ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಳೆಯರ ಟೆನಿಸ್‌ ಸಂಭ್ರಮ ...

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಒಂದೂವರೆ ವರ್ಷದ ಹಿಂದೆ ಮೈಸೂರಿನ ಇನ್ಫೊಸಿಸ್‌ ಕ್ಯಾಂಪಸ್‌ನಲ್ಲಿ ಐಟಿಎಫ್‌ ಓಪನ್ ಟೆನಿಸ್‌ ಟೂರ್ನಿ ನಡೆದಿತ್ತು. ಸೌಲಭ್ಯವೇನೊ ಚೆನ್ನಾಗಿತ್ತು. ಆದರೆ, ಆ ಟೂರ್ನಿ ವೀಕ್ಷಿಸಲು ಕೈಬೆರಳೆಣಿಕೆಯಷ್ಟೂ ಪ್ರೇಕ್ಷಕರು ಇರಲಿಲ್ಲ. ಆಟಗಾರರೇ ಪ್ರೇಕ್ಷಕರಾಗಿದ್ದರು! ಟೂರ್ನಿ ನಡೆಯುತ್ತಿದೆ ಎಂಬುದೇ ಹೊರ ಜಗತ್ತಿಗೆ ಸರಿಯಾಗಿ ಗೊತ್ತಾಗಲಿಲ್ಲ. ಕ್ಯಾಂಪಸ್‌ನಲ್ಲಿ ಭಾರಿ ಭದ್ರತೆ ಇರುವ ಕಾರಣ ಒಳಗೆ ಹೋಗಲು ಸಾಧ್ಯವಾಗಿರಲಿಲ್ಲ.

ಆದರೆ, ಮೈಸೂರಿನ  ಹೃದಯ ಭಾಗದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಶಾಲಾ ಟೆನಿಸ್‌ ಟೂರ್ನಿಗೆ ಅದ್ಭುತ ಯಶಸ್ಸು ಲಭಿಸಿದೆ.  ಸಿಂಥೆಟಿಕ್‌ ಕೋರ್ಟ್‌, ಫ್ಲಡ್‌ಲೈಟ್ಸ್‌ ಸೌಲಭ್ಯ. ಗುಣಮಟ್ಟದ ಆಟ ಹಾಗೂ ಸ್ಥಳೀಯ ಕ್ರೀಡಾಪ್ರೇಮಿಗಳಿಂದ ಲಭಿಸಿದ ಪ್ರೋತ್ಸಾಹಕ್ಕೆ ಮಕ್ಕಳಲ್ಲಿ ಹೊಸ ಕನಸುಗಳು ಚಿಗುರಿವೆ. ದೂರದ ರಾಜ್ಯಗಳಿಂದ ಮಕ್ಕಳೊಂದಿಗೆ ಬಂದಿದ್ದ ಪೋಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಖುಷಿಪಟ್ಟಿದ್ದಾರೆ.

‘ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಮಕ್ಕಳನ್ನು ಕರೆದುಕೊಂಡು ಹಲವು ರಾಜ್ಯಗಳಿಗೆ ತೆರಳಿದ್ದೇನೆ. ಆದರೆ, ಶಾಲಾ ವಿದ್ಯಾರ್ಥಿಗಳ ಟೂರ್ನಿಯೊಂದಕ್ಕೆ ಈ ರೀತಿಯ ಸೌಲಭ್ಯ ಎಲ್ಲೂ ಲಭಿಸಿಲ್ಲ. ಸಣ್ಣ ವಯಸ್ಸಿನಲ್ಲಿ ಸಿಂಥೆಟಿಕ್‌ ಕೋರ್ಟ್‌ನಲ್ಲಿ ಆಡಲು ಅವಕಾಶ ಸಿಕ್ಕಿರುವುದು ಮಕ್ಕಳ ಅದೃಷ್ಟ ಎನ್ನಬಹುದು’ ಎಂದು ನುಡಿದಿದ್ದು ಪುದುಚೇರಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಎ.ತಿಮಾಟೆ.

ಟೆನಿಸ್‌ ಪರಂಪರೆ
ರಾಜ್ಯದ ಟೆನಿಸ್‌ಗೆ ಮೈಸೂರಿನ ಕೊಡುಗೆ ಅಪಾರ. ಟೆನಿಸ್‌ ಆಟದಲ್ಲಿ ಸಕ್ರಿಯವಾಗಿರುವ ನಗರಗಳಲ್ಲಿ ಈಗಲೂ ಮುಂಚೂಣಿಯಲ್ಲಿದೆ. ಈ ನಗರದಿಂದ ರಾಜ್ಯ ಹಾಗೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುತ್ತಿರುವ ಆಟಗಾರರೇ ಅದಕ್ಕೆ ಸಾಕ್ಷಿ. ಪ್ರಹ್ಲಾದ್‌ ಶ್ರೀನಾಥ್ ಅವರಿಂದ ಹಿಡಿದು ಸೂರಜ್‌ ‍ಪ್ರಬೋಧ್‌ವರೆಗೆ ಪ್ರತಿಭಾವಂತ ಆಟಗಾರರನ್ನು ನೀಡಿದೆ. ಸದಾ ಒಂದಿಲ್ಲೊಂದು ಟೂರ್ನಿ, ಕೋಚಿಂಗ್‌ ಶಿಬಿರಗಳು ನಡೆಯುತ್ತಲೇ ಇರುತ್ತವೆ. ಸಿಂಥೆಟಿಕ್‌ ಹಾಗೂ ಕ್ಲೇ ಕೋರ್ಟ್ ಸೇರಿದಂತೆ ಹಲವು ಸೌಲಭ್ಯ ಇಲ್ಲಿವೆ.

ಈಗ ಶಾಲಾಮಟ್ಟದ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸುವ ಮೂಲಕ ಈ ನಗರಿಯು ಶಹಬ್ಬಾಸ್‌ ಎನಿಸಿಕೊಂಡಿದೆ. ಅದಕ್ಕೆ ಕಾರಣವಾದ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಭಾರತೀಯ ಶಾಲಾ ಕ್ರೀಡಾ ಒಕ್ಕೂಟದ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ. 20 ರಾಜ್ಯಗಳ ಸುಮಾರು 400 ಮಕ್ಕಳು 14 ಹಾಗೂ 17 ವರ್ಷದೊಳಗಿನವರ ವಿಭಾಗದ ಟೂರ್ನಿಯಲ್ಲಿ ಪಾಲ್ಗೊಂಡು ಗಮನ ಸೆಳೆದರು.

ಮೈಸೂರು ಟೆನಿಸ್‌ ಕ್ಲಬ್‌ನ ಐದು ಕೋರ್ಟ್‌ಗಳಲ್ಲಿ ಪಂದ್ಯ ನಡೆದವು. ಕೆಲ ಪಂದ್ಯಗಳನ್ನು ಫ್ಲಡ್‌ಲೈಟ್ಸ್‌ನಲ್ಲಿ ಆಯೋಜಿಸಿದ್ದು ವಿಶೇಷ. ಪಂದ್ಯ ವೀಕ್ಷಿಸಲು ನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಿದ್ದರು. ಆದರೆ, ರಾಜ್ಯ ತಂಡದಲ್ಲಿ ಬೆಂಗಳೂರು, ಮೈಸೂರು ಹಾಗೂ ಕಲಬುರ್ಗಿ ಆಟಗಾರರೇ ಅಧಿಕ ಸಂಖ್ಯೆಯಲ್ಲಿದ್ದರು. ಅಪೂರ್ವ ಹಾಗೂ ವಿದುಲಾ ಅವರ ಅಪೂರ್ವ ಆಟದಿಂದ ರಾಜ್ಯ ಬಾಲಕಿಯರ ತಂಡ ಉತ್ತಮ ಪ್ರದರ್ಶನವನ್ನೇ ನೀಡಿತು. ಅಂಥದ್ದೇ ಆಟ ಬಾಲಕರ ವಿಭಾಗದಲ್ಲಿ ಮೂಡಿ ಬರಲಿಲ್ಲ.

‘ಪ್ರದರ್ಶನ ಮಟ್ಟ ಏನೇ ಇರಲಿ. ಗ್ರಾಮೀಣ ಭಾಗದಲ್ಲಿ ಇಂಥ ಟೂರ್ನಿ ಆಯೋಜಿಸುವುದರಿಂದ ಸ್ಥಳೀಯ ಜನರಲ್ಲಿ ಟೆನಿಸ್ ಬಗ್ಗೆ ಆಸಕ್ತಿ ಮೂಡುತ್ತದೆ. ಮಕ್ಕಳು ಕ್ರೀಡೆಯತ್ತ ಆಕರ್ಷಿತರಾಗುತ್ತಾರೆ’ ಎನ್ನುತ್ತಾರೆ ಮಾಜಿ ಆಟಗಾರ ಹಾಗೂ ರೆಫರಿ ಚರಣ್‌.

ಗ್ರಾಮೀಣ ಭಾಗದಲ್ಲಿ ಕೇವಲ ಟೂರ್ನಿ ಆಯೋಜಿಸಿದರೆ ಸಾಲದು. ಶಾಲಾ ಮಕ್ಕಳಿಗೆ ಟೂರ್ನಿ ವೀಕ್ಷಿಸಲು ಅವಕಾಶ ಮಾಡಿಕೊಡಬೇಕು. ಇಂಥ ಟೂರ್ನಿ ನೋಡುತ್ತಾ ಬೆಳೆಯುವ ಮಕ್ಕಳಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಯುತ್ತದೆ ಎನ್ನುವುದು ಹಿರಿಯ ಆಟಗಾರರ ಅಭಿಪ್ರಾಯ.  

*
ಬೇರೆ ಯಾವುದೇ ನಗರ ಇಷ್ಟೊಂದು ಅಚ್ಚುಕಟ್ಟಾಗಿ ಶಾಲಾ ಟೂರ್ನಿಯನ್ನು ಹಿಂದೆಂದೂ ಆಯೋಜಿಸಿಲ್ಲ. ಇಂಥ ಉತ್ತಮ ವಾತಾವರಣದಲ್ಲಿ ಆಡಲು ಮಕ್ಕಳಿಗೆ ಅವಕಾಶ ಲಭಿಸಿದ್ದು ಖುಷಿಯ ವಿಚಾರ
-ಅಮರ್‌ದೀಪ್‌ ಸಿಂಗ್‌ ಟೂರ್ನಿಯ ವೀಕ್ಷಕ, ಚಂಡೀಗಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT