ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆಗೆ ಬೇಕು ಸ್ವಾಗತ ಸಮಿತಿ!

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ವಿದ್ಯಾರ್ಥಿಮಿತ್ರರೇ, ನೀವೀಗ ಜೀವನದಲ್ಲಿ ‘ನೀನೀಗ ಎಸ್‍ಎಸ್‌ಎಲ್‌ಸಿ!’ ಎಂಬುದರಿಂದ ‘ಇನ್ನೆರಡೇ ತಿಂಗ್ಳು, ಪರೀಕ್ಷೆ!’ ಎಂಬಲ್ಲಿಗೆ ಬಂದಿದ್ದೀರಿ! ನಿಮ್ಮ ಸುತ್ತ ಬರೀ ಪರೀಕ್ಷೆಯ ಮತ್ತು ಹೆಚ್ಚು ಅಂಕಗಳನ್ನು ಗಳಿಸಬೇಕಾದ ಆವಶ್ಯಕತೆ ಕುರಿತಾದ ಮಾತುಗಳೇ ಅಲ್ಲವೆ ಕೇಳುತ್ತಿದೆ? ನಿಮಗೂ ಆತಂಕವಿದೆಯಲ್ಲವೆ?
ಆದರೆ, ಅಷ್ಟೆಲ್ಲ ಆತಂಕ ಪಡುವ ಅವಶ್ಯಕತೆಯೇ ಇಲ್ಲ. ನೀವು ಎಂದಿಗಿಂತಲೂ ಹೆಚ್ಚು ಉಲ್ಲಸಿತರಾಗಿಯೂ, ಉತ್ಸಾಹಿಗಳಾಗಿಯೂ ಇರಬಹುದು. ಅದಕ್ಕೆ ಹೀಗೆ ಮಾಡಿ:

ಬೇರೆಲ್ಲ ವಿಷಯಗಳನ್ನು ಬದಿಗಿಟ್ಟು, ಒಂದು ಅರ್ಧಗಂಟೆ ಬಿಡುವು ಮಾಡಿಕೊಂಡು ಕುಳಿತುಕೊಳ್ಳಿ. ಈಗ ಯೋಚಿಸಿ ದೊಡ್ಡ ಪರೀಕ್ಷೆ, ಆತಂಕ ಇವೆಲ್ಲವೂ ಸರಿಯೇ. ಆದರೆ, ನೀವೇನೂ ಸುಮ್ಮನೆ ಕುಳಿತಿಲ್ಲ, ಸಾಕಷ್ಟು ತಯಾರಿ ಮಾಡಿದ್ದೀರಿ. ಶಾಲೆಗಳಲ್ಲಿಯೂ ಅಷ್ಟೆ, ನಿಮಗೆ ಸಾಕಷ್ಟು ತಯಾರಿಯನ್ನು ಮಾಡಿಸಿದ್ದಾರೆ.

ಬಹುತೇಕ ಶಾಲೆಗಳಲ್ಲಿ ಪಠ್ಯಕ್ರಮವೆಲ್ಲ ಮುಗಿದು ಎರಡು ಬಾರಿ ಪುನರಾವರ್ತನೆ ಸಹ ಆಗಿದೆ ಅಲ್ಲವೆ? ಜೊತೆಗೆ ಪರೀಕ್ಷೆಗೆ ಇನ್ನೂ ಮೂರು ತಿಂಗಳ ಸಮಯವಿದೆ! ಹೀಗಾಗಿ, ಏನೂ ಆಂತಕಪಡುವ ಅವಶ್ಯಕತೆಯಿಲ್ಲ, ಗಾಬರಿಗೆ ಕಾರಣವಿಲ್ಲ. ಈ ಅಂಶವನ್ನು ನೀವು ಮನಗಂಡ ಕೂಡಲೇ ನಿಮಗೆ ಆತ್ಮವಿಶ್ವಾಸ ಬರುತ್ತದೆ. ಇನ್ನು, ಭಯ ಪಡಿಸುವವರು ಭಯಪಡಿಸುತ್ತಲೇ  ಇರುತ್ತಾರೆ. ಆತಂಕಕ್ಕೆ ಕಾರಣವಿಲ್ಲವೆಂದುಕೊಂಡಾಗ ಅವರಿಗೆ ‘ರಿಲ್ಯಾಕ್ಸ್, ಪ್ಲೀಸ್‍’ ಎನ್ನಬಹುದು!

ಒಂದು ವೇಳೆ ನೀವು ಓದಬೇಕಾದಷ್ಟು ಓದಿಲ್ಲವೆಂದುಕೊಳ್ಳೋಣ. ಪರಿಸ್ಥಿತಿ ಅಂಥ ಕೆಟ್ಟದಾಗಿಯೇನೂ ಇಲ್ಲ. ಈಗಿರುವ ಈ ಮೂರು ತಿಂಗಳುಗಳ ಸಮಯ ಕಡಿಮೆಯೇನಲ್ಲ. ಇಂದಿನಿಂದಲೂ ಶ್ರದ್ಧೆಯಿಟ್ಟು ಓದಿದರೆ ಪ್ರಥಮ ದರ್ಜೆ ಗಳಿಸುವುದು ಶತಸಿದ್ಧ. ನನ್ನ ಅಧ್ಯಾಪನ ಅನುಭವದಿಂದ ಈ ಮಾತು ಹೇಳುತ್ತಿದ್ದೇನೆ, ಇದನ್ನು ನಂಬಿ.

ಇನ್ನೊಂದು ಗುಟ್ಟಿನ ವಿಷಯವೆಂದರೆ ಎಸ್‍ಎಸ್ಎಲ್‌ಸಿ ಪಠ್ಯಕ್ರಮದಷ್ಟು ಸುಲಭವಾದದ್ದು, ಆಸಕ್ತಿದಾಯವಾದದ್ದು ಬೇರೆಯಿಲ್ಲ! ಹೀಗಾಗಿ, ಒಂದು ವೇಳೆ ನೀವು ಇದುವರೆಗೂ ಓದದೇ ಇದ್ದರೂ ಈಗ ಆರಂಭಿಸಿ ಪ್ರಥಮ ದರ್ಜೆಯಲ್ಲಿ ಪಾಸಾಗುವುದು ಸಾಧ್ಯ! ಈಗ ನೀವು ಮನಸ್ಸಿನಲ್ಲಿ ದೃಢ ನಿಶ್ಚಯಮಾಡಿ ಓದಲು ಕೂರಬೇಕು, ಅಷ್ಟೆ. ಅದನ್ನು ಮಾಡಿರಿ. ಇನ್ನು ಮೊದಲಿನಿಂದಲು ಓದನ್ನು ಚಾಲ್ತಿಯಲ್ಲಿಟ್ಟುಕೊಂಡು ಬಂದಿರುವವರು ಯೋಚಿಸಬೇಕಾದ ಪ್ರಮೇಯವೇನಿದೆ?

ಹಾಗೆಯೇ ಇನ್ನೊಂದು ವಿಷಯ. ಪ್ರಶ್ನಪತ್ರಿಕೆ ಖಂಡಿತವಾಗಿಯೂ ಕಠಿಣವಾಗಿರುವುದಿಲ್ಲ. ಅದು ಒಬ್ಬ ಸಾಮಾನ್ಯ ವಿದ್ಯಾರ್ಥಿ ತೇರ್ಗಡೆಯಾಗುವಂತೆಯೇ ರಚಿಸಲಾಗಿರುತ್ತದೆ. ಅಲ್ಲದೆ, ನಿಮ್ಮ ಉತ್ತರಪತ್ರಿಕೆ ತಿದ್ದುವ ಶಿಕ್ಷಕರೂ ಕಟುಕರಲ್ಲ. ನಿಮ್ಮನ್ನು ಏನಾದರು ಮಾಡಿ ಪಾಸು ಮಾಡಬೇಕೆಂದು ಯೋಚಿಸುತ್ತಾರೆಯೇ ಹೊರತಾಗಿ ನಪಾಸು ಮಾಡಬೇಕೆಂದು ಯೋಚಿಸುವುದಿಲ್ಲ. ಹಾಗಾಗಿ, ಇಲ್ಲದ ಚಿಂತೆಗಳನ್ನು ಬಿಟ್ಟು ಓದುವುದರ ಕಡೆಗೆ ಗಮನ ಕೊಡಿ.

ಒಂದಿಷ್ಟು ಆತಂಕ ಒಳ್ಳೆಯದು ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ. ಅದು ನಮ್ಮನ್ನು ಜಾಗೃತವಾಗಿಟ್ಟು ಕೆಲಸ ಮಾಡಿಸುತ್ತದೆ. ಆದರೆ ನಾವು ನಮ್ಮ ತಯಾರಿಯನ್ನು ಸರಿಯಾಗಿಯೇ ಮಾಡಿಕೊಳ್ಳಬೇಕು. ಈಗಿಂದೀಗಲೇ ನಿಮ್ಮ ಶಾಲೆಯ ಎಲ್ಲ ಹತ್ತನೇ ತರಗತಿಯ ಗೆಳೆಯರನ್ನು ಸೇರಿಸಿಕೊಳ್ಳಿ. ಒಂದು ಸಮಿತಿ ಮಾಡಿರಿ. ಅದರಲ್ಲಿ ಹತ್ತನೇ ತರಗತಿಯ ಎಲ್ಲ ವಿದ್ಯಾರ್ಥಿಗಳೂ ಇರಬೇಕು.

ಈ ಸಮಿತಿಗೆ ಎಸ್‍ಎಸ್‍ಎಲ್‌ಸಿ ಪರೀಕ್ಷೆ ಸ್ವಾಗತ ಸಮಿತಿ ಎಂದೇ ಇಡಿ! ಪರೀಕ್ಷೆ ‘ಬಂದು’ ನಿಮಗೆ ಆತಂಕ ತರುವುದಲ್ಲ, ಸಿದ್ಧರಾಗಿ ನೀವೇ ಪರೀಕ್ಷೆಯನ್ನು ಆಹ್ವಾನಿಸುವುದು! ಈ ಸಮಿತಿಗೆ ಶಾಲೆಯ ಎಲ್ಲ ಹತ್ತನೇ ತರಗತಿಯ ಗೆಳೆಯರನ್ನು ಸೇರಿಸಿಕೊಳ್ಳಿ. ಒಂದು ಸಮಿತಿ ಮಾಡಿರಿ. ಅ ನಾವು ಮುಂದಾಲೋಚನೆಯಿಂದ ಕೆಲಸ ಮಾಡುವುದು ಎಂದು.

ಈಗ ನೀವು ಮಾಡಬೇಕಾಗಿರುವುದು ಇವು:
1. ಈಗ ಇನ್ನು ಮೂರು ತಿಂಗಳಲ್ಲಿ ಪರೀಕ್ಷೆ ಎಂಬ ಮಂಗಳಕಾರ್ಯ ನಿಮ್ಮ ಜೀವನದಲ್ಲಿ ನಡೆಯಲಿದೆ. ಅದಕ್ಕೆ ಸಂತೋಷವಾಗಿ ಸಿದ್ಧನಾಗುತ್ತಿರುವೆ ಎಂದುಕೊಳ್ಳಿ. ಅದನ್ನು ಒಂದು ವ್ರತವನ್ನಾಗಿ ಸ್ವೀಕರಿಸಿ.
2. ಈ ಪರೀಕ್ಷೆಗಳು ಮುಗಿಯುವವರೆಗೂ ಟೀವಿ, ಚಲನಚಿತ್ರ ಇತ್ಯಾದಿಗಳನ್ನು ನೀವಾಗಿಯೇ ತೀರ್ಮಾನ ತೆಗೆದುಕೊಂಡು ದೂರವಿರಿಸಿ. ವ್ರತದಲ್ಲಿದ್ದಾಗ ಬೇರೆ ಆಕರ್ಷಣೆಗಳು ಬೇಡ.
3. ನಿಮ್ಮ ಕೈಗೆ ಪರೀಕ್ಷೆಯ ವೇಳಾಪಟ್ಟಿ ಬಂದ ಕೂಡಲೇ ಅದನ್ನು ಚೆನ್ನಾಗಿ ಪರಿಶೀಲಿಸಿ ಮತ್ತೆ ಮತ್ತೆ ಖಚಿತ ಪಡಿಸಿಕೊಂಡು ಅಂದವಾಗಿ ಬರೆದು ನೀವು ಓದುಲು ಕೂರುವ ಸ್ಥಳದ ಬಳಿ ತೂಗು ಹಾಕಿರಿ.
4. ಪರೀಕ್ಷೆಯ ದಿನ ನೀವು ಬಳಸಬೇಕಾದ ಪೆನ್ನು ಮತ್ತಿತರ ಪರಿಕರಗಳನ್ನು ಸಿದ್ಧ ಮಾಡಿಟ್ಟುಕೊಳ್ಳಿ; ಪರೀಕ್ಷೆಯ ದಿನ ಹುಡುಕುವ/ಜೋಡಿಸಿಕೊಳ್ಳುವ ಧಾವಂತ ಬೇಡ.
5. ಈಗ ಒಂದೊಂದಾಗಿ ಪಠ್ಯಪುಸ್ತಕವನ್ನು ತೆಗೆದು ಪ್ರತಿ ಆಧ್ಯಾಯವನ್ನು ನೋಡಿ ನಿಮಗೆ ತಿಳಿದಿದ್ದೆಷ್ಟು, ತಿಳಿಯದಿದ್ದದು ಎಷ್ಟು ನೋಡಿ ಟಿಪ್ಪಣಿ ಮಾಡಿಕೊಳ್ಳಿ. ತಿಳಿಯದಿದ್ದದ್ದನ್ನು ನಿಮ್ಮ ಅಧ್ಯಾಪಕರ ಬಳಿ ಸಂಕೋಚವಿಲ್ಲದೆ ಕೇಳಿ ತಿಳಿದುಕೊಳ್ಳಿರಿ.
6. ಐದು ಅಥವಾ ಹೆಚ್ಚೆಂದರೆ ಆರು ಜನಗಳ ಗುಂಪು ಮಾಡಿಕೊಳ್ಳಿ. ಪ್ರತಿ ದಿನವೂ ಈ ಗುಂಪು ಶಾಲೆ ಅಥವಾ ಮನೆಯಲ್ಲಿ ಭೇಟಿಯಾಗಬೇಕು. ಪ್ರತಿದಿನವೂ ಒಂದು ಅಥವಾ ಎರಡು ವಿಷಯಗಳ ಪುನರಾವರ್ತನೆ ಮಾಡಿರಿ. ಬರುವುದನ್ನು ಬರದವರಿಗೆ ಹೇಳಿಕೊಡಿ. ನಿಮಗೆ ಬರದಿರುವುದನ್ನು ಕಲಿತವರಿಂದ ಕಲಿತುಕೊಳ್ಳಿ. ಹೇಳಿಕೊಡುವ ಪ್ರಕ್ರಿಯೆಯಿಂದ ನೀವು ಚೆನ್ನಾಗಿ ಕಲಿಯುತ್ತೀರಿ.
7. ಈಗ ನೀವು ಪರೀಕ್ಷಾವ್ರತದಲ್ಲಿರುವುದರಿಂದ ಸಮಯವನ್ನು ವ್ಯರ್ಥ ಮಾಡುವುದಿಲ್ಲ.
8. ಮುಂದಿನ ದಿನಗಳಲ್ಲಿ ಏನೇನು ಮಾಡಬೇಕೆಂದು ಪಟ್ಟಿ ಮಾಡಿರಿ. ಅದಕ್ಕೊಂದು ಟೈಮ್‌ ಟೇಬಲ್‍ ಹಾಕಿಕೊಳ್ಳಿರಿ.
9. ಫೆಬ್ರುವರಿ ಹತ್ತರೊಳಗೆ ನಿಮಗೆ ತಿಳಿಯದ್ದು ಏನೂ ಇರಬಾರದು. ಈ ಗುರಿಯಿಟ್ಟುಕೊಂಡು ಮುಂದುವರೆಯಿರಿ.
10. ಪ್ರತಿ ಪಾಠದ ಮುಖ್ಯಾಂಶಗಳನ್ನು ಬೇರೆಡೆ ಬರೆದಿಡಿ. ಮುಂದೆ ಅದನ್ನಷ್ಟೇ ಓದಿದರಾಯಿತು. ಹಾಗೆಯೇ ಹಿಂದಿನ ಪ್ರಶ್ನಪತ್ರಿಕೆಗಳನ್ನು ಉತ್ತರಿಸಿ. ಅಭ್ಯಾಸ ಮಾಡಿ. ಈ ಅನುಭವ ನಿಮ್ಮ ಆತಂಕವನ್ನು ನೀಗುತ್ತದೆ.
11. ವಿಜ್ಞಾನದ ವಿಷಯದಲ್ಲಿ ಬರುವ ಚಿತ್ರಗಳನ್ನು ಬರೆದು ಅಭ್ಯಾಸ ಮಾಡಿ ಮತ್ತು ಸಿಮೆಂಟ್ ಇತ್ಯಾದಿಗಳ ತಯಾರಿಕೆಯನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಚೆನ್ನಾಗಿ ಅಭ್ಯಾಸ ಮಾಡಿರಿ. ಗಣಿತದ ಸೂತ್ರಗಳನ್ನು, ಸಮೀಕರಣಗಳ ಬಿಡಿಸುವಿಕೆಯನ್ನು ಬೇರೆಡೆ ಬರೆದಿಟ್ಟು ಪದೇ ಪದೇ ಬರೆದು ಅಭ್ಯಾಸ ಮಾಡಿ (ಓದಿ ಅಲ್ಲ!).
12. ಭಾಷೆಗಳನ್ನು ಗಂಭೀರವಾಗಿ ಪರಿಗಣಿಸಿ ಅಭ್ಯಾಸ ಮಾಡಿ. ಕಂಠಪಾಠಕ್ಕಿರುವ ಪದ್ಯಗಳನ್ನು ಆಗಾಗ್ಗೆ ಹೇಳಿಕೊಳ್ಳಿ. ಅಜ್ಜಿ, ತಾತನೋ ತಮ್ಮನೋ ತಂಗಿಯೋ ಇದ್ದರೆ ಅವರಿಗೂ ಅಭ್ಯಾಸ ಮಾಡಿಸಿ.
13. ಏನೇ ಸಮಸ್ಯೆ ಬಂದರು ಅಧ್ಯಾಪಕರನ್ನು ಕೇಳಿರಿ, ಅವರೊಂದಿಗೆ ಚರ್ಚಿಸಿರಿ. ಮನೆಯಲ್ಲಿಯೂ ಹೇಳಿಕೊಳ್ಳಿ. ತಂದೆ ತಾಯಿಯೊಂದಿಗೆ ಏನನ್ನೂ ಮುಚ್ಚಿಡಬೇಡಿರಿ. ಮುಕ್ತವಾಗಿ ಮಾತನಾಡಿ.
14. ನಾನು ಮಾಡಬಹುದಾಗಿರುವುದನ್ನೆಲ್ಲ ಮಾಡಿದ್ದೇನೆ. ಮುಂದಿನದು ಆಗಲಿ, ಆಗ ನೋಡೋಣ ಎಂಬ ಮನೋಭಾವ ಬೆಳೆಸಿಕೊಳ್ಳಿ. ಹಿಂದಿನದನ್ನು ಯೋಚಿಸಬೇಡಿ. ತುಂಬ ಮುಂದಿನದನ್ನೂ ಯೋಚಿಸಿ ಪ್ರಯೋಜನವಿಲ್ಲ ಎಂಬುದನ್ನು ತಿಳಿಯಿರಿ.
15. ದಿನದಲ್ಲಿ ತುಸುಹೊತ್ತು ಧ್ಯಾನವನ್ನು ಮಾಡಿ; ಸಂಗೀತವನ್ನು ಕೇಳಿ. ಉದ್ವೇಗಕ್ಕೆ ಒಳಗಾಗಬೇಡಿ. ವಿನಾ ಕಾರಣ ಹೆದರಿಸುವವರನ್ನು ದೂರವಿಡಿ. ಅವರನ್ನು ಪ್ರಶ್ನೆ ಕೇಳಿ. ಅವರೇ ದೂರವಾಗುತ್ತಾರೆ.
16. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ. ಇದುವರೆಗಿನ ನಿಮ್ಮ ಪಠ್ಯದಲ್ಲಿ ಸಮತೋಲನ ಆಹಾರ–ಶುಚಿತ್ವ ಎಲ್ಲವನ್ನು ಸಾಕಷ್ಟು ತಿಳಿದಿರುತ್ತೀರಿ. ಅದನ್ನು ಜಾರಿಗೆ ತನ್ನಿ.

*
ತಂದೆ ತಾಯಿ ಏನು ಮಾಡಬೇಕು?
ಇಂದಿನ ದಿನಮಾನಗಳಲ್ಲಿ ಮಕ್ಕಳಿಗೆ ಅತಿ ಅಪರಿಚಿತರೆಂದರೆ ತಂದೆತಾಯಿಯೇ ಆಗಿರುವುದು ಕಾಲದ ಕುಚೋದ್ಯ.  ಅವರು ಸಂಬಂಧಗಳನ್ನು ಮರುಸ್ಥಾಪಿಸಿಕೊಳ್ಳುವ ಅವಕಾಶವಾಗಿ ಈ ಪರೀಕ್ಷಾ ಸಮಯವನ್ನು ಮಾರ್ಪಡಿಸಿಕೊಳ್ಳಬೇಕು. ಇದೊಂದು ಹಿರಿಯರ ಜಾಣ್ಮೆಯ ಪ್ರಶ್ನೆಯೂ ಹೌದು.

ಪರೀಕ್ಷೆಯ ಈ ಸಮಯದಲ್ಲಿ ಮಕ್ಕಳಿಗೆ ಅನಾವಶ್ಯಕ ಒತ್ತಡ ಹಾಕಬೇಡಿ. ‘ನಾನು ಮಾಡಲಿಲ್ಲ, ಅದನ್ನು ನನ್ನ ಮಗ/ಮಗಳು ಮಾಡಬೇಕು. ಅದಕ್ಕೆ ಎಸ್‍ಎಸ್‍ಎಲ್‌ಸಿ ಬುನಾದಿ’ – ಈ ನಿಲುವು ತಪ್ಪು. ಆ ವಿಚಾರವನ್ನೇ ಬದಿಗಿಟ್ಟು ಮಕ್ಕಳಿಗೆ ಪರೀಕ್ಷೆಗೆ ಸಿದ್ಧವಾಗಲು ಏನಾದರು ತೊಂದರೆಯಿದೆಯೇ? ಎಂದು ಕೇಳಿ ತಿಳಿದುಕೊಳ್ಳಿ.
*ನಾವು ನಿನ್ನ ಸಹಾಯಕ್ಕೆ ಸದಾ ಸಿದ್ದ ಎಂಬ ನಂಬಿಕೆ ಬರುವಂತೆ ನಡೆದುಕೊಳ್ಳಿ.
*ದಿನವೂ ಅಲ್ಲದಿದ್ದಲ್ಲಿ ವಾರಕ್ಕೆ ಎರಡು ಮೂರು ಬಾರಿಯಾದರೂ ಮಕ್ಕಳೊಂದಿಗೆ ಉದ್ಯಾನದಲ್ಲಿ ಸುತ್ತಾಡಿ. ಆಗ ಓದು–ಪರೀಕ್ಷೆಯ ಮಾತು ಬೇಡ.
*ಅವರ ಓದಿನ ಪರಿಶೀಲನೆಯ ಸಂದರ್ಭದಲ್ಲಿ ‘ತನಿಖೆ’ ಎಂಬ ಭಾವ ಬರದಂತೆ ವರ್ತಿಸಿ. ಅವರೊಂದಿಗೆ ನೀವೂ ಓದಿ. ವಿಷಯವನ್ನು ತಿಳಿಹೇಳಿ. ನೀವೇ ತಿಳಿದುಕೊಳ್ಳುವಂಥಹದ್ದಿದ್ದರೆ ಕೇಳಿ ತಿಳಿದುಕೊಂಡು ಅನಂತರ ಅವರಿಗೆ ಶಭಾಸ್‍ ಹೇಳಿ.
*ಪರೀಕ್ಷೆಯ ವಿಷಯವನ್ನು ಪ್ರಸ್ತಾಪಿಸಿ ‘ನಾವು ಎಂದೋ ಮಾಡಿ ಮುಗಿಸಿರುವುದನ್ನು ಈಗ ನೀನು ಮಾಡುತ್ತಿರುವೆ. ನಿನ್ನ ಜಾಗದಲ್ಲಿ ನಾನಿದ್ದು ನೋಡಿರುವೆ. ನಿನ್ನ ಕಷ್ಟ ನನಗೆ ಗೊತ್ತಿದೆ. ಆದರೆ, ನಿನಗೆ ನಾನಿದ್ದೇನೆ. ಏನೂ ತೊಂದರೆಯಿಲ್ಲ. ಫಲಿತಾಂಶದ ಬಗ್ಗೆ ಯೋಚಿಸದೇ ಓದು’ ಎಂದು ಹೇಳಿ, ಮಕ್ಕಳಿಗೆ ಭರವಸೆ ಕೊಡಿ.
*ಯಾವುದೇ ಕಾರಣಕ್ಕೂ ನಿಮ್ಮ ಮಗ/ಮಗಳನ್ನು ಇತರರೊಂದಿಗೆ ಕಿಂಚಿತ್ತೂ ಹೋಲಿಸಬೇಡಿ. ಇತರರಿಗೂ ಹೋಲಿಸಲು ಬಿಡಬೇಡಿ.
*ಎಳೆಯ ಜೀವಗಳು ಒತ್ತಡದಲ್ಲಿರುವ ಈ ಸಂದರ್ಭದಲ್ಲಿ ಒತ್ತಾಸೆಯಾಗಿ ನಿಲ್ಲಿ. ಅವರ ಆಹಾರ–ವಿಹಾರದೆಡೆ ಗಮನ ಕೊಡಿ. ಅವರು ಒಳ್ಳೆಯ ಪೌಷ್ಟಿಕ ಆಹಾರ ಸೇವಿಸುತ್ತಿದ್ದಾರೆಯೇ? ಸಾಕಷ್ಟು ನಿದ್ರಿಸುತ್ತಿದ್ದಾರೆಯೇ? ಎಂದು ಗಮನಿಸಿ.
*ನಿದ್ದೆಗೆಟ್ಟು ಓದಿದ ಸಂದರ್ಭಗಳಲ್ಲಿ ಅವರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ನೋಡಿ ಸಲಹೆ ಕೊಡಿ. ಅವಶ್ಯವಿದ್ದಲ್ಲಿ ತಜ್ಞರ ಸಹಾಯ ಪಡೆಯಲು ಹಿಂಜರಿಯಬೇಡಿ.
*ನೀನು ಚೆನ್ನಾಗಿಯೇ ಓದುತ್ತಿರುವೆ ಎಂದು ಹೇಳುತ್ತಲೆ ಒಂದು ವೇಳೆ ಯತ್ನ ತಪ್ಪಿ ಕಡಿಮೆ ಅಂಕ ಬಂದರೆ ಅಥವಾ ಫೇಲ್‌ ಆದರೆ ಏನೂ ತೊಂದರೆಯಿಲ್ಲ. ನಾನಿದ್ದೇನೆ – ಎಂದು ಭರವಸೆ ಕೊಡಿ.
*ಏನೇ ಆದರೂ ನಿಮ್ಮೊಂದಿಗೆ ಅದನ್ನು ಮಕ್ಕಳು ಯಾವುದೇ ಭಿಡೆಯಿಲ್ಲದೆ ಹಂಚಿಕೊಳ್ಳುವಂತಹ ಸಂಬಂಧವನ್ನು ಅವರೊಂದಿಗೆ ಇಟ್ಟುಕೊಳ್ಳಿ. ಅವರ ಮನಸ್ಸು ಉಲ್ಲಾಸದಿಂದ ಇರುವಂತೆ ನೋಡಿಕೊಳ್ಳಿ. ಹೊಣೆಗಾರಿಕೆಯಿಂದ ನೀವೂ ವರ್ತಿಸಿ, ಅವರನ್ನೂ ಹಾಗೆಯೇ ಸಿದ್ಧಗೊಳಿಸಿ.
*ಹತ್ತನೇ ತರಗತಿಯ ವಯಸ್ಸಿನ ಮಕ್ಕಳು ನಿಮ್ಮ ಗೆಳೆಯರಾಗುವ ವಯಸ್ಸಿನವರು. ಆ ಗೆಳೆತನ ಆಪ್ತವಾಗಿ ಜೀವನದುದ್ದಕ್ಕೂ ಬೆಳೆಯುತ್ತಾ ಹೋಗುವಂತಹ ವಾಸ್ತವವನ್ನು ನೀವು ಸೃಷ್ಟಿಸಿಕೊಳ್ಳಿ. ಅದಕ್ಕೆ ಈ ಪರೀಕ್ಷೆಯ ಸಮಯವೇ ನಾಂದಿಯಾಗಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT