ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಲೆಕ್ಕ ಪರಿಶೋಧಕರಿಗೆ ವಿಪುಲ ಅವಕಾಶ’

Last Updated 21 ಜನವರಿ 2017, 8:01 IST
ಅಕ್ಷರ ಗಾತ್ರ

ನಿಪ್ಪಾಣಿ: ‘ದೇಶದಲ್ಲಿ ಲೆಕ್ಕಪರಿಶೋಧಕರಿಗೆ ಹೆಚ್ಚಿನ ಬೇಡಿಕೆ ಇದ್ದು ಬರುವ 2020ರ ವೇಳೆಗೆ ಇನ್ನೂ 2.5 ಲಕ್ಷದಷ್ಟು ಚಾರ್ಟರ್ಡ್‌ ಅಕೌಂಟಂಟ್‌ಗಳ ಅವಶ್ಯಕತೆ ಇರುವುದರಿಂದ ವಾಣಿಜ್ಯ ವಿದ್ಯಾರ್ಥಿಗಳಿಗೆ ಈ ದಿಶೆಯಲ್ಲಿ ವಿಪುಲ ಅವಕಾಶಗಳಿವೆ’ ಎಂದು ಬೆಂಗಳೂರಿನ ದಕ್ಷಿಣ ಭಾರತದ ಲೆಕ್ಕಪರಿಶೋಧಕರ ವಿದ್ಯಾರ್ಥಿ ಘಟಕದ ಕಾರ್ಯಾಧ್ಯಕ್ಷ ರವಿಂದ್ರ ಕೋರೆ ಹೇಳಿದರು.

ಕೆ.ಎಲ್‌.ಇ. ಸಂಸ್ಥೆಯ ಸ್ಥಳೀಯ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ದಕ್ಷಿಣ ಭಾರತದ ಲೆಕ್ಕಪರಿಶೋಧಕರ ವಿದ್ಯಾರ್ಥಿ ಘಟಕ ಮತ್ತು ದಕ್ಷಿಣ ಭಾರತದ ಲೆಕ್ಕ ಪರಿಶೋಧಕರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ವಾಣಿಜ್ಯ ವಿದ್ಯಾರ್ಥಿಗಳಿಗೆ ಲೆಕ್ಕಪರಿಶೋಧನೆ ಕ್ಷೇತ್ರದಲ್ಲಿನ ಅವಕಾಶಗಳು ಮತ್ತು ಪೂರ್ವತಯಾರಿ’ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿರಂತರ ಪರಿಶ್ರಮ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಮುಂದುವರೆದಲ್ಲಿ ಸಿ.ಎ. ಪರೀಕ್ಷೆಯನ್ನು ಸುಲಭವಾಗಿ ಪಾಸಾಗಬಹುದು. ಪ್ರತಿಯೊಬ್ಬರಲ್ಲಿ ಸಾಮರ್ಥ್ಯ ಇದೆ. ಆತ್ಮವಿಶ್ವಾಸದ ಕೊರತೆಯಿಂದ ನಾವು ಬೇರೆ ಅವಕಾಶಗಳನ್ನು ಅರಸುತ್ತ ಮುನ್ನಡೆಯುತ್ತೇವೆ. ಇವೆಲ್ಲವುಗಳಿಂದ ಸಿ.ಎ. ಸುಲಭ ಮತ್ತು ಸರಳ ಎಂದರು.

ಬೆಳಗಾವಿಯ ಲೆಕ್ಕಪರಿಶೋಧಕ ಗಣೇಶ ಶಾಂಡಗೆ ಮಾತನಾಡಿ ಕೇವಲ ಅತ್ಯಧಿಕ ಅಂಕಗಳನ್ನು ಪಡೆದವರು ಮಾತ್ರ ಸಿ.ಎ. ಪರೀಕ್ಷೆ ಪಾಸಾಗುವರೆಂಬ ತಪ್ಪು ಕಲ್ಪನೆ ಬಹಳಷ್ಟು ವಿದ್ಯಾರ್ಥಿಗಳಲ್ಲಿದೆ. ಸಾಧಾರಣ ವಿದ್ಯಾರ್ಥಿಗಳೂ ಸಹ ದೃಢ ಮನಸ್ಸು ಮತ್ತು ನಿಯಮಿತ ಅಧ್ಯಯನದಿಂದ ಇಲ್ಲಿ ಯಶಸ್ವಿಯಾದ ಅನೇಕ ಉದಾಹರಣೆಗಳಿವೆ. ಯಾರೂ ಕೀಳರಿಮೆ ಬೆಳೆಸಿಕೊಳ್ಳದೆ ನಿರ್ದಿಷ್ಟ ಗುರಿಯೊಂದಿಗೆ ಮುನ್ನಡೆದು ಸಿ.ಎ. ಪರೀಕ್ಷೆಯಲ್ಲಿ ಯಶಸ್ವಿಯಾಗಬೇಕೆಂದು ಸಲಹೆ ನೀಡಿದರು.

ದಕ್ಷಿಣ ಭಾರತದ ಲೆಕ್ಕ ಪರಿಶೋಧಕರ ಸಂಘದ ಅಧ್ಯಕ್ಷ ರಾಘವೇಂದ್ರ ಪುರಾಣಿಕ, ಕಾರ್ಯದರ್ಶಿ ನಾಗಪ್ಪಾ ನೇಸೂರ, ಬೆಂಗಳೂರಿನ ಲೆಕ್ಕಪರಿಶೋಧಕ ಶಿವಪ್ರಕಾಶ್‌ ವಿರಕ್ತಮಠ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಪ್ರಾಚಾರ್ಯ ಡಾ. ಎಂ.ಬಿ. ಕೋಥಳೆ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ಸಂಘದ ಕಾರ್ಯಾಧ್ಯಕ್ಷ ಪ್ರೊ. ಸಿ.ವಿ. ಕೊಪ್ಪದ ಸ್ವಾಗತಿಸಿದರು. ಪ್ರೊ. ಭಕ್ತಿ ಕಮತೆ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎಂ. ಹಿರೇಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT