ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾದಿ, ಗಾಂಧಿ ಹಾಗೂ ಪೇಟೆಯ ಗಣಿತ!

ಖಾದಿ ಮಾರುಕಟ್ಟೆಯಲ್ಲೀಗ ಸೌಂದರ್ಯ ಸಮೀಕ್ಷೆ ಹಾಗೂ ತಾರುಣ್ಯದ ರಂಗು
Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ
ಸರಳತೆ, ದೇಸಿತನ ಹಾಗೂ ಸ್ವಾವಲಂಬನೆಯ ಸಂಕೇತ ಎನ್ನುವ ಹಿರಿಮೆ ಖಾದಿಯದು. ಈ ಖಾದಿಗೆ ಫ್ಯಾಷನ್‌ ಕಸಿಯನ್ನು ಮಾಡುವ ಮೂಲಕ ‘ಖಾದಿ ಮಾರುಕಟ್ಟೆ’ಯನ್ನು ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿವೆ. ಖಾದಿ ಉಡುಪಿನ ಮಾರುಕಟ್ಟೆಯಲ್ಲೀಗ ಸಾವಿರಾರು ಕೋಟಿ ರೂಪಾಯಿಗಳ ವಹಿವಾಟು ನಡೆಯುತ್ತಿದೆ. ಖಾದಿಯ ಜೊತೆಗೆ ತಳಕು ಹಾಕಿಕೊಂಡಿರುವ ಗಾಂಧಿಯ ಆದರ್ಶ ಹಾಗೂ ಸ್ವಾತಂತ್ರ್ಯ ಚಳವಳಿಯ ನೆನಪುಗಳು ಎಲ್ಲ ಕಾಲಕ್ಕೂ ಅಗತ್ಯವಾದ ನೈತಿಕತೆಯನ್ನೂ ಸೂಚಿಸುವಂತಿವೆ. ಚರಕದ ಹಿಂದೆ ಯಾರು ಕುಳಿತರೂ ಖಾದಿಯ ಹಿಂದಿನ ಗಾಂಧಿಯ ನೆನಪು ಸುಲಭವಾಗಿ ಮಾಸುವುದಿಲ್ಲ.
 
**
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಯುವಕರ ಅಚ್ಚುಮೆಚ್ಚಿನ ಬಟ್ಟೆಯಾಗಿದ್ದ ಖಾದಿ ಈಗ ಮತ್ತೆ ಯುವಜನರ ಮನ ಸೆಳೆದಿದೆ. ಆಗ ಅದು ದೇಶಪ್ರೇಮದ ದ್ಯೋತಕವಾಗಿತ್ತು. ಈಗ ಪ್ಯಾಷನ್ ಆಗಿದೆ, ಫ್ಯಾಷನ್ನೂ ಆಗಿದೆ. ನಮ್ಮ ನಟ, ನಟಿಯರೂ ಖಾದಿ ತೊಟ್ಟು ರ್‍ಯಾಂಪ್‌ಗಳ ಮೇಲೆ ಮಾರ್ಜಾಲ ನಡಿಗೆ ನಡೆಸಿದ್ದಾರೆ. ಆಗ ಗ್ರಾಮೀಣ ಭಾರತದಲ್ಲಿ ಹೆಚ್ಚು ಪ್ರಚಲಿತವಾಗಿದ್ದ ಖಾದಿ ಈಗ ನಗರಗಳಲ್ಲಿಯೂ ಜನಪ್ರಿಯವಾಗಿದೆ. ಆಗ ಖಾದಿ ಎಂಬುದು ಜೀವನ ಮಾರ್ಗವಾಗಿತ್ತು. ಈಗ ಬೃಹತ್ ನಗರಗಳ ಹಾದಿಬೀದಿಯಲ್ಲಿಯೂ ಅದೊಂದು ಹೊಸ ವಿನ್ಯಾಸದ ಬಿಕರಿ ಬಟ್ಟೆಯಾಗಿದೆ.
 
ಖಾದಿ ಈಗ ವಿಮಾನದಲ್ಲಿಯೂ ಮಾನ್ಯ. ರೈಲಿನಲ್ಲಿಯೂ ಉಪಯೋಗ. ಭಾರತದ ಅಂತಃಶಕ್ತಿಯಾಗಿದ್ದ ಖಾದಿ ಈಗ ಸೀಮೋಲ್ಲಂಘನ ಮಾಡಿ ವಿದೇಶಕ್ಕೂ ಹಾರಿದೆ. ಹೊಸ ಹೊಸ ವಿನ್ಯಾಸದಲ್ಲಿ ಖಾದಿ ಬಟ್ಟೆಗಳು ಈಗ ಎಲ್ಲೆಡೆ ದೊರೆಯುತ್ತವೆ. ಅಣ್ಣಾ ಹಜಾರೆ ಮತ್ತು ‘ಆಮ್ ಆದ್ಮಿ’ ಪಕ್ಷದ ಪ್ರಭಾವದಿಂದ ಖಾದಿ ಟೊಪ್ಪಿಗೆಗೆ ಈಗ ಮತ್ತೆ ಬೆಲೆ ಬಂದಿದೆ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ದೇಶದ ಎಲ್ಲರೂ ಕನಿಷ್ಠ ಒಂದು ದಿನವಾದರೂ ಖಾದಿಯನ್ನು ಧರಿಸಬೇಕು’ ಎಂದು ಕರೆಕೊಟ್ಟ ಮೇಲೆ ಖಾದಿಯ ಖದರ್ ಬದಲಾಗಿದೆ. ಬಾಲಿವುಡ್‌ನ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಖಾದಿಯ ರಾಯಭಾರಿಯಾದ ನಂತರ ಖಾದಿ ಹೊಸ ಟ್ರೆಂಡ್ ಆಗಿದೆ. ಖಾದಿ ತೊಟ್ಟು ಸೆಲ್ಫಿ ತೆಗೆದುಕೊಳ್ಳುವ ಮಹಾಶಯರಿಗೆ ಈಗ ಕಡಿಮೆ ಏನಿಲ್ಲ. ‘ಫೇಸ್‌ಬುಕ್’ನಲ್ಲಿಯೂ ಖಾದಿಯ ಚಿತ್ರಗಳು ರಾರಾಜಿಸುತ್ತವೆ.
 
‘ಅಯ್ಯೋ ಖಾದಿ ಎಂದರೆ ಅದೆಲ್ಲ ಹಳೆ ಟ್ರೆಂಡ್’ ಎಂದು ಮೂಗು ಮುರಿಯುತ್ತಿದ್ದ ಯುವಕ ಯುವತಿಯರೂ ಈಗ ಖಾದಿಗೆ ಮನಸೋತಿದ್ದಾರೆ. ದೇಶದ ಪ್ರಮುಖ ವಸ್ತ್ರ ವಿನ್ಯಾಸಗಾರರು ಸಹ ಖಾದಿ ಬಟ್ಟೆಗಳ ಹೊಸ ಹೊಸ ವಿನ್ಯಾಸವನ್ನು ಪರಿಚಯಿಸುತ್ತಿದ್ದಾರೆ. ಖ್ಯಾತ ವಿನ್ಯಾಸಗಾರರಾದ ರಿತುಕುಮಾರ್, ಬಿಬಿರಸಲ್, ಅಬ್ರಹಾಂ ಥಾಕರೆ, ಹೇಮಂತ್ ತ್ರಿವೇದಿ, ರೋಹಿತ್ ಬಾಲ್, ಅನಾಮಿಕಾ ಖನ್ನಾ, ರಾಜೇಶ್ ಪ್ರತಾಪ್ ಸಿಂಗ್ ಮುಂತಾದವರು ಖಾದಿಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ಯತ್ನಿಸುತ್ತಿದ್ದಾರೆ. ಖಾದಿ ಫ್ಯಾಷನ್ ಷೋಗಳೂ ಬೃಹತ್ ನಗರಗಳಲ್ಲಿ ನಡೆಯುತ್ತಿವೆ. ಈಗಿನ ಯುವಜನರ ಮನಕ್ಕೊಪ್ಪುವ ವಿನ್ಯಾಸದಲ್ಲಿ ಖಾದಿಯನ್ನು ಪರಿಚಯಿಸಲಾಗುತ್ತಿದೆ. ಇದರಿಂದ ಖಾದಿ ಈಗ ಹೊಸ ಉದ್ಯಮವಾಗಿ ಬೆಳೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ಖಾದಿ ಉದ್ಯಮಕ್ಕೆ ಸಾಕಷ್ಟು ಉತ್ತೇಜನ ನೀಡುತ್ತಿವೆ. ಖಾದಿ ಮತ್ತು ರೇಷ್ಮೆ ಎಂದೆಂದಿಗೂ ಬೆಲೆ ಕಳೆದುಕೊಳ್ಳದ ಬಟ್ಟೆಗಳು. ಇವು ಎಂದೂ ಮುಕ್ಕಾಗದ ಬಟ್ಟೆಗಳು ಎಂದೂ ಪ್ರಖ್ಯಾತಿ ಪಡೆದಿವೆ.
 
ಮಾರುಕಟ್ಟೆಯ ಚೌಕಟ್ಟು ವಿಸ್ತಾರ
ಕಳೆದ ವರ್ಷ 1100 ಕೋಟಿ ರೂಪಾಯಿಗಳಷ್ಟು ವಹಿವಾಟು ನಡೆಸಿದ್ದ ಖಾದಿ ಉದ್ಯಮ ಈ ವರ್ಷ 2 ಸಾವಿರ ಕೋಟಿ ರೂಪಾಯಿ ವಹಿವಾಟನ್ನು ಮೀರುವ ಗುರಿ ಹೊಂದಿದೆ. ದೇಶದಲ್ಲಿರುವ ಖಾದಿ ಭಂಡಾರಗಳು ಈಗ ಷೋ ರೂಂಗಳಾಗಿವೆ. ಖಾದಿ ಮಳಿಗೆಗಳು ಈಗ ಮಾಲ್‌ಗಳಲ್ಲಿಯೂ ಕಂಗೊಳಿಸುತ್ತಿವೆ. ಕರ್ನಾಟಕದಲ್ಲಿರುವ 200ಕ್ಕೂ ಹೆಚ್ಚು ಖಾದಿ ಭಂಡಾರಗಳಿಗೆ ಹೈಟೆಕ್ ಸ್ಪರ್ಶ ನೀಡಲು ರಾಜ್ಯಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿದೆ. 
 
ಜಾಗತೀಕರಣದ ಹಿನ್ನೆಲೆಯಲ್ಲಿ ಖಾದಿ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದೆ. ‘ಫ್ಲಿಪ್ ಕಾರ್ಟ್‌’, ‘ಅಮೆಜಾನ್’, ‘ಸ್ನಾಪ್ ಡೀಲ್’ಗಳಲ್ಲಿಯೂ ಖಾದಿ ಬಟ್ಟೆಗಳು ಈಗ ಲಭ್ಯ. ಖಾದಿ ಸೀರೆ, ಖಾದಿ ದುಪ್ಪಟ, ಖಾದಿ ಟಾಪ್, ಖಾದಿ ಪರ್ಸ್, ಖಾದಿ ಬ್ಯಾಗ್ – ಈಗ ಎಲ್ಲ ಕಡೆ ಲಭ್ಯ. ಇವೆಲ್ಲ ಹೊಸ ಕಾಲದ ಆಕರ್ಷಣೆಗಳೂ ಹೌದು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವದಿಂದ ಖಾದಿ ಕೋಟ್‌ಗಳೂ ಈಗ ಜನಪ್ರಿಯ. ವಿದೇಶಗಳಿಂದಲೂ ಖಾದಿ ಕೋಟ್‌ಗಳಿಗೆ ಭಾರೀ ಬೇಡಿಕೆ ಬಂದಿದೆಯಂತೆ.
 
ಖಾದಿಸಂಹಿತೆ!
‘ಸರ್ಕಾರಿ ನೌಕರರು ಪ್ರತಿ ಶುಕ್ರವಾರ ಖಾದಿ ಬಟ್ಟೆ ಧರಿಸಬೇಕು’ ಎಂದು ಮೋದಿ ಕರೆ ಕೊಟ್ಟಿದ್ದಾರೆ. ರಾಜಸ್ತಾನದಲ್ಲಿ ಪಾಲಿಕೆ, ಪಂಚಾಯತ್, ಪೊಲೀಸ್ ಸಿಬ್ಬಂದಿ ವಾರದಲ್ಲಿ ಒಂದು ದಿನ ಖಾದಿ ಬಟ್ಟೆ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ‘ಏರ್ ಇಂಡಿಯಾ’ ವಿಮಾನಗಳಲ್ಲಿ ಖಾದಿಯನ್ನು ಕಡ್ಡಾಯ ಮಾಡುವ ಚಿಂತನೆ ಇದೆ. ರೈಲುಗಳಲ್ಲಿ ಈಗಾಗಲೇ ಖಾದಿ ಬಟ್ಟೆ ಬಳಸಲಾಗುತ್ತಿದೆ. ಅಮೆರಿಕ, ಸಿಂಗಪುರ ಸೇರಿದಂತೆ ವಿದೇಶಗಳಲ್ಲಿಯೂ ಖಾದಿ ಮಳಿಗೆಗಳು ಆರಂಭವಾಗುತ್ತಿವೆ. ದೇಶದಲ್ಲಿ ಈಗಲೂ 88 ಲಕ್ಷ ಜನರಿಗೆ ಖಾದಿಯೇ ಅನ್ನಕ್ಕೆ ದಾರಿ. ಖಾದಿಯತ್ತ ಯುವಕರು ತೋರುತ್ತಿರುವ ಒಲವು ನೇಕಾರರ ಬದುಕಿನಲ್ಲಿಯೂ ಕನಸನ್ನು ಬಿತ್ತಿವೆ.
 
ಖಾದಿಯ ಭರಾಟೆ ಜೋರಾಗಿದೆ. ಆದರೆ ಖಾದಿಯ ಮೂಲ ತತ್ವ ಈಗ ಉಳಿದಿದೆಯಾ ಎನ್ನುವುದರ ಬಗ್ಗೆ ನಮ್ಮ ಹಿರಿಯರಿಗೆ ಸಂಶಯವಿದೆ. ‘‘ಖಾದಿ ಎಂಬುದು ಕೇವಲ ಬಟ್ಟೆಯಲ್ಲ. ಅದೊಂದು ಜೀವನ ಪದ್ಧತಿ. ಸ್ವಾವಲಂಬಿ ಬದುಕಿನ ರೂಪಕ. ಖಾದಿ ತೊಟ್ಟವರಿಗೆ ಸತ್ಯ ಮತ್ತು ಅಹಿಂಸೆ ಕೂಡ ಒಂದು ವ್ರತ’’ ಎಂದು ಮೇಲುಕೋಟೆಯ ‘ಜಾನಪದ ಟ್ರಸ್ಟ್’ನ ಸುರೇಂದ್ರ ಕೌಲಗಿ ಹೇಳುತ್ತಾರೆ.
 
ಖಾದಿ ಹೆಚ್ಚು ಜನಪ್ರಿಯವಾಗಬೇಕು ಎನ್ನುವುದು ನಿಜ. ಅದು ದೇಶವಾಸಿಗಳ ವಸ್ತ್ರವಾಗಬೇಕು ಎನ್ನುವುದೂ ಸರಿ. ಇಂದಿನ ಯುವಕರು ಹೆಚ್ಚು ಹೆಚ್ಚಾಗಿ ಖಾದಿಯನ್ನು ಬಳಸುತ್ತಾರೆ, ಖಾದಿ ಜಾಕೆಟ್ ಹಾಕಿಕೊಂಡು ಪೋಸು ಕೊಡುತ್ತಾರೆ ಎನ್ನುವುದೂ ಸಂತೋಷದ ವಿಷಯವೇ ಹೌದು. ಆದರೆ ಖಾದಿಯ ಹಿಂದೆ ಇರುವ ತತ್ವ ಎಷ್ಟು ಮಂದಿಗೆ ಗೊತ್ತಿದೆ?
 
ಗಾಂಧಿತತ್ತ್ವದ ನೇಯ್ಗೆ
1915ರಲ್ಲಿ ದಕ್ಷಿಣ ಆಫ್ರಿಕಾದಿಂದ ಗಾಂಧೀಜಿ ಭಾರತಕ್ಕೆ ವಾಪಸು ಬಂದು ಅಹಮದಾಬಾದಿನಲ್ಲಿ ಸಬರಮತಿ ಆಶ್ರಮ ಸ್ಥಾಪಿಸಿ ಖಾದಿ ನೂಲು ತೆಗೆಯಲು ಆರಂಭಿಸಿದಾಗ, ಅವರ ಮನಸ್ಸಿನಲ್ಲಿ ಕೇವಲ ಸ್ವಾತಂತ್ರ್ಯದ ಕಿಚ್ಚು ಇರಲಿಲ್ಲ. ಜೊತೆಗೆ ಸ್ವಾವಲಂಬಿ ಭಾರತದ ಕನಸು ಇತ್ತು. ‘ನಮಗೆ ಉಡುಗೆಯೂ ಆಗಬೇಕು, ನೇಕಾರರಿಗೆ ಊಟವೂ ಆಗಬೇಕು’ ಎನ್ನುವುದು ಅವರ ಸಿದ್ಧಾಂತವಾಗಿತ್ತು.
 
1919ರಲ್ಲಿ ಅಮೃತಸರದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಖಾದಿ ‘ಸ್ವದೇಶಿ ಚಳವಳಿ’ಯ ಸ್ವರೂಪ ಪಡೆದುಕೊಂಡಿತು. 1942ರ ವೇಳೆಗೆ ದೇಶದ 15 ಸಾವಿರ ಹಳ್ಳಿಗಳಲ್ಲಿ ‘ಚರಕ ಸಂಘ’ಗಳು ಇದ್ದವು. ಸ್ವಾತಂತ್ರ್ಯ ಬಂದ ನಂತರವೂ ಖಾದಿ ಮುಂದುವರಿಯಿತು. ಆ ನಂತರ ಕೆಲವು ವರ್ಷ ಖಾದಿ ಜನಪ್ರಿಯತೆ ಕಡಿಮೆಯಾಗಿದ್ದರೂ ಈಗ ಖಾದಿಗೆ ಮತ್ತೆ ಬೆಲೆ ಬಂದಿದೆ.
 
ಖಾದಿ ಈಗ ಎಲ್ಲ ಕಡೆ ವಿಜೃಂಭಿಸುತ್ತಿದ್ದರೂ ಹಲವಾರು ಅನುಮಾನಗಳು ಉಳಿದುಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಅವರ ‘ಮೇಕ್ ಇನ್ ಇಂಡಿಯಾ’ ಮೂಲಕ ವಿಶ್ವದ ಎಲ್ಲ ಪ್ರಸಿದ್ಧ ಬಟ್ಟೆ ತಯಾರಿಕಾ ಕಂಪೆನಿಗಳು ಭಾರತದಲ್ಲಿ ಉದ್ಯಮ ಆರಂಭಿಸಿದರೆ, ಅವುಗಳ ಮುಂದೆ ಖಾದಿ ಸ್ಪರ್ಧೆ ನೀಡಬಹುದೇ? ಖಾದಿ, ಸತ್ಯ, ಅಹಿಂಸೆ ಎಂಬ ತ್ರಿವಳಿಗಳು ಜಾಗತೀಕರಣದ ಭರಾಟೆಯಲ್ಲಿ ಒಟ್ಟಿಗೆ ಸಾಗಬಹುದೇ? ಒಂದೆಡೆ ಸರ್ಜಿಕಲ್ ದಾಳಿ, ಇನ್ನೊಂದೆಡೆ ಖಾದಿ – ಎರಡೂ ಒಟ್ಟಿಗೆ ಇರಲು ಸಾಧ್ಯವೇ? ಖಾದಿಯ ಇತಿಹಾಸ ಮತ್ತು ಅದರ ಘನತೆಯನ್ನು ಬಲ್ಲವರಿಗೆ ಇಂತಹ ಅನುಮಾನ ಬರುವುದು ಸಹಜ. ಯಾಕೆಂದರೆ ಖಾದಿ ಸ್ವಾತಂತ್ರ್ಯಾಂದೋಲನದ ಮತ್ತು ದೇಶಾಭಿಮಾನದ ಸಂಕೇತ. ‘ಖಾದಿ ಧರಿಸುವವರು ನೂಲಬೇಕು, ನೂಲುವವರು ಧರಿಸಬೇಕು’ ಎನ್ನುವುದು ಗಾಂಧಿತತ್ವ.
 
ಬಟ್ಟೆಯ ಬಗ್ಗೆ ಗಾಂಧೀಜಿ ಅವರ ಆಲೋಚನೆಗಳೇ ಬೇರೆ. ‘ನಮ್ಮ ಉಡುಗೆಯ ಬಗ್ಗೆ ಸಭ್ಯತೆಯ ನಟನೆ ಇರಬಾರದು. ಪುರುಷರು ಮೈಮುಚ್ಚುವ ಉಡುಗೆ ಧರಿಸಬೇಕು, ಅದು ಸಭ್ಯತೆಯ ಲಕ್ಷಣ ಎನ್ನುವ ಪರಿಕಲ್ಪನೆಯೇ ನಮ್ಮಲ್ಲಿ ಇರಲಿಲ್ಲ. ನಮ್ಮ ದೇಶದ ಹವಾಮಾನ ಕೂಡ ವರ್ಷ ಪೂರ್ತಿ ಮೈಮುಚ್ಚುವ ಬಟ್ಟೆ ಧರಿಸಲೇಬೇಕು ಎನ್ನುವ ಹವಾಮಾನ ಅಲ್ಲ. ಹೀಗಾಗಿ ಬಟ್ಟೆ ಕುರಿತ ಸಭ್ಯತೆಯನ್ನು ಮೀರುವ ಕೆಲಸವನ್ನು ನಾನೇ ಮೊದಲು ಪ್ರಾರಂಭಿಸುತ್ತೇನೆ’ ಎಂದಿದ್ದರು ಗಾಂಧಿ.
 
ಅರೆನಗ್ನ ಫಕೀರನಾಗಿಯೇ ತಮ್ಮ ಬದುಕನ್ನು ಪೂರೈಸಿದ ಗಾಂಧೀಜಿಗೆ ಆ ಬಗ್ಗೆ ನಾಚಿಕೆ ಇರಲಿಲ್ಲ. ಅವರು ಎಂತಹ ಸಂದರ್ಭ ಬಂದರೂ ತಮ್ಮ ನಿಲುವನ್ನು ಬದಲಾಯಿಸಲಿಲ್ಲ. ಒಮ್ಮೆ ಅವರು ಬಂಕಿಂಗ್ ಹ್ಯಾಮ್ ಅರಮನೆಗೆ ದೊರೆ ಜಾರ್ಜ್‌ ಮತ್ತು ಮೇರಿ ರಾಣಿ ಅವರನ್ನು ಭೇಟಿಯಾಗಲು ಹೋದಾಗಲೂ ಅರೆನಗ್ನರಾಗಿಯೇ ಇದ್ದರು. ಆಗ ಇದನ್ನು ಕೆಲವರು ಗೇಲಿ ಮಾಡಿದಾಗ ಗಾಂಧೀಜಿ ‘ನಮ್ಮಿಬ್ಬರಿಗೂ ಬೇಕಾಗುವಷ್ಟು ಬಟ್ಟೆಯನ್ನು ದೊರೆಗಳೇ ತೊಟ್ಟಿದ್ದರಲ್ಲ’ ಎಂದು ಚಟಾಕಿ ಹಾರಿಸಿದ್ದರು.
 
‘ಚರಕದ ಹಿಂದೆ ಬಲಿದಾನವಿದೆ. ಚರಕಕ್ಕಾಗಿ ಇಡೀ ಭಾರತ ಬಲಿದಾನಕ್ಕೆ ಸಿದ್ಧವಿದೆ’ ಎಂದೂ ಅವರು ನಂಬಿದ್ದರು. ‘ಚರಕ ಮರೆಯಾದ ದಿನವೇ ಭಾರತದ ಸುಖ ಸಂತೋಷಗಳೂ ಮರೆಯಾಗುತ್ತವೆ’ ಎಂದು ಹೇಳುತ್ತಿದ್ದರು. 
 
(ಬದನವಾಳು ಗ್ರಾಮದಲ್ಲಿ ಚರಕದಿಂದ ನೂಲು ನೇಯುತ್ತಿರುವ ಮಹಿಳೆಯರು ಚಿತ್ರ: ಪ್ರಶಾಂತ್ ಎಚ್.ಜಿ.)
 
‘ಗಾಳಿ, ನೀರುಗಳಂತೆ ಚರಕವೂ ಭಾರತದ ಪ್ರಾಣಶಕ್ತಿ’ ಎಂದೇ ಅವರು ಹೇಳುತ್ತಿದ್ದರು. ‘ಅತ್ಯಂತ ಸಹಜ, ಸುಲಭ ಜೀವನ ಮಾರ್ಗ ಚರಕ. ರಾಷ್ಟ್ರಜೀವನದ ಪ್ರಮುಖ ಅಂಗ. ಅನ್ನ, ಬಟ್ಟೆಗಳಿಗಾಗಿ ಯಾರನ್ನೂ ಯಾಚಿಸದೆ ಸ್ವಾವಲಂಬನೆಯಿಂದ ಬದುಕನ್ನು ಕಲಿಸುವ ಮಹಾಶಿಕ್ಷಕ ಚರಕ. ನಾವು ಸ್ವಾವಲಂಬಿಗಳು ಎಂದು ಇಡೀ ವಿಶ್ವಕ್ಕೆ ಹೇಳುವ ಸಂಕೇತ ಚರಕ’ ಎನ್ನುವುದು ಗಾಂಧೀಜಿ ಪ್ರತಿಪಾದನೆ. 
 
ಖಾದಿ ಎನ್ನುವ ಜೀವನಧರ್ಮ
ಖಾದಿ ಎಲ್ಲಕಾಲಕ್ಕೂ ಎಲ್ಲ ವಾತಾವರಣಕ್ಕೂ ಹೊಂದಿಕೊಳ್ಳುವ ವಸ್ತ್ರ. ಚರಕದಲ್ಲಿ ನೂಲಲಾಗಿರುವ ಖಾದಿ ಮೊದ ಮೊದಲು ಒರಟು ಬಟ್ಟೆ ಎನಿಸಿದರೂ ಕ್ರಮೇಣ ಅದು ಉತ್ಕೃಷ್ಟ ನವುರಾದ ಬಣ್ಣ ಪಡೆದು ಇಡೀ ವಿಶ್ವವೇ ನಮ್ಮ ಕಡೆಗೆ ಅಸೂಯೆಪಡುವಂತೆ ಮಾಡುತ್ತದೆ. 6 ತಿಂಗಳು ಸಂಯಮದಿಂದ ಕಾದರೆ ಈಗ ನಾವು ಉಡುತ್ತಿರುವ ಬಟ್ಟೆ ಕೇವಲ ಕೃತಕ ಅಭಿರುಚಿ ಎನ್ನುವುದು ಮನವರಿಕೆಯಾಗುತ್ತದೆ. ಖಾದಿ ಬಟ್ಟೆ ತೊಡುವವರು ಕೇವಲ ಅದರ ಮೆರುಗನ್ನು ಮಾತ್ರ ನೋಡಬಾರದು. ಅದರ ಹಿಂದಿನ ಪವಿತ್ರ ಉದ್ದೇಶವನ್ನೂ ಅರಿತುಕೊಳ್ಳಬೇಕು. ಖಾದಿ ಬಟ್ಟೆ ತೊಡುವುದು ಪವಿತ್ರ ಕರ್ತವ್ಯವಾಗಬೇಕು ಎಂದು ಆ ಕಾಲದಲ್ಲಿ ಗಾಂಧೀಜಿ ಕರೆ ನೀಡಿದ್ದರು. ಇದನ್ನೆಲ್ಲಾ ಈಗ ನಮ್ಮ ಯುವಜನರಿಗೆ ಕಲಿಸುವುದು ಹೇಗೆ? ಕೇವಲ ಫ್ಯಾಷನ್ ಎಂದು ಪರಿಗಣಿಸದೆ ಉದಾತ್ತ ಉದ್ದೇಶವನ್ನೂ ಮನವರಿಕೆ ಮಾಡಿಕೊಂಡು ಖಾದಿ ಧರಿಸಿದರೆ ನಾವೂ ಜಾಗತೀಕರಣಕ್ಕೆ ನಮ್ಮದೇ ಶೈಲಿಯಲ್ಲಿ ಉತ್ತರ ಕೊಡಬಹುದು.
 
ಖಾದಿ ಎಂಬುದು ಶುಭ್ರ ಬಟ್ಟೆ ಹೌದು. ಆದರೆ ಅದು ಬಿಳಿ ಅಲ್ಲ. ಶುಭ್ರ ಬಟ್ಟೆ ಧರಿಸಿದರೆ ಸಾಕೆ? ರಂಗಕರ್ಮಿ ಪ್ರಸನ್ನ ಅವರು ತಮ್ಮ ‘ದೇಸಿ ಸಂಸ್ಕೃತಿ’ ಪುಸ್ತಕದಲ್ಲಿ ಹೀಗೆ ಹೇಳುತ್ತಾರೆ: ‘ಸಂಪೂರ್ಣ ಬಿಳಿಯಾದ ಬಟ್ಟೆ ಸುಂದರವಾದದ್ದು ಎನ್ನುವುದು ಇತ್ತೀಚಿನ ನಂಬಿಕೆ. ಹಳೆಯ ಯಾವುದೇ ಸಂಸ್ಕೃತಿಯಲ್ಲೂ ಅತಿಯಾದ ಬಿಳುಪಿನ ಬಟ್ಟೆ ಕಾಣುವುದಿಲ್ಲ. ನಮ್ಮ ಸಾವಿರಾರು ವರ್ಷದ ಕೈಮಗ್ಗ ಪರಂಪರೆಯನ್ನು ಗಮನಿಸಿದರೆ ಸಂಪೂರ್ಣ ಬಿಳುಪು ಎಂಬುದಿಲ್ಲ. ನಾವು ಹೆಚ್ಚೆಂದರೆ ಹೆಣಗಳಿಗೆ ಹೊದಿಸಲಿಕ್ಕೆಂದು ಬಿಳಿ ಬಟ್ಟೆ ಬಳಸುತ್ತೇವೆ ಅಷ್ಟೆ’.
 
ಉದಾಹರಣೆಗೆ ನಮ್ಮ ರಾಜಕಾರಣಿಗಳನ್ನು ನೋಡಬಹುದು. ಬಿಳಿ ಖಾದಿ ನಮ್ಮ ದೇಶದ ರಾಜಕಾರಣಿಗಳ ಅಲಿಖಿತ ಸಮವಸ್ತ್ರವಾಗಿದೆ. ದೇಶೋದ್ಧಾರಕ್ಕೆಂದು ಖಾದಿ ತೊಟ್ಟವರೆಲ್ಲಾ ಏನೆಲ್ಲಾ ಮಾಡಿದ್ದಾರೆ ಎನ್ನುವುದು ಕಳೆದ 70 ವರ್ಷದಲ್ಲಿ ಗೊತ್ತಾಗಿದೆ. ಈಗ ಮತ್ತೆ ಖಾದಿಯ ಖದರು ಜಾಸ್ತಿಯಾಗಿದ್ದರೂ ಬಿಳಿ ಖಾದಿಗೆ ಮೆತ್ತಿದ ಕಪ್ಪು ಹೋಗಲಾಡಿಸುವುದು ಸುಲಭವಲ್ಲ. ನಮ್ಮ ಯುವ ತಲೆಮಾರು ಫ್ಯಾಷನ್‌ಗಾಗಿ ಶುಭ್ರ ಖಾದಿ ಧರಿಸಬಹುದು. ಆದರೆ ಅವರ ಮನಸ್ಸು ಶುಭ್ರವಾಗಬೇಕಿದೆ. ಮನದ ಕೊಳೆ ತೊಳೆಯಲೂ ಖಾದಿ ಬಳಕೆಯಾಗಬೇಕಿದೆ. 
ಖಾದಿಯ ಮಾರುಕಟ್ಟೆ ಹೆಚ್ಚುತ್ತಿರುವ ಜೊತೆಜೊತೆಗೆ, ‘ಖಾದಿ ಎನ್ನುವುದು ಒಂದು ಜೀವನಶೈಲಿ’ ಎನ್ನುವ ಅರಿವು ರೂಪುಗೊಳ್ಳಬೇಕಾದುದು ಈ ಹೊತ್ತಿನ ತುರ್ತು.
 
**
ಖಾದಿ ಎಂಬುದು ಕೇವಲ ಬಟ್ಟೆಯಲ್ಲ. ಅದೊಂದು ಜೀವನ ಪದ್ಧತಿ. ಸ್ವಾವಲಂಬಿ ಬದುಕಿನ ರೂಪಕ. ಖಾದಿ ತೊಟ್ಟವರಿಗೆ ಸತ್ಯ ಮತ್ತು ಅಹಿಂಸೆ ಕೂಡ ಒಂದು ವ್ರತ.
–ಸುರೇಂದ್ರ ಕೌಲಗಿ
 
**
ಉದ್ಯೋಗ–ಸ್ವಾವಲಂಬನೆ
ನಿರುದ್ಯೋಗಿ ಯುವಕರನ್ನು ಖಾದಿ ಉದ್ಯಮದಲ್ಲಿ ತೊಡಗಿಸಲು ‘ಕೇಂದ್ರ ಖಾದಿ ಮತ್ತು ಗ್ರಾಮೋದ್ಯೋಗ ನಿಗಮ’ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಇದಕ್ಕಾಗಿಯೇ ಮೌಂಟ್ ಅಬುನಲ್ಲಿ ವಿಶೇಷ ತರಬೇತಿ ನಡೆಸುತ್ತಿದೆ. 3200ಕ್ಕೂ ಹೆಚ್ಚು ಯುವಕ ಯುವತಿಯರು ಇಲ್ಲಿ ತರಬೇತಿ ಪಡೆಯುತ್ತಿದ್ದಾರೆ. ‘ಖಾದಿ ಪ್ಲಾಜಾ’ಗಳಲ್ಲಿಯೂ 2 ತಿಂಗಳ ತರಬೇತಿ ನೀಡಲಾಗುತ್ತಿದೆ.

(1927ರಲ್ಲಿ ಬದನವಾಳು ಗ್ರಾಮಕ್ಕೆ ಮಹಾತ್ಮ ಗಾಂಧಿ ಭೇಟಿ ನೀಡಿದ್ದರ ನೆನಪಿಗಾಗಿ ನೆಟ್ಟ ಕಲ್ಲು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT