ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಗಾನವಸಂತ
ಸಂಪಾದನೆ ಹಾಗೂ ಅನುವಾದ: ಶೈಲಜ ಮತ್ತು ಟಿ.ಎಸ್‌. ವೇಣುಗೋಪಾಲ್‌
ಪ್ರ: ರಾಗಮಾಲಾ ಪ್ರಕಾಶನ, ಸಿ.ಎಚ್‌–73, 7ನೇ ಮುಖ್ಯರಸ್ತೆ, ಸರಸ್ವತೀಪುರಂ, ಮೈಸೂರು– 570009

*
ಕರ್ನಾಟಕ ಸಂಗೀತ ಕ್ಷೇತ್ರದ ಎಂ.ಎಲ್‌. ವಸಂತಕುಮಾರಿ ಅವರ ಕುರಿತಾದ ಈ ಪುಸ್ತಕವು ಅವರ ಬದುಕಿನ ಹಲವು ಬಗೆಯ ರಾಗಗಳನ್ನು ದಾಖಲಿಸುತ್ತದೆ. ಸಂಗೀತದಲ್ಲಿ ತಮ್ಮದೇ ವಿಶಿಷ್ಟ ಶೈಲಿಯನ್ನು ಹೊಂದಿದ್ದ ಎಂ.ಎಲ್‌.ವಿ. ಶಾಸ್ತ್ರೀಯ ಸಂಗೀತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಸಿನಿಮಾ ಹಾಡು, ಗೀತನಾಟಕಗಳಿಗೂ ಹಾಡಿದ್ದಾರೆ. ಈ ಸಂಗೀತಗಾರ್ತಿಯ ಕುರಿತಾದ ಬರಹಗಳನ್ನು ಶೈಲಜ ಮತ್ತು ಟಿ.ಎಸ್‌. ವೇಣುಗೋಪಾಲ್‌ ಒಂದೆಡೆ ತಂದಿದ್ದಾರೆ.
 
ಇಲ್ಲಿನ ಬರಹಗಳು ವಸಂತಕುಮಾರಿ ಅವರ ಸಂಗೀತದ ಬಗ್ಗೆ ಮಾತ್ರ ಮಾತನಾಡಿಲ್ಲ; ಅವರ ವ್ಯಕ್ತಿತ್ವ, ಸಾಧನೆಯೂ ಅದರೊಂದಿಗೆ ಇದೆ. ಅವರ ಒಡನಾಡಿಗಳು, ಶಿಷ್ಯರು, ಪಕ್ಕವಾದ್ಯ ನೀಡಿದವರು, ಮಗ – ಎಂ.ಎಲ್‌.ವಿ. ಅವರ ಕುರಿತಾಗಿ ಮಾತನಾಡಿದ್ದಾರೆ. ಪುರಂದರದಾಸರ ಕೀರ್ತನೆಗಳನ್ನು ಜನಪ್ರಿಯಗೊಳಿಸಿದ ಈ ಸಂಗೀತಗಾರ್ತಿಯ ಬದುಕು–ಸಂಗೀತ ಇದರ ಪುಸ್ತಕಗಳಲ್ಲಿ ವಿಸ್ತಾರವಾಗಿಯೇ ದಾಖಲಾಗಿದೆ. ಹಾಗೆಂದು ಇದು ಅವರ ಜೀವನಚಿತ್ರವಲ್ಲ. ಸಂಗೀತಗಾರರ ಚದುರಿಹೋದ ಚಿತ್ರಗಳನ್ನು ಒಂದು ಚೌಕಟ್ಟಿನಲ್ಲಿ ಕೂರಿಸುವ ಕೆಲಸವನ್ನು ಮಾಡುತ್ತ ಬಂದಿರುವ ಶೈಲಜ ಮತ್ತು ಟಿ.ಎಸ್‌. ವೇಣುಗೋಪಾಲ್‌ ಇಲ್ಲೂ ಅದನ್ನು ಮಾಡಿದ್ದಾರೆ. ಎಂ.ಎಲ್‌.ವಿ. ಅವರ ಏರಿಳಿತಗಳಿಂದ ಕೂಡಿದ ಈ ಬದುಕಿನ ರಾಗ ಓದುಗರಿಗೆ ವಿಶಿಷ್ಟ ಹೊಳಗಳನ್ನು ಕೊಡಬಹುದು.
 
(ಪು: 208 ಬೆಲೆ: 170)
 
**
ಎದೆಯ ಹೊಲದಲ್ಲಿ ಸೂರ್ಯಕಾಂತಿ (ಕವಿತೆಗಳು)
ಲೇ: ಆಲೂರು ದೊಡ್ಡನಿಂಗಪ್ಪ
ಪ್ರ: ಪಂಪ ಪ್ರಕಾಶನ, ನಂ. ಬಿ–13, ಕಲಾಮಂದಿರ ಅಪಾರ್ಟ್‌ಮೆಂಟ್‌, ಹುಣಸೂರು ರಸ್ತೆ, ಮೈಸೂರು– 05
 
*
ಆಲೂರು ದೊಡ್ಡನಿಂಗಪ್ಪ ಅವರು ತಮ್ಮ ಸೂಕ್ಷ್ಮ ತಲ್ಲಣ, ಭಾವನೆ, ಪ್ರಶ್ನೆಗಳಿರುವ ಕವಿತೆಗಳನ್ನು ತಮ್ಮ ‘ಎದೆಯ ಹೊಲದಲ್ಲಿ ಸೂರ್ಯಕಾಂತಿ’ ಸಂಕಲನದಲ್ಲಿ ಕೊಟ್ಟಿದ್ದಾರೆ. ‘ಗರಿಗೆದರಿ ಹೂವರಳಿ/ ಹಾಲುಗಾಳಿಗೆ ಚಿಲಿಪಿಲಿ ಮೋದ/ ಎದೆಯ ಹೊಲದಲ್ಲಿ ಸೂರ್ಯಕಾಂತಿ’ ಎಂದು ಸಂಕಲನಕ್ಕೆ ಹೆಸರುಕೊಟ್ಟಿರುವ ಕವಿತೆಯಲ್ಲಿ ಕವಿ ಹೇಳುತ್ತಾರೆ. ಎದೆಯಲ್ಲಿ ಸೂರ್ಯಕಾಂತಿಯನ್ನು ಅರಳಿಸುವ ಹಲವು ಜೀವಂತ ಗಳಿಗೆಗಳು ಅವರ ಕವಿತೆಗಳಲ್ಲಿವೆ.
 
ಸಾಮಾಜಿಕ ಅಸಮತೋಲನ, ಮನುಷ್ಯ ಜೀವಗಳ ಅಸಹಾಯಕತೆ, ಹಸಿವು ಅವರ ಕೆಲವು ಕವಿತೆಗಳ ವಸ್ತು. ಬದುಕಿನಲ್ಲಿ ಕಂಡದ್ದನ್ನು ವಸ್ತನಿಷ್ಠವಾಗಿ ದಾಖಲಿಸಿರುವ ಈ ಕವಿಯ ಕವಿತೆಗಳಿಗೆ ಆ ಪ್ರಾಮಾಣಿಕತೆಯೇ ಶಕ್ತಿ ಕೊಟ್ಟಿದೆ. ಅವರ ಭಾಷೆಯ ಆಡಂಬರಗಳಿಲ್ಲದ ಚೆಲುವು ಅವರ ಕವಿತೆಗಳ ಒಟ್ಟೂ ರೂಪವನ್ನು ನಿರ್ಧರಿಸಿದೆ. 18 ಕವಿತೆಗಳ ಈ ಪುಟ್ಟ ಸಂಕಲನವು ಕೆಲವು ಚಿತ್ರಗಳಲ್ಲೇ ಹಲವು ಮಾತುಗಳನ್ನು ಹೇಳುತ್ತದೆ.
(ಪು: 62 ಬೆಲೆ: 60)
 
**
ಮಲೆ ಮಾದಪ್ಪನ ಪರಿಶೆಗಳ ಪರಂಪರೆ (ಚಿತ್ರ ಸಂಪುಟ)
ಅಧ್ಯಯನ ಯೋಜನೆ ನಿರ್ದೇಶಕರು: ಬಂಜಗೆರೆ ಜಯಪ್ರಕಾಶ
ಪ್ರ: ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಗೊಟಗೋಡಿ – 581197
 
*
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿರುವ ದೇವರು ಮಲೆ ಮಾದೇಶ್ವರನ ಆರಾಧನೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿಲ್ಲ. ಮಾದೇಶನ ಭಕ್ತರು ತಮಿಳುನಾಡು, ಕೇರಳ ರಾಜ್ಯಗಳಲ್ಲೂ ಇದ್ದಾರೆ. ಅನೇಕ ಜಾತಿಯ ಭಕ್ತರನ್ನು ಹೊಂದಿರುವ ಪವಾಡ ಪುರುಷ ಮಾದೇಶ್ವರನ ಜಾತ್ರೆಗಳು ದೀಪಾವಳಿ, ಯುಗಾದಿ, ಶಿವರಾತ್ರಿ, ಸಂಕ್ರಾಂತಿ, ಮಹಾಲಯ ಅಮಾವಾಸ್ಯೆ ಹಾಗೂ ಕಡೆಕಾರ್ತಿಕ ಮಾಸದಲ್ಲಿ ನಡೆಯುತ್ತವೆ. ಈ ಜಾತ್ರೆಗಳ ಪರಂಪರೆಯನ್ನು ವಿವರವಾಗಿ ದಾಖಲಿಸುವ ಅಪರೂಪದ ಪ್ರಯತ್ನವನ್ನು ಈ ಚಿತ್ರಸಂಪುಟವು ಮಾಡುತ್ತದೆ.
 
ಬಂಜಗೆರೆ ಜಯಪ್ರಕಾಶ್‌ ನಿರ್ದೇಶನಲ್ಲಿ ನಡೆದಿರುವ ಈ ಅಧ್ಯಯನವು ಜಾತ್ರೆಗಳಲ್ಲಿ ನಡೆಯುವ ಸೇವೆ, ಆರಾಧನೆ, ಭಕ್ತರ ಸಂಭ್ರಮ, ಅಲ್ಲಿನ ಆಚರಣೆಗಳನ್ನು ಚಿತ್ರವತ್ತಾಗಿ ಓದುಗರ ಮುಂದಿಡುತ್ತದೆ. ಕೃಷಿಮೂಲದ ಈ ಜಾತ್ರೆಗಳ ಹಿನ್ನೆಲೆ, ಅದಕ್ಕಿರುವ ಸಾಂಸ್ಕೃತಿಕ ಆಯಾಮಗಳ ವಿವರವಾದ ಮಾಹಿತಿ ಬಂಜಗೆರೆ ಜಯಪ್ರಕಾಶ್‌ ಅವರ ಮುನ್ನುಡಿಯಲ್ಲಿದೆ. ಇಲ್ಲಿ ದಾಖಲಾದ ಮಲೆ ಮಾದೇಶ್ವರನ ಚಿತ್ರಗಳು ಜಾತ್ರೆಗಳ ಸ್ಪಷ್ಟ ಕಲ್ಪನೆಯನ್ನು ಓದುಗರಿಗೆ ಕೊಡುವಂತಿವೆ.
 
(ಪು: 260 ಬೆಲೆ: 1000)
 
**
ಕನ್ನಡ ಭಾಷೆಯ ಬೆಳವಣಿಗೆ
ಲೇ: ಡಾ. ವಿ.ಜಿ. ಪೂಜಾರ
ಪ್ರ: ಆದಿತ್ಯ ಪ್ರಕಾಶನ, ನಂ. 498; ದೂರದರ್ಶನ ನಗರ, ಬೆಳಗಾವಿ
 
*
ಕನ್ನಡ ಭಾಷೆ ಮತ್ತು ವ್ಯಾಕರಣಗಳ ಕುರಿತ 16 ಲೇಖನಗಳನ್ನು ವಿ.ಜಿ. ಪೂಜಾರ ಇಲ್ಲಿ ಕೊಟ್ಟಿದ್ದಾರೆ. ಭಾಷೆಯ ಕುರಿತ ಚಿಂತನೆಯನ್ನು ಆಗಾಗ ಮಂಡಿಸುತ್ತ ಬಂದಿರುವ ಲೇಖಕರು ಕನ್ನಡ ಭಾಷೆಯ ಬೆಳವಣಿಗೆ, ವರ್ಣಮಾಲೆ, ಉಪಭಾಷೆಗಳು, ಲಕ್ಷಣಗಳನ್ನು, ಉರ್ದು ಮತ್ತು ತೆಲುಗಿನೊಂದಿಗೆ ಇರುವ ಕನ್ನಡದ ಬಾಂಧವ್ಯವನ್ನು ಇಲ್ಲಿ ವಿವರಿಸಿದ್ದಾರೆ. ಜೊತೆಗೆ ಕನ್ನಡ ವ್ಯಾಕರಣದ ಪರಂಪರೆ, ಪದ್ಧತಿಯೂ ಇಲ್ಲಿದೆ. ವರ್ತಮಾನದ ಭಾಷೆಯ ವಿವೇಚನೆಯ ಜೊತೆಗೆ ಅದರ ಇತಿಹಾಸವೂ ಇಲ್ಲಿನ ಲೇಖನಗಳಲ್ಲಿ ಮಿಳಿತಗೊಂಡಿದೆ.
 
ಲೇಖಕರು ನಾವು ಬಳಸುವ ವಿವಿಧ ಪ್ರಾದೇಶಿಕ ಭಾಷೆಗಳೊಂದಿಗೆ ಲಿಖಿತ ಸಾಹಿತ್ಯ ಕೃತಿಗಳನ್ನು ತಮ್ಮ ಅಧ್ಯಯನಕ್ಕೆ ಬಳಿಸಿಕೊಳ್ಳುತ್ತಾರೆ. ಪೂಜಾರ ಅವರ ಲೇಖನಗಳ ಒಳಗೆ ಪ್ರವೇಶಿಸುವುದು ಹಲವು ಜಾತಿಯ ಮರಗಳ ಕಾಡಿನೊಳಗೆ ಹೋದಂತೆ. ಅವುಗಳಿಗಿರುವ ವಿಸ್ತಾರ ಮತ್ತು ಹಲವು ಸ್ತರಗಳ ಒಳನೋಟಗಳು ಭಾಷೆಯ ಕುರಿತಾದ ನಮ್ಮ ಗ್ರಹಿಕೆಯನ್ನು ಹರಿತಗೊಳಿಸುವಂತಿವೆ. ಮತ್ತು ಅವು ನಾವು ಬಳಸುವ ಭಾಷೆಯನ್ನೇ ಗಮನವಿಟ್ಟು ನೋಡಿಕೊಳ್ಳುವಂತೆ ಮಾಡುತ್ತವೆ. ಕನ್ನಡ ಭಾಷೆಯ ಚಲನಶೀಲ ಬೆಳವಣೆಗೆಯನ್ನು ದಾಖಲಿಸುವ ಈ ಪುಸ್ತಕವನ್ನು ಎಲ್ಲಬಗೆಯ ಓದುಗರೂ ಒಮ್ಮೆ ಗಮನಿಸಬಹುದು.

(ಪು: 208 ಬೆಲೆ: 210)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT