ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರೀಫರು ಹೇಳಿದ್ದೆಲ್ಲ ಹಾಡಾಯಿತು

ಸಮ್ಮೇಳನಕ್ಕೆ ಅದ್ಧೂರಿ ತೆರೆ * 14 ನಿರ್ಣಯ ಅಂಗೀಕಾರ
Last Updated 21 ಜನವರಿ 2017, 7:52 IST
ಅಕ್ಷರ ಗಾತ್ರ

ಶಿಶುವಿನಹಾಳ ಸಂತ ಶರೀಫ ಶಿವಯೋಗಿ ವೇದಿಕೆ ಶಿಗ್ಗಾವಿ: ‘ಕನ್ನಡದ ಕಬೀರನೆಂದು ಖ್ಯಾತಿಯಾದ ಶಿಶುವಿಹಾಳ ಶರೀಫರು ತಮ್ಮ ತತ್ವಪದಗಳಿಂದ ಭವಮುಕ್ತಿ ಹೊಂದುವ ವಿಚಾರಗಳನ್ನು ಹೊಂದಿದ್ದರು. ಹೀಗಾಗಿ ಜನಮನದಲ್ಲಿ ಶಾಶ್ವತವಾಗಿ ಇಂದಿಗೂ ಉಳಿದುಕೊಂಡಿದ್ದಾರೆ’ ಎಂದು ಹಿರಿಯ ಸಾಹಿತಿ ಶಂಭು ಬಳಿಗಾರ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ  9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ ಹಾಗೂ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರರು.
‘ಶರೀಫರು ಬದುಕಿನ ಅವಧಿಯಲ್ಲಿ ಹೇಳಿದ್ದೆಲ್ಲ ಹಾಡಾಯಿತು. ನಡೆದಾಡಿರುವ ನೆಲ ಪುಣ್ಯಭೂಮಿಯಾಗಿದೆ. ಹೀಗಾಗಿ ಭಾವೈಕ್ಯದ ನಾಡು ಎಂದು ಜಗತ್ತಿನಲ್ಲಿ ಖ್ಯಾತಿ ಪಡೆದಿದೆ’ ಎಂದರು.

‘ಸಂಸಾರ ಎಂಬುದು ಸಮುದ್ರದಂತೆಯಿದ್ದು, ಸಂಸಾರದಲ್ಲಿ ಇರುವವರು ಹೊರಬರಬೇಕು ಎನ್ನುತ್ತಾರೆ. ಹೊರ ಇದ್ದರು ಒಳ ಹೋಗಬೇಕು ಎಂಬಾಸೆ ಸಹಜ. ಅದಕ್ಕೆ ಸಂಸಾರ ಎನ್ನುತ್ತಾರೆ’ ಎಂದರು.

‘ಸಾಹಿತಿಗಳಿಗೆ ಸಾಮಾಜಿಕ ಬದ್ಧತೆಬೇಕು. ಅನ್ಯಾಯ, ಭ್ರಷ್ಟಾಚಾರಗಳನ್ನು ತಡೆಯುವ ಸಾಮಾಜಿಕ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಮೂಡಬೇಕು’ ಎಂದರು.
ಸಮ್ಮೇಳನಾಧ್ಯಕ್ಷ ಡಾ.ಮಹೇಶ ಜೋಶಿ, ಶಾಸಕ ಬಸವರಾಜ ಬೊಮ್ಮಾಯಿ, ಮಾಜಿ ಸಂಸದ ಮಂಜುನಾಥ ಕುನ್ನೂರ, ವಿರಕ್ತಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಸಾಪ ಜಿಲ್ಲಾ ಅಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲ್ಲೂಕು ಘಟಕದ ಅಧ್ಯಕ್ಷ ಪ್ರೊ.ನಾಗರಾಜ ದ್ಯಾಮನಕೊಪ್ಪ, ಬಸವರಾಜ ಬಸರಿಕಟ್ಟಿ, ಶ್ರೀಕಾಂತ ದುಂಡಗೌಡ್ರ, ನಿಂಗಣ್ಣ ಚಾವಡಿ,ಶಂಕರಗೌಡ್ರ ಮತ್ತಿತರರು ಇದ್ದರು.

ಇದೇ ವೇಳೆ ಎಂ.ಎಂ.ಬನ್ನೂರ, ಎಂ.ಬಿ.ಹಲಗಣ್ಣವರ, ಆರ್‌.ಬಿ.ತೋಟದ, ಗೀತಕ್ಕಾ ಕಬ್ಬೂರ, ಬಿ.ಎಚ್‌. ಬಡ್ಡಿಯವರ, ಅರುಣಕುಮಾರ ಗುಡ್ಡನವರ, ಶಿವಕುಮಾರ ಹಾನಗಲ್, ಡಾ.ಡಿ.ಎನ್‌.ಮೂಲಿಮನಿ, ವಿಶ್ವನಾಥ ಹಾವಣಗ, ಎಂ.ಎಎಸ್‌.ಕೋರಿಶೆಟ್ಟರ, ಸಂಜಯ ಸುಣಗಾರ, ಪ್ರಕಾಶ ಶೆಟ್ಟಿ, ಕೆ.ಎಚ್‌.ಮರಿಗೌಡ್ರ, ಹ.ಮು.ನಾಯಕ, ನಜೀರ ಸವಣೂರ, ಬಸವರಾಜ ಶಿಗ್ಗಾವಿ, ಬಸವರಾಜ ಗೊಬ್ಬಿ, ಎಂ.ಎಂ.ಕುಲಕರ್ಣಿ, ಎಸ್‌.ಜಿ.ಕುಲಕರ್ಣಿ, ಶಂಕರ ಅರ್ಕಸಾಲಿ, ಮಹಾರುದ್ರಪ್ಪ ಇಟಗಿ, ಎಸ್‌.ಡಿ,ಬಡಿಗೇರ, ಗುರುರಾಜ ಹುಚ್ಚಣ್ಣನವರ ಅವರನ್ನು ಸನ್ಮಾನಿಸಲಾಯಿತು.

ಬೇಕಿರುವುದು ಜ್ಞಾನ, ಮಾರ್ಗದರ್ಶನ...
ಶಿಗ್ಗಾವಿ: ‘ರೈತರಿಗೆ ಬೇಕಾಗಿರುವುದು ಸರ್ಕಾರದ ಸಹಾಯವಲ್ಲ. ಅವರಿಗೆ ಬೇಕಾಗರುವುದು ಉತ್ತಮ ಜ್ಞಾನ ಮತ್ತು ಮಾರ್ಗದರ್ಶನ. ಜ್ಞಾನದ ಅರಿವು ಮೂಡಿಸಿದಾಗ ಮಾತ್ರ ತಾನಾಗಿಯೇ ಕೃಷಿ ಕ್ಷೇತ್ರ ಬೆಳವಣಿ ಯಾಗಲು ಸಾಧ್ಯವಿದೆ’ ಎಂದು ರೈತ ಶಿವಪುತ್ರಪ್ಪ ಎತ್ತಿನಮನಿ ನುಡಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕೃಷಿ ಸಂಸ್ಕೃತಿ ಗೋಷ್ಠಿ–4ರಲ್ಲಿ ಪಾಲ್ಗೊಂಡು ‘ತೋಟಗಾರಿಕೆ ಬೆಳೆಗಳು’ ಕುರಿತು ಮಾತನಾಡಿದರು.

‘ಅನ್ನದಾತ ಬಾಂಧವರು ರಾಸಾಯನಿಕ ಪದ್ಧತಿ ಬಿಟ್ಟು ಸಾವ ಯವ ಪದ್ಧತಿಯತ್ತ ಸಾಗಬೇಕಿದೆ. ಆ ಮೂಲಕ ಅಭಿವೃದ್ಧಿ ಪಥ ತುಳಿಯಬೇಕಿದೆ’ ಎಂದರು.
ಕೃಷಿ ವಿಜ್ಞಾನಿ ಡಾ.ಎಸ್‌.ಎಸ್‌. ದೇಸಾಯಿ ಮಾತನಾಡಿ, ‘ಜಗತ್ತಿಗೆ ಮಾದರಿಯಾದ ಭಾರತೀಯ ಕೃಷಿ ಕ್ಷೇತ್ರ ಇಂದು ಋತುಮಾನಕ್ಕೆ ತಕ್ಕಂತೆ ಮಳೆ–ಬೆಳೆ ಬಾರದೆ ಕೃಷಿ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ. ಕೇವಲ ಕೃಷಿ ಕ್ಷೇತ್ರ ಬಿಕ್ಕಟ್ಟಿಗೆ ಸಿಲುಕದೇ ಸಾಮಾಜಿಕ ಮೂಲ ಬಿಕ್ಕಟ್ಟಿಗೂ ಕಾರಣವಾಗುತ್ತಿದೆ’ ಎಂದರು.

‘ಜಾನುವಾರುಗಳೇ ಈ ಕೃಷಿ ಕ್ಷೇತ್ರದ ಪ್ರಮುಖ ಆಧಾರ ಸ್ತಂಭ. ಆದರೆ, ಕೃಷಿಯಲ್ಲಿ ಜಾನುವಾರುಗಳ ಬಳಕೆ ಕಡಿಮೆಯಾಗುತ್ತಿದೆ. ಹೀಗಾಗಿ ಕೃಷಿ ಬಲ ಕಳೆದುಕೊಳ್ಳುತ್ತಿದೆ. ಚಿಕ್ಕ ಹಿಡುವಳಿದಾರರಿಂದ ಭೂಮಿ ತುಂಡಾಗಿ ಹೊಸ ತಂತ್ರಜ್ಞಾನ ಬಳಕೆಯಲ್ಲಿ ಹಿನ್ನಡೆಯಾಗಿದೆ’ ಎಂದು ಅಭಿಪ್ರಾಯಪಟ್ಟರು.
ಮುಂಡರಗಿಯ ಪ್ರಗತಿಪರ ರೈತ ವೈ.ಎನ್‌.ಗೌಡರ ‘ಕೃಷಿ ಕ್ಷೇತ್ರದ ಬಿಕ್ಕಟ್ಟುಗಳು’ ಕುರಿತು ವಿಷಯ ಮಂಡಿಸಿದರು.

‘ರೈತ ಬೆನ್ನೆಲಬು ಎಂದು ಹೇಳುವ ರಾಜಕಾರಣಿಗಳಿಂದಲೇ ಆತನ ಬೆನ್ನು ಮುರಿಯುವ ಕೆಲಸ ನಡೆದಿದೆ. ಹೀಗಾಗಿ ಆತನ ಪರಿಸ್ಥಿತಿ ಸುಧಾರಿಸುತ್ತಿಲ್ಲ’ ಎಂದು ವಿಷಾದಿಸಿದರು.
ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿದರು.

ಬಮ್ಮನಹಳ್ಳಿ ಕೃಷಿ ಅಧಿಕಾರಿ ಚನ್ನಪ್ಪ ಅಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರಾದ ರಾಮಣ್ಣ ಸಣ್ಮನಿ, ಗದಿಗೆಪ್ಪ ತಾರಿಹಾಳ, ಮೈಲಾರೆಪ್ಪ ತಳಳ್ಳಿ, ನಿಂಗಪ್ಪ ಕಮ್ಮಾರ, ರಮಾಕಾಂತ ಭಟ್ಟ, ಮೌನೇಶ ಬಡಿಗೇರ, ಈಶ್ವರಗೌಡ ಪಾಟೀಲ, ರಾಮಣ್ಣ ತಳ್ಳಳ್ಳಿ ಮತ್ತಿತರರು ಇದ್ದರು. ನಾಗರಾಜ ಅಗಡಿ ಸ್ವಾಗತಿಸಿ ದರು. ಅಶೋಕ ಹಳ್ಳಿ ನಿರೂಪಿಸಿ ದರು.ಕೆ.ಬಸಣ್ಣ ವಂದಿಸಿದರು.

ನಿರ್ಣಯಗಳು ...
* ­ಶಿಶುವಿನಹಾಳ ಶರೀಫರ ಕೇತ್ರವನ್ನು ರಾಷ್ಟ್ರೀಯ ಭಾವೈಖ್ಯತಾ ಕೇಂದ್ರವನ್ನಾಗಿ ಮಾಡಬೇಕು.

* ­ಕನಕದಾಸರ ಜನ್ಮಸ್ಥಳ ಬಾಡ ಸಮಗ್ರ ದಾಸ ಸಾಹಿತ್ಯದ ರಾಷ್ಟ್ರೀಯ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನಾಗಿ ಮಾಡುವುದು.
* ­ಅಬಲೂರ-ಮಾಸೂರಲ್ಲಿ ಸರ್ವಜ್ಞನ ಅಧ್ಯಯನ ಕೇಂದ್ರವನ್ನಾಗಿ ನಿರ್ಮಿಸುವುದು.
* ­ರನ್ನಕವಿ ವಿದ್ಯಾಬ್ಯಾಸ ಮಾಡಿದ ಬಂಕಾಪುರವನ್ನು ರನ್ನಮಯ್ಯ ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡುವುದು.
* ­ಬೇಡ್ತಿ-–ವರದಾ ನದಿ ಜೋಡಣೆ ಕಾರ್ಯ ಕೈಗೊಳ್ಳುವುದು.
* ­ತುಂಗಾ ಮೆಲ್ದಂಡೆ ಯೋಜನೆಯಲ್ಲಿ ತೀರ್ಥಹಳ್ಳಿ ಬಳಿ  ಮಾಲತಿ ಡ್ಯಾಂ ನಿರ್ಮಿಸುವುದು.
* ­ಬ್ಯಾಡಗಿಯಲ್ಲಿ ಸ್ಪಾಯಿಸ್ ಮಂಡಳಿ ನಿರ್ಮಾಣ ಮಾಡುವುದು.
* ­ಧಾರವಾಡದಲ್ಲಿ ಸ್ಥಾಪನೆಯಾಗಿರುವ ಐಐಟಿಯಲ್ಲಿ ಕರ್ನಾಟಕದವರಿಗೆ ಶೇ.25 ರಷ್ಟು ಸ್ಥಾನಗಳನ್ನು ಮೀಸಲಿಡಬೇಕು.
* ­ಕರ್ನಾಟಕದಲ್ಲಿ ರಾಜ್ಯ ಭಾಷೆಯಾದ ಕನ್ನಡದಲ್ಲಿ 1ರಿಂದ 10ನೇ ತರಗತಿವರೆಗೆ ಕನ್ನಡ ಶಿಕ್ಷಣ ಕಡ್ಡಾಯವಾಗಲಿ.
* ­ಹಾವೇರಿಯಲ್ಲಿ ಮುಂದಿನ ವಿಶ್ವ ಕನ್ನಡ ಸಮ್ಮೇಳನ ನಡೆಯಲಿ.
* ­ರಾಜ್ಯದಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕುವ ಕೈಗಾರಿಕೆಗಳು ಹೆಚ್ಚು ಹೆಚ್ಚಾಗಿ ಸ್ಥಾಪನೆಗೆ ಸರ್ಕಾರ ಕ್ರಮಕೈಗೊಳ್ಳಬೇಕು.
* ­ರಾಜ್ಯದ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರ ಕೃಷಿ ಸಾಲ ಮನ್ನಾ ಮಾಡಲು ಸರ್ಕಾರಗಳು ಕ್ರಮಕೈಗೊಳ್ಳಬೇಕು.
* ­ಹಿರೇಕೆರೂರು ತಾಲ್ಲೂಕಿನ ಶ್ರೀದುಗಾದೇವಿ ಕೆರೆಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಳಿಸಬೇಕು. 
* ­ಹಿರೇಕೆರೂರು ತಾಲ್ಲೂಕಿನ ಮದಗ ಕೆಂಚಮ್ಮ ಮದಗ ಕೆರೆ ಅಭಿವೃದ್ಧಿಪಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT