ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯವಿವಾಹ ತಡೆಗೆ ಅಭಿಯಾನ: ಡಿ.ಸಿ

Last Updated 21 ಜನವರಿ 2017, 6:24 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟಲು ಪರಿಣಾಮಕಾರಿಯಾಗಿ ಜಾಗೃತಿ ಅಭಿಯಾನ  ನಡೆಸಬೇಕು ಎಂದು ಜಿಲ್ಲಾಧಿಕಾರಿ ಎಚ್‌.ಆರ್. ಮಹಾದೇವ ತಿಳಿಸಿದರು.

ಬಾಲ್ಯವಿವಾಹ ತಡೆಗಟ್ಟಲು ಜನವರಿ 21 ರಂದು ರಾಜ್ಯದಾದ್ಯಂತ ಹಮ್ಮಿ ಕೊಂಡಿರುವ ಜನಜಾಗೃತಿ ಜನಾಂದೋಲನ ಪ್ರಯುಕ್ತ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಬಾಲ್ಯ ವಿವಾಹದಿಂದ ಎದುರಾಗುವ ಸಮಸ್ಯೆಗಳ ಬಗೆಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲು ಅಧಿಕಾರಿಗಳು ಶ್ರಮಿಸಬೇಕು.  ಮೊದಲು ಮಗುವನ್ನು, ಬಳಿಕ ಪಾಲಕರನ್ನು ಅನಂತರ ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ದ್ವೇಷದಿಂದ ಮಾಡುವ ಕೆಲಸ ಇದಲ್ಲ, ಮಗುವಿನ ತಂದೆ-ತಾಯಿ ಯರನ್ನು  ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಗ್ರಾಮಮಟ್ಟದಲ್ಲಿ ಸಮಿತಿ ರಚಿಸಿ ಆಯಾ ಸ್ಥಳಕ್ಕೆ ಭೇಟಿ ನೀಡಿ ತಿಳಿವಳಿಕೆ ನೀಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆರ್. ಸೆಲ್ವಮಣಿ ಮಾತನಾಡಿ, ಜನವರಿ 21 ರಂದು  ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಭಾಷಣ, ವಿಚಾರ ಸಂಕಿರಣ ಆಯೋಜಿಸಬೇಕು ಎಂದು ತಿಳಿಸಿದರು.

ಜನವರಿ 21 ರಿಂದ ಜೂನ್ 21ರ ವರೆಗೆ ಪ್ರತಿ ತಿಂಗಳು 21 ರಂದು ವಿಶೇಷ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ತಹಶೀಲ್ದಾರರು ಸಾಮೂಹಿಕ ವಿವಾಹ ಸಮಾರಂಭಗಳ ಮೇಲೆ ನಿಗಾ ಇಡಬೇಕು. ದೇವಸ್ಥಾನಗಳಲ್ಲಿ ನಡೆಯುವ ಮದುವೆ ಸಮಾರಂಭಗಳ 
ಮಾಹಿತಿ ಇಟ್ಟುಕೊಳ್ಳಬೇಕು.  ಮಕ್ಕಳ ಸಹಾಯವಾಣಿ ಬಗೆಗೆ  ಗ್ರಾಮೀಣ ಪ್ರದೇಶದವರಿಗೆ ತಿಳಿವಳಿಕೆ ನೀಡಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪಿ.ಎಸ್. ಇಟಕಂಪಳ್ಳಿ ಮಾತನಾಡಿ, ಮಕ್ಕಳ ಸಹಾಯವಾಣಿ 1098ಕ್ಕೆ  ಬಂದ ಕರೆಗಳಿಗೆ ಸ್ಪಂದಿಸಿ ದಾಳಿ ನಡೆಸಿ  ಜಿಲ್ಲೆಯಲ್ಲಿ 35 ಬಾಲ್ಯ ವಿವಾಹ ತಡೆಯಲಾಗಿದೆ  ಎಂದು ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯೆ ಅಪರ್ಣಾ ಕೊಳ್ಳ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸಂಜೀವಕುಮಾರ ಡಾಕುಳಗಿ, ಸದಸ್ಯ ಶಶಿಧರ ಕೋಸಂಬಿ, ಬಾಲ ನ್ಯಾಯ ಮಂಡಳಿ ಸದಸ್ಯೆ ಕವಿತಾ ಹುಷಾರೆ, ಶಿಕ್ಷಣ ಇಲಾಖೆಯ ಅಧಿಕಾರಿ ಶಿವಕುಮಾರ ಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೌರಿಶಂಕರ, ವಕೀಲ ಬಿ.ಎಸ್.ಪಾಟೀಲ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT