ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಗಳಲ್ಲಿ ರಾರಾಜಿಸುತ್ತಿರುವ ಧ್ವಜ

Last Updated 21 ಜನವರಿ 2017, 6:11 IST
ಅಕ್ಷರ ಗಾತ್ರ

ಕಲಬುರ್ಗಿ: ಜ. 21 ರಿಂದ ಎರಡು ದಿನ ನಗರದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಇದಕ್ಕಾಗಿ ಪ್ರಮುಖ ರಸ್ತೆಗಳು, ವೃತ್ತಗಳು ಫ್ಲೆಕ್ಸ್‌, ಬ್ಯಾನರ್‌, ಪಕ್ಷದ ಧ್ವಜಗಳು, ಸ್ವಾಗತ ಕಮಾನುಗಳಿಂದ ಅಲಂಕೃತಗೊಂಡಿವೆ.

ರಾಮಮಂದಿರ ವೃತ್ತದಿಂದ ರಾಷ್ಟ್ರಪತಿ ಚೌಕ್‌, ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ವೃತ್ತದಿಂದ ಸೂಪರ್‌ ಮಾರ್ಕೆಟ್‌, ಗಂಜ್‌ ರಸ್ತೆ ಹಾಗೂ ಹುಮನಾಬಾದ್‌ ರಿಂಗ್‌ರಸ್ತೆ, ಆಳಂದ ನಾಕಾಗಳಲ್ಲಿ ಕಮಲದ ಧ್ವಜಗಳು ರಾರಾಜಿಸುತ್ತಿವೆ.

ಐವಾನ್‌ ಎ–ಶಾಹಿ ಅತಿಥಿಗೃಹಗಳು, ವಿಟಿಯು ಅತಿಥಿ ಗೃಹ ಹಾಗೂ ನಗರದಾದ್ಯಂತ ಖಾಸಗಿ ವಸತಿಗೃಹಗಳಲ್ಲಿ ಪಕ್ಷದ ಮುಖಂಡರು ಉಳಿದುಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಸಭೆ ನಡೆಯುವ ಸ್ಥಳದಿಂದ ಮುಖಂಡರ ವಾಹನಗಳು ಸಂಚರಿಸುವ ನಗರದ ಪ್ರತಿಯೊಂದು ರಸ್ತೆಗಳಲ್ಲಿ ಫ್ಲೆಕ್ಸ್‌ಗಳ ಸಾಲು ಕಣ್ಣು ಕೊರೈಸುತ್ತಿವೆ.

ರಸ್ತೆಗಳುದ್ದಕ್ಕೂ ಹಾಕಿರುವ ವರ್ಣ ವೈವಿಧ್ಯಮಯ ಸ್ವಾಗತ ಕಮಾನುಗಳು ಹಬ್ಬದ ವಾತಾವರಣ ಸೃಷ್ಟಿಸಿವೆ. ಗುಲಬರ್ಗಾ ವಿಶ್ವವಿದ್ಯಾಲಯದವರೆಗೂ ಸೇಡಂ ರಸ್ತೆಯ ವಿಭಜಕ ಹಾಗೂ ರಸ್ತೆ ಬದಿಗಳಲ್ಲಿ ವರ್ಣರಂಜಿತ ಎತ್ತರದ ಕಮಾನುಗಳು, ಧ್ವಜಗಳು, ಫ್ಲೆಕ್ಸ್‌ಗಳು ತುಂಬಿಕೊಂಡಿವೆ.

ವೇದಿಕೆ ನಿರ್ಮಾಣ: ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ಹಾರಕೂಡ ಕಲ್ಯಾಣ ಮಂಟಪವು ಒಂದು ವಾರದಿಂದ ಬಿಜೆಪಿ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕಲ್ಯಾಣ ಮಂಟಪದ ಸುತ್ತಮುತ್ತಲಿನ ಆವರಣವೆಲ್ಲವೂ ಫ್ಲೆಕ್ಸ್‌ ಹಾಗೂ ಧ್ವಜಗಳಿಂದ ತುಂಬಿಹೋಗಿದೆ. ಕಲ್ಯಾಣ ಮಂಟಪಕ್ಕೆ ಹೊಂದಿಕೊಂಡು ಇನ್ನೊಂದು ವೇದಿಕೆಯನ್ನೂ ಸಜ್ಜುಗೊಳಿಸಲಾಗಿದೆ.

‘ಇದು ದೊಡ್ಡ ಪ್ರಮಾಣದ ಸಭೆ ಆಗಿರುವುದರಿಂದ ಒಬ್ಬರೆ ಎಲ್ಲವನ್ನು ನೋಡಿಕೊಳ್ಳುವುದು ಅಸಾಧ್ಯ. ಹೀಗಾಗಿ ಸಭೆಯ ವ್ಯವಸ್ಥೆಗಳನ್ನು ನೋಡಿಕೊಳ್ಳಲು ಒಟ್ಟು 27 ತಂಡಗಳನ್ನು ರಚಿಸಲಾಗಿದೆ. ಜವಾಬ್ದಾರಿ ವಹಿಸಿದ ಪ್ರಕಾರ ಎಲ್ಲರೂ ಕೆಲಸ ಮಾಡುತ್ತಿದ್ದಾರೆ’ ಎಂದು ಸಭೆಗೆ ಸಂಬಂಧಿಸಿದ ಸಾಹಿತ್ಯ ಮುದ್ರಣ ನೋಡಿಕೊಳ್ಳುವ ತಂಡದಲ್ಲಿರುವ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

*
ಸಭೆ ಆಯೋಜಿಸುವುದಕ್ಕೆ ಸಕಲ ಸಿದ್ಧತೆಗಳಾಗಿವೆ. ಅಲಂಕಾರ, ವಾಹನ, ಊಟ, ವಸತಿ ವ್ಯವಸ್ಥೆಗಳನ್ನು ನೋಡಿಕೊಳ್ಳುವುದಕ್ಕೆ ಜವಾಬ್ದಾರಿ ವಹಿಸಿಕೊಂಡವರು ಕೆಲಸ ಮಾಡುತ್ತಿದ್ದಾರೆ.
–ದೊಡ್ಡಪ್ಪಗೌಡ ಪಾಟೀಲ,
ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT