ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾರತಮ್ಯ ಇರುವ ತನಕ ಮೀಸಲಾತಿ ಮುಂದುವರಿಕೆ’

Last Updated 21 ಜನವರಿ 2017, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ‘ದೇಶದಲ್ಲಿ ಎಲ್ಲಿಯವರೆಗೂ ತಾರತಮ್ಯ ಮತ್ತು ಗೊಡ್ಡು ವಿಚಾರಗಳು ಇರುತ್ತವೆಯೋ ಅಲ್ಲಿಯವರೆಗೂ ಮೀಸಲಾತಿ ಮುಂದುವರೆಯುತ್ತದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅಂಬೇಡ್ಕರ್‌ ಅವರ 125ನೇ ಜಯಂತ್ಯುತ್ಸವ ನೆನಪಿಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಸಾರಾಂಗದಿಂದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಏರ್ಪಡಿಸಿದ ‘ಕನ್ನಡ ದಲಿತ ಸಾಹಿತ್ಯ’ ಕುರಿತ ಮೂರು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು                     ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮೀಸಲಾತಿ 10 ವರ್ಷಗಳು ಮಾತ್ರ ಇರಬೇಕು ಎಂದು ಸಂವಿಧಾನದಲ್ಲಿ ಬರೆಯಲಾಗಿದೆ ಎಂದು ಆರ್‌ಎಸ್‌ಎಸ್‌ ಪ್ರಮುಖರಾದ ಮೋಹನ್‌ ಭಾಗವತ್‌ ಮತ್ತು ಅವರ ಶಿಷ್ಯ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದರು. ಈಗ ಆರ್‌ಎಸ್‌ಎಸ್‌ನ ಮನಮೋಹನ್‌ ವೈದ್ಯ ಕೂಡಾ ಹೇಳಿದ್ದಾರೆ. ಸಂವಿಧಾನ ಜಾರಿಯಾದ ಹತ್ತು ವರ್ಷಗಳಲ್ಲಿ ತಾರತಮ್ಯ ಅಳಿದುಹೋಗಿದ್ದರೆ, ಸಮಾಜದ ಕೆಳವರ್ಗಕ್ಕೆ ಉದ್ಯೋಗಗಳು ದೊರಕಿದ್ದರೆ ಮೀಸಲಾತಿ ಕೈ ಬಿಡಬಹುದಾಗಿತ್ತು. ಮೀಸಲಾತಿ ಬಗ್ಗೆ ಮಾತನಾಡುವವರು ಸಂವಿಧಾನದ ಆಶಯದಂತೆ ಸಮಬಾಳು–ಸಮಪಾಲು ಅನುಷ್ಠಾನ ಮಾಡಲು ಮುಂದಾಗಬೇಕು’ ಎಂದು ಎದಿರೇಟು ನೀಡಿದರು.

‘ಅಂಬೇಡ್ಕರ್‌ ಅಸ್ಪೃಶ್ಯತೆ, ಅಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಬಗ್ಗೆಯೂ ಸಂವಿಧಾನದಲ್ಲಿ ಬರೆದಿದ್ದಾರೆ. ಆರ್‌ಎಸ್‌ಎಸ್‌ ಮುಖಂಡರು ಕೇವಲ ಮೀಸಲಾತಿ ವಿಷಯಕ್ಕೆ ಏಕೆ ಜೋತು ಬಿದ್ದಿದ್ದಾರೆ. ಎಲ್ಲರಿಗಿಂತಲೂ ಸಮಾಜದ ಬಡವರು, ಹಿಂದುಳಿದವರಿಗೆ ಹೆಚ್ಚು ದೇಶಭಕ್ತಿಯಿದೆ. ದೇಶಭಕ್ತಿಯನ್ನು ಯಾರೂ ಕಲಿಸಿಕೊಡಬೇಕಾಗಿಲ್ಲ’ ಎಂದರು.

‘ಡಾ.ಎಂ.ಎಂ.ಕಲಬುರ್ಗಿ, ದಾಬೋಲ್ಕರ್‌ ಹಾಗೂ ಪನ್ಸಾರೆ ಅವರಂತಹ ಸಮಾಜ ಹಿತ ಚಿಂತಕರ ಜೀವ ತೆಗೆಯುವ ಕೆಟ್ಟ ವ್ಯಕ್ತಿಗಳು ದೇಶದಲ್ಲಿ ಇದ್ದಾರೆ. ಇಂಥ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸುವ ಮತ್ತು ಜನಜಾಗೃತಿ ಬಡಿದೆಬ್ಬಿಸುವ ಸಾಹಿತ್ಯ ರಚಿಸಬೇಕು. ಸಾಹಿತ್ಯವು ಹೊಸ ಪೀಳಿಗೆಗೆ ಪ್ರೇರಣೆಯಾಗಬೇಕು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT