ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕರಣೆಯಲ್ಲ ಬದಲಾವಣೆ

ಪಠ್ಯಪುಸ್ತಕ ಪರಿಷ್ಕರಣೆ
Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಡಾ. ಬರಗೂರು  ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ 1ರಿಂದ 10ನೇ ತರಗತಿವರೆಗಿನ ಪಠ್ಯಗಳನ್ನು ಪರಿಷ್ಕರಿಸುವುದರ ಬದಲು ಭಾರಿ ಮಾರ್ಪಾಟು ಮಾಡಿರುವ ಸಾಧ್ಯತೆ ಇದೆ ಎಂಬ ಅನುಮಾನ ಒಂದು ವಲಯದಿಂದ ವ್ಯಕ್ತವಾಗಿದೆ. ಇದನ್ನು ಸಮರ್ಥಿಸಿಕೊಳ್ಳುತ್ತಾರೆ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಅರುಣ ಶಹಾಪುರ. ಸಂದರ್ಶನದ ಆಯ್ದ ಭಾಗ ಇಲ್ಲಿದೆ...

* ಡಾ. ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದಲ್ಲಿ ನಡೆದಿರುವ ಪಠ್ಯಪುಸ್ತಕ ಪರಿಷ್ಕರಣೆ ಕಾರ್ಯಕ್ಕೆ ನಿಮ್ಮ ವಿರೋಧ ಏಕೆ?
ವಿರೋಧಕ್ಕೆ ಐದು ಪ್ರಮುಖ ಕಾರಣಗಳಿವೆ.
1. ಪಠ್ಯಪುಸ್ತಕ ಪರಿಷ್ಕರಣೆ ಪಾರದರ್ಶಕವಾಗಿ ನಡೆದಿಲ್ಲ. ಅದು ನಿಗೂಢವಾಗಿ ನಡೆದಿದ್ದು, ತಮಗೆ ಬೇಕಾದವರನ್ನು ಮಾತ್ರ ಆಯ್ಕೆ ಮಾಡಿ ಈ ಕಾರ್ಯ ಸಾಧಿಸಲಾಗಿದೆ. ಅಲ್ಲದೆ ಸಮಿತಿಯ ಮುಖ್ಯಸ್ಥರು ಪರಿಷ್ಕರಣೆ ಕುರಿತು ಚರ್ಚೆಗೂ ಸಿದ್ಧ ಇಲ್ಲದಿರುವುದು ಅನುಮಾನ ಮೂಡಿಸಿದೆ.
2. ಪರಿಷ್ಕೃತ ಪಠ್ಯವನ್ನು ಸಮಗ್ರವಾಗಿ ಪರಾಮರ್ಶಿಸಿ 2018–19ನೇ ಸಾಲಿನಿಂದ ಜಾರಿಗೊಳಿಸುವುದಾಗಿ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಸದನದಲ್ಲಿ ಭರವಸೆ ನೀಡಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2017–18ನೇ ಸಾಲಿನಿಂದಲೇ ಈ ಪಠ್ಯವನ್ನು ಜಾರಿಗೆ ತರುವುದಾಗಿ ಹೇಳಿರುವುದು ಗೊಂದಲ ಮೂಡಿಸಿದೆ.
3. ‘ಚರ್ಚೆಗೆ ಅವಕಾಶ ನೀಡದೆ ಯಥಾವತ್ತಾಗಿ ಪರಿಷ್ಕೃತ ಪಠ್ಯ ಮುದ್ರಣಕ್ಕೆ ಹೋಗಬೇಕು. ಅದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಜಾರಿಯಾಗಬೇಕು’ ಎಂದು ಸಮಿತಿ ಅಧ್ಯಕ್ಷರು ಪಟ್ಟು ಹಿಡಿದಿರುವುದು ನೋಡಿದರೆ ಅವರು ಏಕಪಕ್ಷೀಯವಾಗಿ ಪಠ್ಯ ಪರಿಷ್ಕರಿಸಿದ್ದಾರೆ ಎಂದೆನಿಸುತ್ತದೆ.
4. ಸರ್ಕಾರವೇ ನೇಮಿಸಿದ್ದ ಮೂವರು ಅಧಿಕಾರಿಗಳ ಸಮಿತಿಗೆ, ಪರಿಷ್ಕರಣಾ ಸಮಿತಿಯು ಪಠ್ಯ ಪರಿಷ್ಕರಣೆ ಕುರಿತು ಮಾಹಿತಿ ನೀಡದೆ  ಇರುವುದು ಎಷ್ಟು ಸರಿ?
5. ಕೇಂದ್ರ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುತ್ತಿದೆ. ರಾಜ್ಯ ಶಿಕ್ಷಣ ಆಯೋಗ ಕೆಲ ಶಿಫಾರಸುಗಳನ್ನು ಮಾಡಿದೆ. ಇನ್ನೊಂದೆಡೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತಿನ (ಎನ್‌ಸಿಇಆರ್‌ಟಿ) ಪಠ್ಯವನ್ನು ಭಾಷಾಂತರಿಸುವ ಕೆಲಸವೂ ನಡೆಯುತ್ತಿದೆ. ಇವೆಲ್ಲ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರಲ್ಲಿ ಗೊಂದಲ ಉಂಟು ಮಾಡಿವೆ.

* ಪರಿಷ್ಕೃತ ಪಠ್ಯವನ್ನೇ ನೋಡದೆ ವಿರೋಧಿಸುವುದು ಸರಿಯೇ?
ಪರಿಷ್ಕೃತ ಪಠ್ಯವನ್ನು ಸಮಿತಿಯಾಗಲಿ, ಶಿಕ್ಷಣ ಇಲಾಖೆಯಾಗಲಿ ಬಹಿರಂಗಪಡಿಸಿಲ್ಲ. ತನ್ನ ವೆಬ್‌ಸೈಟ್‌ನಲ್ಲೂ ಅಪ್‌ಲೋಡ್‌ ಮಾಡುವ ಸೌಜನ್ಯ ತೋರಿಲ್ಲ. ಹೀಗಾಗಿ ಪಠ್ಯದಲ್ಲಿ ಏನಿದೆ, ಏನಿಲ್ಲ ಎಂಬುದು ಗೊತ್ತಿಲ್ಲ. ಆದರೆ ಪಠ್ಯ ಪರಿಷ್ಕರಣಾ ಸಮಿತಿಯ ಕಾರ್ಯವೈಖರಿ ಪ್ರಶ್ನಾರ್ಹವಾಗಿದೆ. ಎಲ್ಲವನ್ನೂ ಗೋಪ್ಯವಾಗಿ ಮಾಡಿರುವುದೇ ಇದಕ್ಕೆ ಕಾರಣ. ಚರ್ಚೆಗೆ ಅವಕಾಶ ನೀಡದೆ ಸರ್ವಾಧಿಕಾರಿ ಧೋರಣೆ ತಳೆದಿರುವುದಕ್ಕೆ ನಮ್ಮ ವಿರೋಧ ಇದೆ.

* ಹಾಗಾದರೆ ಪಠ್ಯ ಪರಿಷ್ಕರಣೆಗೆ ನಿಮ್ಮ ಒಪ್ಪಿಗೆ ಇದೆಯೇ?
ಅಗತ್ಯವಿದ್ದರೆ ಪಠ್ಯ ಪರಿಷ್ಕರಣೆ ಮತ್ತು ಬದಲಾವಣೆ ಮಾಡಲು ನಮ್ಮ ತಕರಾರಿಲ್ಲ. ಆದರೆ ಯಾವುದನ್ನು, ಏತಕ್ಕಾಗಿ ಪರಿಷ್ಕರಿಸಲಾಗುತ್ತಿದೆ ಮತ್ತು ಬದಲಿಸಲಾಗುತ್ತಿದೆ ಎಂಬುದರ ವಿವರಣೆ ನೀಡಬೇಕು. ಆ ಪಠ್ಯ  ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು, ರಾಜ್ಯ ಪಠ್ಯಕ್ರಮ ಚೌಕಟ್ಟಿನ ವ್ಯಾಪ್ತಿಯೊಳಗೆ ಬರಬೇಕು. ಜತೆಗೆ ಅದು  ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಹಾಗೂ ಎನ್‌ಸಿಇಆರ್‌ಟಿ ಪರಿಶೀಲನೆಗೂ ಒಳಪಡಬೇಕು. ಹೀಗಾದರೆ ನಮ್ಮ ಅಭ್ಯಂತರ ಇಲ್ಲ.

* ಬಿಜೆಪಿ ಸರ್ಕಾರ 2012ರಲ್ಲಿ ಹೊಸ ಪಠ್ಯ ಜಾರಿಗೆ ತಂದಾಗ ಈ ರೀತಿ ಚರ್ಚೆ ಮತ್ತು ಪರಿಶೀಲನೆ ನಡೆದಿತ್ತೇ?
ಡಯಟ್‌, ಡಿಎಸ್‌ಇಆರ್‌ಟಿ, ಎನ್‌ಸಿಇಆರ್‌ಟಿಗಳಲ್ಲಿ ಪರಿಶೀಲನೆ ಮತ್ತು ಚರ್ಚೆ ನಡೆದಿತ್ತು. ಶಿಕ್ಷಣ ತಜ್ಞರೂ ವಿಮರ್ಶಿಸಿದ್ದರು. ಅಲ್ಲದೆ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ವೆಬ್‌ಸೈಟ್‌ನಲ್ಲೂ  ಪ್ರಕಟಿಸಿ ಸಾರ್ವಜನಿಕರ ಗಮನಕ್ಕೆ ತಂದಿತ್ತು. ಕೆಲವರು ಆಗ ‘ಬಿಜೆಪಿ ಕೇಸರೀಕರಣ ಮಾಡುತ್ತಿದೆ’ ಎಂದು ಆರೋಪಿಸಿದ್ದರು. ಈ ಕುರಿತು ಸಹ ಎನ್‌ಸಿಇಆರ್‌ಟಿ ಪರಿಶೀಲನೆ ನಡೆಸಿತ್ತು.

* ಸೈದ್ಧಾಂತಿಕ ಸಂಘರ್ಷ ನಡೆಯುತ್ತಿದೆಯೇ?
ಜಾಗೃತ ಸಮಾಜ ಇರುವಾಗ ಪಠ್ಯದಲ್ಲಿ ಸುಲಭವಾಗಿ ನಿರ್ದಿಷ್ಟ ಸಿದ್ಧಾಂತವನ್ನು ತುರುಕಲು ಆಗುವುದಿಲ್ಲ. ಕೇಸರೀಕರಣ, ಅಹಿಂದಕರಣ, ಕಾಂಗ್ರೆಸ್ಸೀಕರಣವನ್ನು ಪಠ್ಯದಲ್ಲಿ ಅಂದುಕೊಂಡಷ್ಟು ಸಲೀಸಾಗಿ ತರಲಾಗದು. ಆದರೆ ಬುದ್ಧಿಜೀವಿ ಎನಿಸಿಕೊಂಡವರು, ತಮ್ಮ ವಿಚಾರಗಳನ್ನು ಪಠ್ಯದ ಮೂಲಕ ತರಬಹುದು ಎಂಬ ಭ್ರಮೆಯಲ್ಲಿದ್ದಾರೆ.

* ಪರಿಷ್ಕೃತ ಪಠ್ಯ 2017–18ನೇ ಸಾಲಿನಿಂದಲೇ ಜಾರಿಯಾದರೆ ಏನು ಮಾಡುತ್ತೀರಿ?
ಪಠ್ಯಪುಸ್ತಕಗಳ ಮುದ್ರಣಕ್ಕೆ ಸರ್ಕಾರ ಸುಮಾರು ₹ 120 ಕೋಟಿ ವ್ಯಯಿಸುತ್ತದೆ. ಹಾಗಾಗಿ ಮುದ್ರಣಕ್ಕೂ ಮುನ್ನವೇ ಚರ್ಚಿಸಿ, ಪರಿಶೀಲಿಸುವುದು ಒಳ್ಳೆಯದು. ಅದಕ್ಕೆ ಅವಕಾಶ ಸಿಗದಿದ್ದರೆ ಜೂನ್‌ವರೆಗೂ ಕಾಯುತ್ತೇವೆ. ಮುದ್ರಿತ ಪಠ್ಯ ಕೈಸೇರಿದ ಮೇಲೆ ಅದರಲ್ಲಿನ ಲೋಪದೋಷಗಳ ಕುರಿತು ಸಮಗ್ರ ಚರ್ಚೆ ನಡೆಸಿ, ಜನರ ಮುಂದೆ ಬಹಿರಂಗಪಡಿಸುತ್ತೇವೆ.

* ಈ ಕುರಿತು ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದೀರಿ. ಅದಕ್ಕೆ ಯಾವ ಪ್ರತಿಕ್ರಿಯೆ ದೊರೆತಿದೆ?
ರಾಜ್ಯಪಾಲರು ‘ಸರ್ಕಾರದಿಂದ ಮಾಹಿತಿ ಪಡೆದುಕೊಳ್ಳುತ್ತೇನೆ’ ಎಂದಿದ್ದಾರೆ. ಕೇಂದ್ರ ಸರ್ಕಾರ ಕಾನೂನು ರೀತಿ ನಡೆದುಕೊಳ್ಳುವುದಾಗಿ ಭರವಸೆ ನೀಡಿದೆ. ಅಲ್ಲದೆ  ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಯುತ್ತಿದೆ.
*
ಪರಿಷ್ಕರಣೆ ಹೆಸರಿನಲ್ಲಿ ಶೇ 20ರಷ್ಟು ಪಠ್ಯಗಳಲ್ಲಿಯೇ ಬದಲಾವಣೆ ಆಗಿದೆ ಎಂಬ ಸುಳಿವು ಸಿಕ್ಕಿದೆ. ಈ ಪ್ರಮಾಣ ಇನ್ನೂ ಹೆಚ್ಚಿರಬಹುದು ಎಂಬ ಅನುಮಾನವೂ ಇದೆ.
ಅರುಣ ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT