ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸಕ್ತಿಯಿಂದ ವಿಜ್ಞಾನ ಕಲಿಸುವ ಶಿಕ್ಷಕ ಬೇಕು

Last Updated 21 ಜನವರಿ 2017, 5:51 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ಇಂದು ಮಕ್ಕಳಿಗೆ ವಿಜ್ಞಾನವನ್ನು ಆಸಕ್ತಿಯಿಂದ ಕಲಿಸುವ ಶಿಕ್ಷಕರು ಬೇಕಾಗಿದ್ದಾರೆ. ಮೂಲ ವಿಜ್ಞಾನವನ್ನು ಆಸಕ್ತಿಯಿಂದ ಕಲಿಸುವ, ಕಲಿಯುವ  ಶೈಕ್ಷಣಿಕ ವಾತಾವರಣವನ್ನು ಶಾಲೆಗಳಲ್ಲಿ ಮರುಸೃಷ್ಟಿ ಮಾಡಬೇಕಿದೆ ಎಂದು ಪ್ರೊ. ಸಿಎನ್‌ಆರ್‌ ರಾವ್‌ ಅಭಿಪ್ರಾಯಪಟ್ಟರು.

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಲಕ್ಷ್ಮೇಶ್ವರದ ಚಂದನ ಶಾಲೆಯಲ್ಲಿ ನಡೆದ ‘ವಿಜ್ಞಾನ ವಿಸ್ತೃತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಲಕ್ಷ್ಮೇಶ್ವರದ ಚಂದನ ಶಾಲೆಯ ಮಕ್ಕಳ ವಿಜ್ಞಾನದ ಆಸಕ್ತಿ ಕಂಡು ಮನಸ್ಸು ತುಂಬಿಬಂದಿದೆ. ಇಲ್ಲಿ ವಿಜ್ಞಾನ ಅಧ್ಯಯನ ಕೇಂದ್ರವನ್ನು ತೆರೆಯಲು ನಿರ್ಧರಿಸಿದ್ದೇನೆ. ಭವಿಷ್ಯದ ಅತ್ಯುತ್ತಮ ವಿಜ್ಞಾನಿ ಈ ಶಾಲೆಯಿಂದಲೇ ಉದಯವಾಗಲಿ ಎಂದು ಅವರು ಹೇಳಿದರು.

ವಿಜ್ಞಾನದ ಬೆಳವಣಿಗೆಗಳ ಕುರಿತು ಶಿಕ್ಷಕರಲ್ಲೇ ಮಾಹಿತಿ ಇಲ್ಲದಿರುವುದು ನನ್ನ ಸುತ್ತಾಟದಲ್ಲಿ ಕಂಡುಬಂದಿದೆ. ಬೋಧನಾ ಗುಣಮಟ್ಟ ಸುಧಾರಿಸಲು ಶಿಕ್ಷಕರಿಗೆ ಸರಿಯಾದ ತರಬೇತಿಯ ಅಗತ್ಯವಿದೆ. ಜತೆಗೆ ಗ್ರಾಮಾಂತರ ಭಾಗದ ಯುವ ಪ್ರತಿಭೆಗಳ ವಿಜ್ಞಾನದ ಆಸಕ್ತಿಗೆ ನೀರೆರೆಯುವಂತಹ ವಾತಾವರಣ ಸೃಷ್ಟಿಯಾಗಬೇಕು. ಆಗ ದೇಶವು ವಿಜ್ಞಾನ ರಂಗದಲ್ಲಿ ವಿಶ್ವದ ಅಗ್ರಗಣ್ಯ ಸ್ಥಾನಕ್ಕೆ ಬರಲಿದೆ.  ಶಿಕ್ಷಣ ಹಾಗೂ ಸಂಶೋಧನೆಯಿಂದ ಮಾತ್ರ ದೇಶದಲ್ಲಿ ಅಪೇಕ್ಷಿತ ಬದಲಾವಣೆ ತರಲು ಸಾಧ್ಯ ಎಂದು ರಾವ್‌ ಅಭಿಪ್ರಾಯಪಟ್ಟರು.

ಯುವ ಪೀಳಿಗೆಗೆ ದೊಡ್ಡ ವಿಜ್ಞಾನಿ ಆಗಬೇಕು ಎಂಬುದಕ್ಕಿಂತ ಶ್ರೀಮಂತನಾಗಬೇಕು, ಗರಿಷ್ಠ ವೇತನ ಪಡೆಯಬೇಕು ಎಂಬ ಕನಸು. ಹಣದ ಹೊಳೆಯನ್ನೇ ಹರಿಸುವ ಐ.ಟಿ–ಬಿ.ಟಿ ಕ್ಷೇತ್ರಗಳತ್ತ ಯುವ ಸಮೂಹ ಆಕರ್ಷಿತರಾಗಲು ಇದೇ ಮುಖ್ಯಕಾರಣ. ಎಲ್ಲರೂ ಬೆಂಗಳೂರಿಗೆ ಮುಗಿಬೀಳುತ್ತಿರುವುದು ಇದೇ ಕಾರಣಕ್ಕೆ. ಆದರೆ, ಇದು ಮೂರ್ಖತನದ ಕೆಲಸ. ವಿಜ್ಞಾನಕ್ಕೆ ಬಡವ– ಶ್ರೀಮಂತ ಎಂಬ ಭೇದವಿಲ್ಲ. ವಿಶ್ವದ ಅತ್ಯುತ್ತಮ ವಿಜ್ಞಾನಿಗಳು ತೀವ್ರ ಬಡತನದ ಹಿನ್ನೆಲೆಯಿಂದ ಬಂದವರೇ. ಲಕ್ಷ್ಮೇಶ್ವರದಂತಹ ಗ್ರಾಮೀಣ ಪರಿಸರದಲ್ಲೇ ವಿಶ್ವದ ವಿಜ್ಞಾನ ರತ್ನಗಳು ರೂಪುಗೊಳ್ಳಬಹುದು. ಇದಕ್ಕೆ ಕಠಿಣ ಪರಿಶ್ರಮ ಪಡಬೇಕು ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಪಾಲಕರ ಒತ್ತಡವೇ ಹೆಚ್ಚು. ವಿದ್ಯಾರ್ಥಿಗಳ ಭವಿಷ್ಯವನ್ನು ತಪ್ಪು ದಾರಿಗೆ ಎಳೆಯುವರು ಅವರೇ. ವಿದ್ಯಾರ್ಥಿಗಳೇ ನಿಮ್ಮ ಮನಸ್ಸಿಗೆ ಏನು ಅನಿಸುತ್ತದೆಯೇ ಅದನ್ನೇ ಮಾಡಿ, ನಿಮ್ಮಿಷ್ಟದ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಿ. ಎಂದೂ  ದುಡ್ಡಿಗೆ ಆಸೆ ಪಡಬೇಡಿ, ಹೊಸ ಆವಿಷ್ಕಾರಗಳಿಗೆ ತೆರೆದುಕೊಳ್ಳಿ ಎಂದ ಅವರು,  ವಿಜ್ಞಾನದ ಬೆಳವಣಿಗೆ ಆಗಬೇಕಾದರೆ ಪಾಲಕರ, ಸಮಾಜದ ದೃಷ್ಟಿಕೋನ ಸಹ ಬದಲಾಗಬೇಕಿದೆ ಎಂದರು. 

ಚಿಕ್ಕವನಾಗಿದ್ದಾಗಲೇ ವಿಜ್ಞಾನದ ಕುರಿತು ಉತ್ಸುಕನಾಗಿದ್ದೆ. ಹೈಸ್ಕೂಲ್‌ನಲ್ಲಿದ್ದಾಗ  ಸಿ.ವಿ.ರಾಮನ್ ಅವರನ್ನು ಭೇಟಿ ಮಾಡಿದೆ. ಅವರೇ ನನಗೆ ಸ್ಫೂರ್ತಿ. ಮೈಕಲ್‌ ಪ್ಯಾರಡೆ ನನ್ನ ಅಚ್ಚುಮೆಚ್ಚಿನ ವಿಜ್ಞಾನಿ. ವಿಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರು ಅವರೇ. ಅವರೇನಾದರೂ 20ನೇ ಶತಮಾನದಲ್ಲಿ ಬದುಕಿದ್ದರೆ ಐದಾರು ನೋಬಲ್‌ ಪ್ರಶಸ್ತಿಗಳು ಅವರಿಗೆ ಸಲ್ಲುತ್ತಿದ್ದವು ಎಂದರು. 

ನಿನಗೆ ಒಳ್ಳೆಯ ಹುಡುಗಿ ಸಿಗಲಿ
ಸಂವಾದ ಕಾರ್ಯಕ್ರಮದ ವೇಳೆ ಚಂದನ ಶಾಲೆಯ 10 ತರಗತಿ ವಿದ್ಯಾರ್ಥಿ ಗಣೇಶ್‌, ಪ್ರೊ. ರಾವ್‌ ಅವರನ್ನು ವೈವಾಹಿಕ ಜೀವನದ ಬಗ್ಗೆ ಪ್ರಶ್ನಿಸಿದ. ತಮ್ಮ ತಮ್ಮ ವೈವಾಹಿಕ ಜೀವನದ ಬಗ್ಗೆ ತೀವ್ರ ಕುತೂಹಲ ತೋರಿಸಿದ ವಿದ್ಯಾರ್ಥಿಗೆ ನಗುತ್ತಲೇ ಉತ್ತರಿಸಿದ ಅವರು, ಪಿಎಚ್‌ಡಿ ನಂತರ ನನ್ನ ವಿವಾಹವಾಯಿತು. ನನಗೆ ಒಳ್ಳೆಯ ಪತ್ನಿ ಸಿಕ್ಕಿದ್ದಾಳೆ. ಪತ್ನಿ ವಿಜ್ಞಾನಿಯಲ್ಲ. ಆದರೂ, ವಿಜ್ಞಾನದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಹೆಂಡತಿ ಜೊತೆಗೆ ಜಗಳ ಮಾಡಿದರೇ ಯಾವುದೇ ಸಂಶೋಧನೆ ಮಾಡಲಾಗದು. ಅವರೊಂದಿಗೆ ಚೆನ್ನಾಗಿ ಇರಬೇಕು. ನಿನಗೂ  ಜೀವನದಲ್ಲಿ ಒಳ್ಳೆಯ ಹುಡುಗಿ ಸಿಗಲಿ, ನೀನೂ ಸಂಶೋಧನೆ ಮಾಡಿ ವಿಜ್ಞಾನಿಯಾಗು ಎಂದು ಶುಭ ಹಾರೈಸಿದರು.

ಪ್ರಶ್ನೆಗಳಿಗೆ ನಾನೇ ಉತ್ತರಿಸುತ್ತಿದ್ದೆ 
ಪ್ರೊ. ರಾವ್ ಅವರ ಸಂವಾದ ಕಾರ್ಯಕ್ರಮದ ಬಳಿಕ, ಪಿಪಿಟಿ ಪ್ರಾತ್ಯಕ್ಷಿಕೆ  ನೀಡಲು ವೇದಿಕೆ ಏರಿದ ಡಾ.ಇಂದುಮತಿ ರಾವ್‌ ಅವರು, ನಾನು ವಿಜ್ಞಾನಿಯಲ್ಲ. ಆದರೆ, ಪ್ರೊ. ರಾವ್ ಅವರೊಂದಿಗಿನ ಸಹವಾಸದಿಂದ ನನಗೂ ಸಾಕಷ್ಟು ವಿಜ್ಞಾನಿಗಳ ಪರಿಚಯವಾಗಿದೆ. ಅವರು ಪ್ರಖ್ಯಾತ ವಿಜ್ಞಾನಿಗಳ ಕುರಿತು ವಿದ್ಯಾರ್ಥಿಗಳಿಗೆ ಕೇಳಿದ ಹಲವು ಪ್ರಶ್ನೆಗಳಿಗೆ ನನಗೆ ಉತ್ತರಗಳು ಗೊತ್ತಿದ್ದವು.. ನನ್ನನ್ನು ಕೇಳಿದರೆ ನಾನೇ ಉತ್ತರಿಸುತ್ತಿದ್ದೆ ಎಂದಾಗ ಸಭೆಯಲ್ಲಿ ಮತ್ತೊಮ್ಮೆ  ನಗೆಹೊನಲು ಮೂಡಿತು.

‘ಚಂದನ ಶ್ರೀ’ ಪ್ರಶಸ್ತಿ ಪ್ರದಾನ
ಮೈಸೂರು ರಾಮಕೃಷ್ಣ ವಿದ್ಯಾ ಶಾಲೆಯ ಪ್ರಾಚಾರ್ಯ ಎಸ್‌.ಬಾಲಾಜಿ ಅವರಿಗೆ 2017ನೇ ಸಾಲಿನ ‘ಚಂದನ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಶಾಸಕ ರಾಮಕೃಷ್ಣ ದೊಡ್ಡಮನಿ, ಪ್ರೊ.ಸಿಎನ್‌ಆರ್‌ ರಾವ್‌ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷ ಟಿ.ಈಶ್ವರ, ನಿರ್ದೇಶಕ ಎಚ್‌.ಸಿ. ರಟಗೇರಿ ಇದ್ದರು.
ಗುಲ್ಬರ್ಗಾ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಿಂದ ಶಾಲಾ ಕಾಲೇಜುಗಳ 430 ಮಕ್ಕಳು ಹಾಗೂ ವಿಜ್ಞಾನ ಶಿಕ್ಷಕರು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಮೈಸೂರು ರಾಮಕೃಷ್ಣ ವಿದ್ಯಾ ಶಾಲೆಯ ಪ್ರಾಚಾರ್ಯ ಎಸ್‌.ಬಾಲಾಜಿ ಅವರಿಗೆ 2017ನೇ ಸಾಲಿನ ‘ಚಂದನ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

‘ಪಠ್ಯ ಪರಿಷ್ಕರಣೆ ಎಂದರೆ ಕೇಸರಿಕರಣ, ಅಹಿಂದಕರಣವಲ್ಲ’
ಲಕ್ಷ್ಮೇಶ್ವರ: ಪಠ್ಯ ಪರಿಷ್ಕರಣೆ ಎಂದರೆ ಕೇಸರಿಕರಣ, ಅಹಿಂದಕರಣ ಮಾಡುವುದಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ ಸೇಠ್ ಹೇಳಿದರು.

ಜಿಲ್ಲೆಯ ಶಿರಹಟ್ಟಿ ತಾಲ್ಲೂಕಿನ ಲಕ್ಷ್ಮೇಶ್ವರದ ಚಂದನ ಶಾಲೆಯಲ್ಲಿ ಶುಕ್ರವಾರ ನಡೆದ ‘ವಿಜ್ಞಾನ ವಿಸ್ತೃತ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳ ಜ್ಞಾನಾಭಿವೃದ್ಧಿಗೆ ಪೂರಕವಾಗಿ ಪಠ್ಯ ಪರಿಷ್ಕರಣೆಗೆ ಆದ್ಯತೆ ನೀಡಲಾಗಿತ್ತು. ಅದಕ್ಕೆ ಯಾವುದೇ ಸಮಯದ ನಿಗದಿ ಕೂಡ ಮಾಡಿರಲಿಲ್ಲ ಎಂದು ಅವರು ಹೇಳಿದರು.

ಪ್ರೊ. ರಾವ್‌ ಅವರ ಮಾರ್ಗದರ್ಶನದಲ್ಲಿ ಎಲ್ಲ ಜಿಲ್ಲೆಗಳಲ್ಲಿ ವಿಜ್ಞಾನ ವಿಸ್ತೃತ ಕಾರ್ಯಕ್ರಮ  ಆಯೋಜಿಸಲು ಅಗತ್ಯ ಸಹಕಾರ ನೀಡಲಾಗುವುದು. ಜಿಲ್ಲಾ ಕೇಂದ್ರ ಗ್ರಂಥಾಲಯಗಳಲ್ಲಿ ಮಕ್ಕಳಿಗಾಗಿ ವಿಜ್ಞಾನ ಪುಸ್ತಕಗಳ ಪ್ರತ್ಯೇಕ ವಿಭಾಗ ಆರಂಭಿಸುವುದು ಹಾಗೂ ಜಿಲ್ಲಾಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಕುರಿತು ಚಿಂತಿಸಲಾಗುವುದು ಎಂದರು.

ಗುಣಮಟ್ಟ, ಮೌಲ್ಯಾಧಾರಿತ ಶಿಕ್ಷಣ ಎಂಬ ಪದಗಳಿಂದ ಸರ್ಕಾರಿ ಶಾಲೆಗಳ ಸಬಲೀಕರಣ ಆಗುವುದಿಲ್ಲ. ಖಾಸಗಿ, ಸರ್ಕಾರಿ ಶಾಲೆಗಳ ನಡುವಿನ ಅಸಮತೋಲನ ನಿವಾರಣೆಯಾಗಬೇಕಿದೆ.

ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಉಳಿಯಬೇಕು. ಸಿಬಿಎಸ್‍ಇ, ಟಿಸಿಎಸ್‍ಇ ಪಠ್ಯಕ್ರಮಗಳ ಬಗ್ಗೆ ತುಲನಾತ್ಮಕ ಅಧ್ಯಯನ ಮಾಡಲಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳನ್ನು ಸಮರ್ಪಕವಾಗಿ ಬೋಧಿಸಲು ವಿಶೇಷ ಆದ್ಯತೆ ನೀಡಬೇಕಾಗಿದೆ ಎಂದರು.

‘ರಾಜ್ಯದಲ್ಲಿನ ಸರ್ಕಾರ  ನಡೆಸುವ 56,000 ಶಾಲೆಗಳಲ್ಲಿ ಮಕ್ಕಳು ಕಲಿಯುತ್ತಿದ್ದು, ಇವರಿಗೆಲ್ಲ ಉತ್ತಮ ಶಿಕ್ಷಣದ ಅಗತ್ಯ ಇದೆ. ಈಗಾಗಲೆ ಪಠ್ಯಪುಸ್ತಕಗಳನ್ನು ರಚನೆ ಮಾಡ ಲಾಗಿದ್ದು ಇದರಲ್ಲಿ ಯಾವುದೇ ಗೊಂದಲ ಇಲ್ಲ’ ಎಂದರು.
‘ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ತೆರೆಯುವ ಯೋಚನೆ ಸರ್ಕಾರಕ್ಕಿದ್ದು, ಈ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಶಿಕ್ಷಣ ಮಂತ್ರಿಗಳ ಗೌರವ ರಕ್ಷಣೆ
ಉದ್ಘಾಟನೆ ಭಾಷಣ ಮಾಡಲು ಪ್ರೊ. ರಾವ್‌ ಅವರನ್ನು ವೇದಿಕೆಗೆ ಕರೆ ತರುವಂತೆ, ಹಾಗೂ ಅವರಿಗೆ ಗೌರವ ರಕ್ಷಣೆ ನೀಡುವಂತೆ ಕಾರ್ಯಕ್ರಮ ನಿರೂಪಕರಾದ ವಿದ್ಯಾರ್ಥಿಗಳು ಶಿಕ್ಷಣ ಸಚಿವರಲ್ಲಿ ವಿನಂತಿಸಿದರು. ಆಗ ರಾವ್ ಅವರ ಪಕ್ಕದಲ್ಲೇ ಕುಳಿತಿದ್ದ ಶಿಕ್ಷಣ ಸಚಿವ ತನ್ವೀರ ಸೇಠ್ ಅವರು ಎದ್ದು ನಿಂತು ಗೌರವ ರಕ್ಷಣೆ ನೀಡಲು ಮುಂದಾದರು. ತಕ್ಷಣ ಎಚ್ಚೆತ್ತುಕೊಂಡ ನಿರೂಪಕರು, ಸರ್‌, ಸ್ಸಾರಿ, ಸ್ಸಾರಿ, ನಾವು ಗೌರವ ರಕ್ಷಣ ನೀಡಲು ಕೋರಿದ್ದು, ರಾಜ್ಯದ ಶಿಕ್ಷಣ ಸಚಿವರನ್ನಲ್ಲ,  ನಮ್ಮ ಶಾಲೆಯ ಶಿಕ್ಷಣ ಮಂತ್ರಿಗಳಿಗೆ ಎಂದು ಘೋಷಿಸಿದರು. ಇದು ಸಭಾಂಗಣದಲ್ಲಿ  ಸೇರಿದ್ದವರನ್ನು ನಗೆಗಡಲಲ್ಲಿ ತೇಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT