ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ತಂಡಕ್ಕೆ ಕಾತರಕಿ ರಾಜೀನಾಮೆ

Last Updated 21 ಜನವರಿ 2017, 19:36 IST
ಅಕ್ಷರ ಗಾತ್ರ

ನವದೆಹಲಿ: ಜಲವಿವಾದ ಪ್ರಕರಣಗಳಲ್ಲಿ ರಾಜ್ಯದ ಪರ ವಾದ ಮಂಡಿಸುವ ಹಿರಿಯ ವಕೀಲ ಫಾಲಿ ನಾರಿಮನ್‌ ಅವರನ್ನು ಶನಿವಾರ ಸಂಜೆ ಭೇಟಿ ಮಾಡಿದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹಾಗೂ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಚರ್ಚಿಸಿದ್ದು, ಸಭೆಗೆ ಆಹ್ವಾನ ನೀಡಿಲ್ಲ ಎಂಬ ಕಾರಣದಿಂದ ರಾಜ್ಯ ಕಾನೂನು ತಂಡದಲ್ಲಿರುವ ವಕೀಲ ಮೋಹನ್‌ ಕಾತರಕಿ ರಾಜೀನಾಮೆ ಸಲ್ಲಿಸಿದ್ದಾರೆ.

ಕಾವೇರಿ ಜಲವಿವಾದ ನ್ಯಾಯಮಂಡಳಿ ಐತೀರ್ಪನ್ನು ಪ್ರಶ್ನಿಸಿ ರಾಜ್ಯ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಫೆಬ್ರುವರಿ 7ರಿಂದ ಆರಂಭವಾಗಲಿದ್ದು, ಆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೆ, ರಾಜ್ಯದ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಿರುವ ಮಹಾದಾಯಿ ನ್ಯಾಯಮಂಡಳಿಗೇ ಮೇಲ್ಮನವಿ ಸಲ್ಲಿಸುವಂತೆ ಸುಪ್ರೀಂಕೋರ್ಟ್‌ ಸೂಚಿಸಿರುವುದರಿಂದ ಆ ಕುರಿತೂ ಚರ್ಚೆ ನಡೆಸಲಾಗಿದೆ.

ಆದರೆ, 1990ರಿಂದ ಜಲವಿವಾದ ಪ್ರಕರಣಗಳಲ್ಲಿ ರಾಜ್ಯದ ಕಾನೂನು ತಂಡದಲ್ಲಿರುವ ತಮ್ಮನ್ನು ಸಭೆಗೆ ಆಹ್ವಾನಿಸಿಲ್ಲ ಎಂಬ ಬೇಸರದಿಂದಲೇ ಕಾತರಕಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಜಲವಿವಾದ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ಮತ್ತು ನ್ಯಾಯಮಂಡಳಿಗಳ ಎದುರು ರಾಜ್ಯದ ಪರ ವಾದ ಮಂಡಿಸುತ್ತಿರುವ ತಂಡವನ್ನು ಬದಲಿಸಲು ಸರ್ಕಾರ  ಚಿಂತನೆ ನಡೆಸಿರುವುದರಿಂದ ನಾರಿಮನ್‌ ಭೇಟಿ ವೇಳೆ ಇತರ ವಕೀಲರನ್ನು ಆಹ್ವಾನಿಸಿರಲಿಲ್ಲ ಎನ್ನಲಾಗಿದೆ. ಮಹಾದಾಯಿ, ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಕಳೆದ ವರ್ಷ ರಾಜ್ಯಕ್ಕೆ ವ್ಯತಿರಿಕ್ತವಾದ ಆದೇಶಗಳು ಬಂದಾಗ, ‘ಸಮರ್ಥವಾಗಿ ವಾದ ಮಂಡಿಸಲು ವಿಫಲರಾಗಿರುವ ಫಾಲಿ ನಾರಿಮನ್‌ ಸೇರಿದಂತೆ ರಾಜ್ಯದ ಕಾನೂನು ತಂಡದಲ್ಲಿರುವ ಎಲ್ಲರನ್ನೂ ಬದಲಿಸಬೇಕು’ ಎಂಬ ಕೂಗು ರಾಜ್ಯದಲ್ಲಿ ಕೇಳಿಬಂದಿತ್ತು.

ರಾಜ್ಯದ ಕಾನೂನು ತಂಡದಲ್ಲಿ ಹಿರಿಯ ವಕೀಲ ಅನಿಲ್‌ ದಿವಾನ್‌ ಹಾಗೂ ಶರತ್‌ ಜವಳಿ ಸೇರಿದಂತೆ 20ಕ್ಕೂ ಅಧಿಕ ವಕೀಲರಿದ್ದಾರೆ. ಇವರಲ್ಲಿ ಕೆಲವರನ್ನು ಬದಲಿಸಿ ಶೀಘ್ರವೇ ಹೊಸ ಕಾನೂನು ತಂಡವನ್ನು ರಚಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರಾಗಿದ್ದ ಬೃಜೇಶ್‌ ಕಾಳಪ್ಪ ಅವರು ಕಾವೇರಿಗೆ ಸಂಬಂಧಿಸಿದ ಪ್ರಕರಣದಲ್ಲಿ ವಾದ ಮಂಡಿಸಲೆಂದೇ ಕಳೆದ ವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರನ್ನು ಕಾನೂನು ತಂಡಕ್ಕೆ ಸೇರ್ಪಡೆ ಮಾಡುವ ಕುರಿತು ಕಾನೂನು ಸಚಿವರು, ಜಲಸಂಪನ್ಮೂಲ ಸಚಿವರು ನಾರಿಮನ್‌ ಜೊತೆ ಚರ್ಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT