ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಿನ ಹಣತೆ

ಕವನ
Last Updated 22 ಜನವರಿ 2017, 5:52 IST
ಅಕ್ಷರ ಗಾತ್ರ
ಎಚ್ಚರಗೊಳ್ಳುವುದೀ ಜನ ಒಂದು ದಿನ
ಹತ್ತಿರದಲ್ಲಿದೆ ಆ ದಿನ ಘೋಷಣೆ ಮೊಳಗುವ ಮಹಾದಿನ
ಕೈಗಳ ಬೇಡಿಕಳಚುವುದು ದಾಸ್ಯದ ಹೊರೆಯು ಇಳಿಯುವುದು
ಶೋಷಿತ ಜನತೆಯ ಕೇರಿಗಳಲ್ಲಿ ನಾಗರುಗಳು ಹೆಡೆಎತ್ತುವವು
ನಾಗಜನಾಂಗವು ಬುಸುಗುಡುತ ಊರಿನ ದಿಕ್ಕಿಗೆ ನುಗ್ಗುವುದು
ಶತಶತಮಾನದ ಕತ್ತಲೆ ಕಳೆದು ಜೋಪಡಿ–ಗುಡಿಸಲ ಮೂಲೆಗಳಲ್ಲಿ
ಅರಿವಿನ ಹಣತೆ ಬೆಳಗುವುದು.
 
ಪೀಡಿತ ಜನಗಳ ಹಾಡಿಗಳಲ್ಲಿ ಕಾಡುಗಳಲ್ಲಿ ನಾಡುಗಳಲ್ಲಿ
ಎಚ್ಚತ್ತವರ ಹಾಡುಗಳು ಮರಗಿಡದಲ್ಲಿ ಮಾರ್ದನಿಸಿ
ಕುರಿಗಳ ಹಿಂಡಾಗಿದ್ದವರು ಸಿಂಹದ ಗರ್ಜನೆ ಮಾಡುವರು
ತಪ್ಪನು ಮಾಡದ ಮುಗ್ಧರ ಮನೆಗೆ ಬೆಂಕಿಯ ಹಚ್ಚಿದ ಖೂಳರಿಗೆ
ಸಾವಿನ ಗುಂಡಿಯ ತೋಡುವರು.
ಮನೆಮನೆಯಲ್ಲಿ ಮನಮನದಲ್ಲಿ ಗುಡುಗು ಸಿಡಿಲಿನ ಸದ್ದಾಗಿ
ಕ್ರಾಂತಿಯ ಗಾಳಿ ಬೀಸುವುದು
 
ಗೋಳಿನ ಕಡಲಿನ ಆಳದಿ ಉರಿಯುವ ಜ್ವಾಲೆಯು ಮುಗಿಲಿಗೆ ಅಪ್ಪಳಿಸಿ
ಬೆಂಕಿಯ ಮಳೆಯು ಸುರಿಯುವುದು.
ಮಸಣದ ಗೋರಿಯ ಒಳಗಿಂದ ಸೆಣಸುತ ಏಳುವ ಪೂರ್ವಿಕರು
ಸಮಸಮಾಜವು ಬರಲೆಂದು ಹೋರಾಟವನು ಮಾಡುವರು
ಊರುಕೇರಿಗಳೊಂದಾಗಿ ಪ್ರೀತಿಯ ಹೂವು ಅರಳುವವು
 
ಕೈ ಕೈ ಜೋಡಿಸಿ ಜನಸಮುದಾಯ ಸಮತೆಯ ಬೀಡಿಗೆ ಸಾಗುವುದು.
ಪುರಾಣ ಕಥೆಗಳ ನೀರಿನ ಗುಳ್ಳೆ ದೊಪ್ಪನೆ ಒಡೆದು ಲಯವಾಗಿ
ಕೊರಳನು ಹಿಸಕುವ ಕರಾಳ ಕೈಗಳು ಸಮರದಿ ಸೋತು ತುಂಡಾಗಿ
ಸಮತೆಯ ಸೂರ್ಯ ಮೂಡುವನು ಗೋಳಿನ ಬೆಟ್ಟ ಕರಗುವುದು
ವನದಲಿ ಬೆದರಿದ ಜಿಂಕೆಗಳು ಛಂಗನೆ ನೆಗೆಯುತ ಓಡುವವು.
ಪಂಜರದಲ್ಲಿಯ ಹಕ್ಕಿಗಳು ಗಕ್ಕನೆ ಹರುಷದಿ ಹಾರುವವು
ಎಚ್ಚರಗೊಳ್ಳುವುದೀ ಜನ ಒಂದುದಿನ ಒಂದುದಿನ
ಹತ್ತಿರದಲ್ಲಿದೆ ಆ ದಿನ ಘೋಷಣೆ ಮೊಳಗುವ ಮಹಾದಿನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT