ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡೊ ಕರಾಟೆಗೆ ಮನ್ನಣೆ

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಜನವರಿ ಎರಡನೇ ವಾರ ಪುಣೆಯಲ್ಲಿ ನಡೆದ ಮಹಾರಾಷ್ಟ್ರ ರಾಜ್ಯ ಬುಡೊ ಕರಾಟೆ ಚಾಂಪಿಯನ್‌ಷಿಪ್‌ ಸಂಘಟಕರಲ್ಲಿ ಹೊಸ ಕನಸು ಮತ್ತು ಭರವಸೆ ಮೂಡಿಸಿತ್ತು. ಎರಡು ವರ್ಷ ಉತ್ತಮ ರೀತಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ ಮೂರನೇ ವರ್ಷ ಯಶಸ್ವಿಯಾದರೆ ರಾಷ್ಟ್ರಮಟ್ಟದಲ್ಲಿ ಈ ಕ್ರೀಡೆಗೆ ಹೆಚ್ಚಿನ ಮಾನ್ಯತೆ ಸಿಗುವಂತೆ ಮಾಡಲಾಗುವುದು ಎಂದು ಅಲ್ಲಿನ ಆಡಳಿತ ಮಾತು ಕೊಟ್ಟಿರುವುದೇ ಇದಕ್ಕೆ ಕಾರಣ.

ಚಾಂಪಿಯನ್‌ಷಿಪ್‌ ಆಡಳಿತ ನಡೆಸುವವರ ಮೇಲೆ ಬೀರಿರುವ ಪರಿಣಾಮದ ‘ಫಲಿತಾಂಶ’ಕ್ಕೆ ಅಲ್ಲಿನ ಸಂಘಟ ಕರು ಕಾಯುತ್ತಿದ್ದಾರೆ. ಇದೇ ವೇಳೆ ಇತ್ತ ಕರ್ನಾಟಕದಲ್ಲಿ ಬುಡೊ ಕರಾಟೆಗೆ ಸಂಬಂಧಿಸಿದ ಚಟುವಟಿಕೆ ಗರಿ ಗೆದರಿದೆ. ಪ್ರತಿ ಜಿಲ್ಲೆಯಲ್ಲಿ ಶಾಖೆ ಆರಂಭಿಸುವ ನಿಟ್ಟಿನಲ್ಲಿ ರಾಜ್ಯದ ಪದಾಧಿಕಾರಿಗಳು ಹೆಜ್ಜೆ ಇರಿಸಿದ್ದಾರೆ. ಇದಕ್ಕೆ ಕಾರಣ, ಹುಬ್ಬಳ್ಳಿಯಲ್ಲಿ ಕಳೆದ ಡಿಸೆಂಬರ್ ಎರಡನೇ ವಾರದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌.

ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಕೆಲವು ವರ್ಷಗಳಿಂದ ಬುಡೊ ಕರಾಟೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಐದಾರು ಜಿಲ್ಲೆಗಳಲ್ಲಿ ಫೆಡರೇಷನ್‌ನ ಶಾಖೆಗಳೂ ಆರಂಭಗೊಂಡಿವೆ. ಹೊಸ ಬಗೆಯ ಶೈಲಿಯಲ್ಲಿ ತರಬೇತಿ ನೀಡಲು ತರಬೇತುದಾರರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಫೆಡರೇಷನ್ ಮಾತ್ರ ನಾಜೂಕಿನ ಹೆಜ್ಜೆ ಇರಿಸಲು ನಿರ್ಧರಿಸಿದೆ. ಆದ್ದರಿಂದ ಶಾಖೆಗಳು ನಿಧಾನವಾಗಿ ಆರಂಭವಾಗುತ್ತಿವೆ.

ಏನಿದು ಬುಡೊ ಕರಾಟೆ? 
ಕರಾಟೆಯಲ್ಲಿರುವ ಅನೇಕ ಶೈಲಿ ಪೈಕಿ ಬುಡೊ ಕೂಡ ಒಂದು. ‘ಫೈಟ್‌’ನಲ್ಲಿ ಇತರ ಶೈಲಿಗೂ ಬುಡೊ ಶೈಲಿಗೆ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಆದರೆ ಹರಿದು ಹಂಚಿ ಹೋಗಿರುವ ಕರಾಟೆ ಸಂಘಟನೆಗೆ ವ್ಯವಸ್ಥಿತ ರೂಪ ನೀಡಲು ಈ ಶೈಲಿಯ ನೇತೃತ್ವ ವಹಿಸುತ್ತಿರುವ ರಾಷ್ಟ್ರೀಯ ಬುಡೊ ಕರಾಟೆ ಫೆಡರೇಷನ್‌ ಪ್ರಯತ್ನ ನಡೆಸುತ್ತಿರುವುದರಿಂದ ಬಹತೇಕರು ಇದರ ಕಡೆಗೆ ಒಲವು ತೋರಿಸುತ್ತಿದ್ದಾರೆ.

‘ಕರಾಟೆ ಎಂದರೆ ವ್ಯಾಪಾರ ಎಂಬ ಸ್ಥಿತಿ ಈಗ ನಿರ್ಮಾಣವಾಗಿದೆ. ಅದಕ್ಕೆ ನಿಯಂತ್ರಣ ತಂದು ವ್ಯವಸ್ಥಿತ ರೀತಿಯಲ್ಲಿ ತರಬೇತಿ ನೀಡುವಂತಾಗಬೇಕು, ರಾಷ್ಟ್ರೀಯ ಮಟ್ಟದಲ್ಲಿ ಚಿನ್ನ, ಬೆಳ್ಳಿ ಗೆದ್ದವರಿಗೆ ನೌಕರಿ ಮತ್ತು ಶಾಲಾ ಕಾಲೇಜು ಪ್ರವೇಶದಲ್ಲಿ ಮೀಸಲಾತಿ, ಶೇಕಡಾ 25 ಹೆಚ್ಚುವರಿ ಅಂಕ ಸಿಗಬೇಕು ಎಂಬ ಉದ್ದೇಶ ಇರಿಸಿಕೊಂಡು ಹೊಸ ಶೈಲಿಯ ಫೆಡರೇಷನ್ ಆರಂಭಿಸಲಾಗಿದೆ’ ಎನ್ನುತ್ತಾರೆ ಫೆಡರೇಷನ್ ರಾಷ್ಟ್ರೀಯ ಅಧ್ಯಕ್ಷ ಸುಧಾಕರನ್ ಪಣಿಕ್ಕರ್‌.

‘ಇತರ ಶೈಲಿಗೂ ಬುಡೊಗೂ ಮಹತ್ವದ ವ್ಯತ್ಯಾಸ ವಿಲ್ಲ. ಬಾಕ್ಸಿಂಗ್ ಮತ್ತು ಮಿಶ್ರ ಸಮರ ಕಲೆ ಹೊರತು ಪಡಿಸಿ ಉಳಿದೆಲ್ಲವನ್ನೂ ಒಟ್ಟುಗೂಡಿಸಿ ಮಾಡುವ ಕರಾಟೆಯೇ ಬುಡೊ. ಇದರಲ್ಲಿ ಅಳವಡಿಸಲಾಗಿದೆ. ಕಾಲ್ಪನಿಕ ಫೈಟ್‌ ಇಲ್ಲಿ ವಿಭಿನ್ನ. ಇದಕ್ಕಾಗಿ ಕರಾಟೆಪಟು ನಿತ್ಯವೂ ಪೂರ್ತಿ ದೇಹವನ್ನು ಫಿಟ್ ಇರಿಸಬೇಕಾಗುತ್ತದೆ. ಕಿಕ್ ಮತ್ತು ಪಂಚ್ ಮಾಡುವ ಅಂಗಗಳನ್ನು ಮಾತ್ರ ಫಿಟ್ ಮಾಡುವುದು ಈ ಶೈಲಿಯ ಉದ್ದೇಶವಲ್ಲ’ ಎಂದು ರಾಜ್ಯ ಶಾಖೆಯ ಅಧ್ಯಕ್ಷ ಗಣೇಶ ಹೇಳುತ್ತಾರೆ.

ಭಾರತದಲ್ಲಿ ಈ ಶೈಲಿ ಮೊದಲು ಆರಂಭಗೊಂಡದ್ದು ಮಹಾರಾಷ್ಟ್ರದಲ್ಲಿ. ಈ ಬಗ್ಗೆ ಇದರ ಸ್ಥಾಪಕ ಸುಧಾಕರನ್ ಪಣಿಕ್ಕರ್ ನೀಡುವ ವಿವರಣೆ ಆಸಕ್ತಿದಾಯಕವಾಗಿದೆ.

‘ನಾನು ಬ್ಲ್ಯಾಕ್‌ಬೆಲ್ಟ್ ಹೊಂದಿರುವ ಕರಾಟೆಪಟು. ಸೇನೆಯಲ್ಲಿದ್ದೆ. ನಿವೃತ್ತಿ ನಂತರ ಹೊರಗೆ ಬಂದು ನೋಡಿದರೆ ಕರಾಟೆ ಅನೇಕ ಗುಂಪುಗಳಲ್ಲಿ ಒಡೆದು ಹೋಗಿರವುದು ಕಾಣಿಸಿತು. ಹಿರಿಯ ತರಬೇತು ದಾರರೆಲ್ಲರೂ ಕೈಕಟ್ಟಿ ಕುಳಿತುಕೊಂಡಿದ್ದರು. ಇದರಿಂದ ಬೇಸತ್ತು 2005ರಲ್ಲಿ 24 ರಾಜ್ಯಗಳ 33 ತರಬೇತುದಾರರ ಸಭೆ ಪುಣೆಯಲ್ಲಿ ಆಯೋಜಿಸಿದೆ.

ಭಾರತದಲ್ಲೂ ಬುಡೊ ಶೈಲಿ ಆರಂಭಿಸಲು ಅಂದೇ ನಿರ್ಣಯ ಕೈಗೊಂಡೆವು. ಕೆಲವೇ ವರ್ಷಗಳಲ್ಲಿ 24 ರಾಜ್ಯಗಳಲ್ಲಿ ಶಾಖೆ ಆರಂಭಿಸಿದೆವು. ವಿಶ್ವ ಬುಡೊ ಫೆಡರೇಷನ್ ಅಡಿಯಲ್ಲಿ ಈಗ 33 ದೇಶಗಳಲ್ಲಿ ಬುಡೊ ಕರಾಟೆ ಇದೆ’ ಎಂದು ಪಣಿಕ್ಕರ್ ಹೇಳಿದರು.

ಸಂಸ್ಥೆಗಳ ತಾಕಲಾಟ
ಕರಾಟೆ ತರಬೇತಿ ನೀಡುತ್ತಿರುವವರು ಸಾಮಾನ್ಯ ವಾಗಿ ವಿವಿಧ ಒಕ್ಕೂಟಗಳ ವ್ಯಾಪ್ತಿಗೆ ಸೇರಿರುತ್ತಾರೆ. ಕರಾಟೆ ಕ್ರೀಡೆಗೆ ಸವಲತ್ತುಗಳು ಸಿಗದೇ ಇರುವುದಕ್ಕೆ ಇದುವೇ ಪ್ರಮುಖ ಕಾರಣ ಎಂಬುದು ಬುಡೊ ಫೆಡರೇಷನ್ ವಾದ. ಒಂದೇ ಒಕ್ಕೂಟದಲ್ಲಿ ಇರಲು ಬಯಸುವವರಿಗೆ ಮಾತ್ರ ಬುಡೊ ಶೈಲಿಯಲ್ಲಿ ತರಬೇತಿ ನೀಡಲು ಅವಕಾಶ ನೀಡಲಾಗುತ್ತದೆ.

ಕರಾಟೆಯನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಶಾಲಾ ಕ್ರೀಡೆ ಮತ್ತು ಇಲಾಖಾ ಕ್ರೀಡಾಕೂಟಗಳಲ್ಲಿ ಸೇರಿಸುವ ಪ್ರಯತ್ನ ಬುಡೊ ಒಕ್ಕೂಟದಿಂದ ನಡೆಯುತ್ತಿದೆ. ಆದ್ದರಿಂದ ಒಂದೇ ಸಂಸ್ಥೆಯಲ್ಲಿ ಇರಲು ಇಚ್ಛಿಸುವವರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಲಾಗಿದೆ. ಈ ಷರತ್ತು ವಿಧಿಸಿರುವುದರಿಂದ ಶಾಖೆಗಳು ನಿಧಾನವಾಗಿ ಆರಂಭವಾಗುತ್ತಿವೆ. ಆದರೂ ಅನೇಕರು ಈಗಾಗಲೇ ಬುಡೊ ಫೆಡರೇಷನ್‌ಗೆ ಮನ್ನಣೆ ನೀಡಿ ಬಂದಿದ್ದಾರೆ’ ಎಂದು ಗಣೇಶ ಹೇಳುತ್ತಾರೆ. 

ಏಷ್ಯಾದ ಪ್ರಾಚೀನ ಪರಂಪರೆಯೇ ಮೂಲ
ಬುಡೊ ಕರಾಟೆ ಶೈಲಿಗೆ ಭಾರತ, ಜಪಾನ್‌, ಚೀನಾ ಮತ್ತು ನೇಪಾಳದ ಪ್ರಾಚೀನ ಪರಂಪರೆಯೇ ಮೂಲ ಎನ್ನಲಾಗುತ್ತಿದೆ. ಸಮರ ಕಲೆಯ ತಂತ್ರಗಳು, ದೈಹಿಕ ಕಸರತ್ತು ಮತ್ತು ಮಾನಸಿಕ ಶಿಸ್ತಿಗೆ ಇದರಲ್ಲಿ ಆದ್ಯತೆ ನೀಡಲಾಗುತ್ತಿದೆ. ಸ್ವಯಂ ರಕ್ಷಣೆ, ವ್ಯಾಯಾಮ, ಮಾನಸಿಕ ಆರೋಗ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಗೆ ತಕ್ಕಂತೆ ಇದರ ತರಬೇತಿಯನ್ನು ವಿನ್ಯಾಸಗೊಳಿಸಲಾಗಿದೆ ಎಂಬುದು ಬುಡೊ ಕರಾಟೆ ತಜ್ಞರ ಅಭಿಪ್ರಾಯ.

*
ಕರಾಟೆ ಕಲಿತವರು ಭವಿಷ್ಯದಲ್ಲಿ ಅತಂತ್ರರಾಗಬಾರದು ಎಂಬುದು ಬುಡೊ ಫೆಡರೇಷನ್ ಆಶಯ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರಕಿಸಿಕೊಡುವುದರ ಮೂಲಕ ಈ ಆಶಯ ಈಡೇರಿಸಲು ಸಾಧ್ಯ ಎಂಬುದು ವಾಸ್ತವ. ಹೀಗಾಗಿ ಆ ದಾರಿಯಲ್ಲಿ ಹೆಜ್ಜೆ ಹಾಕುತ್ತಿದ್ದೇವೆ. ಸಮರ ಕಲೆ ಕಲಿಸುವುದು ಮಾತ್ರವಲ್ಲ, ಇದನ್ನು ಕಲಿತವರಿಗೆ ಮುಂದೊಂದು ದಿನ ಉತ್ತಮ ಜೀವನ ನಿರ್ವಹಣೆ ಸಾಧ್ಯವಾಗಬೇಕು ಎಂಬ ಉದ್ದೇಶದಿಂದ ರಾಷ್ಟ್ರೀಯ ಬುಡೊ ಫೆಡರೇಷನ್ ಕಾರ್ಯನಿರ್ವಹಿಸುತ್ತಿದೆ.
-ಸುಧಾಕರನ್ ಪಣಿಕ್ಕರ್‌ ರಾಷ್ಟ್ರೀಯ ಬುಡೊ ಫೆಡರೇಷನ್ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT