ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಬಾಲಕೃಷ್ಣ ಸಹಿತ ಐವರಿಗೆ ಜಾಮೀನು

ನ್ಯಾಯಾಲಯದ ಮುಂದೆ ಜನಸಾಗರ: ಪೊಲೀಸರಿಂದ ಬಿಗಿಭದ್ರತೆ
Last Updated 21 ಜನವರಿ 2017, 7:53 IST
ಅಕ್ಷರ ಗಾತ್ರ

ಮಾಗಡಿ: ಪೊಲೀಸ್‌ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಹಾಗೂ ಬೆದರಿಕೆ ಹಾಕಿದ ಆರೋಪಕ್ಕೆ ಗುರಿಯಾಗಿರುವ ಮಾಗಡಿ ಶಾಸಕ ಎಚ್‌.ಸಿ. ಬಾಲಕೃಷ್ಣ ಸಹಿತ ಐವರಿಗೆ ಇಲ್ಲಿನ ಒಂದನೇ ಜೆಎಂಎಫ್‌ ನ್ಯಾಯಾಲಯವು ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಬಾಲಕೃಷ್ಣ ತಮ್ಮ ಬೆಂಬಲಿಗರೊಂದಿಗೆ ಬೆಳಿಗ್ಗೆಯೇ ನ್ಯಾಯಾಲಯದ ಆವರಣದಲ್ಲಿ ಹಾಜರಾಗಿ ಶರಣಾಗುವುದಾಗಿ ಹೇಳಿದ್ದರು. ಮಧ್ಯಾಹ್ನ ಆರೋಪಿಗಳ ಜಾಮೀನು ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶ ಕೆ.ಎಂ. ಆನಂದ್‌ ಅವರು ‘ಪ್ರತಿ 15 ದಿನಕ್ಕೆ ಒಮ್ಮೆ ಠಾಣೆಗೆ ಹಾಜರಾಗಬೇಕು.

ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಬಾರದು. ತಲಾ ₹ 50 ಸಾವಿರ ಭದ್ರತೆ ಹಾಗೂ ಒಬ್ಬರ ಜಾಮೀನು ನೀಡಬೇಕು’ ಎಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.

ಶಾಸಕರೊಂದಿಗೆ ಪ್ರಕರಣದ ಉಳಿದ ಆರೋಪಿಗಳಾದ ಮಾಗಡಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್‌, ಮಾಜಿ ಅಧ್ಯಕ್ಷರಾದ ಎಂ. ರಾಮಣ್ಣ, ಜಿ.ವಿ. ರಾಮಣ್ಣ ಹಾಗೂ ಬಮೂಲ್‌ ನಿರ್ದೇಶಕ ನರಸಿಂಹ ಮೂರ್ತಿ ಸಹ ನ್ಯಾಯಾಲಯಕ್ಕೆ ಶರಣಾಗಿದ್ದು, ಅವರಿಗೂ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದರು.

ಇದಕ್ಕೂ ಮನ್ನ ಜಾಮೀನು ಅರ್ಜಿಯ ವಿಚಾರಣೆ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಹಾಯಕ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಶಾರದಾ ‘ಆರೋಪಿಗಳು ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೂ, ಕರ್ತವ್ಯನಿರತ ಪೊಲೀಸ್‌ ಸಿಬ್ಬಂದಿ ನಿಂದಿಸಿ ಹಲ್ಲೆಗೂ ಯತ್ನಿಸಿದ್ದಾರೆ. ಒಂದು ವೇಳೆ ಇವರನ್ನು ಹೊರಗೆ ಬಿಟ್ಟಲ್ಲಿ ಇಡೀ ವ್ಯವಸ್ಥೆಯೇ ಅಸ್ತವ್ಯಸ್ಥವಾಗುತ್ತದೆ. ಜೊತೆಗೆ ತಮ್ಮ ಪ್ರಭಾವದಿಂದ ಸಾಕ್ಷ್ಯ ಪಡಿಸುವ ಸಾಧ್ಯತೆಯೂ ಇದೆ. ಹೀಗಾಗಿ ಯಾವ ಆರೋಪಿಗೂ ಜಾಮೀನು ನೀಡಬಾರದು’ ಎಂದು ಅವರು ಕೋರಿದರು.

ಪ್ರತಿವಾದಿ ವಕೀಲ ಸುರೇಶ್ ಮಾತನಾಡಿ ‘ಶಾಸಕರು ಸೇರಿದಂತೆ ಎಲ್ಲ ಆರೋಪಿಗಳು ಯಾವುದೇ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿಲ್ಲ. ಜನಪ್ರತಿನಿಧಿಯಾಗಿ ಗೌರವದಿಂದಲೇ ವರ್ತಿಸಿದ್ದಾರೆ. ಆರೋಪ ಬಂದ ಬಳಿಕ ಕಾನೂನಿನ ಮೇಲೆ ನಂಬಿಕೆ ಇಟ್ಟು ಶರಣಾಗಿದ್ದಾರೆ. ಹೀಗಾಗಿ ಜಾಮೀನು ಮಂಜೂರು ಮಾಡಬೇಕು’ ಎಂದು ಮನವಿ ಮಾಡಿದರು. ಅಂತಿಮವಾಗಿ ನ್ಯಾಯಾಧೀಶರು ಐವರಿಗೂ ಷರತ್ತುಬದ್ಧ ಜಾಮೀನು ನೀಡಿದರು.

ವಿಚಾರಣೆಯ ಸಂದರ್ಭ ಇಡೀ ಸಭಾಂಗಣವು ಜನರಿಂದ ತುಂಬಿಹೋಗಿತ್ತು. ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಶಾಂತ್‌, ಮಾಗಡಿ ತಹಶೀಲ್ದಾರ್‌ ಲಕ್ಷ್ಮೀಚಂದ್ರ ಸಹಿತ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಮೆರವಣಿಗೆ: ಬಾಲಕೃಷ್ಣ ನ್ಯಾಯಾಲಯಕ್ಕೆ ಶರಣಾಗಲಿದ್ದಾರೆ ಎಂಬ ಸುದ್ದಿ ತಿಳಿದು ಬೆಳಿಗ್ಗೆಯಿಂದಲೇ ಸಾವಿರಾರು ಮಂದಿ ನ್ಯಾಯಾಲಯದ ಸುತ್ತ ಜಮಾಯಿಸಿದ್ದರು. ಶಾಸಕ ಹಾಗೂ ಇತರ ಆರೋಪಿಗಳು ವಿಚಾರಣೆಗೆ ಕರೆಯುವವರೆಗೂ ನ್ಯಾಯಾಲಯಕ್ಕೆ ಸಮೀಪವೇ ಇರುವ ಜೆಡಿಎಸ್‌ ಮುಖಂಡ ಪಿ.ಸಿ. ಸೀತಾರಾಮ್‌ ಮನೆಯೊಂದರಲ್ಲಿ ಉಳಿದಿದ್ದರು. ಹೊರಗೆ ನೆರೆದಿದ್ದ ಕಾರ್ಯಕರ್ತರು ಸ್ಥಳದಲ್ಲಿಯೇ ಅಡುಗೆ ಮಾಡಿ ಊಟ ಮಾಡಿದರು. ಸಂಜೆ  ಜಾಮೀನು ದೊರೆತ ಬಳಿಕ ಅಭಿಮಾನಿಗಳು ಬಾಲಕೃಷ್ಣ ಅವರನ್ನು ಮೆರವಣಿಗೆ ಮಾಡಿದರು.

ಈ ಸಂದರ್ಭ ಮಾತನಾಡಿದ ಶಾಸಕ ‘ನಾವೇನು ತಪ್ಪು ಮಾಡಿಲ್ಲ. ಆದಾಗ್ಯೂ ದೂರು ದಾಖಲಾದ ಹಿನ್ನೆಲೆಯಲ್ಲಿ ಸ್ವಯಂಪ್ರೇರಣೆಯಿಂದ ನ್ಯಾಯಾಲಯಕ್ಕೆ ಶರಣಾಗಿದ್ದೇವೆ. ನಮಗೆಲ್ಲ ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸವಿದೆ’ ಎಂದು ನುಡಿದರು. 

ಮಾಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಚ್‌.ಎಲ್‌. ನಂದೀಶ್‌ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ ಆರೋಪದ ಮೇಲೆ ಬಾಲಕೃಷ್ಣ ಸಹಿತ 17 ಆರೋಪಿಗಳ ವಿರುದ್ಧ ಕುದೂರು ಪೊಲೀಸ್‌ ಠಾಣೆಯಲ್ಲಿ ಗುರುವಾರ ಸಂಜೆ ಪ್ರಕರಣ ದಾಖಲಾಗಿತ್ತು.

ಬಿಗಿ ಬಂದೋಬಸ್ತ್
ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂರಾರು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆಂದು ಸ್ಥಳದಲ್ಲಿ ನಿಯೋಜಿಸಲಾಗಿತ್ತು. ಜನರು ನ್ಯಾಯಾಲಯದ ಆವರಣ ಪ್ರವೇಶಿಸದಂತೆ ತಡೆಯಲು ಬ್ಯಾರಿಕೇಡ್‌ಗಳನ್ನು ಇಡಲಾಗಿತ್ತು. ಆದರೂ ಶಾಸಕ ಹೊರ ಬಂದ ಸಂದರ್ಭ ನೂಗುನುಗ್ಗಲು ಉಂಟಾಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಪರದಾಡಿದರು.

*
ನಾವು ಯಾವುದೇ ತಪ್ಪು ಮಾಡಿಲ್ಲ. ಆದಾಗ್ಯೂ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗದ ಮೇಲೆ ನಂಬಿಕೆ ಇಟ್ಟು ಶರಣಾಗಿದ್ದೇವೆ.
-ಎಚ್‌.ಸಿ. ಬಾಲಕೃಷ್ಣ,
ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT