹೀಗಾಗಿ, ಜನರು ರಸ್ತೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ತ್ಯಾಜ್ಯವನ್ನು ತುಂಬಿ ಚೆಲ್ಲುವುದು ಮುಂದುವರಿದಿದೆ’ ಎಂದು ನಿವಾಸಿ ಚಂದ್ರಕಾಂತ ಶಿಂಧೆ ಬೇಸರ ವ್ಯಕ್ತಪಡಿಸಿದರು.

‘ಬಿಜೆಪಿ ಸದಸ್ಯರಿಗೆ ಮಾತ್ರ ಟಿಪ್ಪರ್‌’
‘ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯೇ ಅಧಿಕಾರದಲ್ಲಿದೆ. ಹೀಗಾಗಿ, ಆ ಪಕ್ಷದ ಸದಸ್ಯರು ಇರುವ ವಾರ್ಡ್‌ಗಳಿಗೆ ಆಟೊ ಟಿಪ್ಪರ್‌ಗಳನ್ನು ಕೊಡಲಾಗಿದೆ. ಕಾಂಟ್ರಾಕ್ಟ್‌ ವಾರ್ಡ್‌ಗಳಿಗೆ ಮೊದಲ ಹಂತದಲ್ಲಿ ಟಿಪ್ಪರ್‌ಗಳನ್ನು ಕೊಟ್ಟಿಲ್ಲ. ಆದರೆ, ಬಿಜೆಪಿಯ ಪೂರ್ಣಾ ಪಾಟೀಲ ಅವರು ಪ್ರತಿನಿಧಿಸುವ ವಾರ್ಡ್‌ನಲ್ಲಿ ಗುತ್ತಿಗೆ ಕಾರ್ಮಿಕರಿದ್ದರೂ ಟಿಪ್ಪರ್‌ ಕೊಡಲಾಗಿದೆ. ನನ್ನ ವಾರ್ಡ್‌ಗೆ ಕೊಟ್ಟಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ 12ನೇ ವಾರ್ಡ್‌ ಪ್ರತಿನಿಧಿಸುವ ರಾಜು ಅಂಬೋರೆ.

‘ಆರು ವರ್ಷಗಳ ಹಿಂದೆ ನನ್ನ ವಾರ್ಡ್‌ ಟೆಂಡರ್‌ ಆಗಿದೆ. ಈಗ ಜನಸಂಖ್ಯೆ ಹೆಚ್ಚಿಗೆ ಆಗಿದ್ದರೂ ಪೌರಕಾರ್ಮಿಕರ ಸಂಖ್ಯೆ ಅಷ್ಟೇ ಇದೆ. ಹೆಚ್ಚುವರಿ ಕಾರ್ಮಿಕರನ್ನು ನೀಡುವಂತೆ ಕೇಳಿದ್ದೇನೆ. ಇನ್ನೆರಡು ತಿಂಗಳು ಕಾಯುವಂತೆ ಪಾಲಿಕೆ ಮೇಯರ್‌, ಆಯುಕ್ತರು ಹೇಳಿದ್ದಾರೆ. ಸಚಿವ ವಿನಯ ಕುಲಕರ್ಣಿ ಅವರು ವಾರ್ಡ್‌ಗೆ ಬೇಕಾದ ಅನುಕೂಲ ಮಾಡಿಕೊಟ್ಟಿದ್ದಾರೆ. ಸಿಕ್ಕ ಅವಕಾಶವನ್ನೇ ಬಳಸಿಕೊಂಡು ಸಾಧ್ಯವಾದಷ್ಟು ಕೆಲಸ ಮಾಡಿಸುತ್ತಿದ್ದೇನೆ. ನಮ್ಮ ವಾರ್ಡ್‌ನ ಜನ ಒಳ್ಳೆಯವರು. ಹಾಗಾಗಿ, ಕಸ ವಿಲೇವಾರಿಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಹೊಂದಿಕೊಂಡು ಹೋಗುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT