ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಧರ್ವ ಪಟ್ಟಣ

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ
‘ಯಾವ ನನ್ನ ಮಗಗೂ ಅಂಜೂದಿಲ್ಲ ನಾ, ನಾ ಅಂದರ ಏನಂತ ತೋರಸ್ತನ ಎಲ್ಲಾರಿಗೂ...’ – ವ್ಯಗ್ರವಾಗಿ ಹೀಗೆ ಜೋರು ದನಿಯಲ್ಲಿ ಕೂಗಾಡುತ್ತಾ ಕುರ್ಚಿಯಿಂದ ಎದ್ದ ಮಲ್ಲೇಶಿ. ಮೊದಲೇ ಕಟ್ಟಮಸ್ತ್ ಆಳು. ಜೋಲಿ ಹೊಡೆಯುತ್ತ ಎದ್ದ ಬಿರುಸಿಗೆ ಟೇಬಲ್ಲೂ, ಮೇಲಿನ ಬ್ಯಾರೆ ಬ್ಯಾರೆ ಬ್ರ್ಯಾಂಡಿನ ಬಾಟಲಿಗಳು, ಹರಕು ಮುರುಕು ಚಿಪ್ಸು, ಶೇಂಗಾ, ಒಂದಷ್ಟು ಸವತೆಕಾಯಿ, ಈರುಳ್ಳಿ, ನಿಂಬೆಹಣ್ಣಿನ ಹೋಳುಗಳು, ಪ್ಲೇಟಿನ ಅಂಚಿಗೆ ಸವರಿದ್ದ ಉಪ್ಪಿನಕಾಯಿ ಹಾಗೂ ಉಪ್ಪು – ಎಲ್ಲವೂ ದೊಪ್ಪನೆ ನೆಲಕ್ಕುರುಳಿದವು. ಈ ವರ್ತನೆಯಿಂದ ಮಲ್ಲೇಶಿಯ ಜೊತೆಗಾರರಾದ ರವಿ ಹಾಗೂ ಮಹಾದೇವಪ್ಪ ಅಷ್ಟೇ ಅಲ್ಲದೆ ಆ ಹೋಟೆಲ್ಲಿನ ಇತರ ಮದರಸಿಕರಿಗೂ, ಸಪ್ಲೈಯರ್ ಮಾಲೀಕರಾದಿಯಾಗಿ ಎಲ್ಲರಿಗೂ ಆಶ್ಚರ್ಯ, ಕೋಪ ಒಟ್ಟೊಟ್ಟಿಗೆ ಬಂದವು. ಆದರೂ ಮಲ್ಲೇಶಿಯನ್ನು ತಡೆಯುವಂತಿರಲಿಲ್ಲ. ತಡೆಯಲು ಬಂದ ರವಿ ಮತ್ತು ಮಹಾದೇವಪ್ಪನನ್ನು ಜೋರಾಗಿ ತಳ್ಳಿ, ತಾನು ದಿಕ್ಕುತಪ್ಪಿದ ಗುಂಡುಕಲ್ಲಿನಂತೆ ಉರುಳುತ್ತಾ ಸಾಗಿದ.
 
ಬಿಡುಬೀಸಿನ ಈ ಸಣ್ಣ ಶಹರದಲ್ಲಿ ಈ ಮೂವರು ಗೆಳೆಯರು ವಾರಾಂತ್ಯದ ಪಾರ್ಟಿ ಮಾಡುತ್ತಿದ್ದುದು ಇದೇ ಮೊದಲೇನಲ್ಲ. ಸುಮಾರು ಇಪ್ಪತೈದು ವರ್ಷಗಳಿಂದ ಅವರು ಇದೇ ಖಾನಾವಳಿಯ ಇದೇ ಟೇಬಲ್ ಮೇಲೆ ಸಾಕಷ್ಟು ಬಾರಿ ಮದಿರೆಯನ್ನು, ಮನಸಿನ ಮಾತುಗಳನ್ನು ಹಂಚಿಕೊಂಡು ಬಂದವರು. ರವಿ ಊರಲ್ಲಿ ‘ಕೃಷ್ಣಾತೀರ ವಾಣಿ’ ಎಂಬ ವಾರಪತ್ರಿಕೆಯೊಂದನ್ನು ನಡೆಸುತ್ತಿದ್ದ. ಮಲ್ಲೇಶಿ ತನ್ನಪ್ಪನ ಆಸ್ತಿ ‘ಬಣ್ಣದ ಮನೆ’ಯನ್ನು ನೋಡಿಕೊಳ್ಳುತ್ತಿದ್ದ. ಮಹದೇವಪ್ಪ ಊರಿಗೇ ಸಾಹುಕಾರ; ಸಾವಿರ ಮಗ್ಗಗಳ ಮಾಲೀಕ. ಒಂದು ಕಾಲದಲ್ಲಿ ಈ ಶಹರಿನಲ್ಲಿ ಮಹಾದೇವಪ್ಪ ಮತ್ತು ಮಲ್ಲೇಶಿ ಸೀರೆಗಳ ಮಾರುಕಟ್ಟೆಯಲ್ಲಿ ದೊಡ್ಡ ಕೋಲಾಹಲವನ್ನೇ ಎಬ್ಬಿಸಿದವರು. ಮಲ್ಲೇಶಿ ದೂರದ ಊರುಗಳಿಂದ ಹೊಸ ಹೊಸ ಬಣ್ಣಗಳನ್ನು ತರಿಸಿಕೊಂಡು ನೂಲಿಗೆ ಹಾಕಿ ಪ್ರಯೋಗಿಸುತ್ತಿದ್ದ, ಅದರಿಂದ ವಿಧ ವಿಧ ವಿನ್ಯಾಸದ ಸೀರೆಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟು ಹುಚ್ಚುಹಿಡಿಸುತ್ತಿದ್ದ ಮಹಾದೇವಪ್ಪ. ರಂಗಭಿರಂಗೀ ಆ ಕಾಟನ್ ಸೀರೆಗಳಿಗೆ ಐಶ್ವರ್ಯ, ಪ್ರಿಯಾಂಕ, ಶಾಂತಲಾ, ಸುರಭಿ, ಪದ್ಮಿನಿ ಎಂತಲೋ, ಮತೊಮ್ಮೆ ಗಂಗಾ-ಜಮುನಾ, ತುಂಗ–ಭದ್ರಾ, ಕಾವೇರಿ–ಕೃಷ್ಣಾ ಎಂತಲೋ, ಯಜಮಾನ, ಜನುಮದ ಜೋಡಿ, ಮುಂಗಾರುಮಳೆ, ಮಿಲನ ಎಂತಲೋ, ಪಾರ್ವತಿ, ಕಾದಂಬರಿ, ಮಾಂಗಲ್ಯ, ಕುಲವಧು, ಅಗ್ನಿಸಾಕ್ಷಿ, ಕಿನ್ನರಿ ಎಂತಲೋ ಸಮಯಕ್ಕೆ ತಕ್ಕಂತೆ ಹೆಸರಿಟ್ಟು, ಉಳಿದವರಿಗಿಂತ ಕಡಿಮೆ ಬೆಲೆಯಲ್ಲಿ ವ್ಯಾಪಾರ ಮಾಡುತ್ತಿದ್ದ. ಬಣ್ಣದ ಮನೆಯಲ್ಲಿ ಖುದ್ದು ಮಲ್ಲೇಶಿಯೇ ಬಣ್ಣವನ್ನು ತೂಕಮಾಡಿ ಹಾಕುತ್ತಿದ್ದನಾದ್ದರಿಂದ ಮಹಾದೇವಪ್ಪ ಸಾವ್ಕಾರರ ಸೀರೆಗಳು ಜಗತ್‌ಪ್ರಸಿದ್ಧ; ಅಷ್ಟೇ ಗ್ಯಾರಂಟಿ. ಇವರಿಬ್ಬರ ಕೀರ್ತಿ ಪತಾಕೆಗಳನ್ನು ತನ್ನ ಅಕ್ಕರೆಯ ಅಕ್ಷರಗಳಿಂದ ಜೋಡಿಸಿ ತನ್ನ ಪತ್ರಿಕೆಮುಖೇನ ಜಾಹೀರುಗೊಳಿಸುತ್ತಿದ್ದ ರವಿ. ಅವರ ಸ್ನೇಹದಲ್ಲಿ ಜಾತಿ, ಅಂತಸ್ತು ಇಣುಕಿದ್ದೇ ಇಲ್ಲ. 
 
ಆದರೆ ಇತ್ತೀಚೆಗೆ ಮಲ್ಲೇಶಿಯಲ್ಲಿ ಆಗುತ್ತಿದ್ದ ಬದಲಾವಣೆ ಅವರನ್ನು ಗಾಬರಿಗೊಳಿಸಿತ್ತು. ಅವನಿಗೆ ಬಣ್ಣಗಳ ಗುರುತು ಹತ್ತುತ್ತಿಲ್ಲ. ಯಾವ್ಯಾವುದಕ್ಕೋ ಯಾವುದೋ ಬಣ್ಣದ ಹೆಸರು ಹೇಳುತ್ತಾನೆ. ಇವನು ನೂಲಿಗೆ ಹಾಕುತ್ತಿದ್ದ ಬಣ್ಣಗಳೂ ಈಗ ತಮ್ಮ ಅಂದ ಕಳೆದುಕೊಳ್ಳುತ್ತಿವೆ. ಮೊದಲೇ ಮೈಯಲ್ಲಿ ಸಕ್ಕರೆ ಅಂಶ ಮಿತಿಮೀರಿ ಸಂಗ್ರಹಗೊಳ್ಳುತ್ತಿತ್ತು. ಜೊತೆಗೆ ಸಂಧಿವಾತವೂ. ಈ ನರಳಾಟಿಕೆಗಳು ಅವನಿಗೆ ಹೆಚ್ಚೆನಿಸುತ್ತಿರಲ್ಲ. ಬದಲಾಗಿ ಬೇರೆ ಏನನ್ನೋ ಮನಸಿಗೆ ಹಚ್ಚಿಕೊಂಡಿದ್ದಾನೆಂದು ಗೊತ್ತಾಗುತ್ತಿತ್ತು. ಆದರೂ ಗೆಳೆಯನ ಈ ಅವಸ್ಥೆಯನ್ನು ಕಂಡು ಮರುಗಿ ಮಹಾದೇವಪ್ಪ ಮತ್ತು ರವಿ ಅವನಿಗಾಗಿ ಪಾರ್ಟಿಯೊಂದನ್ನು ಏರ್ಪಡಿಸಿದ್ದರು. ಅವನ ಮನಸು ಹಗುರಾಗಲೆಂದು ತಮ್ಮ ಬಾಲ್ಯದ ದಿನಗಳನ್ನು ನೆನೆದು ಚಟಾಕಿ ಹಾರಿಸಿ ನಗುತ್ತಿದ್ದರು. ಯಾವುದಕ್ಕೂ ಕಿವಿಗೊಡದೆ ಮಲ್ಲೇಶಿ ಯಾವತ್ತಿಗಿಂತ ಇವತ್ತು ಚೆನ್ನಾಗಿಯೇ ಕುಡಿದು ಬಾಯಿಗೆ ಬಂದಂತೆ ಒದರುತ್ತಾ ಓಲಾಡುತ್ತಾ ಗೆಳೆಯರನ್ನು ತುಚ್ಛವಾಗಿ ನಿಂದಿಸಿ ಹೊರಟುಹೋಗಿದ್ದ. ‘ಯಾವತ್ತೂ ಹೀಗೆ ಮಾಡದವ, ಏನಾಗಿದೆ ಇವನಿಗೆ?’ ಎಂದು ಇಬ್ಬರೂ ಮಾತಾಡಿಕೊಳ್ಳತೊಡಗಿದರು.
 
***
ನೇಯ್ಗೆಯನ್ನೇ ಉಸಿರಾಗಿಸಿಕೊಂಡು ಬದುಕುತ್ತಿದ್ದ ಅವಳಿ ಪಟ್ಟಣಗಳಲ್ಲಿ ಮತ್ತು ಅವಕ್ಕೆ ಹೊಂದಿಕೊಂಡಿದ್ದ ಇತರೆ ಚಿಕ್ಕ ಚಿಕ್ಕ ಊರುಗಳಲ್ಲಿ ಮಾಲೀಕರು ಮತ್ತು ನೇಕಾರರ ನಡುವೆ ಹಗೆಯ ಹೊಗೆಯಾಡತೊಡಗಿತ್ತು. ಹೋದ ವರ್ಷವೇ ಸ್ಟ್ರೈಕ್ ಮಾಡಿ ಮಜೂರಿ ಹೆಚ್ಚಿಸಿಕೊಂಡಿದ್ದ ನೇಕಾರ ಮಂದಿ ಈಗ ಮತ್ತೆ ಮಜೂರಿಯ ಕ್ಯಾತೆ ತೆಗೆದು ಕೆಲಸ ಬಂದು ಮಾಡಿ ಬೀದಿಗಿಳಿದಿದ್ದರು. ಇದು ಉಳಿದ ಮಾಲೀಕರನ್ನು ಹಾಗೂ ನೇಕಾರ ಸಂಘದ ಅಧ್ಯಕ್ಷರಾಗಿದ್ದ ಮಹಾದೇವಪ್ಪನವರನ್ನು ಕಂಗೆಡಿಸಿತ್ತು. ಇದಕ್ಕೆ ಕಾರಣ ಈ ಬೇನಾಮಿ ಚಳವಳಿಯ ಮುಂದಾಳತ್ವ ವಹಿಸಿದ್ದು ಮಹಾದೇವಪ್ಪನವರ ಕಾರ್ಖಾನೆಯಲ್ಲಿ ನೇಯುತಿದ್ದ ರಮೇಶ. ಅವನಿಗೆ ಇದೇನು ಮೊದಲ ಬಾರಿಯೇನಲ್ಲ; ಅನೇಕಸಲ ನೇಕಾರರನ್ನು ಈ ರೀತಿ ರೊಚ್ಚಿಗೆಬ್ಬಿಸಿ ಅವರನ್ನು ಮಾಲೀಕರ ವಿರುದ್ಧ ಎತ್ತಿಕಟ್ಟುವಲ್ಲಿ ಯಶಸ್ವಿಯಾಗಿದ್ದಾನೆ. ಹಿಂದೆ ನೇಕಾರರು ಹೊಸ ಕಾರ್ಖಾನೆ ಸೇರಿಕೊಳ್ಳುವಾಗಿದ್ದ ಹದಿನೈದು–ಇಪ್ಪತ್ತು ಸಾವಿರ ರೂಪಾಯಿ ಬಾಕಿಯನ್ನು ಈಗ ಐವತ್ತರವರೆಗೂ ಏರಿಸಿ ಮಾಲೀಕರ ಕೈಸುಟ್ಟುಕೊಳ್ಳುವಂತೆ ಮಾಡಿದ್ದ. ಮೊದಲು ಇದಕ್ಕೆ ಪ್ರತಿರೋಧ ಬಂದಾಗ ಒಂದಿಷ್ಟು ನೇಕಾರರ ಗುಂಪು ಕಟ್ಟಿಕೊಂಡು ಮಹಾರಾಷ್ಟ್ರದ ಇಚಲಕರಂಜಿಗೆ ಹೋಗಿ ದುಡಿಯಲು ಶುರುಮಾಡಿದ್ದ. ಅಲ್ಲಿ ಇಲ್ಲಿಗಿಂತ ಜಾಸ್ತಿ ಗಳಿಸಬಹುದೆಂದು ತೋರಿಸಿಕೊಟ್ಟಿದ್ದಕ್ಕೆ ಉಳಿದ ನೇಕಾರರ ಪಾಲಿಗೆ ಸಾಕ್ಷಾತ್ ಹೀರೋ ಆಗಿಬಿಟ್ಟಿದ್ದ. ಇತ್ತೀಚೆಗಂತೂ ಅವನಾಟ ಇನ್ನೂ ಮಿತಿಮೀರಿತ್ತು. ಇದ್ದ ನೇಕಾರ ಸಂಘಕ್ಕೆ ವ್ಯತಿರಿಕ್ತವಾಗಿ ತನ್ನ ಪ್ರಭಾವಲಯಕ್ಕೆ ಒಗ್ಗುವ ಕೆಲ ನೇಕಾರರನ್ನು ಸೇರಿಸಿ ಬೇರೆ ಗುಂಪು ಕಟ್ಟಿದ್ದನಲ್ಲದೇ, ಯಾವ ಮಲಿನತೆಯೂ ಸೋಕದ ಊರೊಳಗೆ ಪ್ರಚೋದನಕಾರಿ ಹಿಂದೂ ಸಂಘಟನೆಯನ್ನು ಮಹಾರಾಷ್ಟ್ರದಿಂದ ಕಡತಂದು ಇಲ್ಲಿ ಸ್ಥಾಪಿಸಿದ್ದ. ಇದು ಕೆಲ ಮುಸ್ಲಿಂ ನೇಕಾರರಿಗೆ ಪಸಂದು ಬರಲಿಲ್ಲವಾದ್ದರಿಂದ ಅವರು ರಮೇಶನಿಂದ ದೂರವೇ ಇದ್ದರು. ತನ್ನ ಸಂಘಟನೆಯಿಂದ ಎರಡು ಮೂರು ಬಾರಿ ಕೋಮುಗಲಭೆಯನ್ನು ಹುಟ್ಟುಹಾಕಿ ಜೈಲಿಗೆ ಹೋಗುವುದನ್ನು ಹೇಗೋ ಚಾಣಾಕ್ಷತೆಯಿಂದ ತಪ್ಪಿಸಿಕೊಂಡಿದ್ದ; ತಾನು ಒಂದು ದೊಡ್ಡ ಸ್ಕ್ರೀನಿನ ಮೊಬೈಲ್ ಫೋನ್ ಇಟ್ಟುಕೊಂಡು ಇತರರಿಗೂ ಅದರ ಹುಚ್ಚು ಹತ್ತಿಸಿ ಅವರೂ ಕೊಳ್ಳುವಂತೆ ಮಾಡಿದ್ದ. ಮುಂಚೆ ಜೋಡನಿ ಒಯ್ಯುವವರು, ಜ್ಯಾಬರ್‌ಗಳು ಹೀಗೆ ಯಾರಿಗಾದರೂ ಏನಾದರೂ ಕೆಲಸ ಇದ್ದರೆ ಎಷ್ಟೇ ದೂರವಾದರೂ ಸಾವ್ಕಾರರ ಮನೆಗೆ ಬಂದು ಕೆಲಸ ಮುಗಿಸಿಕೊಂಡು ಹೋಗುವರು. ‘ಮಳ್ಳ ನನ ಮಕ್ಕಳ್ರ್ಯಾ... ಸಾವ್ಕಾರಿಗೆ ಒಂದು ಮಿಸ್ ಕಾಲ್ ಕೊಡ್ರಿ, ಕುಂತಲ್ಲೇ ನಿಮ್ಮ ಕೆಲಸ ಆಗ್ತತಿ’ ಎಂದು ಆ ಸಂಪರ್ಕವನ್ನು ಕಡಿದಿದ್ದ. ಸಿನಿಮಾವೊಂದೇ ಮನರಂಜನೆಯಾಗಿದ್ದ ನೇಕಾರರಿಗೆ ಕ್ರಿಕೆಟ್ಟಿನ ಚಾಳಿ ಅಂಟಿಸಿದ್ದ. ಆಡುವುದಷ್ಟೇ ಅಲ್ಲ, ನೋಡುವುದಕ್ಕೂ ಕಾರ್ಖಾನೆಯಲ್ಲಿ ಟಿ.ವಿ.ಯ ವ್ಯವಸ್ಥೆ ಮಾಡಿಕೊಂಡಿದ್ದ. ಇವನು ಮತ್ತು ಇವನ ಸಮೂಹದ ನಾಲಿಗೆ ರುಚಿ ಹೆಚ್ಚಾದಂತೆಲ್ಲಾ, ಮೊದಲು ಅಲ್ಲೊಂದು ಇಲ್ಲೊಂದು ರಹಸ್ಯವಾಗಿದ್ದ ಬಾರ್ ಮತ್ತು ಸಾವಜಿ ಖಾನಾವಾಳಿಗಳು ಈಗ ಓಣಿಗೊಂದರಂತೆ ತಲೆಯೆತ್ತಿ ನಿಂತಿವೆ. 
 
ಊರಿನ ವಿದ್ಯುತ್ ಮಗ್ಗಗಳ ಸಂಘದ ಅಧ್ಯಕ್ಷರಾಗಿದ್ದ ಮಹಾದೇವಪ್ಪನವರ ಕಾರ್ಖಾನೆಯಲ್ಲೇ ಇಂಥದೊಂದು ಚತುರಹುಳ ಇದ್ದುದು ಸ್ವತಃ ಅವರಿಗೇ ನುಂಗಲಾರದ ತುತ್ತಾಗಿತ್ತು. ಸಮಸ್ಯೆ ಶುರುವಾಗುವುದೇ ಇವರ ಕಾರ್ಖಾನೆಯಿಂದ, ಮತ್ತೆ ಧರಣಿಯಂಥದೇನಾದ್ರೂ ಆದಾಗ ಇವರೇ ಬಂದು ಪರಿಹರಿಸುತ್ತಿದ್ದುದರಿಂದ ಉಳಿದ ಸಾವ್ಕಾರರು ಇದೇನು ಮಾವ–ಅಳಿಯನ ನವರಂಗಿ ಆಟ ಎಂದು ಒಳಗೊಳಗೇ ಕುದಿಯುತ್ತಿದ್ದರು. ರಮೇಶನ ಹಕೀಕತ್ತುಗಳೆಲ್ಲಾ ಗೊತ್ತಿದ್ದೂ ದೂರದ ಸಂಬಂಧಿಯೊಬ್ಬರ ಮಾತಿಗೆ ಕಟ್ಟುಬಿದ್ದು ಅವನನ್ನು ಹಲ್ಲುಕಚ್ಚಿ ಸಹಿಸಿಕೊಂಡಿದ್ದರು. ಮಹದೇವಪ್ಪನವರಿಗೆ ಇದ್ದ ಒಂದೇ ಬಲ ಎಂದರೆ ಹಲಸಂಗಿ ಚಂದ್ರು. ಸುಮಾರು ಹದಿನೈದು ವರ್ಷಗಳಿಂದ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡಿದ್ದನಲ್ಲದೆ ರಮೇಶನಿಗೆ ಸರಿಯಾಗಿ ಗುದ್ದು ಕೊಡುವವ ಅವನೇ ಆಗಿದ್ದ. ಮಕ್ಕಳಿಲ್ಲದ ಮಹಾದೇವಪ್ಪ ಇವನನ್ನು ಮಗನಂತೆಯೇ ನೋಡಿಕೊಂಡು ಬಂದಿದ್ದಾರೆ. ಮಹದೇವಪ್ಪನವರ ಹೆಂಡತಿ ಮಹಾ ದೈವಭಕ್ತೆ. ಮದುವೆಯಾದಾಗಿನಿಂದಲೂ ಇಬ್ಬರಿಗೂ ಮಾತುಕತೆ ಅಷ್ಟಕ್ಕಷ್ಟೇ. ಇದು ಅವರಿಗೆ ದುಃಖದ ಸಂಗತಿಯೇನಾಗಿರಲಿಲ್ಲ. ಇಬ್ಬರೂ ಅವರವರ ಸ್ಥಾನಗಳಲ್ಲಿ ನೆಮ್ಮದಿಯಿಂದಿದ್ದರು. ಈ ಕುರಿತು ಮಹದೇವಪ್ಪನವರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಮಲ್ಲೇಶಿಯಲ್ಲಾಗುತ್ತಿರುವ ಬದಲಾವಣೆ ಅವರನ್ನು ಕಾಡುತ್ತಿತ್ತು. ‘ಪ್ರಾಣ ಸ್ನೇಹಿತನೆಂದು ಅವನಿಗೆ ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಿ ಕೈಹಿಡಿದು ಇಲ್ಲಿಯವರೆಗೆ ತಂದಿದ್ದೇನೆ. ಅದಕ್ಕೆ ಅವನೂ ಸಾಕಷ್ಟು ಶ್ರಮವಹಿಸಿದ್ದಾನೆ. ಈಗೀಗ ಮಾತ್ರ ಅವನ ನಡೆ ತಿಳಿಯದಾಗಿದೆ. ಮೊನ್ನೆ ನೇಕಾರ ಮಾಲೀಕರ ಧರಣಿಯ ನ್ಯಾಯ ಬಗೆಹರಿಸುವಾಗ ಎಲ್ಲರೆದುರು ತನ್ನನ್ನು ಎಷ್ಟು ಬೆಂಬಲಿಸಿ ಮಾತಾಡಿದ. ಅದೇ ಸಂಜೆ ಪಾರ್ಟಿಯಲ್ಲಿ ಎಲ್ಲರೆದುರು ಬಾಯಿಗೆ ಬಂದಂತೆ ಬೈದ. ಕುಡಿದ ಮತ್ತಿನಲ್ಲಿ ಆಡಿರಬಹುದೆಂದು ಬಿಡಲೂ ಮನಸಾಗುತಿಲ್ಲ. ಏಕೆಂದರೆ ಅದರಲ್ಲಿ ಅವನ ಅಸಹನೆ, ಸಂಕಟ ಕಣ್ಣೀರಿನ ಜೊತೆ ಹೊರಬಂದಿದ್ದು ಅವೆಲ್ಲ ಮನಸಿನ ಮಾತೇ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದವು; ನಿಟ್ಟುಸಿರಿನೊಟ್ಟಿಗೆ ಮಹಾದೇವಪ್ಪನವರ ತುಟಿಗಳು ಮತ್ತಷ್ಟು ಒತ್ತಿಕೂತವು. 
 
ಮಲ್ಲೇಶಿಯ ಮನೆಯಲ್ಲಿ ಲಕ್ಷ್ಮಿ ಕಾಲುಮುರಿದುಕೊಂಡು ಬಿದ್ದಿದ್ದರೂ ಅವನ ತಾಯಿ ಬೋರವ್ವ ಸದಾ ಕ್ರಿಯಾಶೀಲೆ. ವಯಸ್ಸು ತೊಂಬತ್ತಾಗಿ ಕೈಗೊಂದು ಕೋಲು ಬಂದು ದೇಹವೆಲ್ಲ ಒಣಗಿಹೋಗಿ ಕಣ್ಣಲ್ಲಿ ಪಿಚ್ಚು ಪಿಚ್ಚು ತುಂಬಿದ್ದರೂ ಇನ್ನೂ ಒಂದಿಷ್ಟು ಬೆಳಕು ಉಳಿಸಿಕೊಂಡಿದ್ದಾಳೆ. ಆ ಬೆಳಕಿನಲ್ಲಿಯೇ ಬೇಡವೆಂದರೂ ಕಂಡಿಕೆ ಸುತ್ತೋಳು. ಗಾಲಿಗೆ ಸುತ್ತಿದ ನೂಲಿನಲ್ಲಿ ಎಳೆ ಸಿಗದೇ ಹೋದಾಗ ಅದನ್ನು ಅತ್ಯಂತ ಸಹನೆ, ಜಾಗರೂಕತೆಯಿಂದ ಹುಡುಕಿ ತೆಗೆಯುತ್ತಿದ್ದಳು. ‘ನಮ್ಮ ಜೀಂವಾ ಎಳಿಗಿಂತ ಸಣ್ಣದ ಮಾಡ್ಕೋಬೇಕ. ಅಂದ್ರ ಎಳಿ ಸಿಗತೈತಿ’ ಎಂದು ತತ್ವದ ಮಾತನ್ನು ಹೇಳುತ್ತಿದ್ದಳು. ಹಾಗೆ ಒಮ್ಮೆ ಕಂಡಿಕೆ ಸುತ್ತುತ್ತ ಮಲ್ಲೇಶಿಯ ಬಣ್ಣದ ಬ್ಯಾನಿಯ ಬಗ್ಗೆ ಯೋಚಿಸುತ್ತಿರುವಾಗ: ಮಲ್ಲೇಶಿಯ ಮಡ್ಡ ತಲೆಗೆ ಅವರಪ್ಪ ಠಪ್ ಅಂತ ಹೊಡೆದು, ‘ನಿನಗ ಈ ಜನುಮದಾಗ ಬಣ್ಣದ ದೋಷ ಸರಿ ಆಗಂಗಿಲ್ಲ. ಊರಾಗೆಲ್ಲ ದೊಡ್ಡ ಬಣ್ಣದ ಕಾರ್ಖಾನಿ ಅಂತ ಹೆಸರು ಮಾಡದವ್ರು ಮನ್ಯಾಗ ಎಂಥಾ ಮೂಳ ಹುಟ್ಟಿದ್ಯೋ..? ಹಸರಿಗೆ ನೀಲಿ ಅಂತಿ, ನೀಲಿಗೆ ಹಳದಿ ಅಂತಿ. ಕೆಂಪ ಅಂದ್ರ ಗೊತ್ತಿಲ್ಲ. ಕಪ್ಪ ಅಂದ್ರ ಗೊತ್ತಿಲ್ಲ. ಇನ್ನ ಅದೆಂಗ ಬಣ್ಣಾ ಹಾಕ್ತ್ಯೋ?’ ಎಂದು ಬೈಯ್ಯುತ್ತಿದ್ದರೂ ಚಿಕ್ಕಂದಿನಿಂದಲೇ ಇದನ್ನು ಸರಿಪಡಿಸಬೇಕೆಂದು ದೇವರ ಹರಕೆ, ಪೂಜೆ, ದೊಡ್ಡ ದವಾಖಾನೆ ಎಲ್ಲಾ ಆದುವು. ಕೊನೆಗೆ ಮಠದ ಐಗಳು, ‘ತನ್ನ ಇಪ್ಪತ್ತನೇ ವರ್ಷದಿಂದ ಇವನ ಜೀವನ ಸುಧಾರಸತೈತಿ. ಚಿಂತಿ ಮಾಡಬ್ಯಾಡ್ರಿ’ ಎಂದು ಆಶೀರ್ವಾದ ಮಾಡಿದ್ದರು. ಆಶ್ಚರ್ಯವೆನ್ನುವಂತೆ ಅದು ಹಾಗೆಯೇ ಆಯಿತು. ಅಪ್ಪ ತೀರಿಕೊಂಡ ಮೇಲೆ ಬಣ್ಣದ ಮನೆಯ ಜವಾಬ್ದಾರಿಯನ್ನು ಮಲ್ಲೇಶಿಯೇ ಹೊತ್ತು ನಡೆಸಿಕೊಂಡು ಬಂದಿದ್ದಾನೆ. ಆದರೆ ಇಷ್ಟು ವರ್ಷಗಳ ಮೇಲೆ ಈಗ ಮತ್ತೆ... ಬೋರವ್ವನ ಕಣ್ಣಲ್ಲಿ ನೀರೆಂಬುದು ಬತ್ತಿಹೋಗಿದ್ದರೂ ಸೀರೆಯಂಚನ್ನು ಕಣ್ಣಿಗೊತ್ತಿಕೊಂಡಳು ಯಾರಿಗೂ ಕಾಣದಂತೆ.
 
***
ಎತ್ತಲೋ ನೋಡಲನುವಾದವನ ದೃಷ್ಟಿ ಇದ್ದಕ್ಕಿದ್ದಂತೆ ಮೂಲೆಯೊಂದರಲ್ಲಿ ಬಲೆ ಹೆಣೆಯುತ್ತಿದ್ದ ಜೇಡನಲ್ಲಿ ನೆಟ್ಟಿತು. ಜೇಡವನ್ನು ನೋಡಿದ್ದನಾದರೂ ಬಲೆ ನೇಯುವ ಪ್ರಕ್ರಿಯೆಯನ್ನು ಇದೇ ಮೊದಲ ಬಾರಿಗೆ ತದೇಕನಾಗಿ ನೋಡುತ್ತ ಕುಳಿತ. ಜೇಡ ತನಗೊಪ್ಪುವ ಎರಡು ಧ್ರುವಗಳನ್ನು ಗೊತ್ತುಪಡಿಸಿಕೊಂಡು ತನ್ನ ಅಂಟಿನಿಂದ ನೇಯಲು ಶುರುವಿಟ್ಟುಕೊಂಡಿತು. ವೃತ್ತಾಕಾರದಲ್ಲಿ ನೇಯ್ದ ಒಂದೊಂದು ಎಳೆಯೂ ಬಣ್ಣದ ಎಳೆ. ಅರೆ, ಜೇಡ ಬಣ್ಣದ ಬಲೆ ನೇಯುತ್ತಿದೆಯೇ..! ಕಣ್ಣುಜ್ಜಿಕೊಂಡು ಇನ್ನೊಮ್ಮೆ ನೋಡಿದ. ಹೌದು, ಬಣ್ಣದ ಬಲೆಯೇ. ಎಂಥ ಸುಂದರ ಕಲಾಕೃತಿ! ಇದಕ್ಕೇ ಇರಬೇಕು, ಪ್ರತಿ ನೇಕಾರನೂ ಈ ಜೇಡನ ವಂಶಸ್ಥನೇ. ಅದರ ಹೆಸರನ್ನೇ ಕುಲನಾಮವಿಟ್ಟುಕೊಂಡು ಬೆಳೆದ ಜೇಡರ ದಾಸಿಮಯ್ಯನವರ ಕುಲದವನಾಗಿ ರೂಪುತಳೆದ ನಾನೂ ಹುಟ್ಟಾಜಾಡನೇ. ನನ್ನ ಬಣ್ಣ ಸಂಬಂಧದ ಮೂಲ ಸಹಿತ ಇಲ್ಲಿಯದೇ ಎಂದು ಯೋಚಿಸುತ್ತಲೇ ಹುರುಪುಗೊಂಡ. ಜೇಡನ ನೇಯುವ ಆಟ, ಮಲ್ಲೇಶನ ನೋಡುವ ನೋಟದಲ್ಲಿ ಸಮಯ ಕೆಲಕಾಲ ಕಾಲು ಮುರಿದುಕೊಂಡಿತ್ತು. ಎಷ್ಟೊಂದು ಬಣ್ಣಗಳು ಕಾಣುತ್ತಿವೆ ಆ ಬಲೆಯಲ್ಲಿ. ಆದರೆ ಯಾವುದು ಯಾವ ಬಣ್ಣ ..? ಅದೋ ಅಲ್ಲಿ ಕೆಂಪು ಬಣ್ಣ. ಅದು ನಿಜವಾಗಿಯೂ ಕೆಂಪೇ? ದಿಟ್ಟಿಸಿದ. ಅಲ್ಲ, ಅದು ನೀಲಿ. ಅಲ್ಲಲ್ಲ ಹಸಿರು. ಮತ್ತೆ ಅದರ ಪಕ್ಕದ್ದು? ಅರಿಷಿಣ ಬಣ್ಣವೋ ಕಂದು ಬಣ್ಣವೋ... ಅಯ್ಯೋ, ಅದು ನಿಜವಾಗಿಯೂ ಯಾವ ಬಣ್ಣ? ಯಾರು ಹೇಳುವರು? ಯಾರಾದರೂ ಬಂದು ಅದನ್ನು ಕೆಂಪು ಎಂದರೆ ನಂಬಬೇಕೆ? ನನ್ನ ಕಣ್ಣುಗಳೇ ನನಗೆ ಮೋಸ ಮಾಡುತ್ತಿವೆ, ಇನ್ನು ಬೇರೆಯವರನ್ನು ಹೇಗೆ ನಂಬಲಿ? ಈ ಬಣ್ಣಗಳ ಮೂಲವಾದರೂ ಯಾವುದು? ಯಾರು ಮೊದಲು ಇವನ್ನೆಲ್ಲ ಗುರುತಿಸಿದ್ದು? ಲೋಕವೆಲ್ಲ ಸರ್ವಸಮ್ಮತದಿಂದ ಒಪ್ಪಿ ನಾಮಕಾರಣ ಮಾಡಿ ಅದರಂತೆ ಬಣ್ಣಗಳನ್ನು ಗುರುತಿಸುತ್ತಿದ್ದಾರೆ. ಅವರಂತೆ ನಾನೂ ಆಗದಿರಲು ಏನು ಧಾಡಿ? ಹೊರಗಷ್ಟೇ ಬಣ್ಣಗಳಲ್ಲ, ಒಳಗೂ ಇವೆ. ನಾನೇ ಎಷ್ಟೊಂದು ಬಣ್ಣಗಳ ರಾಯಭಾರಿಯಾಗಿದ್ದೇನೆ. ಹೆಂಡತಿಯೊಂದಿಗೆ, ಅವ್ವನೊಂದಿಗೆ, ಮಕ್ಕಳೊಂದಿಗೆ, ಗೆಳೆಯರೊಂದಿಗೆ, ಗ್ರಾಹಕರೊಂದಿಗೆ, ಸಂಬಂಧಿಗಳೊಂದಿಗೆ, ಇಟ್ಟುಕೊಂಡ ಹೆಣ್ಣುಗಳೊಂದಿಗೆ, ಹೀಗೆ ಎಲ್ಲರೊಂದಿಗೆ ವ್ಯವಹರಿಸುವಾಗ ಎಷ್ಟೆಲ್ಲ ಬಣ್ಣಗಳ ರೂಪ ತಾಳುತ್ತೇನೆ. ಅಕ್ಕರೆಗೊಂದು ಬಣ್ಣ, ವಾತ್ಸಲ್ಯಕ್ಕೊಂದು ಬಣ್ಣ, ಕೋಪಕ್ಕೊಂದು ಬಣ್ಣ, ದ್ವೇಷಕ್ಕೊಂದು ಬಣ್ಣ, ತಾಪಕ್ಕೊಂದು ಬಣ್ಣ, ಮಾರ್ದವತೆಗೊಂದು ಬಣ್ಣ, ಮೋಸಕ್ಕೊಂದು ಬಣ್ಣ, ಸಮಯಕ್ಕೆ ತಕ್ಕಂತೆ ಎಷ್ಟೊಂದು ಬಣ್ಣಗಳ ಪ್ರಕಟಿಸುವ ನವರಂಗಿ ಮನುಷ್ಯ ನಾನು. ಬಹುಶಃ ಎಲ್ಲರೂ ಇಂತಹುದೇ ಬಣ್ಣಗಳ ಹೊತ್ತುಕೊಂಡು ಅವನ್ನು ಯಾರಿಗೂ ಕಾಣದಂತೆ ಎಲ್ಲರ ಮೇಲೆ ಪ್ರಯೋಗಿಸುತ್ತಲೇ ಬದುಕು ಸಾಗಿಸುತ್ತಿರುತ್ತಾರೇನೋ. 
 
ಆದರೆ ಮಹದೇವಪ್ಪನನ್ನು ನೆನೆದಾಗ ಮಾತ್ರ ಮನಸು ಕುದಿಯುತ್ತದೆ. ಈ ಅಧ್ಯಕ್ಷಗಿರಿ ನಮ್ಮ ಮನೆತನದವರಿಂದ ಮೋಸ ಮಾಡಿ ಅವರು ಕಿತ್ತುಕೊಂಡಿದ್ದಾರೆ. ಅದನ್ನು ಮತ್ತೆ ನಾವೇ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಊರಲ್ಲಿ ನಮಗೆ ಯಾವ ಮರ್ಯಾದೆಯೂ ಇರುವುದಿಲ್ಲ, ಮೂಲೆಗುಂಪಾಗಿ ಇರ್ತೀವಿ, ಅದನ್ನ ಗೆಲ್ಲಬೇಕು ಎಂದು ಅಪ್ಪ ಯಾವಾಗಲೂ ಹಲುಬುತ್ತಿದ್ದ. ಮನಸಿಗೆ ಕಷ್ಟವಾದರೂ ಬಾಲ್ಯ ಸ್ನೇಹಿತನಾಗಿ ಮಹಾದೇವಪ್ಪನ ಮೇಲೆ ಸೇಡು ತೀರಿಸಿಕೊಳ್ಳಲು ಮನಸು ಸಜ್ಜಾಗಿತ್ತು. ಕಣ್ಣು ಕೆಂಪಾಗಿ ಕತ್ತಲೆ ಕವಿದಂತಾಯಿತು. 
 
ಅಪ್ಪ ಹೇಳಿದ್ದ ಕತೆ ನೆನಪಾಗುತ್ತಿದೆ... ಪೂಜ್ಯ ಶ್ರೀ ಕಾಡಸಿದ್ದೇಶ್ವರರು ಇಲ್ಲಿ ತಪಸ್ಸು ಮಾಡಿ ಹೋದ ಮೇಲೆ ಆಕಾಶ ಮಾರ್ಗವಾಗಿ ಹೊರಟಿದ್ದ ಗಂಧರ್ವರ ಗುಂಪೊಂದು ನಿಸ್ಸಾರವಾಗಿದ್ದ ಈ ಊರಿನ ಮೇಲೆ ಬಣ್ಣದ ಮಳೆಗರೆದು ಹೋಗಿದ್ದರಂತೆ. ಅವೇ ಬಣ್ಣಗಳು ಇಂದು ಈ ಊರಿನ ಸೂಚಿಕೆಯಾಗಿ, ದೇಹವಾಗಿ, ಆತ್ಮವಾಗಿ, ಉಸಿರಾಗಿ ಬೆಸೆದುಕೊಂಡು ಬಂದಿದೆ. ನಮ್ಮ ಅಜ್ಜನಿಗೂ ಇಂಥದೇ ಒಂದು ಬಣ್ಣದ ಕಾಯಿಲೆ ಇತ್ತಂತೆ. ಅದನ್ನು ಈ ಗಂಧರ್ವರೇ ಸರಿ ಮಾಡಿದ್ದು ಎಂದು ಅಪ್ಪ ಹೇಳಿದ್ದ. ತಾನೂ ಈಗ ಅವರ ಮೊರೆಹೋಗಬೇಕು! 
 
ಬಣ್ಣದ ಬಲೆಯ ನೇಯುತ್ತ ನೇಯುತ್ತ ಜೇಡ ಕಡೆಗೆ ಅದರಲ್ಲೇ ಬಿದ್ದು ಒದ್ದಾಡುವುದನ್ನು ನೋಡಲಾಗಲಿಲ್ಲ ಮಲ್ಲೇಶಿಗೆ. ಮನಸಿಗೆ ವಿಪರೀತ ಕಸಿವಿಸಿಯಾಗತೊಡಗಿತು. ಅದು ತನ್ನ ಪ್ರಾಣ ಉಳಿಸಿಕೊಳ್ಳಲು ಬೇರೆ ದಾರಿಯೇನಾದರೂ ಇದ್ದಿರಬಹುದೇ ಎಂದು ನೋಡಿದ. ಊಹ್ಞೂಂ... ಬಲೆ ನೇಯ್ದವರು ಬಲಿಯಾಗುವುದು ಗ್ಯಾರಂಟಿ ಎಂದು ಗಾಬರಿಗೊಂಡ. ತಾನೂ ಹೀಗೆಯೇ...?! ‘ಅಡವ್ಯಾಗ ಆಡ ಮಳ್ಳ, ಊರಾಗ ಜಾಡ ಮಳ್ಳ’ ಎಂದು ಊರವರು ಆಡಿಕೊಳ್ಳುತ್ತಿದ್ದ ಮಾತನ್ನು ತಪ್ಪೆಂದು ಸಾಧಿಸಲು ತಾನು ಬೀಸಿದ ಬಲೆಗೆ ತಾನೇ ಸಿಕ್ಕಿಕೊಳ್ಳುವೆನೆ ಎಂದು ಗಲಿಬಿಲಿಗೊಳ್ಳುತ್ತಲೇ, ‘ಇಲ್ಲಿ ಬಲೆ ನನ್ನದಾದರೂ ಅದನ್ನು ನೇಯುವವರು ಬೇರೆ. ಹಾಗಾಗಿ ಸಿಕ್ಕಿಹಾಕಿಕೊಳ್ಳುವ ಅಪಾಯವೇ ಇಲ್ಲ. ಹ ಹ್ಹ ಹ್ಹಾಹ್ಹಾ ..’ ಎಂದು ವಿಚಿತ್ರವಾಗಿ ನಕ್ಕ. ಆ ನಗುವಿನಲ್ಲಿ ಭಯವೂ ತಾತ್ಪೂರ್ತಿಕ ಸಂತೋಷವೂ ಬೆರೆತಿದ್ದನ್ನು ಕಂಡ ಮೂಲೆಯ ಇನ್ನೊಂದು ಜೇಡ ತಾನೂ ನಕ್ಕಿತು.
 
***
ಅದೊಂದು ಗೋಧೂಳಿ ಸಮಯ. ಆಷಾಢದ ಗಾಳಿ ಜೋರಾಗಿ ಬೀಸುತ್ತಿತ್ತು. ಇದೇ ಸುಸಂದರ್ಭ ಎಂಬಂತೆ ಪಟ್ಟಣದ ಬಣ್ಣಗಳು ವಿವಿಧ ರೂಪ ತಾಳಿ ಗಾಳಿಯೊಡನೆ ಬೆರೆತವು.
 
ಆ ದಿನ ಮಲ್ಲೇಶಿಯ ಮನೆಗೆ ರಮೇಶ ಗುಟ್ಟಾಗಿ ಹೋಗುವುದನ್ನು ನೋಡಿದ ಮಹದೇವಪ್ಪ ಸುಮ್ಮನೆ ಕಣ್ಣುಮುಚ್ಚಿ ಕುಳಿತ.
 
ರವಿ ಹಾಗೂ ಚಂದ್ರುವಿನ ಮಧ್ಯಸ್ಥಿಕೆಯಿಂದ ನೇಕಾರರ ಧರಣಿ ಹಳ್ಳ ಹಿಡಿದಿದ್ದನ್ನು ಕೇಳಿ ಮಲ್ಲೇಶಿಯ ಸಂಧಿವಾತ ಜೋರಾಗಿತ್ತು. 
 
ಮಲ್ಲೇಶಿಯ ಹೆಂಡತಿ ಸುವರ್ಣ ನವಿಲಿನ ಬಣ್ಣದ ಜರತಾರಿ ಸೀರೆಯುಟ್ಟು ದೇವರ ಮುಂದೆ ದೀಪ ಹಚ್ಚಿಟ್ಟಳು. ಮಕ್ಕಳು ಬಣ್ಣ ಬಣ್ಣದ ಬಳಾಯಿಗಳಿಂದ ಪಾಟಿಯ ಮೇಲೆ ಅಕ್ಷರ ತೀಡುತ್ತಿದ್ದವು.
 
ಬೋರವ್ವ ಸಿಕ್ಕುಗಟ್ಟಿದ ಜಡೆಯೊಳಗಿಂದ ಮುಂದೆಳೆಯನ್ನು ಹುಡುಕುತ್ತಿದ್ದಳು.
 
***
ಹುಣ್ಣಿಮೆಯೊಂದರ ಮಧ್ಯರಾತ್ರಿಗೆ ಸರಿಯಾಗಿ ಬಣ್ಣದ ಮನೆಯ ಎಲ್ಲ ಬಣ್ಣಗಳನ್ನು ಮೈಗೆ ಬಳಿದುಕೊಂಡು ಮನೆಯ ಮೇಲೆ ಅಂಗಾತ ಮಲಗಿದ ಮಲ್ಲೇಶಿ. ಆಕಾಶದಲ್ಲಿ ಹಾದುಹೋಗುವ ಯಾವುದಾದರೊಬ್ಬ ಗಂಧರ್ವ ತನ್ನ ದೋಷ ಕಳೆದು ಪೂರ್ತಿ ನಿರ್ಬಣ್ಣವಾಗಿಸುವನೆಂದೋ, ಇಲ್ಲವೇ ಆ ಅಣ್ಣ ತನ್ನ ಬಗ್ಗೆ ಕನಿಕರ ತಾಳಿ ಎಲ್ಲ ದೋಷ ಸರಿಪಡಿಸಿ ಬಾಳಿನುದ್ದಕ್ಕೂ ಹೊಂಬಣ್ಣ ಹರಿಸಿಯಾನೆಂದೋ ಕಣ್ಣಲಿ ದೀಪ ಹೊತ್ತಿಸಿಕೊಂಡು ಕಾಯುತ್ತಿದ್ದಾನೆ.
 
‘...ಗಂಧರ್ವ ಪಟ್ಟಣದಲ್ಲಿ ಹುಟ್ಟುವ ಬಹುಬಣ್ಣವ ಬಲ್ಲವನೆ ಬಲ್ಲ...’                       
–ಶರಣ ಆದಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT