ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾರಣಕ್ಕೆ ಪುನರ್‌ರಚನೆ

ಪಠ್ಯಪುಸ್ತಕ ಪರಿಷ್ಕರಣೆ
Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಡಾ. ಬರಗೂರು ರಾಮಚಂದ್ರಪ್ಪ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ 1ರಿಂದ 10ನೇ ತರಗತಿವರೆಗಿನ ಪಠ್ಯಗಳನ್ನು ಪರಿಷ್ಕರಿಸುವುದರ ಬದಲು ಭಾರಿ ಮಾರ್ಪಾಟು ಮಾಡಿರುವ ಸಾಧ್ಯತೆ ಇದೆ ಎಂಬ ಅನುಮಾನ ಒಂದು ವಲಯದಿಂದ ವ್ಯಕ್ತವಾಗಿದೆ. ಇಂಥ ಆರೋಪಗಳನ್ನು ತಳ್ಳಿಹಾಕಿರುವ ಬರಗೂರು, ಸೈದ್ಧಾಂತಿಕ ಧೋರಣೆಗಳನ್ನು ಮೀರಿ  ಪಠ್ಯ ಸಿದ್ಧಪಡಿಸಿರುವುದಾಗಿ ಹೇಳಿದ್ದಾರೆ. ಇಬ್ಬರ ಸಂದರ್ಶನದ ಆಯ್ದ ಭಾಗ ಇಲ್ಲಿದೆ...

* ನಿಮ್ಮ ನೇತೃತ್ವದಲ್ಲಿ ನಡೆದಿರುವ ಪಠ್ಯ ಪರಿಷ್ಕರಣೆಗೆ ಏಕೆ ವಿರೋಧ ಬರುತ್ತಿದೆ?
ವಿರೋಧಕ್ಕೆ ಕಾರಣವೇ ಗೊತ್ತಾಗುತ್ತಿಲ್ಲ.  ಕೇವಲ ತಪ್ಪು ಮಾಹಿತಿ ಆಧರಿಸಿ ಕೆಲವರು ವಿರೋಧಿಸುತ್ತಿದ್ದಾರೆ. ಸಮಿತಿ ರಚನೆಯಾಗಿ ಒಂದೂವರೆ ವರ್ಷವೇ ಕಳೆದಿದೆ. ಪಠ್ಯ ಪರಿಷ್ಕರಣೆ ಕೆಲಸವೂ ಮುಗಿದಿದೆ. ಇಂತಹ ಸಂದರ್ಭದಲ್ಲಿ ಆರೋಪ ಮಾಡುವವರ ಹಿಂದಿನ ಉದ್ದೇಶ ಸರಿಯಿಲ್ಲ ಎನಿಸುತ್ತದೆ.
ಶಾಲಾ ಮಕ್ಕಳು ಪಠ್ಯಪುಸ್ತಕಗಳನ್ನು ಓದಬೇಕೇ ಹೊರತು ಪಕ್ಷ ಪುಸ್ತಕಗಳನ್ನಲ್ಲ. ಹಾಗಾಗಿ ಯಾವುದೇ ರಾಜಕೀಯ ಸಿದ್ಧಾಂತದ ಪರ ಅಥವಾ ವಿರುದ್ಧವಾಗಿ ನಾವು ಪಠ್ಯ ಪುಸ್ತಕಗಳನ್ನು ಪರಿಷ್ಕರಿಸಿಲ್ಲ. ನನ್ನ ಸೈದ್ಧಾಂತಿಕ ಧೋರಣೆಯನ್ನು ಮಾನಸಿಕವಾಗಿ ದೂರವಾಗಿಟ್ಟು ಪಠ್ಯ ಪರಿಷ್ಕರಿಸಲಾಗಿದೆ. ಸಮಿತಿ ಸದಸ್ಯರ ಮೇಲೆ ನನ್ನ ಸಿದ್ಧಾಂತದ ಪ್ರಭಾವ ಆಗದಂತೆಯೂ ಎಚ್ಚರ ವಹಿಸಿದ್ದೇನೆ.

* ಪರಿಷ್ಕೃತ ಪಠ್ಯ ಕುರಿತು ಸಾರ್ವಜನಿಕ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಎಂಬ ಆರೋಪ ಇದೆಯಲ್ಲಾ?
ಪಠ್ಯ ಪರಿಷ್ಕರಿಸುವುದಕ್ಕೂ ಮುನ್ನ 40ಕ್ಕೂ ಹೆಚ್ಚು ಸಭೆಗಳನ್ನು ನಡೆಸಿ ಪಠ್ಯಕ್ಕೆ ಸಂಬಂಧಿಸಿದಂತೆ ಇದ್ದ ಆಕ್ಷೇಪಗಳನ್ನು ಲಿಖಿತವಾಗಿ ಪಡೆಯಲಾಗಿದೆ (ಸಾವಿರ ಪುಟಕ್ಕೂ ಹೆಚ್ಚಿದೆ). ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸಂಘಗಳ ಪ್ರತಿನಿಧಿಗಳು, ವಿಷಯ ನಿರೀಕ್ಷಕರು, ಡಯಟ್‌ ಪ್ರಾಂಶುಪಾಲರು, ವಿಷಯವಾರು ಶಿಕ್ಷಕರ ವೇದಿಕೆಗಳು, ವಿಜ್ಞಾನಿಗಳಿಂದ ಸಲಹೆ, ಸೂಚನೆಗಳನ್ನು ಪಡೆಯಲಾಗಿದೆ. ಮಹಿಳಾ ಸಂಘಗಳೊಂದಿಗೂ ಚರ್ಚಿಸಲಾಗಿದೆ. ಸಾಕಷ್ಟು ಅಭಿಪ್ರಾಯ ಸಂಗ್ರಹಿಸಿ, ಅಗತ್ಯ ತಯಾರಿ ಮಾಡಿಕೊಂಡೇ ಪರಿಷ್ಕರಣೆ ಕಾರ್ಯ ನಡೆದಿದೆ.

ಪರಿಷ್ಕೃತ ಪಠ್ಯಗಳು ಮುದ್ರಣಕ್ಕೂ ಮುನ್ನ ಸಾರ್ವಜನಿಕವಾಗಿ ಚರ್ಚೆಯಾದ ನಿದರ್ಶನಗಳೇ ಇಲ್ಲ. ಅಲ್ಲದೆ 2012ರಲ್ಲಿ ಹೊಸ ಪಠ್ಯಗಳು ರಚನೆಯಾದಾಗಲೂ ಈ ರೀತಿಯ ಚರ್ಚೆಗಳು ನಡೆದಿರಲಿಲ್ಲ. ಆಗ ಪಠ್ಯ ಮುದ್ರಣವಾದ ನಂತರ ಅದರ ಪ್ರತಿಯನ್ನು ಶಿಕ್ಷಣ ಇಲಾಖೆ ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಿತ್ತೇ ಹೊರತು ಮುದ್ರಣಕ್ಕೆ ಮುನ್ನವಲ್ಲ.  ಅಂದು ನಡೆಯದ ಚರ್ಚೆ ಇಂದೇಕೆ ನಡೆಯಬೇಕಾಗಿದೆಯೋ ಗೊತ್ತಿಲ್ಲ.

* ಪರಿಷ್ಕರಣೆ ನೆಪದಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪ ಇದೆಯಲ್ಲಾ?
ಪಠ್ಯವನ್ನು ಉದ್ದೇಶಪೂರ್ವಕವಾಗಿ ಬದಲಿಸಿಲ್ಲ. ಅಗತ್ಯವಿದ್ದರೆ ಪಠ್ಯದಲ್ಲಿ ಕೆಲ ಬದಲಾವಣೆ ತರಲು ಹಾಗೂ ಪುನರ್‌ರಚಿಸಲು ಸರ್ಕಾರವೇ ಅನುಮತಿ ನೀಡಿ ಆದೇಶಿಸಿದೆ. ಪಠ್ಯದಲ್ಲಿ ಇದ್ದ ಆಕ್ಷೇಪಾರ್ಹ ಸಂದೇಶ ಮತ್ತು ತಪ್ಪು ಮಾಹಿತಿಗಳನ್ನಷ್ಟೇ ತೆಗೆದು, ಅವುಗಳನ್ನು ಸರಿಪಡಿಸಲಾಗಿದೆ. ಹಾಗಾಗಿ ಈ ವಿಷಯದಲ್ಲಿ ಸಮಿತಿ ಸರ್ಕಾರದ ಆದೇಶವನ್ನು ಉಲ್ಲಂಘಿಸಿಲ್ಲ.

* ಸರ್ಕಾರ ನೇಮಿಸಿದ್ದ ಮೂವರು ಅಧಿಕಾರಿಗಳ ಸಮಿತಿಗೆ ಪರಿಷ್ಕರಣೆ ಬಗ್ಗೆ ಮಾಹಿತಿ ನೀಡದಿರಲು ಕಾರಣವೇನು?
1ರಿಂದ 10ನೇ ತರಗತಿವರೆಗಿನ ಪಠ್ಯಗಳ ಪರಿಷ್ಕರಣಾ ಕಾರ್ಯವನ್ನು 170ಕ್ಕೂ ಹೆಚ್ಚು ವಿಷಯ ತಜ್ಞರು ನಡೆಸಿದ್ದಾರೆ. ಈ ತಜ್ಞರ ಕೆಲಸವನ್ನು ಪರಿಶೀಲಿಸಲು ವಿಷಯ ತಜ್ಞರನ್ನೊಳಗೊಂಡ ಸಮಿತಿ ಬಂದಿದ್ದರೆ ಅವಶ್ಯವಾಗಿ ಅವರಿಗೆ ಪೂರಕ ಮಾಹಿತಿ ನೀಡಲಾಗುತ್ತಿತ್ತು. ಆದರೆ ವಿಷಯ ತಜ್ಞರಲ್ಲದ ಅಧಿಕಾರಿಗಳನ್ನು ಪಠ್ಯ ಪರಿಶೀಲನೆಗೆ ಕಳುಹಿಸಿದ್ದು ಸರಿಯಲ್ಲ. ಹಾಗಾಗಿ ಇದು ವಿಷಯ ತಜ್ಞರಿಗೆ ಮಾಡಿದ ಅವಮಾನ ಎಂದು ಶಿಕ್ಷಣ ಸಚಿವರಿಗೆ ತಿಳಿಸಿದ್ದೇನೆ.

* ನಿಮ್ಮ ಮತ್ತು ಸರ್ಕಾರದ ಸಿದ್ಧಾಂತವನ್ನು ಪಠ್ಯದಲ್ಲಿ ತುರುಕಲಾಗಿದೆ ಎನ್ನಲಾಗುತ್ತಿದೆಯಲ್ಲ?
2012ರಲ್ಲಿ ರಚನೆಯಾಗಿದ್ದ 1ರಿಂದ 10ನೇ ತರಗತಿವರೆಗಿನ ಕನ್ನಡ ಭಾಷಾ ಪಠ್ಯಗಳಲ್ಲಿ ಎಲ್ಲಿಯೂ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಅವರ ಕುರಿತ ಪಾಠ ಇರಲಿಲ್ಲ. ಆದರೆ ಕೆಲ ಸಾಹಿತಿಗಳ ಕುರಿತು ಎರಡು– ಮೂರು ಪಾಠಗಳಿದ್ದವು. ಈಗ ಪರಿಷ್ಕೃತ ಪಠ್ಯದಲ್ಲಿ ಮಾಸ್ತಿ ಅವರ ಕುರಿತು ಪಾಠ ಸೇರಿಸಲಾಗಿದೆ.
ಕವಿ ಗೋಪಾಲಕೃಷ್ಣ ಅಡಿಗರ ಕುರಿತೂ ಹಿಂದಿನ ಪಠ್ಯಗಳಲ್ಲಿ ಒಂದೇ ಒಂದು ಪಾಠ ಇರಲಿಲ್ಲ. ಅಡಿಗರು ಜನಸಂಘ ಪಕ್ಷದ ಅಭ್ಯರ್ಥಿಯಾಗಿದ್ದವರು. ನನ್ನನ್ನು ಎಡಪಂಥೀಯ ಎಂದು ನೋಡುವುದಾದರೆ ಅವರು ಬಲಪಂಥೀಯರು. ಪರಿಷ್ಕೃತ ಪಠ್ಯದಲ್ಲಿ ನಾನೇ ಒತ್ತಾಯ ಮಾಡಿ ಅಡಿಗರ ‘ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು...’ ಕವಿತೆಯನ್ನು ಸೇರಿಸುವಂತೆ ಮಾಡಿದ್ದೇನೆ.

ಉರ್ದು ಭಾಷೆಯ ಪಠ್ಯದಲ್ಲಿ ರಾಷ್ಟ್ರೀಯ ಭಾವೈಕ್ಯ ಕುರಿತ ಪಾಠ, ಮರಾಠಿ ಭಾಷಾ ಪಠ್ಯದಲ್ಲಿ ಭಾಷಾ ಸಾಮರಸ್ಯ ಕುರಿತ ಪಾಠ, ಹಿಂದಿ, ತಮಿಳು, ತೆಲುಗು ಭಾಷಾ ಪಠ್ಯಗಳಲ್ಲಿ ಕನ್ನಡ ಸಾಹಿತ್ಯ ಕುರಿತ ಪಾಠಗಳು ಸೇರ್ಪಡೆ ಆಗುವಂತೆ ಮಾಡಿದ್ದೇನೆ. ನಾನು ವೈಯಕ್ತಿಕ ಸಿದ್ಧಾಂತವನ್ನು ಪಠ್ಯಗಳ ಮೇಲೆ ಹೇರಿಲ್ಲ ಎಂಬುದನ್ನು ಸ್ಪಷ್ಟಪಡಿಸಲಿಕ್ಕೆ ಇಷ್ಟು ಉದಾಹರಣೆ ಕೊಟ್ಟಿದ್ದೇನೆ. ಇಂತಹ ಸಾಕಷ್ಟು ನಿದರ್ಶನಗಳು ಪಠ್ಯದಲ್ಲಿ ಸಿಗುತ್ತವೆ.

* ಪಠ್ಯ ಪರಿಷ್ಕರಣೆ, ಬದಲಾವಣೆ, ಪುನರ್‌ರಚನೆ ಎಷ್ಟು ಪ್ರಮಾಣದಲ್ಲಿ ನಡೆದಿದೆ?
ನಿರ್ದಿಷ್ಟವಾಗಿ ಇಷ್ಟೇ ಆಗಿದೆ ಎಂದು ಹೇಳಲಾಗದು. ಭೂಗೋಳದಂತಹ ಪಠ್ಯಗಳನ್ನು ಯಥಾವತ್ತಾಗಿ ಉಳಿಸಿಕೊಳ್ಳಲಾಗಿದೆ. ಗಣಿತ, ವಿಜ್ಞಾನದಲ್ಲಿ ಸ್ವಲ್ಪ ಪರಿಷ್ಕರಣೆ ಆಗಿದೆ. ಸಮಾಜ ವಿಜ್ಞಾನ ಮತ್ತು ಸಾಹಿತ್ಯದ ವಿಷಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬದಲಾವಣೆಗಳಾಗಿವೆ. ಎಲ್ಲವನ್ನೂ ಕ್ರೋಡೀಕರಿಸಿ ಹೇಳುವುದಾದರೆ ಈ ಪ್ರಕ್ರಿಯೆ ಸರಾಸರಿ ಶೇ 20ರಷ್ಟು ಪ್ರಮಾಣದಲ್ಲಿ ಆಗಿದೆ. ಒಟ್ಟಾರೆ ಪ್ರಾದೇಶಿಕ, ಸಾಮಾಜಿಕ ನ್ಯಾಯ ಒದಗಿಸುವ, ಲಿಂಗ ತಾರತಮ್ಯ ಸರಿಪಡಿಸುವ ಹಾಗೂ ಸಮತೋಲನದಿಂದ ಕೂಡಿದ ಪಠ್ಯವನ್ನು ಸಿದ್ಧಪಡಿಸಲಾಗಿದೆ. ಪಠ್ಯ ಪರಿಷ್ಕರಣೆ ಸಮಿತಿಯು ತರಗತಿ ಮತ್ತು ವಿಷಯವಾರು ಪಠ್ಯಗಳಲ್ಲಿ ಮಾಡಿರುವ ಪರಿಷ್ಕರಣೆ, ಬದಲಾವಣೆ ಮತ್ತು ಪುನರ್‌ರಚನೆ ಕುರಿತು ಸೂಕ್ತ ಕಾರಣಗಳನ್ನು ಒಳಗೊಂಡ ದಾಖಲೆಗಳೊಂದಿಗೆ ಇದೇ 31ರೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು.

* 2017–18ನೇ ಸಾಲಿನಿಂದಲೇ ಪರಿಷ್ಕೃತ ಪಠ್ಯ ಜಾರಿಯಾಗಬೇಕು ಎಂದು ಒತ್ತಡ ಹೇರಲು ಕಾರಣವೇನು?
27 ಸಮಿತಿಗಳ ನೂರಾರು ವಿಷಯ ತಜ್ಞರು ಮಾಡಿದ ಪರಿಷ್ಕರಣೆ ಕೆಲಸ ನನೆಗುದಿಗೆ  ಬೀಳಬಾರದು ಎಂಬ ಕಾರಣಕ್ಕೆ ಒತ್ತಡ ಹೇರಿದ್ದೇನೆ.

* ಹಾಗಾದರೆ ಪಠ್ಯ ಪರಿಷ್ಕರಣೆಯಲ್ಲಿ ಯಾವ ಲೋಪವೂ ಇಲ್ಲವೇ?
ಉದ್ದೇಶಪೂರ್ವಕವಾಗಿ ಯಾವುದೇ ತಪ್ಪುಗಳನ್ನು ಮಾಡಿಲ್ಲ. ಕಣ್ತಪ್ಪಿನಿಂದ ಕೆಲ ಲೋಪಗಳು ಆಗಿರಬಹುದು. ಆದರೆ ಅದರ ಪ್ರಮಾಣ ಶೇ 5ನ್ನೂ ದಾಟುವುದಿಲ್ಲ ಎನಿಸುತ್ತದೆ. ಒಂದು ವೇಳೆ  ಯಾವುದೇ ವಿಷಯದ ಪಠ್ಯದಲ್ಲಿ ಗಂಭೀರ ಲೋಪಗಳಿದ್ದರೆ ಆ ಪಠ್ಯವನ್ನು ಪರಿಷ್ಕರಿಸಲು ಅವಕಾಶ ಇದ್ದೇ ಇರುತ್ತದೆ.

* ಕೇಂದ್ರದ ಹೊಸ ಶೈಕ್ಷಣಿಕ ನೀತಿ ಹಾಗೂ ಹೊಸ  ಪಠ್ಯಕ್ರಮ ಚೌಕಟ್ಟು ರಚನೆಯಾದರೆ ಪರಿಷ್ಕೃತ ಪಠ್ಯದ ಗತಿಯೇನು?
ಇವೆಲ್ಲ ರಚನೆಯಾಗಿ ಕಾರ್ಯಗತವಾಗಲು ಎರಡು–ಮೂರು ವರ್ಷಗಳೇ ಬೇಕಾಗುತ್ತದೆ. ಆನಂತರ ಅದನ್ನು ಮಾದರಿಯಾಗಿಟ್ಟುಕೊಂಡು ರಾಜ್ಯ ಸರ್ಕಾರ ಪ್ರತ್ಯೇಕ ನೀತಿ, ಪಠ್ಯಕ್ರಮ ಚೌಕಟ್ಟು ರೂಪಿಸಲು ಇನ್ನೂ ಒಂದಷ್ಟು ಅವಧಿ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ಪರಿಷ್ಕೃತ ಪಠ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ.
*
ಕೇಸರೀಕರಣಕ್ಕೆ ಕಾಂಗ್ರೆಸ್ಸೀಕರಣ ಪರ್ಯಾಯವಲ್ಲ ಎಂದು ಹಿಂದೆಯೇ ಸರ್ಕಾರಕ್ಕೆ ಹೇಳಿದ್ದೇನೆ. ಎಡಪಂಥೀಯ ಧೋರಣೆ, ಅಹಿಂದ ತತ್ವಗಳನ್ನು ಪಠ್ಯಕ್ರಮದಲ್ಲಿ ಸೇರಿಸುವ ಯಾವುದೇ ಕೆಲಸ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತೇನೆ.
ಡಾ. ಬರಗೂರು ರಾಮಚಂದ್ರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT