ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾರತಮ್ಯ ಇರೋವರೆಗೂ ಮೀಸಲಾತಿ: ಸಂಸದ ಮಲ್ಲಿಕಾರ್ಜುನ ಖರ್ಗೆ

Last Updated 21 ಜನವರಿ 2017, 9:46 IST
ಅಕ್ಷರ ಗಾತ್ರ

ಕಲಬುರ್ಗಿ: ‘ದೇಶದಲ್ಲಿ ಎಲ್ಲಿಯವರೆಗೂ ತಾರತಮ್ಯ ಮತ್ತು ಗೊಡ್ಡು ವಿಚಾರವಾದಗಳು ಇರುತ್ತವೆಯೋ ಅಲ್ಲಿಯವರೆಗೆ ಮೀಸಲಾತಿಯೂ ಮುಂದುವರೆಯುತ್ತದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭವಾದ ಕನ್ನಡ ದಲಿತ ಸಾಹಿತ್ಯ ಕುರಿತ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಮೀಸಲಾತಿ 10 ವರ್ಷ ಮಾತ್ರ ಇರಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ ಎಂದು ಆರ್‌ಎಸ್‌ಎಸ್‌ ಪ್ರಮುಖರಾದ ಮೋಹನ್‌ ಭಾಗವತ್‌ ಮತ್ತು ಅವರ ಶಿಷ್ಯ ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿದ್ದರು. ಮನಮೋಹನ್‌ ವೈದ್ಯ ಕೂಡಾ ಈಗ ಹೇಳಿದ್ದಾರೆ. ಸಂವಿಧಾನ ಜಾರಿಯಾದ 10 ವರ್ಷದಲ್ಲಿ ತಾರತಮ್ಯ ಅಳಿದುಹೋಗಿದ್ದರೆ, ಸಮಾಜದ ಕೆಳವರ್ಗಕ್ಕೆ ಉದ್ಯೋಗಗಳು ದೊರಕಿದ್ದರೆ ಮೀಸಲಾತಿ ಕೈ ಬಿಡಬಹುದಿತ್ತು. ಮೀಸಲಾತಿ ಬಗ್ಗೆ ಮಾತನಾಡುವವರು ಸಂವಿಧಾನದ ಆಶಯದಂತೆ ಸಮಬಾಳು–ಸಮಪಾಲು ಅನುಷ್ಠಾನ ಮಾಡಲು ಮುಂದಾಗಬೇಕು ಎಂದು ತಿವಿದರು.

ದೇಶದ ಜನರು ಇಂಥ ಸನ್ನಿವೇಶದಲ್ಲಿ ಒಗ್ಗೂಡಿ ಪ್ರಜಾಪ್ರಭುತ್ವ ರಕ್ಷಿಸಲು ಮುಂದಾಗಬೇಕು. ಸಂವಿಧಾನ ರಕ್ಷಣೆಯಾದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿದೆ. ಎಲ್ಲ ಮಾತಿಗೂ ಜನರು ಚಪ್ಪಾಳೆ ಹೊಡೆದು ಹೊಡೆದು ಮೋದಿ ಅವರನ್ನು ಪ್ರಧಾನಿ ಮಾಡಿದ್ದಾರೆ. ಹೀಗಾಗಿ ಸಮಾಜದ ಬುದ್ಧಿಜೀವಿಗಳು ಎಚ್ಚೆತ್ತುಕೊಳ್ಳಬೇಕು. ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಮಾಡಬೇಕು ಎಂದರು.

ಮೀಸಲಾತಿ ಪರಾಮರ್ಶೆ ಅಗತ್ಯ ಎಂದು ರಾಜಸ್ತಾನದ ಜೈಪುರದಲ್ಲಿ ಆರ್‌ಎಸ್‌ಎಸ್‌ ಪ್ರಮುಖ ಮನಮೋಹನ್‌ ವೈದ್ಯ ಅವರು ಶುಕ್ರವಾರ ನೀಡಿದ್ದ ಹೇಳಿಕೆಯನ್ನು ಪ್ರಸ್ತಾಪಿಸಿ ಖರ್ಗೆ ಅವರು ಈ ಮಾತುಗಳನ್ನು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT