ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಚನ ಸಾಹಿತ್ಯಕ್ಕೆ ಭಜನೆ ಪ್ರೇರಣೆ’

ದಲಿತ ಸಾಹಿತ್ಯದಲ್ಲಿ ಭಜನಾ, ವಚನ ಪರಂಪರೆ: ವಿಚಾರ ಗೋಷ್ಠಿ
Last Updated 21 ಜನವರಿ 2017, 6:23 IST
ಅಕ್ಷರ ಗಾತ್ರ

ಬೀದರ್: ವಚನ ಸಾಹಿತ್ಯ ರಚನೆಯ ಪೂರ್ವದಲ್ಲಿಯೇ ಭಜನೆ ಅಸ್ತಿತ್ವದಲ್ಲಿತ್ತು. ಆರಂಭದ ಕಾಲಘಟ್ಟದಲ್ಲಿ ಭಜನೆ ಬರವಣಿಗೆ ರೂಪದಲ್ಲಿ ಇರಲಿಲ್ಲ. ಆದರೆ ಶರಣರ ಕಾಲದಲ್ಲಿ ಲಿಖಿತ ರೂಪ ಪಡೆದುಕೊಂಡಿತು ಎಂದು ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಹೇಳಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹಾಗೂ ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಆಶ್ರಯದಲ್ಲಿ ದಲಿತ ಸಾಹಿತ್ಯ ಸಮ್ಮೇಳ ನದ ಅಂಗವಾಗಿ ಶುಕ್ರವಾರ ಆಯೋಜಿ ಸಿದ್ದ  ‘ದಲಿತ ಸಾಹಿತ್ಯದಲ್ಲಿ ಭಜನಾ ಮತ್ತು ವಚನ ಪರಂಪರೆ’ ಕುರಿತ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಚನ ಸಾಹಿತ್ಯಕ್ಕೆ ಭಜನೆ ಪ್ರೇರಣೆಯಾಗಿರಬಹುದು. ಕೆಳವರ್ಗ­ದಲ್ಲೂ ವಚನಕಾರರು ಹುಟ್ಟಿಕೊಂಡ ನಂತರ  ಕೆಲವು ಬದಲಾವಣೆಗಳು ಕಂಡು ಬಂದವು. ಕಾಲಾಂತರದಲ್ಲಿ ಭಜನೆ ಹಾಗೂ ವಚನ ಸಾಹಿತ್ಯ ಜತೆ ಜತೆಯಾಗಿಯೇ ಬೆಳೆದವು ಎಂದು ಅವರು ಅಭಿಪ್ರಾಯಪಟ್ಟರು.

‘ಬಿ. ಶ್ಯಾಮ ಸುಂದರರಾವ್‌ ಅವರ ಬದುಕು ಮತ್ತು ಸಾಧನೆ’ ಕುರಿತು ಉಪನ್ಯಾಸ ನೀಡಿದ ಲೇಖಕ ಮರಿಯಪ್ಪ ಹೊಸಮನಿ, ಡಾ. ಅಂಬೇಡ್ಕರ್‌ ಸೌಮ್ಯವಾಗಿಯಾಗಿದ್ದರೆ, ಶ್ಯಾಮಸುಂದರ ತೀವ್ರವಾದಿಯಾಗಿದ್ದರು. ಶೋಷಿತ ಹಾಗೂ ಬಡವರ ಬಗೆಗೆ ಅವರಿಗೆ ಅಪಾರ ಕಾಳಜಿ ಇತ್ತು. ಅವರು ಯಾವಾಗಲೂ ಬಡವರ ಏಳ್ಗೆಗೆಗಾಗಿ ಚಿಂತನೆ ನಡೆಸುತ್ತಿದ್ದರು ಎಂದರು.

ಅಧ್ಯಕ್ಷತೆ ವಹಿಸಿದ್ದ ಮನ್ಮಥ ಡೋಳೆ ಮಾತನಾಡಿ, ದಲಿತ ಪರಂಪರೆಯಲ್ಲಿ ಭಕ್ತಿಗಿಂತ ಭಯದಿಂದಲೇ ಭಜನೆ ಹುಟ್ಟಿಕೊಂಡಿತು. ಭಜನೆ ದಲಿತ ಸಮುದಾಯದಲ್ಲಿ ಆರಂಭದಲ್ಲಿ ದೇವರ ಆರಾಧನೆಯನ್ನು ಮೂಲವಾಗಿಟ್ಟು­ಕೊಂಡು ಬೆಳೆಯಿತು. ಆದರೆ ದಲಿತ ಜಾಗೃತಿಯ ಪರಿಣಾಮವಾಗಿ ಇಂದು ಬೇರೆ ಸ್ವರೂಪ ಪಡೆದುಕೊಂಡಿದೆ ಎಂದು ಹೇಳಿದರು.

ಡಾ.ಅಂಬೇಡ್ಕರ್‌ ಪ್ರಭಾವದ ನಂತರ ಭಜನಾ ಪರಂಪರೆ ಹುಲುಸಾಗಿ ಬೆಳೆದಿದೆ. ಡಾ.ಅಂಬೇಡ್ಕರ್, ರಮಾ­ಬಾಯಿ, ಬುದ್ಧ, ಶಾಹು ಮಹಾರಾಜರ ಜೀವನ ಚರಿತ್ರೆಯ ಮೇಲೆ ಬೆಳಕು ಚೆಲ್ಲುವ ಅಂಶಗಳು ಭಜನೆಯಲ್ಲಿ ಸ್ಥಾನ ಪಡೆದಿವೆ ಎಂದು ತಿಳಿಸಿದರು.

ಭಜನೆ ಒಂದು ಆರಾಧನೆಯ ಮಾಧ್ಯಮ. ಭಜನಾಕಾರರಿಗೆ ಕಲ್ಲು ದೇವರಾಗಲಿಲ್ಲ. ಅವರು ಸಮಾಜ ಸುಧಾರಕರನ್ನೇ ದೇವರ ಪ್ರತಿರೂಪದಲ್ಲಿ ಕಂಡರು.  ಇದು ಜನಜಾಗೃತಿಗೆ ಹೊಸ ರೂಪತಂದುಕೊಟ್ಟಿತು ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಮಹದೇವಯ್ಯ, ಡಾ. ಪೃಥ್ವಿ ಲಕ್ಕಿ,  ರಂಗ ತರಂಗ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ ಅಧ್ಯಕ್ಷ ಮಲ್ಲಿಕಾರ್ಜುನ ಮುದಾಳೆ ಇದ್ದರು.

ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್‌ ನಿರೂಪಿಸಿದರು. ಜನಪದ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ ಸೋನಾರೆ ವಂದಿಸಿದರು.

*
ಮೌಖಿಕವಾಗಿ ಬೆಳೆದ ಭಜನೆ ಜನಮನ್ನಣೆ ಪಡೆದಿದೆ. ಆರಾಧನೆ ಭಜನೆಯ ಮೂಲ. ಕಾಲಾಂತರದಲ್ಲಿ ವೈಚಾರಿಕತೆ ಪ್ರಾಮುಖ್ಯ ಪಡೆದಿದೆ.
-ಚಂದ್ರಪ್ಪ ಹೆಬ್ಬಾಳಕರ್,
ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT