ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗದು ರಹಿತ ಅರ್ಥವ್ಯವಸ್ಥೆಯತ್ತ ವಂದಾರಗುಪ್ಪೆ

ಜಿಲ್ಲೆಯಲ್ಲಿ ಮೊದಲ ಪ್ರಯತ್ನ: ಬ್ಯಾಂಕ್ ಆಫ್‌ ಬರೋಡ ನೇತೃತ್ವ
Last Updated 21 ಜನವರಿ 2017, 7:58 IST
ಅಕ್ಷರ ಗಾತ್ರ

ರಾಮನಗರ: ಈ ಗ್ರಾಮದಲ್ಲಿನ ವೃದ್ಧರು ತಮ್ಮ ಪಿಂಚಣಿಗಾಗಿ ಬ್ಯಾಂಕಿನ ಮುಂದೆ ಅಲೆಯಬೇಕಿಲ್ಲ. ಹಾಲು ಉತ್ಪಾದಕರು ಪಾಸ್‌ಬುಕ್‌ ಹಿಡಿದು ಸಾಲು ನಿಲ್ಲಬೇಕಿಲ್ಲ. ಬದಲಾಗಿ ಹಣವೇ ಅವರ ಮನೆಯ ಬಾಗಿಲ ಮುಂದೆ ಬರುತ್ತಿದೆ!

ಹೌದು! ಜಿಲ್ಲೆಯ ಮೊದಲ ‘ನಗದು ರಹಿತ ಗ್ರಾಮ’ ಎಂದು ಘೋಷಿಸಿಕೊಂಡಿರುವ ಚನ್ನಪಟ್ಟಣ ತಾಲ್ಲೂಕಿನ ವಂದಾರಗುಪ್ಪೆಯಲ್ಲಿ ಬ್ಯಾಂಕಿಂಗ್‌ ಚಟುವಟಿಕೆಗಳು ಕ್ರಮೇಣ ಗರಿಗೆದರತೊಡಗಿವೆ. ಸರ್ಕಾರಗಳ ನಗದು ರಹಿತ ವಹಿವಾಟು ಪರಿಕಲ್ಪನೆಯನ್ನು ಉತ್ತೇಜಿಸುವ ಸಲುವಾಗಿ ಈ ಗ್ರಾಮವನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ಇದೇ ತಿಂಗಳ 12ರಿಂದ ಈ ಚಟುವಟಿಕೆಗೆ ಚಾಲನೆ ದೊರೆತಿದೆ. ಹಣದ ಬಳಕೆಯನ್ನು ತಗ್ಗಿಸಿ ಆದಷ್ಟೂ ‘ಕ್ಯಾಶ್‌ಲೆಸ್’ ವಹಿವಾಟು ನಡೆಸಲು ಜನರನ್ನು ಪ್ರೇರೇಪಿಸಲಾಗುತ್ತಿದೆ.

ವಂದಾರಗುಪ್ಪೆಯಲ್ಲಿರುವ ಬ್ಯಾಂಕ್‌ ಆಫ್ ಬರೋಡ ಶಾಖೆಯು ಈ ನಗದು ರಹಿತ ವಹಿವಾಟಿನ ಹೊಣೆ ಹೊತ್ತಿದೆ. ಇದಕ್ಕಾಗಿ ಸುಮಾರು 10 ಮಿನಿ ಸ್ವೈಪಿಂಗ್‌ ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಈ ಪೈಕಿ ಈಗಾಗಲೇ ನಾಲ್ಕು ಯಂತ್ರಗಳನ್ನು ಕಾರ್ಯಾಚರಣೆಗೆ ಒದಗಿಸಲಾಗಿದೆ.

ಇದಕ್ಕಾಗಿ ಮೂವರು ಅರೆಕಾಲಿಕ ಉದ್ಯೋಗಿಗಳ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ, ಈ ಯಂತಹಿಡಿದು ಮನೆಮನೆಗೆ ತೆರಳುವ ಈ ಸಿಬ್ಬಂದಿಯು ಜನರಿಗೆ ತಾವಿರುವಲ್ಲಿಯೇ ಬ್ಯಾಂಕಿಂಗ್‌ ಸೇವೆ ಒದಗಿಸುತ್ತಿದ್ದಾರೆ.

ಏನೇನು ಸೇವೆ ಲಭ್ಯ: ಗ್ರಾಹಕರ ಆಧಾರ್‌ ಸಂಖ್ಯೆಯನ್ನು ಬಳಸಿ ಅವರ ಮನೆಯಲ್ಲಿಯೇ ಬ್ಯಾಂಕ್‌ ಖಾತೆಗಳನ್ನು ತೆರೆದು ಕೊಡಲಾಗುತ್ತಿದೆ. ಇದಲ್ಲದೆ ಸರ್ಕಾರದ ವಿವಿಧ ಪಿಂಚಣಿ ಯೋಜನೆ ಫಲಾನುಭವಿಗಳನ್ನು ಅವರ ಬ್ಯಾಂಕ್‌ ಖಾತೆ ಜೋಡಿಸುವುದು, ಉದ್ಯೋಗ ಖಾತ್ರಿ ಫಲಾನುಭವಿಗಳಿಗೆ ವೇತನ ... ಹೀಗೆ ಹತ್ತು ಹಲವು ವ್ಯವಹಾರಗಳನ್ನು ನಗದು ರಹಿತವಾಗಿ ನಡೆಸುವ ಪ್ರಯತ್ನ ನಡೆದಿದೆ.

ಈ ಸ್ವೈಪಿಂಗ್‌ ಯಂತ್ರಗಳಿಗೆ ಬಯೋಮೆಟ್ರಿಕ್ ವ್ಯವಸ್ಥೆ ಅಳವಡಿಸಲಾಗಿದೆ. ಇದರಿಂದ ಗ್ರಾಹಕರು ಪಾಸ್‌ ಬುಕ್‌ನ ಅಗತ್ಯ ಇಲ್ಲದೆಯೇ ತಮ್ಮ ಬೆರಳಚ್ಚು ಒತ್ತಿ ಆಧಾರ್‌ ಸಂಖ್ಯೆ ನಮೂದಿಸಿಯೇ ಹಣ ಪಡೆಯುವುದು ಇಲ್ಲವೇ ಕಟ್ಟುವುದನ್ನು ಮಾಡಬಹುದಾಗಿದೆ. ಇಲ್ಲವೇ ಡೆಬಿಟ್‌ ಕಾರ್ಡ್‌ ಅನ್ನು ಬಳಸಿ ವ್ಯವಹರಿಸಬಹುದಾಗಿದೆ.

ಸದ್ಯ ಈ ಗ್ರಾಮವೊಂದರಲ್ಲಿಯೇ ಈ ಯಂತ್ರಗಳ ಮೂಲಕ ನಿತ್ಯ ಸರಾಸರಿ 30–40 ವ್ಯವಹಾರ  ನಡೆಯುತ್ತಿವೆ. 3–4 ಖಾತೆಗಳು ಸೇರ್ಪಡೆಯಾಗುತ್ತಿವೆ. ಅರೆಕಾಲಿಕ ಉದ್ಯೋಗಿಗಳಾದ ಶಕುಂತಲಾ, ಶೋಭಾ ಹಾಗೂ ಶ್ರುತಿ ಮನೆಮನೆಗೆ ಈ ಸೇವೆಯನ್ನು ತಲುಪಿಸುವಲ್ಲಿ ನಿರತರಾಗಿದ್ದಾರೆ.

ಚಿಲ್ಲರೆ ವ್ಯಾಪಾರಕ್ಕೂ ಮಶೀನ್‌: ಬ್ಯಾಂಕಿಂಗ್ ಪ್ರತಿನಿಧಿಗಳ ಜೊತೆಗೆ ಚಿಲ್ಲರೆ ಅಂಗಡಿಗಳಿಗೂ ಸ್ವೈಪಿಂಗ್‌ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಗ್ರಾಹಕರು ₹ 50 ಮೇಲ್ಪಟ್ಟ ಖರೀದಿಗೆ ಹಣದ ಬದಲಿಗೆ ಈ ಯಂತ್ರಗಳ ಮೂಲಕವೇ ವ್ಯವಹರಿಸಲು ಅವಕಾಶವಿದೆ.

ಬ್ಯಾಂಕ್‌ ಆಫ್‌ ಬರೋಡ ವಂದಾರಗುಪ್ಪೆ ಶಾಖೆಯಲ್ಲಿ ಸುಮಾರು 9ಸಾವಿರ ಖಾತೆಗಳಿವೆ. ಇದರಲ್ಲಿ ಸುಮಾರು 7500 ಖಾತೆಗಳು ಸಕ್ರಿಯವಾಗಿವೆ. ಈ ಎಲ್ಲರಿಗೂ ನಗದು ರಹಿತ ಸೇವೆಯನ್ನು ತಲುಪಿಸುವ ಗುರಿ ಹೊಂದಲಾಗಿದೆ ಎನ್ನುತ್ತಾರೆ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ರಮೇಶ್.

‘ಸದ್ಯ ಯೋಜನೆಯು ಪ್ರಾಯೋಗಿಕ ಹಂತದಲ್ಲಿದೆ. ಮುಂದೆ ಇದೇ ಗ್ರಾಮ ಪಂಚಾಯಿತಿಯ ಇನ್ನಷ್ಟು ಹಳ್ಳಿಗಳಿಗೆ ಈ ಸೇವೆಯನ್ನು ವಿಸ್ತರಿಸಲು ಚಿಂತನೆ ನಡೆದಿದೆ’ ಎಂದು ಅವರು ತಿಳಿಸಿದರು.

*
ವಂದಾರಗುಪ್ಪೆಯು ಇದೇ ತಿಂಗಳ 12ರಿಂದ ’ನಗದು ರಹಿತ ಗ್ರಾಮ’ ಎಂದು ಬದಲಾಗಿದೆ. ನೋಟುಗಳ ವಿನಿಯೋಗವಿಲ್ಲದೆ ಆದಷ್ಟೂ ವ್ಯವಹಾರ ನಡೆಸಲು ಗ್ರಾಹಕರನ್ನು ಉತ್ತೇಜಿಸಲಾಗುತ್ತಿದೆ.
-ರಮೇಶ್‌,
ಸಹಾಯಕ ವ್ಯವಸ್ಥಾಪಕ, ಬ್ಯಾಂಕ್‌ ಆಫ್‌ ಬರೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT