ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯ

ಬೀದರ್: ಪೌರಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಗೆ ಸನ್ಮಾನ
Last Updated 21 ಜನವರಿ 2017, 6:30 IST
ಅಕ್ಷರ ಗಾತ್ರ

ಬೀದರ್: ನಗರ ನೈರ್ಮಲ್ಯ ಕಾಪಾಡುವಲ್ಲಿ ಅನುಸರಿಸಲಾಗುವ ವಿಧಾನಗಳನ್ನು ಅರಿತುಕೊಳ್ಳಲು ಪೌರ ಕಾರ್ಮಿಕರಿಗೂ ವಿದೇಶ ಪ್ರವಾಸ  ಭಾಗ್ಯ ಒದಗಿಸಲಾಗುವುದು ಎಂದು ಪೌರಾಡಳಿತ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದ ನಗರಸಭೆ ಕಚೇರಿ ಸಭಾಂಗಣದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯದ ಒಂದು ಸಾವಿರ ಪೌರ­ಕಾರ್ಮಿಕರನ್ನು ವಿದೇಶಕ್ಕೆ ಕಳಿಸಿಕೊಡ­ಲಾಗು­ವುದು. ಬೀದರ್‌ ನಗರಸಭೆಯ ಪೌರ ಕೌರ್ಮಿಕರಿಗೂ ವಿದೇಶ  ಪ್ರವಾಸ ಭಾಗ್ಯ ಕಲ್ಪಿಸಿಕೊಡಲಾಗುವುದು  ಎಂದು ತಿಳಿಸಿದರು.

ಪೌರ ಕಾರ್ಮಿಕರಿಗೆ ಮನೆ ನಿರ್ಮಾಣಕ್ಕೆ  ಸರ್ಕಾರ ₹ 6 ಲಕ್ಷ ನೆರವು ನೀಡಲಿದೆ. ಬೀದರ್‌ನಲ್ಲಿ ಈಗಾಗಲೇ 10 ಕಾರ್ಮಿಕರಿಗೆ ಈ ಸೌಲಭ್ಯ ಒದಗಿಸಲಾಗಿದೆ. ನಗರದಲ್ಲಿ 200 ಎಕರೆ ಸರ್ಕಾರಿ ಜಮೀನು ಇದೆ. ಅದರಲ್ಲಿ ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ­ಕೊಡಲಾಗುವುದು. ಪೌರಕೌರ್ಮಿಕರು ತಮ್ಮ ಪಾಲಿನ ಹಣವನ್ನೂ ಸೇರಿಸಿ ಉತ್ತಮವಾದ ಮನೆಗಳನ್ನು ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.

ಗುತ್ತಿಗೆ ಪದ್ಧತಿ ರದ್ದು ಮಾಡಿ ಬೀದರ್‌ ನಗರಸಭೆಯಲ್ಲಿ ಕೆಲಸ ಮಾಡುತ್ತಿದ್ದ 103 ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಲಾಗಿದೆ. ಪೌರ ಕಾರ್ಮಿಕರ ವೇತವನ್ನು ₹ 14 ಸಾವಿರದಿಂದ ₹ 16 ಸಾವಿರಕ್ಕೆ ಹೆಚ್ಚಿಸಿ ಆರ್‌ಟಿಜಿಎಸ್‌ ಮೂಲಕ ನೇರವಾಗಿ ಅವರ ಖಾತೆಗೆ  ವೇತನ ಜಮಾ ಮಾಡಲಾಗುತ್ತಿದೆ ಎಂದು ಹೇಳಿದರು.

ಫೆಬ್ರುವರಿ 3 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯ­ಲಿ­ರುವ ವಿಶೇಷ ಸಭೆಯಲ್ಲಿ ಪೌರ ಕಾರ್ಮಿಕರನ್ನು ನೇಮಕ ಮಾಡುವ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಘನತ್ಯಾಜ್ಯ ವಿಲೇವಾರಿಗೆ  ಸಂಬಂಧಪಟ್ಟ ವರದಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪೌರ ಕಾರ್ಮಿಕರಿಗೆ ಬಿಸಿಯೂಟದ ಜತೆಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸ­ಲಾಗಿದೆ. ನಗರಸಭೆ ಸದಸ್ಯರ ಗೌರವಧನ­ವನ್ನು ದುಪ್ಪಟ್ಟು ಮಾಡಲಾಗಿದೆ. ಸಾಧ್ಯವಾದರೆ ಇನ್ನೂ ಹೆಚ್ಚು ಮಾಡಲಾಗುವುದು ಎಂದು ಹೇಳಿದರು.

ಮೂರನೇ ಹಂತದ ನಗರೋತ್ಥಾನ ಯೋಜನೆ ಜಾರಿಗೆ ತರಲಾಗಿದೆ. ಯೋಜನೆಗಳ ಪಾರದರ್ಶಕ ಅನುಷ್ಠಾನಕ್ಕೆ ವಿವಿಧ ಸಮಿತಿ ರಚಿಸ­ಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಯುದ್ಧೋಪಾದಿಯಲ್ಲಿ ನಡೆದಿವೆ ಎಂದು ತಿಳಿಸಿದರು.

ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಭಾಲ್ಕಿ ಪುರಸಭೆಗೆ 50 ಕೋಟಿ, ಬೀದರ್‌ ನಗರಸಭೆಗೆ 35 ಕೋಟಿ, ಹುಮನಾಬಾದ್‌ ಪುರಸಭೆ ಹಾಗೂ ಬಸವಕಲ್ಯಾಣ ನಗರಸಭೆಗೆ ₹ 9 ಕೋಟಿ ಅನುದಾನ ಹೆಚ್ಚುವರಿಯಾಗಿ ಬಿಡುಗಡೆ ಮಾಡಲಾಗಿದೆ.  ನಾನು ಸಚಿವನಾದ ನಂತರ ಸಾಮಾನ್ಯ ಅನುದಾನಕ್ಕಿಂತ ಹೆಚ್ಚುವರಿಯಾಗಿ ₹ 102 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ರಹೀಂ ಖಾನ್ ಮಾತನಾಡಿ, ಬೀದರ್‌ ನಗರಕ್ಕೆ ಮೂಲಸೌಕರ್ಯ ಒದಗಿಸಲು ವಿವಿಧ ಯೋಜನೆ ಅಡಿ ₹ 70 ಕೋಟಿ ಬಿಡುಗಡೆಯಾಗಿದೆ. 15 ದಿನಗಳಲ್ಲಿ ಟೆಂಡರ್‌ ಕರೆದು ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ನಗರಸಭೆ ಪ್ರಭಾರ ಅಧ್ಯಕ್ಷೆ ಶಾಲಿನಿ ಚಿಂತಾಮಣಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಗರಾಭಿವೃದ್ಧಿ ಕೋಶದ ನಿರ್ದೇಶಕ ಬಲಭೀಮ ಕಾಂಬಳೆ ಉಪಸ್ಥಿತರಿದ್ದರು. ನಗರಸಭೆ ಸದಸ್ಯರು, ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರಸಭೆ ಆಯುಕ್ತ ನರಸಿಂಹಮೂರ್ತಿ ಸ್ವಾಗತಿಸಿದರು.

*
ನಗರಸಭೆಯು ಕ್ರಿಯಾ ಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗೆ ಸಲ್ಲಿಸಿದರೆ ಜಿಲ್ಲಾ ಮಟ್ಟದಲ್ಲಿಯೇ ₹ 5 ಕೋಟಿ ವರೆಗಿನ ಕಾಮಗಾರಿಗೆ ಮೋದನೆ ನೀಡಲು ಅವಕಾಶ ಕಲ್ಪಿಸಲಾಗಿದೆ.
-ಈಶ್ವರ ಖಂಡ್ರೆ,
ಪೌರಾಡಳಿತ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT