ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ವೈಭವ ಮರುಕಳಿಸಿದೆ...

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

ಭಾರತದ ಹಾಕಿ ವಲಯದಲ್ಲಿ ‘ಡ್ರ್ಯಾಗ್‌ ಫ್ಲಿಕ್‌’ ಪರಿಣತ ಎಂದೇ ಗುರುತಿಸಿಕೊಂಡಿರುವ ಆಟಗಾರ ಕರ್ನಾಟಕದ ವಿ.ಆರ್‌. ರಘುನಾಥ್‌. 2003ರಲ್ಲಿ ಢಾಕಾದಲ್ಲಿ ನಡೆದಿದ್ದ ಸಬ್‌ ಜೂನಿಯರ್‌ ಏಷ್ಯಾಕಪ್‌ನಲ್ಲಿ ಶ್ರೇಷ್ಠ ಆಟ ಆಡಿ ಹಾಕಿ ಲೋಕದ ಗಮನ ಸೆಳೆದಿದ್ದ ಕೊಡಗಿನ ರಘುನಾಥ್‌ ಅವರು 2005ರಲ್ಲಿ ರಾಷ್ಟ್ರೀಯ ಸೀನಿಯರ್‌ ತಂಡಕ್ಕೆ ಪದಾರ್ಪಣೆ ಮಾಡಿದ್ದರು.

ಭಾರತದ ಪರ 228 ಪಂದ್ಯಗಳನ್ನು ಆಡಿ 132 ಗೋಲುಗಳನ್ನು ಗಳಿಸಿರುವ ರಾಜ್ಯದ ಆಟಗಾರ,  ನಾಯಕನಾಗಿಯೂ ಭಾರತ ತಂಡವನ್ನು ಯಶಸ್ಸಿನ ಪಥದಲ್ಲಿ ಮುನ್ನಡೆಸಿ ಸೈ ಎನಿಸಿಕೊಂಡಿದ್ದಾರೆ. ಹಾಕಿ ಇಂಡಿಯಾ ಲೀಗ್‌ನಲ್ಲೂ ಮೋಡಿ ಮಾಡುತ್ತಿರುವ ರಘುನಾಥ್‌ ಅವರು ಉತ್ತರ ಪ್ರದೇಶ ವಿಜರ್ಡ್ಸ್‌ ಪರ ಹೆಚ್ಚು ಗೋಲು ಗಳಿಸಿದ ಆಟಗಾರ ಎಂಬ ಹಿರಿಮೆ ಹೊಂದಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

*ಹಾಕಿ ಇಂಡಿಯಾ ಲೀಗ್‌ ಬಗ್ಗೆ ಹೇಳಿ?
ಹಾಕಿ ಇಂಡಿಯಾ ಲೀಗ್‌ ಶುರುವಾದ ಬಳಿಕ ಭಾರತದ ಹಾಕಿ ರಂಗದಲ್ಲಿ ಹೊಸ ಕ್ರಾಂತಿ ಉಂಟಾಗಿದೆ. ರಾಷ್ಟ್ರೀಯ ಸೀನಿಯರ್‌ ಮತ್ತು ಜೂನಿಯರ್‌ ತಂಡಗಳ ಪ್ರದರ್ಶನ ಮಟ್ಟದಲ್ಲಿ ಸಾಕಷ್ಟು ಸುಧಾರಣೆಯಾಗಿದೆ. ಐದು ವರ್ಷಗಳ ಹಿಂದೆ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 13ನೇ ಸ್ಥಾನದಲ್ಲಿದ್ದ ನಾವು ಐದನೇ ಸ್ಥಾನಕ್ಕೇರಿದ್ದೇವೆ. ರಿಯೊ ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದು ದೊಡ್ಡ ಸಾಧನೆಯೇ.  ಜೂನಿಯರ್‌ ತಂಡ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದು ಕೂಡಾ ಮರೆಯುವಂತಿಲ್ಲ. ಈ ಎಲ್ಲಾ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿಯೇ ಹಾಕಿ ಲೀಗ್‌.

*ಲೀಗ್‌ನಿಂದ ಆಟಗಾರರಿಗೆ ಏನಾದರೂ ಅನುಕೂಲವಾಗಿದೆಯೇ?
ಸಾಕಷ್ಟು ಅನುಕೂಲಗಳಾಗಿವೆ. ಲೀಗ್‌ನಲ್ಲಿ  ಜೂನಿಯರ್‌ ವಿಭಾಗದ ಆಟಗಾರರಿಗೆ ಆಡುವ ಅವಕಾಶ ಸಿಕ್ಕಿದೆ. ಅವರು ಹಿರಿಯ ಆಟಗಾರರನ್ನು ನೋಡಿ ಹೊಸ ವಿಷಯಗಳು ಮತ್ತು ಕೌಶಲಗಳನ್ನು ಕಲಿಯಲು ಇದು ವೇದಿಕೆಯಾಗಿದೆ. ಲೀಗ್‌ನಲ್ಲಿ ಆಡುವುದರಿಂದ ಸಾಕಷ್ಟು ಹಣವೂ ಸಿಗುತ್ತದೆ. ಇದರಿಂದಾಗಿ ಆಟಗಾರರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸಿದೆ. ಮೊದಲೆಲ್ಲಾ ತರಬೇತಿ, ಪ್ರವಾಸ, ಹೀಗೆ ಪ್ರತಿಯೊಂದಕ್ಕೂ ಹಣ ಹೊಂದಿಸುವುದೇ ಆಟಗಾರರಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಹೀಗಾಗಿ ಆಟದೆಡೆಗೆ ಗಮನ ಕೇಂದ್ರೀಕರಿಸುವುದು ಕಷ್ಟವಾಗು ತ್ತಿತ್ತು.ಆದರೆ ಈಗ ಆ ಚಿಂತೆ ಇಲ್ಲ.  ಎಲ್ಲಾ ಸೌಕರ್ಯಗಳನ್ನು ಫ್ರಾಂಚೈಸ್‌ಗಳೇ ಒದಗಿಸುತ್ತಿವೆ. ಜೊತೆಗೆ ನುರಿತ ಕೋಚ್‌ಗಳ ಮಾರ್ಗ ದರ್ಶನವೂ ಆಟಗಾರರಿಗೆ ಸಿಗುತ್ತಿದೆ. ಮೊದಲೆಲ್ಲಾ ಹಾಕಿ ಆಟಗಾರರೆಂದರೆ ಮೂಗು ಮುರಿಯುವವರೇ ಹೆಚ್ಚಿದ್ದರು. ಆದರೆ ಈಗ ಎಲ್ಲೇ ಹೋದರೂ ಜನ ನಮ್ಮನ್ನು ಗುರುತಿಸುತ್ತಾರೆ. ನಮ್ಮ ಜೊತೆ ಫೋಟೊ ತೆಗೆಸಿಕೊಳ್ಳುತ್ತಾರೆ. ಹಸ್ತಾಕ್ಷರ ಪಡೆಯಲು ಮುಗಿ ಬೀಳುತ್ತಾರೆ. ಆಗೆಲ್ಲಾ ಆನಂದವಾಗುತ್ತದೆ.

*ವಿದೇಶಿ ಆಟಗಾರರ ಭಾಗವಹಿಸುವಿಕೆಯಿಂದ ಏನು ಪ್ರಯೋಜನವಾಗಿದೆ?
ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಹೆಸರು ಮಾಡಿರುವ ವಿದೇಶಿ ಆಟಗಾರರು ಲೀಗ್‌ನಲ್ಲಿ ಆಡುತ್ತಿದ್ದಾರೆ. ಅವರ ಅಭ್ಯಾಸ ಕ್ರಮ, ಪಂದ್ಯಕ್ಕೆ ಸಜ್ಜಾಗುವ ಬಗೆ. ಎದುರಾಳಿಗಳನ್ನು ಹಣಿಯಲು ಅನುಸರಿಸುವ ತಂತ್ರ. ದೈಹಿಕ ಕ್ಷಮತೆ ಕಾಪಾಡಿಕೊಳ್ಳಲು ಏನೆಲ್ಲಾ ಕಸರತ್ತು ನಡೆಸುತ್ತಾರೆ, ಅವರ ಆಹಾರ ಕ್ರಮವೇನು, ಹೀಗೆ ಇನ್ನೂ ಅನೇಕ  ವಿಷಯಗಳನ್ನು ಕಲಿಯಲು ಲೀಗ್‌ ಪ್ರಯೋಜನಕಾರಿಯಾಗಿದೆ.

*ನೂತನ ಗೋಲು ಗಳಿಕೆ ನಿಯಮದಿಂದ ಆಟಗಾರರ ಮೇಲೆ ಒತ್ತಡ ಹೆಚ್ಚಿದೆಯಾ?
ನೂತನ ನಿಯಮದ ಅನುಸಾರ ಫೀಲ್ಡ್‌ ಗೋಲು ಮತ್ತು ಪೆನಾಲ್ಟಿ ಸ್ಟ್ರೋಕ್ಸ್‌ಗಳನ್ನು ಎರಡು ಗೋಲುಗಳೆಂದು ಪರಿಗಣಿಸಲಾಗುತ್ತದೆ. ಲೀಗ್‌ನ ಜನಪ್ರಿಯತೆ ಹೆಚ್ಚಿಸುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿದೆ. ಇದರಿಂದ ಆಟದ ರೋಚಕತೆ ಹೆಚ್ಚಿದೆಯೇ ಹೊರತು ಆಟಗಾರರ ಮೇಲೆ ಯಾವ ಬಗೆಯ ಒತ್ತಡವೂ ಇಲ್ಲ.

*ಉತ್ತರ ಪ್ರದೇಶ ವಿಜರ್ಡ್ಸ್‌ ತಂಡದ ಬಗ್ಗೆ ಹೇಳಿ?
ಈ ಬಾರಿ ತಂಡ ಹೊಸ ರೂಪದೊಂದಿಗೆ ಕಣಕ್ಕಿಳಿಯುತ್ತಿದೆ. ಹಿಂದಿನ ಆವೃತ್ತಿಗಳಲ್ಲಿ ಆಡಿದ್ದ ಎಂಟು ಜನ ಆಟಗಾರರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳಲಾಗಿದೆ. ಈಗ ತಂಡ ಎಲ್ಲಾ ವಿಭಾಗಗಳಲ್ಲಿಯೂ ಬಲಿಷ್ಠವಾಗಿದ್ದು ಎದುರಾಳಿಗಳ ಸವಾಲಿಗೆ ಎದೆಯೊಡ್ಡಲು ಸಜ್ಜಾಗಿದೆ.

*ರಾಷ್ಟ್ರೀಯ ತಂಡದ ಕೋಚ್‌ ರೋಲಂಟ್‌ ಓಲ್ಟಮಸ್‌ ಅವರು ವಿಜರ್ಡ್ಸ್‌ ತಂಡದ ತರಬೇತುದಾರರಾಗಿದ್ದಾರೆ. ಅವರ ತರಬೇತಿ ವಿಧಾನ ಹೇಗಿರುತ್ತದೆ?
ಯಾವ ಆಟಗಾರರನ್ನು ಯಾವ ವಿಭಾಗದಲ್ಲಿ ಆಡಿಸಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅಭ್ಯಾಸದ ವೇಳೆ ಹೊಸ ಹೊಸ ಕೌಶಲಗಳನ್ನು ಕಲಿಸುತ್ತಾರೆ. ಆಟಗಾರ ಎಲ್ಲಿ ಎಡವುತ್ತಿದ್ದಾನೆ ಎಂಬುದನ್ನು ಗುರುತಿಸಿ ಅದನ್ನು ತಿದ್ದುತ್ತಾರೆ. ಮುಖ್ಯವಾಗಿ ಆಟಗಾರರು ಯಾವ ಹಂತದಲ್ಲೂ ಎದೆಗುಂದದಂತೆ ನೋಡಿಕೊಳ್ಳುತ್ತಾರೆ. ಸೋಲು, ಗೆಲುವಿನ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಬದಲಾಗಿ ಪ್ರತಿ ಪಂದ್ಯದಲ್ಲೂ ಶ್ರೇಷ್ಠ ಆಟ ಆಡುವಂತೆ ಹುರಿದುಂಬಿಸುತ್ತಾರೆ. ಅವರು ವಿಜರ್ಡ್ಸ್‌ ಕೋಚ್‌ ಆಗಿರುವುದೇ ನಮ್ಮ ಸೌಭಾಗ್ಯ.

*ತಂಡ ಈ ಬಾರಿಯ ಲೀಗ್‌ಗೆ ಹೇಗೆ ಸಜ್ಜಾಗಿದೆ?
ಲೀಗ್‌ ಆರಂಭಕ್ಕೂ ಮುನ್ನ ಲಖನೌದಲ್ಲಿ ಎಂಟು ದಿನಗಳ ತರಬೇತಿ ಶಿಬಿರ ಆಯೋಜಿಸಲಾಗಿತ್ತು.  ಈ ವೇಳೆ ಎಲ್ಲರೂ ಕಠಿಣ ತಾಲೀಮು ನಡೆಸಿದ್ದೇವೆ. ಇದರಿಂದ ಆಟಗಾರರ ಮನೋಬಲವೂ ವೃದ್ಧಿಸಿದೆ.

*ಕ್ರಿಕೆಟಿಗ ಸುರೇಶ್‌ ರೈನಾ ಅವರು ನಿಮ್ಮ ತಂಡದ ಸಹ ಮಾಲೀಕರಾಗಿದ್ದಾರೆ. ಅವರು ಎಂದಾದರು ಆಟಗಾರರನ್ನು ಭೇಟಿ ಮಾಡಿದ್ದಾರೆಯೇ?
ಅವರು ಕ್ರಿಕೆಟ್‌ ಸೇರಿದಂತೆ ಇತರ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದರಿಂದ ಇದುವರೆಗೂ ಯಾರನ್ನೂ ಭೇಟಿ ಮಾಡಿಲ್ಲ. ಆದರೆ ತಂಡ ಗೆದ್ದಾಗಲೆಲ್ಲಾ ಆಟಗಾರರಿಗೆ ಅಭಿನಂದನೆ ಹೇಳುತ್ತಾರೆ. ಅದೇ ನಮಗೆ ಸ್ಫೂರ್ತಿ.

*ನೀವು ಲೀಗ್‌ನಲ್ಲಿ ವಿಜರ್ಡ್ಸ್‌ ಪರ ಹೆಚ್ಚು ಗೋಲು ಗಳಿಸಿದ್ದೀರಿ. ಈ ಬಾರಿ ಯಾವ ರೀತಿ ಸಿದ್ಧತೆ ನಡೆಸಿದ್ದೀರಿ?
ಈ ಬಾರಿಯೂ ಸಕಲ ರೀತಿಯ ಸಿದ್ಧತೆ ನಡೆಸಿದ್ದು ಪ್ರತಿ ಪಂದ್ಯದಲ್ಲೂ ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಡಲು ಪ್ರಯತ್ನಿಸುತ್ತೇನೆ.
*ಲೀಗ್‌ನಲ್ಲಿ ಮೂರನೇ ಸ್ಥಾನ ಗಳಿಸಿದ್ದೇ ನಿಮ್ಮ ತಂಡದ ಶ್ರೇಷ್ಠ ಸಾಧನೆ ಎನಿಸಿದೆ. ಈ ಬಾರಿಯಾದರೂ ಪ್ರಶಸ್ತಿಯ ಕನಸು ಕೈಗೂಡುತ್ತದೆಯೇ?
ಹಿಂದಿನ ಎಲ್ಲಾ ಆವೃತ್ತಿಗಳಲ್ಲೂ ನಾವು ತುಂಬಾ ಚೆನ್ನಾಗಿ ಆಡಿದ್ದೇವೆ. ಸೆಮಿಫೈನಲ್‌ವರೆಗೂ ಪ್ರವೇಶಿಸಿದ್ದೆವಾದರೂ ಆ ಹಂತ ದಾಟಿ ಮುಂದೆ ಸಾಗಲು ಆಗಿರಲಿಲ್ಲ. ಆಗ ಅದೃಷ್ಟವೂ ನಮ್ಮ  ಕೈ ಹಿಡಿದಿರಲಿಲ್ಲ. ಹಿಂದಿನದ್ದನ್ನೆಲ್ಲಾ ಒಂದು ಕೆಟ್ಟ ಕನಸು ಅಂದುಕೊಂಡು ಮರೆತಿದ್ದೇವೆ. ಈ ಬಾರಿ ತಂಡ ಹೊಸ ರೂಪದೊಂದಿಗೆ ಕಣಕ್ಕಿಳಿಯುತ್ತಿದ್ದು ಪ್ರಶಸ್ತಿ ಎತ್ತಿಹಿಡಿಯಲು ಶಕ್ತಿ ಮೀರಿ ಪ್ರಯತ್ನಿಸುತ್ತೇವೆ.

*ನೀವು ಲೀಗ್‌ನಲ್ಲಿ ಎರಡು ಬಾರಿ ‘ಹ್ಯಾಟ್ರಿಕ್‌’ ಗೋಲು ಗಳಿಸಿದ್ದೀರಿ. ಈ ಸಾಧನೆ ಬಗ್ಗೆ ಏನಂತೀರಾ?
ಪಂಜಾಬ್‌ ಮತ್ತು ಮುಂಬೈ ವಿರುದ್ಧ ನನ್ನಿಂದ ‘ಹ್ಯಾಟ್ರಿಕ್‌’ ಸಾಧನೆ ಮೂಡಿಬಂದಿತ್ತು. ನಾನು ಗಳಿಸಿದ ಗೋಲುಗಳಿಂದ ತಂಡಕ್ಕೆ ಗೆಲುವು ಸಿಕ್ಕಿತ್ತು. ಹೀಗಾಗಿ ಅತೀವ ಖುಷಿಯಾಗಿತ್ತು. ಇದು ಇನ್ನಷ್ಟು ಶ್ರೆಷ್ಠ ಸಾಮರ್ಥ್ಯ ತೋರಲು ಪ್ರೇರಣೆಯಾಗಿದೆ.

*ಡೆಲ್ಲಿ ವೇವ್‌ರೈಡರ್ಸ್‌ ವಿರುದ್ಧ ಇದುವರೆಗೆ ಆಡಿದ ಆರು ಪಂದ್ಯಗಳ ಪೈಕಿ ನಿಮ್ಮ ತಂಡ ಒಮ್ಮೆ ಮಾತ್ರ ಗೆದ್ದಿದೆ. ಈ ಬಾರಿ ಆ ತಂಡವನ್ನು ಕಟ್ಟಿಹಾಕಲು ಯಾವ ಬಗೆಯ ರಣತಂತ್ರ ಹೆಣೆದಿದ್ದೀರಿ?
ಡೆಲ್ಲಿ ತಂಡವನ್ನು ಹಣಿಯಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ.ಅದು ಏನು ಎಂಬುದನ್ನು ಈಗಲೇ ಹೇಳುವುದಕ್ಕೆ ಇಚ್ಛಿಸುವುದಿಲ್ಲ. ಪಂದ್ಯದ ಫಲಿತಾಂಶ ಬಂದ ನಂತರ ನಿಮಗೆ ಗೊತ್ತಾಗುತ್ತದೆ.

*ಈ ಬಾರಿಯ ಲೀಗ್‌ನಲ್ಲಿ ಯಾವ ತಂಡ ಬಲಿಷ್ಠವಾಗಿದೆ. ಯಾರಿಗೆ ಪ್ರಶಸ್ತಿ ಒಲಿಯಬಹುದು?
ಎಲ್ಲಾ ತಂಡಗಳಲ್ಲೂ ಪ್ರತಿಭಾನ್ವಿತ ಆಟಗಾರರಿದ್ದಾರೆ. ಹೀಗಾಗಿ ಒಂದೆರಡು ತಂಡವನ್ನು ಮಾತ್ರ ಬಲಿಷ್ಠ ಎಂದರೆ ತಪ್ಪಾಗುತ್ತದೆ. ಪಂದ್ಯದ ದಿನ ಯಾರು ಯಾರನ್ನಾದರೂ ಸೋಲಿಸಬಹುದು. ಲೀಗ್‌ನ ಆರಂಭದಿಂದ ಅಂತಿಮ ಘಟ್ಟದವರೆಗೂ ಯಾರು ಶ್ರೇಷ್ಠ ಆಟ ಆಡುತ್ತಾರೊ ಅವರೇ ಚಾಂಪಿಯನ್ನರಾಗಿ ಹೊರಹೊಮ್ಮುತ್ತಾರೆ.

*ಲೀಗ್‌ನಲ್ಲಿ ಬೆಂಗಳೂರಿನ ತಂಡವಿಲ್ಲವಲ್ಲ? ಇದರಿಂದ ಕರ್ನಾಟಕದಲ್ಲಿ ಲೀಗ್‌ಗೆ ಹೆಚ್ಚು ಮನ್ನಣೆ ಸಿಗುತ್ತಿಲ್ಲ ಎಂಬ ಮಾತಿದೆಯಲ್ಲಾ?
ಸದ್ಯ ಲೀಗ್‌ನಲ್ಲಿ ಬೆಂಗಳೂರಿನ ತಂಡವಿಲ್ಲ ನಿಜ. ಆದರೆ ಮುಂದಿನ ವರ್ಷ ಬೆಂಗಳೂರಿನ ತಂಡವೊಂದು ಕಣಕ್ಕಿಳಿಯು ತ್ತದೆ ಎಂದು ಹೇಳಲಾಗುತ್ತಿದೆ. ಇದರಿಂದ ಹಾಕಿ ಲೀಗ್‌ನ ಕಂಪು ಕರ್ನಾಟಕದ ಎಲ್ಲಾ ಭಾಗಗಳಿಗೂ ಪಸರಿಸಿದಂತಾಗುತ್ತದೆ.

*ಬೆಂಗಳೂರಿನ ತಂಡದಲ್ಲಿ ಆಡುವ ಅವಕಾಶ ಸಿಕ್ಕರೆ ಒಪ್ಪಿಕೊಳ್ಳುತ್ತೀರಾ?
ವಿಜರ್ಡ್ಸ್‌ ಫ್ರಾಂಚೈಸ್‌ ನನಗೆ ಎಲ್ಲವನ್ನೂ ನೀಡಿದೆ. ಹೀಗಾಗಿ ಈ ತಂಡದಲ್ಲಿ ಆಡುವುದಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಬೆಂಗಳೂರಿನ ತಂಡ ಲೀಗ್‌ಗೆ ಪದಾರ್ಪಣೆ ಮಾಡಲು ಇನ್ನು ಒಂದು ವರ್ಷ ಸಮಯವಿದೆ. ಈ ಅವಧಿಯಲ್ಲಿ ಏನು ಬೇಕಾದರೂ ಆಗಬಹುದು. ಹೀಗಾಗಿ ಇದರ ಬಗ್ಗೆ ಈಗಲೇ ಏನನ್ನೂ ಹೇಳಲು ಇಚ್ಛಿಸುವುದಿಲ್ಲ.

*ನಾಯಕನಾಗಿ ನಿಮ್ಮ ಮುಂದಿರುವ ಸವಾಲುಗಳೇನು?
ತಂಡದಲ್ಲಿ ನಮ್ಮ ದೇಶದ ಆಟಗಾರರ ಜೊತೆ ವಿದೇಶಿ ಆಟಗಾರರು ಇರುತ್ತಾರೆ. ಅವರೆಲ್ಲರೊಂದಿಗೂ ಉತ್ತಮ ಒಡನಾಟ ಬೆಳೆಸಿಕೊಳ್ಳಬೇಕು. ಜೊತೆಗೆ ಎಲ್ಲರ ಅಭಿಪ್ರಾಯಕ್ಕೂ ಮನ್ನಣೆ ನೀಡಿ  ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕು. ಆಟಗಾರರು ವಿಶ್ವಾಸ ಕಳೆದುಕೊಂಡಾಗ ಅವರನ್ನು ಹುರಿದುಂಬಿಸಿ ಆತ್ಮ ಸ್ಥೈರ್ಯ ತುಂಬಬೇಕು. 

ರಘುನಾಥ್‌ ಪರಿಚಯ

ಪೂರ್ಣ ಹೆಸರು ಒಕ್ಕಲಿಗ ರಾಮಚಂದ್ರ ರಘುನಾಥ್‌

ಆಡುವ ವಿಭಾಗ ಫುಲ್‌ ಬ್ಯಾಕ್‌

ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ -2005

ಆಡಿದ ಪಂದ್ಯ- 228

ಗೋಲು -132

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT