ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

51 ಅಡಿ ರೇವಣಸಿದ್ದೇಶ್ವರ ಮೂರ್ತಿ ಸ್ಥಾಪನೆ

‘ರೇವಣಸಿದ್ದೇಶ್ವರ ಜಾಗೃತ ತಾಣ ಅಭಿವೃದ್ಧಿಗೆ ನೆರವು’
Last Updated 21 ಜನವರಿ 2017, 6:10 IST
ಅಕ್ಷರ ಗಾತ್ರ

ಚಿಂಚೋಳಿ: ಲಕ್ಷಾಂತರ ಭಕ್ತರ ಪಾಲಿನ ಜಾಗೃತ ತಾಣ, ಸುಕ್ಷೇತ್ರ ರೇವಗ್ಗಿಯ ರೇವಣಸಿದ್ದೇಶ್ವರ ತಪೋಭೂಮಿ ಅಭಿವೃದ್ಧಿಗೆ ಸಕಲ ನೆರವು ನೀಡಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು. ಶುಕ್ರವಾರ ರೇವಗ್ಗಿಗೆ ಭೇಟಿ ನೀಡಿ ರೇವಣಸಿದ್ದೇಶ್ವರ ದರ್ಶನ ಪಡೆದು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.

ಹೈಕ ಅಭಿವೃದ್ಧಿ ಮಂಡಳಿ, ವಿಶೇಷ ಅಭಿವೃದ್ಧಿ ಯೋಜನೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ರೇವಣಸಿದ್ದೇಶ್ವರರ ತಪೋಭೂಮಿ ಹಾಗೂ ದೇವಾಲಯ ಅಭಿವೃದ್ಧಿಗೆ ನೆರವು ಕೊಡಿಸುವುದಾಗಿ ಭರವಸೆ ನೀಡಿದರು.

ಯಾವುದೇ ಒಂದು ಸ್ಥಳ ಅಭಿವೃದ್ಧಿಯ ಹಿಂದೆ ವ್ಯಕ್ತಿಗಳ ಪರಿಶ್ರಮವಿರುತ್ತದೆ. ಅದರಂತೆ ಈ ತಾಣ ಸಮಗ್ರವಾಗಿ ಅಭಿವೃದ್ಧಿ ಪಡಿಸಿ ಅದರ ಚಿತ್ರಣ ಬದಲಿಸುವ ಕೆಲಸ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ಸಂಸದೀಯ ಕಾರ್ಯದರ್ಶಿ ಡಾ. ಉಮೇಶ ಜಾಧವ್‌ ಮಾತನಾಡಿ ಭಕ್ತಿ ಮತ್ತು ಭಾವೈಕ್ಯದ ನೆಲೆವೀಡಾದ ರೇವಗ್ಗಿ ರೇವಣಸಿದ್ದೇಶ್ವರ ನಂಬಿದ ಭಕ್ತರ ಕೈಬಿಡದ ಕಲ್ಪತರು. ಈ ಪುಣ್ಯಭೂಮಿ ಅಭಿವೃದ್ಧಿಗೆ ಯಾವುದೇ ರೀತಿಯ ಹಸ್ತಕ್ಷೇಪವಿಲ್ಲದೇ ಉಪ ವಿಭಾಗಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅವರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದರು. ಇದರ ಅಭಿವೃದ್ಧಿಗೆ ಸರ್ಕಾರದಿಂದ ₹ 3 ಕೋಟಿ ಮಂಜೂರು ಮಾಡಿಸಬೇಕು ಎಂದು ಮನವಿ ಮಾಡಿದರು.

ದೇವಾಲಯದ ಆಡಳಿತಾಧಿಕಾರಿ ಸೇಡಂ ಕಂದಾಯ ಉಪ ವಿಭಾಗದ ವಿಭಾಗಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಮಾತನಾಡಿ ರೇವಗ್ಗಿ ರೇವಣಸಿದ್ದೇಶ್ವರ ದೇವಾಲಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇನೆ.

ಇಲ್ಲಿ ಹೂವು, ಹಣ್ಣು ವ್ಯಾಪಾರಿಗಳಿಗೆ ಸುಸಜ್ಜಿತ ಮಳಿಗೆ, ವಿಶಾಲವಾದ ಸಿಮೆಂಟ ಕಾಂಕ್ರಿಟ್‌ ರಸ್ತೆ, ಉದ್ಯಾನ, 51 ಅಡಿ ಎತ್ತರದ ರೇವಣಸಿದ್ದೇಶ್ವರ ಮೂರ್ತಿ ಸ್ಥಾಪನೆ, ಎರಡು ಮಹಾದ್ವಾರ, ಮೆಟ್ಟಿಲುಗಳ ನಿರ್ಮಾಣ, ಸುತ್ತಲೂ ಆವರಣ ಗೋಡೆ, ವಿಶಾಲವಾದ ರಸ್ತೆ ಅಭಿವೃದ್ಧಿ, ರೇವಗ್ಗ ಗುಂಡಕ್ಕೆ ಹೋಗುವ ರಸ್ತೆ ನಿರ್ಮಾಣ ನಡೆಯುತ್ತಿದೆ ಎಂದರು.

ಭಕ್ತರೊಬ್ಬರು ವೈಯಕ್ತಿಕವಾಗಿ ದಾಸೋಹ ಭವನ ನಿರ್ಮಿಸಿದ್ದಾರೆ. ಈಗಾಗಲೇ ಯಾತ್ರಿ ಪೂರ್ಣಗೊಂಡಿದ್ದು, ಅರ್ಧಕ್ಕೆ ನಿಂತಿದ್ದ ಕಲ್ಯಾಣ ಮಂಟಪ ನಿರ್ಮಾಣ ಕಾಮಗಾರಿಯೂ ಪೂರ್ಣಗೊಳಿಸಲಾಗಿದೆ ಎಂದರು.

ತಾ.ಪಂ. ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಜಿ.ಪಂ. ಸದಸ್ಯ ರಾಜೇಶ್‌ ಗುತ್ತೇದಾರ, ತಹಶೀಲ್ದಾರ ಪ್ರಕಾಶ ಕುದರಿ, ಅನಿಲ ರಾಠೋಡ್‌, ಹಿರಿಯ ಮುಖಂಡ ರೇವಣಸಿದ್ದಪ್ಪ ಸಾತನೂರು, ರಮೇಶ ಧುತ್ತರಗಿ, ಅಣವೀರಯ್ಯ ಸ್ವಾಮಿ, ಡಿ.ಬಿ ಕಟ್ಟಿಮನಿ ಇದ್ದರು.

*
ಘತ್ತರಗಿ ದೇವಾಲಯದ ಮಾದರಿಯಲ್ಲಿಯೇ ರೇವಗ್ಗಿ ರೇವಣಸಿದ್ದೇಶ್ವರ ತಪೋಭೂಮಿ ಅಭಿವೃದ್ಧಿ ಪಡಿಸಲಾಗುತ್ತಿದೆ.
–ಡಾ. ಉಮೇಶ ಜಾಧವ್‌,
ಸಂಸದೀಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT