ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಟಾನಿಕ್ ಹಡಗು ಮತ್ತು ಪುಸ್ತಕ: ನಿಗೂಢ ಸಾಮ್ಯತೆ

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

‘ಟೈಟಾನಿಕ್’ ಹಡಗಿನ ಹೆಸರನ್ನು ಯಾರು ಕೇಳಿಲ್ಲ? ಆ ಹೆಸರಿನ ಸಿನಿಮಾ ನೋಡಿದರೆ ಶತಮಾನದ ಹಿಂದಿನ ಗತಘಟನೆಗಳು ಕಣ್ಮುಂದೆ ಸುಳಿಯುತ್ತವೆ.

ಏಪ್ರಿಲ್ 14, 1912ರ ಮಧ್ಯರಾತ್ರಿ ಆ ಹಡಗು ಹಿಮಬಂಡೆಗೆ ಡಿಕ್ಕಿ ಹೊಡೆದು ಮುಳುಗಿತ್ತು. ಆ ಮೂಲಕ ಹಡಗಿನ ಸಿಬ್ಬಂದಿಯೂ ಸೇರಿ ಪ್ರಯಾಣಿಸುತ್ತಿದ್ದ ಸುಮಾರು  ಒಂದೂವರೆ ಸಾವಿರ ಮಂದಿ ಜಲಸಮಾಧಿಯಾಗಿದ್ದರು. 700ಕ್ಕೂ ಹೆಚ್ಚು ಮಂದಿ ಆ ಬೃಹತ್ ಭೀಕರ ಘಟನೆಯಲ್ಲಿ ಪವಾಡಸದೃಶವಾಗಿ ಪುನರ್‌ ಜನ್ಮ ಪಡೆದಿದ್ದರು.

ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಈಗ ಅದಕ್ಕೂ 14 ವರ್ಷದ ಹಿಂದಿನ ಘಟನೆಯೊಂದನ್ನು ಕೇಳಿ.  ಮಾರ್ಗನ್ ರಾಬರ್ಟ್‍ಸನ್ ಅಮೆರಿಕದ ಲೇಖಕ. ಸಣ್ಣಕತೆ ಮತ್ತು ಕಿರು ಕಾದಂಬರಿಗಳ ಮೂಲಕ ಜನಪ್ರಿಯತೆ ಗಳಿಸಿದವರು. ಬಾಲ್ಯದಿಂದಲೂ ಸಮುದ್ರದ ನಂಟಿದ್ದ ಮಾರ್ಗನ್‌ 1898ರಲ್ಲಿ ‘Futility: The wreck of the Titan’  ಎಂಬ ಕಿರುಕಾದಂಬರಿಯನ್ನು ಬರೆದಿದ್ದರು.

ಕಾದಂಬರಿಯಲ್ಲಿ ‘SS Titan’ ಎಂಬ ಬ್ರಿಟನ್ ಹಡಗು ಏಪ್ರಿಲ್ ತಿಂಗಳಲ್ಲಿ ತನ್ನ ಚೊಚ್ಚಲ ಪ್ರಯಾಣದಲ್ಲಿಯೇ ಹಿಮಬಂಡೆಗೆ ತಗುಲಿ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗುತ್ತದೆ. ಹಡಗಿನಲ್ಲಿ ಅಗತ್ಯಕ್ಕಿಂತ ಕಡಿಮೆ ಲೈಫ್‌ಬೋಟ್‌ಗಳಿದ್ದ ಕಾರಣ ಪ್ರಯಾಣಿಸುತ್ತಿದ್ದ ಕೆಲವೇ ಕೆಲವು ಮಂದಿ ಬದುಕುಳಿಯುತ್ತಾರೆ.

ಸ್ವಾರಸ್ಯಕರ ಸಂಗತಿಯೆಂದರೆ ಯಾವುದೋ ವಾಸ್ತವ ಘಟನೆಯಿಂದ ಪ್ರೇರಣೆ ಪಡೆದು ಕಾದಂಬರಿಯನ್ನೋ, ಸಿನಿಮಾವನ್ನೋ ನಿರ್ದೇಶಿಸುವುದು ಹೊಸತಲ್ಲ. ಆದರೆ ಘಟನೆ ನಡೆಯುವುದಕ್ಕೂ ಮುನ್ನವೇ ಅದನ್ನು ಹೋಲುವಂಥ ಪುಸ್ತಕವೊಂದು ಬರೆದಿರುವುದು ಸೋಜಿಗವೇ ಸರಿ.

ಈ ಪುಸ್ತಕ ಬಿಡುಗಡೆಯಾದ 14 ವರ್ಷದ ಬಳಿಕ ಬ್ರಿಟನ್‌ನ ಸೌತ್‌ಆ್ಯಂಪ್ಟನ್‌ನಿಂದ ನ್ಯೂಯಾರ್ಕ್‌ನತ್ತ ತೆರಳುತ್ತಿದ್ದ ಟೈಟಾನಿಕ್ ಹಡಗು ಮುಳುಗಿದ್ದು  ಕಾದಂಬರಿಯಂತೆಯೇ ಹಿಮಬಂಡೆಗೆ ತಗುಲಿಯೇ! ಅದೂ ತನ್ನ ಚೊಚ್ಚಲ ಪ್ರಯಾಣದಲ್ಲಿಯೇ! ಮುಳುಗಿದ ಜಾಗ ಕೂಡ ಉತ್ತರ ಅಟ್ಲಾಂಟಿಕ್ ಸಾಗರವೇ!.

ಈ ದುರ್ಘಟನೆ ನಡೆದದ್ದೂ ಏಪ್ರಿಲ್‌ ತಿಂಗಳಿನಲ್ಲಿಯೇ! ಇನ್ನೊಂದು ಸಾಮ್ಯತೆಯೆಂದರೆ ಕಾದಂಬರಿಯಂತೆಯೆ ಇಲ್ಲಿಯೂ ಅನೇಕರ ಮರಣಕ್ಕೆ ಕಾರಣವಾದದ್ದು ಲೈಫ್‌ ಬೋಟ್‌ಗಳ ಕೊರತೆ! ಇನ್ನು ಕಾದಂಬರಿಯಲ್ಲಿ ಹಡಗನ್ನು ವರ್ಣಿಸಿದ ಗಾತ್ರ ಮತ್ತು ಅದರ ವೇಗದ ಸಾಮರ್ಥ್ಯವೇ ಟೈಟಾನಿಕ್ ಹಡಗಿಗೆ ಹೋಲಿಕೆಯಾದದ್ದೂ ಮತ್ತೊಂದು ಅಚ್ಚರಿ.

ಇತಿಹಾಸ ಕೆಲವು ವಿಸ್ಮಯಗಳಿಗೆ ಕಾರಣವನ್ನು, ಉತ್ತರವನ್ನು, ವಿಶ್ಲೇಷಣೆಯನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅದಕ್ಕೆ ಈ ಟೈಟಾನ್ ಪುಸ್ತಕವೂ, ಟೈಟಾನಿಕ್ ಹಡಗು ದುರಂತವೂ ಉತ್ತಮ ನಿದರ್ಶನ.
–ಅರ್ಜುನ್ ಶೆಣೈ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT