ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿ ಕಾರ್ಯಕರ್ತರ ಪ್ರತಿಭಟನೆ

ಶಾಸಕ ಹಂಪನಗೌಡ ಬಾದರ್ಲಿ ನಿವಾಸದ ಮುಂದೆ ಧರಣಿ
Last Updated 21 ಜನವರಿ 2017, 6:31 IST
ಅಕ್ಷರ ಗಾತ್ರ

ಸಿಂಧನೂರು: ಅಂಗನವಾಡಿ ನೌಕರರ ಸೇವೆ ಕಾಯಂಗೊಳಿಸುವುದೂ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ತಾಲ್ಲೂಕು ಘಟಕದಿಂದ ಸ್ಥಳೀಯ ಶಾಸಕ ಹಂಪನಗೌಡ ಬಾದರ್ಲಿ ನಿವಾಸದ ಮುಂದೆ ಧರಣಿ ನಡೆಸಲಾಯಿತು.

ಇಲ್ಲಿನ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟು ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಎಐಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಾಷುಮಿಯಾ ಮಾತನಾಡಿ,  ರಾಜ್ಯದಲ್ಲಿ 1.25 ಲಕ್ಷ ಅಂಗನವಾಡಿ ಸಿಬ್ಬಂದಿ ಲಕ್ಷಾಂತರ ಮಕ್ಕಳಿಗೆ ಸೇವೆ ಮಾಡುತ್ತಿದ್ದಾರೆ.  ಅವರು ಗೌರವಧನದಲ್ಲಿ ಜೀವನ ನಡೆಸಬೇಕಾಗಿದೆ. ಪಿಂಚಣಿ, ಪಿಎಫ್ ಸೌಲಭ್ಯ ಕಲ್ಪಿಸಿಲ್ಲ, ಸೇವೆ ಕಾಯಂ ವ್ಯವಸ್ಥೆಯಿಲ್ಲ ಎಂದು ಟೀಕಿಸಿದರು.

ಅಂಗನವಾಡಿ ನೌಕರರ ಸೇವೆಯನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಅನ್ಯಾಯ ಮಾಡಿವೆ. ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕಾಯಂಗೊಳಿಸಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಮನಾದ ವೇತನ ನೀಡುವಂತೆ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ಅದನ್ನು ಜಾರಿಗೊಳಿಸದೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ ಎಂದು ಹೇಳಿದರು.

ಹಮಾಲರ ಸಂಘದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ವೆಂಕನಗೌಡ ಗದ್ರಟಗಿ, ಫೆಡರೇಶನ್ ರಾಜ್ಯ ಘಟಕದ ಉಪಾಧ್ಯಕ್ಷೆ ಪ್ರಭಾವತಿ ಮಾತನಾಡಿದರು.
ಮನವಿ ಸ್ವೀಕರಿಸಿದ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಚರ್ಚಿಸಿ ಅಂಗನವಾಡಿ ನೌಕರರ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರೊಂದಿಗೆ ಸಮಾಲೋಚಿಸುವುದಾಗಿ ಭರವಸೆ ನೀಡಿದರು.

ಫೆಡರೇಶನ್ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಚ್.ಕಂಬಳಿ, ತಾಲ್ಲೂಕು ಘಟಕದ ಅಧ್ಯಕ್ಷೆ ಪ್ರಭಾವತಿ, ತುರ್ವಿಹಾಳ ಯೋಜನೆ ಅಧ್ಯಕ್ಷೆ ಅಮರಮ್ಮ, ಮುಖಂಡರಾದ ತಿಪ್ಪಯ್ಯಶೆಟ್ಟಿ, ರಾಮಣ್ಣ ಅರಗಿನಮರ ಕ್ಯಾಂಪ್, ಹನುಮೇಶ ಗಿಣಿವಾರ, ಮುಖಂಡರಾದ ಆದಿಲಕ್ಷ್ಮೀ ಅರಗಿನಮರಕ್ಯಾಂಪ್, ಗೌರಮ್ಮ ಅಲಬನೂರು, ಲಕ್ಷ್ಮೀ ದಢೇಸುಗೂರು, ಸುಲೋಚನಾ ಅರಗಿನಮರಕ್ಯಾಂಪ್, ಶಾಂತಾ ಗೊರೇಬಾಳ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT