ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಟ ಅವಕಾಶವಾದಿ?

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ತಿಂಗಳುಗಳ ಹಿಂದೆ ನವಜೋತ್ ಸಿಂಗ್ ಸಿಧು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ಹಠಾತ್ತನೆ ರಾಜೀನಾಮೆ ಘೋಷಿಸಿದ್ದರು. ‘ವಜ್ರಪಾತ್ ಹೋ ಗಯಾ’ (ಸಿಡಿಲೆರಗಿತು) ಎಂದು ಉದ್ಗರಿಸಿದ್ದರು ಪಂಜಾಬ್ ಬಿಜೆಪಿ ಅಧ್ಯಕ್ಷ ವಿಜಯ್ ಸಂಪ್ಲಾ. ದೇಶದ ಜನಮಾನಸದಲ್ಲಿ ತಮ್ಮದೊಂದು ಪ್ರತ್ಯೇಕ ವರ್ಚಸ್ಸಿನ ಗೂಡು ಕಟ್ಟಿಕೊಂಡಿರುವ ಸಿಧು ನಿರ್ಗಮನ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿಗೆ ಬಿದ್ದ ಭಾರೀ ಹೊಡೆತ.

ಆಮ್ ಆದ್ಮಿ ಪಾರ್ಟಿಯ ಜೊತೆ ಚೌಕಾಸಿ ಗಿಟ್ಟಲಿಲ್ಲವೆಂದು, ರಾಜಕೀಯ ವೇದಿಕೆ ಕಟ್ಟಿಕೊಂಡು ಕಾಂಗ್ರೆಸ್ಸಿನೊಂದಿಗೆ ಉಪಮುಖ್ಯಮಂತ್ರಿ ಹುದ್ದೆಗೆ ವ್ಯವಹಾರ ಕುದುರಿಸಿರುವ ಸಿಧು ಅಪ್ಪಟ ಅವಕಾಶವಾದಿ ಎಂಬ ಟೀಕೆಯನ್ನು ಎದುರಿಸಿದ್ದಾರೆ.

ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರಿಗಾಗಿ ತಮ್ಮ ಕ್ಷೇತ್ರ ಅಮೃತಸರವನ್ನು ಬಿಟ್ಟುಕೊಡಬೇಕಾಯಿತು. ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಅವರು ಒಪ್ಪಲಿಲ್ಲ. ಜೇಟ್ಲಿ ತಮ್ಮ ರಾಜಕೀಯ ಗುರುವೆಂದು ಹೇಳಿದರೂ, ಗುರುವಿನ ಗೆಲುವಿಗೆ ಪ್ರಚಾರ ಮಾಡದೆ ದೂರ ಉಳಿದರು. 2014ರ ಆ ಚುನಾವಣೆಯಲ್ಲಿ ಜೇಟ್ಲಿ ಸೋಲನ್ನು ಭಾರೀ ಮುಖಭಂಗವೆಂದು ಅಕಾಲಿ-ಬಿಜೆಪಿ ಬಗೆದವು. ಅಂದಿನಿಂದಲೇ ಸಿಧು ಒಂದು ಬಗೆಯ ರಾಜಕೀಯ ಅಜ್ಞಾತವಾಸಕ್ಕೆ ಶರಣಾದರು. ‘ಮೋದಿ ಅಲೆಯೇನೋ ಬಂತು, ಆದರೆ ನನ್ನನ್ನೂ ಮುಳುಗಿಸಿಬಿಟ್ಟಿತು’ ಎಂಬ ಅವರ ಮಾತಿನಲ್ಲಿ ಅಗಾಧ ಆತ್ಮಮರುಕ ಕಂಡವರುಂಟು.

ಪಂಜಾಬಿನ ಶೇ 90ರಷ್ಟು ಕೃಷಿ ಭೂಮಿಯ ಮಾಲೀಕರು ಜಾಟ ಸಿಖ್ಖರು. ಆ ರಾಜ್ಯದ ಜನಸಂಖ್ಯೆಯಲ್ಲಿ ಇವರ ಪ್ರಮಾಣ ಶೇ 21ರಷ್ಟು. ಆರ್ಥಿಕ-ಸಾಮಾಜಿಕ-ರಾಜಕೀಯವಾಗಿ ಬಲಾಢ್ಯರು. ಈ ಸಮುದಾಯಕ್ಕೆ ಸೇರಿದ ಸಿಧು ವಿಶ್ವ ಜಾಟ ಆರ್ಯ ಸಂಘದ ಅಧ್ಯಕ್ಷರು.

ಕ್ರಿಕೆಟ್ ಪಟು ನವಜೋತ್ ಸಿಂಗ್ ಸಿಧು ಮತ್ತು ಬಿಜೆಪಿ ಸಂಬಂಧ ಕಳೆದ ಕೆಲವು ವರ್ಷಗಳಿಂದ ಹಳಸಿತ್ತು. ‘ಸಿಕ್ಸರ್ ಸಿಧು’ ಎಂದು ಅವರು ಪಡೆದ ಅಭಿದಾನ ಕ್ರಿಕೆಟ್ ಪ್ರೇಮಿಗಳ ನೆನಪಿನಲ್ಲಿ ಇಂದಿಗೂ ಮಸುಕಾಗಿಲ್ಲ. ಕ್ರಿಕೆಟ್ ನಂಟು ಹರಿದುಕೊಂಡ ನಂತರ ರಾಜಕಾರಣಕ್ಕೆ ಒಲಿದು ಹದಿನೆಂಟು ವರ್ಷಗಳೇ ಉರುಳಿವೆ. ನಡುವೆ ಕ್ರಿಕೆಟ್ ಕಾಮೆಂಟರಿ. ನಗೆಗಾರನಾಗಿ ಟಿ.ವಿ ಷೋಗಳಲ್ಲಿಯೂ ಜನಪ್ರಿಯರು. ನಾಚಿಕೆ ಸ್ವಭಾವದ ಈ ಅಂತರ್ಮುಖಿ ಬಾಯಿಬಡುಕನೇ ಆಗಿ ರೂಪಾಂತರ ಹೊಂದಿದವರು. ನೆಲದ ಸೊಗಡನ್ನು ಸೂಸುವ ತಮ್ಮದೇ ನುಡಿಗಟ್ಟುಗಳು ಅವರ ಬಾಯಿಂದ ಓತಪ್ರೋತವಾಗಿ ಹರಿಯುತ್ತವೆ. ನವಿರು ನಾಟಕೀಯತೆಯಲ್ಲಿ ಅವರಿಗೆ ನಂಬಿಕೆಯಿಲ್ಲ. ನಡೆನುಡಿಯಲ್ಲಿ ಅಬ್ಬರವೇ ಅಚ್ಚುಮೆಚ್ಚು. ಚುನಾವಣಾ ರ್‍ಯಾಲಿಗಳಲ್ಲಿ ಜನಸಮೂಹದ ಗಮನವನ್ನು ಸೆರೆಹಿಡಿಯಬಲ್ಲ ಮಾತುಗಾರಿಕೆ ಅವರಿಗೆ ಉಂಟು.

ಹುಟ್ಟಾ ಸಿರಿವಂತಿಕೆಯಲ್ಲಿ ಸುಖಿಸಿದವರು ಸಿಧು. ಬಯಸಿದ್ದೆಲ್ಲ ಅಂಗೈಗೆ ಬಂದು ಬೀಳಬೇಕು ಎಂಬ ಧೋರಣೆ ಅವರದು. ಅವರ ತಂದೆಯೂ ಕ್ರಿಕೆಟ್ ಪಟು. ರಾಜ್ಯದ ಅಡ್ವೊಕೇಟ್ ಜನರಲ್. ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದವರು. ಮಗನಿಗಾಗಿ ಮನೆಯಂಗಳದಲ್ಲೇ ಕ್ರಿಕೆಟ್ ಪಿಚ್ ಸಿದ್ಧಪಡಿಸಿ ಮಗ ಟೆಸ್ಟ್ ಆಡಲೆಂದು ಕನಸು ಕಂಡವರು. ವಾಜಪೇಯಿ ಖುದ್ದಾಗಿ ಕರೆ ಮಾಡಿ ನೀಡಿದ ಒತ್ತಾಸೆಯ ಮೇರೆಗೆ ಬಿಜೆಪಿ ಸೇರಿದ್ದರು ಸಿಧು. ಸಿಖ್ ಪ್ರಾಬಲ್ಯದ ರಾಜ್ಯದಲ್ಲಿ ಹಿಂದೂವಾದಿ ಪಕ್ಷ ಬಿಜೆಪಿಯ ಏಕೈಕ ಸಿಖ್ ಚಹರೆಯಾಗಿ ಹೊಮ್ಮಿದರು. ಕಾಲಕ್ರಮೇಣ ರಾಜಕೀಯ ಮಹತ್ವಾಕಾಂಕ್ಷೆ ಬೆಳೆಸಿಕೊಂಡರು.

ಮುಖ್ಯಮಂತ್ರಿ ಗಾದಿಯ ಮೇಲೆ ಅವರ ಮನಸು ನೆಟ್ಟು ಹೋಯಿತು. ಅಕಾಲಿದಳದ ಬಾದಲ್ ಕುಟುಂಬದ ಸ್ವಜನಪಕ್ಷಪಾತ, ಭ್ರಷ್ಟಾಚಾರದ ವಿರುದ್ಧ ಸಿಧು ಅವರದು ಕರುಳ ದ್ವೇಷ. ಈ ಕಾರಣಕ್ಕಾಗಿಯೇ ಪಂಜಾಬಿನ ಒಂದು ಜನವರ್ಗ ಅವರನ್ನು ಮೆಚ್ಚಿಕೊಂಡಿರುವುದೂ ಉಂಟು. ತಮ್ಮನ್ನು ಬೆಳೆಸಿದ ಪಕ್ಷ ಬಿಜೆಪಿ, ಬಾದಲ್ ಸಂಬಂಧ ತೊರೆದು ಸ್ವತಂತ್ರವಾಗಿ ಸ್ಪರ್ಧಿಸಿದರೆ ತಮ್ಮ ಕನಸು ಕೈಗೂಡೀತು ಎಂಬುದು ಅವರ ಅಂದಾಜು. ತಮ್ಮ ತಾಳಕ್ಕೆ ಹೆಜ್ಜೆ ಹಾಕಲಿಲ್ಲವೆಂದು ತಮ್ಮನ್ನು ಬೆಳೆಸಿದ್ದ ಪಕ್ಷದ ವಿರುದ್ಧ ಸಿಡಿದು ಕಾಂಗ್ರೆಸ್ ಸೇರಿದ್ದಾರೆ.

ಸಿಧು ಪತ್ನಿ ನವಜೋತ್ ಕೌರ್ ವೃತ್ತಿಯಲ್ಲಿ ವೈದ್ಯೆ. ಪತಿಯೊಂದಿಗೆ ರಾಜಕಾರಣಕ್ಕೆ ಕಾಲಿರಿಸಿ ಅಮೃತಸರ ಪೂರ್ವ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದವರು. ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಉಪಮುಖ್ಯಮಂತ್ರಿಯೂ ಆದ ಅವರ ಮಗ ಸುಖಬೀರ್ ಬಾದಲ್ ವಿರುದ್ಧ ತಿರುಗಿಬಿದ್ದಿದ್ದರು. ಮಗಳೇ ಎಂದು ಬಾಯಲ್ಲಿ ಸಿಹಿಗರೆಯುವ ಮುಖ್ಯಮಂತ್ರಿ ತಮ್ಮನ್ನು ವಾಸ್ತವವಾಗಿ ನಡೆಸಿಕೊಂಡಿದ್ದು ಮಲಮಗಳಂತೆ ಎಂದು ಜರೆದಿದ್ದಾರೆ. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬೇಕೆಂದೇ ಹಣ ನೀಡಲಿಲ್ಲ ಎಂಬುದು ಅವರ ಆಕ್ರೋಶ.

ಖುದ್ದು ಸಿಧು ಹೇಳಿರುವಂತೆ ತಮ್ಮ ಮತ್ತು ಅಕಾಲಿದಳದ ನಡುವೆ ವಿರಸ ಶುರುವಾದದ್ದು ಮೂರು ವರ್ಷಗಳ ಹಿಂದೆ. ಅಮೃತಸರ ಲೋಕಸಭಾ ಕ್ಷೇತ್ರಕ್ಕೆ ಮಂಜೂರಾಗಿದ್ದ ಎಂಟು ಅಭಿವೃದ್ಧಿ ಯೋಜನೆಗಳ ಜಾರಿಯನ್ನು ಬಾದಲ್ ಸರ್ಕಾರ ನಿಲ್ಲಿಸಿದ ಸಂದರ್ಭ. ದೂರು ನೀಡಿದರೆ ಬಿಜೆಪಿ ನಾಯಕತ್ವ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ. ‘ಕ್ಷೇತ್ರ ಬದಲಾಯಿಸಿಬಿಡಿ, 2014ರಲ್ಲಿ ನೆರೆಯ ರಾಜ್ಯ ಹರಿಯಾಣದ ಕುರುಕ್ಷೇತ್ರದಿಂದ ಸ್ಪರ್ಧಿಸಿ ಕೇಂದ್ರದಲ್ಲಿ ಮಂತ್ರಿ ಹುದ್ದೆ ನೀಡುತ್ತೇವೆ’ ಎಂದು ಸಲಹೆ ನೀಡಿತು.

‘ಪಂಜಾಬನ್ನು ಲೂಟಿ ಮಾಡಿ ಭ್ರಷ್ಟಾಚಾರದಲ್ಲಿ ಮುಳುಗೆದ್ದು ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗಿರುವ ಅಕಾಲಿದಳದ ಗೆಳೆತನ ಬಿಜೆಪಿಯನ್ನೂ ಮುಳುಗಿಸಲಿದೆ ಎಂದು ಪಕ್ಷದ ಪ್ರಮುಖ ನಾಯಕರನ್ನು ಭೇಟಿ ಮಾಡಿ ಅಲವತ್ತುಕೊಂಡೆ. ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಬೇಕು ಎಂಬ ನನ್ನ ಸಲಹೆ ಯಾರಿಗೂ ಪಥ್ಯವಾಗಲಿಲ್ಲ. ಅಕಾಲಿಗಳ ಜೊತೆ ಗೆಳೆತನ ಕಡಿದುಕೊಳ್ಳಲು ಒಪ್ಪಲಿಲ್ಲ. ಬದಲಿಗೆ ನನ್ನನ್ನು ಪಂಜಾಬ್ ರಾಜಕಾರಣದಿಂದಲೇ ದೂರ ಇರಿಸುವ ಸಂಚು ನಡೆಯಿತು. ನಾನು ಗುರುನಾನಕರ ನಗರವನ್ನು (ಅಮೃತಸರ) ತೊರೆಯುವ ಮಾತೇ ಇಲ್ಲ.

ಮೋದಿಯವರು ಖುದ್ದು ಮಾತಾಡಿದ ಕಾರಣ ರಾಜ್ಯಸಭೆ ಸದಸ್ಯತ್ವ ಒಪ್ಪಿಕೊಂಡೆ. ಆದರೆ ಅದು ಹೆಗಲ ಮೇಲಿನ ಒಜ್ಜೆಯಾಗಿ ಪರಿಣಮಿಸಿತು. ಪಂಜಾಬಿನ ರಾಜಕಾರಣದಲ್ಲಿ ನನ್ನ ಪಾಲಿನ ಕಿಟಕಿಗಳನ್ನು ಕೂಡ ಮುಚ್ಚಲಾಯಿತು. ಪಂಜಾಬಿನ ಸರ್ವಾಂಗೀಣ ಉನ್ನತಿಗೆ ಶ್ರಮಿಸುವ ನನ್ನ ಕನಸನ್ನು ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಹೀಗಾಗಿ ಬಿಜೆಪಿಯಿಂದ ಹೊರಬರುವುದು ಅನಿವಾರ್ಯ ಆಯಿತು’ ಎಂಬುದು ಸಿಧು ವಿವರಣೆ.

ಆಮ್ ಆದ್ಮಿ ಪಾರ್ಟಿ ಜೊತೆ ಚೌಕಾಸಿ ಮಾಡಿ ಗಿಟ್ಟದೆ ಕಾಂಗ್ರೆಸ್ಸಿಗೆ ಬಂದ ಅವಕಾಶವಾದಿ ಎಂಬ ಆರೋಪಕ್ಕೆ ಅವರ ಸಮಜಾಯಿಷಿ- ‘ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ನನ್ನ ಪತ್ನಿಗೆ ಮಾತ್ರ ಕೊಡುವುದಾಗಿಯೂ, ನಾನು ಕೇವಲ ಪ್ರಚಾರ ಕಾರ್ಯದಲ್ಲಿ ನಿರತನಾಗಬೇಕು ಎಂಬುದಾಗಿಯೂ ಕೇಜ್ರಿವಾಲ್ ತಾಕೀತು ಮಾಡಿದರು. ಸ್ಪರ್ಧಿಸಕೂಡದು ಎನ್ನಲು ನಾನು ಕೇವಲ ಪ್ರದರ್ಶನದ ಸರಕಲ್ಲ’.

‘ಕಾಂಗ್ರೆಸ್ ಕೇ ಹಾಥ್ ಗರೀಬ್ ಕೇ ಸಾಥ್ ಎನ್ನುವ ಘೋಷಣೆ ಒಂದು ದೊಡ್ಡ ನಗೆಹನಿ. ಜನರ ಕಪಾಳದ ಮೇಲೆ ಎರಗಿದ ಹಸ್ತ ಅದು’ ಎಂದು ಹಿಂದೊಮ್ಮೆ ಟೀಕಿಸಿದ್ದ ಹಸ್ತವನ್ನೇ ಈಗ ಮುತ್ತಿಟ್ಟು ಕುಲುಕಿದ್ದಾರೆ ಸಿಧು. ಪಂಜಾಬಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರೂ ಆದ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮುಖ್ಯಮಂತ್ರಿ, ಸಿಧು ಉಪಮುಖ್ಯಮಂತ್ರಿ. ಅಹಮಿಕೆಯ ಎರಡು ಅಧಿಕಾರ ಕೇಂದ್ರಗಳು ಮದ್ದಾನೆಯಂತೆ ಗುದ್ದಾಡಲಿವೆಯೇ ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT