ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆಯುಷ್‌ ವೈದ್ಯರ ಅಲೋಪಥಿ ಔಷಧಿ ಅವೈಜ್ಞಾನಿಕ’

ಆಯುಷ್ ಮತ್ತು ಹೋಮಿಯೋಪಥಿ ವೈದ್ಯರಿಗೆ ಅನುಮತಿ ನೀಡುವುದು ಆತಂಕಕಾರಿ
Last Updated 21 ಜನವರಿ 2017, 6:57 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ವೈದ್ಯರ ಕೊರತೆಯ ನೆಪವೊಡ್ಡಿ ಆಯುಷ್ ವೈದ್ಯರಿಗೆ ಅಲೋಪಥಿ ವೈದ್ಯ ಪದ್ಧತಿಯ ತರಬೇತಿ ನೀಡಿ ವೈದ್ಯಕೀಯ ವೃತ್ತಿಗೆ ಪರಿಗಣಿಸುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ರಾಜಶೇಖರ್.ಎಸ್ ಬಳ್ಳಾರಿ ಹೇಳಿದರು. ದೊಡ್ಡಬಳ್ಳಾಪುರದಲ್ಲಿ  ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಈ ಮೂಲಕ ಸರ್ಕಾರವೇ ನಕಲಿ ವೈದ್ಯರನ್ನು ಸೃಷ್ಟಿಸುತ್ತಿದೆ. ಖಾಲಿ ಇರುವ ವೈದ್ಯಕೀಯ ಹುದ್ದೆಗಳ ಪಟ್ಟಿ ನೀಡಿ, ವೈದ್ಯರಿಗೆ ಸೂಕ್ತ ಸವಲತ್ತು ಒದಗಿಸಿದರೆ ವೈದ್ಯರನ್ನು ಕಳುಹಿಸಲು ಸಿದ್ಧ. ರಾಜ್ಯದಲ್ಲಿ ಸರ್ಕಾರ ಆಯುಷ್ ಮತ್ತು ಹೋಮಿಯೋಪಥಿ ವೈದ್ಯರಿಗೆ ಅನುಮತಿ ನೀಡುತ್ತಿರುವುದು ಆತಂಕಕಾರಿ ವಿಷಯವಾಗಿದೆ ಎಂದರು.

6 ರಿಂದ 7 ವರ್ಷ ವೈದ್ಯಕೀಯ ಶಿಕ್ಷಣ ಕಲಿತ ಆಲೋಪಥಿ ವೈದ್ಯರು ನೀಡುವ ಚಿಕಿತ್ಸೆಗೂ 6 ತಿಂಗಳು ಕಲಿತವರಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಔಷಧಿ ನೀಡುವ ಬಗ್ಗೆ ಸರಿಯಾದ ತಿಳಿವಳಿಕೆ ಇರುವುದಿಲ್ಲ. ಇದರಿಂದ ನಮಗಿಂತ ಹೆಚ್ಚಾಗಿ ರೋಗಿಗಳ ಪ್ರಾಣಕ್ಕೆ ಅಪಾಯವಿದೆ. ಈ ಕುರಿತು ನಾವು ಈಗಾಗಲೇ ರಾಜ್ಯ ಆರೋಗ್ಯ ಸಚಿವರಾದ ರಮೇಶ್‌ಕುಮಾರ್ ಅವರಿಗೆ ಮನವಿಪತ್ರ ನೀಡಿದ್ದೇವೆ ಎಂದರು.

ರಾಜ್ಯದಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಯದಲ್ಲಿ ವೈದ್ಯ ಸೇವೆ ನೀಡಲು ಸಿದ್ಧರಾಗುವ ವೈದ್ಯರಿಗೆ ಇತ್ತೀಚಿನ ದಿನಗಳಲ್ಲಿ ರಕ್ಷಣೆ ಇಲ್ಲದಂತಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರು ಸೇವೆ ನೀಡಲು ಮುಂದೆ ಬರಲು ಸಿದ್ಧರಿಲ್ಲ ಎಂಬ ಮಾತು ಸುಳ್ಳು.

ಹಳ್ಳಿಗಳಲ್ಲಿ ಸೇವೆ ನೀಡಲು ವೈದ್ಯರು ಯಾವಾಗಲೂ ಸಿದ್ಧರಿದ್ದಾರೆ. ಆದರೆ ಅವರಿಗೆ ಸೂಕ್ತ ಸೌಲಭ್ಯಗಳು ಒದಗಿಸಿ, ಸರಿಯಾದ ಸಂಬಳ ನೀಡಿದರೆ ನಮ್ಮ ವೈದ್ಯಕೀಯ ಸಂಘದಿಂದಲೇ ಸರ್ಕಾರ ಕೇಳಿದಷ್ಟು ಜನ ವೈದ್ಯರನ್ನು ಕಳುಹಿಸಲು ನಾವು ಸಿದ್ಧ. ಸರ್ಕಾರ ಈ ಬಗ್ಗೆ ಕೈ ಜೋಡಿಸಬೇಕು. ವೈದ್ಯರಿಗೆ ಪಿ.ಜಿ.ಶಿಕ್ಷಣಕ್ಕೆ ಉತ್ತೇಜನ ನೀಡಬೇಕು ಎಂದರು.

ರಾಜ್ಯದಲ್ಲಿ ಅಲ್ಲದೇ ದೇಶವ್ಯಾಪ್ತಿ ಇಂದು ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು, ದೇಶದಲ್ಲಿ ಶೇ 40 ರಷ್ಟು ವೈದ್ಯರ ಮೇಲೆ ಹಲ್ಲೆ ಪ್ರಕರಣಗಳು ನಡೆಯುತ್ತಿದ್ದು, ಇದರಲ್ಲಿ ಪ್ರಭಾವಿಗಳು ಸೇರಿದ್ದಾರೆ. ಆದರೆ ಇದಕ್ಕೆ ಕಾನೂನು ಕ್ರಮ ಸಡಿಲವಾಗಿದ್ದು, ಆರೋಪಿಗಳು ಜಾಮೀನು ಪಡೆದು ಸುಲಭವಾಗಿ ಹೊರಬರುತ್ತಿದ್ದಾರೆ ಎಂದರು.

ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಅಧ್ಯಕ್ಷ ಡಾ.ಎಚ್.ಜಿ.ವಿಜಯಕುಮಾರ್ ಮಾತನಾಡಿ, ವೈದ್ಯರ ಬಳಿ ಅಭ್ಯಾಸ ಮಾಡಿದ ಜನ ಮುಂದೆ ವೈದ್ಯಕೀಯ ವೃತ್ತಿ ಮಾಡಲು ತಯಾರಾಗುತ್ತಾರೆ. ಇದರೊಂದಿಗೆ ವೈದ್ಯಕೀಯ ಪದವಿ ಪಡೆದವರು ಆಲೋಪಥಿ ವೈದ್ಯ ಮಾಡುತ್ತಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಆದೇಶದಂತೆ ಯಾವುದೇ ವೈದ್ಯ ತನ್ನ ಪ್ರಮಾಣಪತ್ರದ ಹೊರತಾಗಿ ಇತರೆ ಪದ್ಧತಿ ಅನುಸರಿಸುವಂತಿಲ್ಲ ಎಂದರು.

ಈ ನಿಟ್ಟಿನಲ್ಲಿ ಹೆಚ್ಚಾಗುತ್ತಿರುವ ನಕಲಿ ವೈದ್ಯರಿಗೆ ಕಡಿವಾಣ ಹಾಕಬೇಕು. ಹಾಗೂ ಮೊದಲು ಸರ್ಕಾರ ವೈದ್ಯರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಉಪಾಧ್ಯಕ್ಷ ಶರಣಪ್ಪ, ರಾಜ್ಯ ಸಂಘದ ಪದಾಧಿಕಾರಿ ಡಾ.ಕೃಷ್ಣಪ್ಪ, ತಾಲ್ಲೂಕು ಸಂಘದ ಕಾರ್ಯದರ್ಶಿ ಡಾ.ಶಿವಕುಮಾರ್, ಡಾ.ಶ್ಯಾಂಪ್ರಸಾದ್ ಮುಂತಾದವರು ಹಾಜರಿದ್ದರು.

*
ವೈದ್ಯರ ಮೇಲೆ ಹಲ್ಲೆ ನಡೆಸುವವರಿಗೆ ಜಾಮೀನು ರಹಿತವಾಗಿ ಬಂಧನಕ್ಕೆ ಒಳಪಡಿಸಬೇಕು. ಅಲ್ಲದೆ ಅಂಥವರಿಗೆ ಕಠಿಣ ಶಿಕ್ಷೆ ನೀಡಬೇಕು.
-ರಾಜಶೇಖರ್.ಎಸ್ ಬಳ್ಳಾರಿ,
ಅಧ್ಯಕ್ಷ, ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT