ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತೆಯೊಳಗೊಬ್ಬ ಚಿತ್ರ ‘ಸಂತ’

Last Updated 22 ಜನವರಿ 2017, 19:30 IST
ಅಕ್ಷರ ಗಾತ್ರ

‘ಅರೆರೆ.. !! ಇದೇನಪ್ಪಾ ಅಲುಗಾಡದ ಜೀವಂತ ಕ್ಯಾನ್ವಾಸು’ ಅಂತ ಸ್ವಲ್ಪ ಗಾಬರಿಯಾಗೋದು ಸಹಜವೇ. ಯಾರೋ ‘ಸಂತ’ನಂತೊಬ್ಬ  ಕುಳಿತಲ್ಲೇ ಧ್ಯಾನಸ್ಥನಾಗಿದ್ದಾಗ ಆತನ ಮೈಮೇಲೆ ಬಣ್ಣ ಎರಚಿ ತಮಾಷೆ ನೋಡ್ತಾ ಇರೋ ಜನಜಂಗುಳಿ ನೋಡಿ ದಂಗಾದ ಮರು ಕ್ಷಣ,  ಕಂಡ ಸತ್ಯವೇ  ಬೇರೆಯದು  ಎಂಬುದೇ ಇಲ್ಲಿ ಗಹನವಾದ ಅಂಶ. ಛಾಯಾಗ್ರಾಹಕ ಹೇಮಂತ್ ಶ್ರೀಯಾನ್ ಮೊನ್ನೆ ನಡೆದ ‘ಚಿತ್ರ ಸಂತೆ’ಯಲ್ಲಿ   ಚಿತ್ರಕಲಾ ಪರಿಷತ್ ಎದುರೇ  ಕ್ಲಿಕ್ಕಿಸಿದ ದೃಶ್ಯವಿದು.

ಅಲ್ಲಿಯೇ  ಚಿತ್ರಕಲಾ ವ್ಯಾಸಂಗ ಮಾಡಿ ತೇರ್ಗಡೆಯಾಗಿರುವ  ಅರುಣ್ ಕುಮಾರ್ ಯಾದವ್ ನಿಶ್ಚಲವಾಗಿ ಯೋಗಿಯಂತೆ ರಸ್ತೆಯಂಚಿನಲ್ಲಿ ಕುಳಿತಿದ್ದಾಗ, ಆತನ ಗೆಳೆಯರಿಬ್ಬರು ಅವನಿಗೆ ಬಿಳಿ ವಸ್ತ್ರ ಹೊದಿಸಿ ಕುಂಚ, ಬಣ್ಣ ಬಣ್ಣದ ಡಬ್ಬಿಗಳನ್ನು ಅಲ್ಲೆಲ್ಲ ಹರಡಿ.. ಆತನ ಬಟ್ಟೆಯನ್ನೇ ಕ್ಯಾನ್ವಾಸ್ ಮಾಡಿ, ಕೊಂಚ ಚಿತ್ರಗಳನ್ನೂ  ಬಿಡಿಸಿ,  ಅಲ್ಲಿಂದ ಮರೆಯಾದರಂತೆ.  

ಪುಕ್ಕಟೆ ಬಣ್ಣ, ಕುಂಚ ನೋಡಿ ಬಂದವರೆಲ್ಲಾ ಆತನ ಬಟ್ಟೆ, ತಲೆ, ಮೈ, ಕೈ, ಕಾಲು ಎಲ್ಲೆಡೆ ಮನಬಂದಂತೆ ಬಣ್ಣ ಹಚ್ಚಿ (ಅಲ್ಲ.. ಎರಚಿ)  ತಮಾಷೆ ನೋಡುವವರೇ ಆಗಿದ್ದರು.  ಸೆಲ್ಫಿ ಕ್ಯಾಮೆರಾಗಳಲ್ಲಿ  ನೂರಾರು ಚಿತ್ರ ಕ್ಲಿಕ್ಕಿಸಿದ್ದನ್ನು  ನೋಡಿ,  ಹೇಮಂತ್ ಶ್ರೀಯಾನ್ ಕೇಳಿದ ಪ್ರಶ್ನೆಗೆ,  ಅರುಣ್ ಕುಮಾರ್   ದಾರ್ಶನಿಕನಂತೆ ಉತ್ತರಿಸಿದರಂತೆ.

‘ವ್ಯಕ್ತಿ ತನ್ನ ಪಾಡಿಗೆ ತನ್ನ ರೀತಿಯಲ್ಲಿ ಜೀವಿಸಲು ಇಷ್ಟಪಟ್ಟರೂ,  ಸುತ್ತಲಿನ ಮಂದಿ, ಕಂಡ  ಕಂಡ ಬಣ್ಣಹಚ್ಚಿ ವಿಕೃತಿಗೊಳಿಸಿ, ಆ ವ್ಯಕ್ತಿಯ ಬಾಹ್ಯ ರೂಪವನ್ನೇ ಬದಲಿಸಿ ಸತ್ಯವನ್ನೇ ಮರೆಮಾಚುವ ಅಪಾಯವನ್ನು ದೃಷ್ಟಾಂತವಾಗಿ ತೋರ್ಪಡಿಸುವ  ಪ್ರಯೋಗ ಅದಾಗಿತ್ತು’ ಎಂದು!.   

ಕೋರಾ ಕಾಗಜ್ ಥರದ ನಿರ್ಜೀವ ಕ್ಯಾನ್ವಾಸ್ ಮೇಲೆ  ಚಿತ್ರಕಾರನೊಬ್ಬ ತನ್ನ ಪ್ರೌಢಿಮೆಯ ಚಿತ್ರ ಬಿಡಿಸಿ ಅದನ್ನು ‘ಜೀವಂತ’ಗೊಳಿಸುವುದಕ್ಕೂ,  ಬದುಕಿದ್ದವನಿಗೇ  ಸುತ್ತಲ ಸಮಾಜ ಮನಬಂದಂತೆ ಬಣ್ಣಬಳಿದು ಅಂತಿಮವಾಗಿ  ‘ನಿರ್ಜೀವ’ವನ್ನಾಗಿಸುವ ವಿಪರ್ಯಾಸಕ್ಕೆ ಕನ್ನಡಿ, ಈ ಪ್ರಯೋಗ ಎಂದೆನಿಸದಿರದು ಅಲ್ಲವೆ?   

ಕನ್ಸೆಲ್ಟೆನ್ಸಿ  ಉದ್ಯೋಗಿಯಾಗಿದ್ದೂ  ಸಾಗರ ಫೋಟೊಗ್ರಫಿಕ್ ಸೊಸೈಟಿಯ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಗಳಲ್ಲಿ  ಪ್ರಶಸ್ತಿ ಗಳಿಸಿರುವ ಹೇಮಂತ್ ಶ್ರೀಯಾನ್ ಅವರಿಗೆ, ಛಾಯಾಗ್ರಹಣದಲ್ಲಿ ಒಂಬತ್ತು ವರ್ಷಗಳ ಅನುಭವವಿದೆ.  ಹಿಮಾಲಯ, ಸಿಕ್ಕಿಂನ ಹಿಮಾಚ್ಛಾದಿತ ಪರ್ವತ ಪ್ರದೇಶದ ಹಾಗೂ ನಾಡಿನ ಅನೇಕ ಗುಡ್ಡ ಬೆಟ್ಟಗಳಲ್ಲಿ ಚಾರಣಗೈದಿದ್ದು ಅವರ  ಸಾಹಸ. 

ಜೊತೆಗೆ ಉತ್ತಮ ಡಿಜಿಟಲ್ ಕ್ಯಾಮೆರಾ ಹೊತ್ತೊಯ್ದು,  ವೈಶಿಷ್ಟ್ಯಪೂರ್ಣ ಲ್ಯಾಂಡ್‌ಸ್ಕೇಪ್‌, ಬದುಕು ಹಾಗೂ ಅಬ್‌ಸ್ಟ್ರಾಕ್ಟ್ ಛಾಯಾಚಿತ್ರಗಳನ್ನೂ ಸೆರೆಹಿಡಿದಿದ್ದಾರೆ. ಈ ಚಿತ್ರ ಸಂತೆಯ ದೃಶ್ಯವನ್ನು ಸೆರೆಹಿಡಿಯಲು ಅವರು ಬಳಸಿದ್ದು, ಲೆನೋವ K3 NOTE ಮೊಬೈಲನ್ನು. 13MP,  ಆಟೋ ಫೋಕಸ್, ಅಪರ್ಚರ್ f 2 ಎಕ್ಸ್‌ಪೋಷರ್‌ನಲ್ಲಿ.

ಈ ಛಾಯಾಚಿತ್ರದೊಂದಿಗೆ ತಾಂತ್ರಿಕ ಮತ್ತು ಕಲಾತ್ಮಕ ವಿಶ್ಲೇಷಣೆ ಇಂತಿವೆ: ಸನಿಹದ ದೃಶ್ಯವೊಂದರ ದಾಖಲಾತಿಗಷ್ಟೇ ಸೀಮಿತವಾಗುವುದು ಮುಖ್ಯವಾದರೆ, ಉತ್ತಮ ಮೊಬೈಲ್ ಅಥವಾ ಇತ್ತೀಚಿನ ಸ್ಮಾರ್ಟ್ ಫೋನ್‌ಗಳ ಪುಟಾಣಿ ಕ್ಯಾಮೆರಾವೇ ಸಾಕಾಗಬಹುದು ಎಂಬುದಕ್ಕೆ ಈ ಚಿತ್ರ ಒಂದು ಒಳ್ಳೆಯ ಉದಾಹರಣೆ.

ಬೀದಿ ಬದಿಯಲ್ಲಿ ಗಂಭೀರವಾಗಿ ಯೋಗಿಯಂತೆ ಕುಳಿತವನೊಬ್ಬನಿಗೆ  ಅಲ್ಲಿ  ಸಿಗದ ಏಕಾಂತ, ಬಣ್ಣದಲ್ಲಿ ಅದ್ದಿ ತೆಗೆದಿರುವಂತಿರುವ ಆತನ,  ನೂಕುನುಗ್ಗಲಿನ ಜನಜಂಗುಳಿ, ಕ್ಯಾಮೆರಾ ಮತ್ತು ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸುವವರ, ಇದೂ ಒಂದು ಆಟವೆಂದು ಖುಷಿಪಡುವ ಪುಟಾಣಿಗಳ,   ತಮಾಷೆ ನೋಡುವವರ, ಇದ್ದ ಅಷ್ಟೇ ಜಾಗದಲ್ಲೇ ಆ ತರಾವರೀ  ಜಂಜಾಟಗಳ ಮೂಲಕವೇ ಬದುಕಿನ ವೈವಿಧ್ಯಮ ಮಜಲುಗಳನ್ನು, ಒಂದೇ ಚೌಕಟ್ಟಿನಲ್ಲಿ ಸುಂದರವಾಗಿ ಸೆರೆಹಿಡಿಯುವಲ್ಲಿ ಛಾಯಾಚಿತ್ರಕಾರ ಹೇಮಂತ್ ಶ್ರೀಯಾನ್ ಕೈಚಳಕ ಪ್ರಶಂಶನೀಯ.

ಡಿಜಿಟಲ್ ಎಸ್ಎಲ್ಆರ್ ಕ್ಯಾಮೆರಾದಲ್ಲಿ  ತ್ವರಿತವಾಗಿ ಅಲ್ಲಿನ ಒಟ್ಟಾರೆ ಸಂದರ್ಭವನ್ನು ಚಿತ್ರದಂಚಿನ ಡಿಸ್ಟಾರ್ಷನ್ ಇಲ್ಲದೇ ತಾಂತ್ರಿಕವಾಗಿ ಇಷ್ಟು ಸಮರ್ಪಕವಾಗಿ  ಮತ್ತು ಆಚೀಚೆ ಯಾರಿಗೂ ತಿಳಿಯದಂತೆ  ಸೆರೆಹಿಡಿಯುವುದು ಕಷ್ಟದ ಸಾಹಸವೇ! ಆದ್ದರಿಂದ, ಛಾಯಾಚಿತ್ರಕಾರ ಡಿಎಸ್ಎಲ್ಆರ್ ಕ್ಯಾಮೆರಾ  ಹೊರತೆಗೆಯದೇ, ತನ್ನ ಕೆಲಸ ಸಾಧಿಸುವಲ್ಲಿ ಸಫಲರಾಗಿದ್ದಾರೆ.

ಇದೊಂದು ಉತ್ತಮ ದಾಖಲೆಯ ಚಿತ್ರದಂತೆನಿಸಿದರೂ, ಈ ಬಗೆಯ ಚಿತ್ರಗಳನ್ನು ಪತ್ರಿಕಾ ಛಾಯಾಗ್ರಹಣವೆಂದೂ ವಿಂಗಡಿಸಬಹುದು.  ನಡೆದ  ಸಂತೆಯ ಸುದ್ದಿಯ ಜೊತೆಗೆ, ಸೂಕ್ತ ಶೀರ್ಷಿಕೆಯೊಂದಿಗೆ  ಮರುದಿನ ಪತ್ರಿಕೆಗಳಲ್ಲಿ ಮುದ್ರಿಸಿದರೆ, ಸಾವಿರ ಪದಗಳಿಗೆ ಈ ಒಂದೇ ಚಿತ್ರ ಸಮನಾಗಬಹುದು!
ಹೊರಾಂಗಣ ದೃಶ್ಯ ಸಂಯೋಜನೆಯಲ್ಲಿ ಸೆರೆಹಿಡಿಯಲ್ಪಟ್ಟ ವಿವಿಧ ‘ವಸ್ತು’ಗಳು (ಸಬ್ಜೆಕ್ಟ್ಸ್), ಮೂಲ ಭಾವನೆಯನ್ನು ಸೂಸುವಲ್ಲಿ ಒಂದಕ್ಕೊಂದು ಪೂರಕವಾಗಿರಬೇಕಾದ್ದು ಮುಖ್ಯವಾದ ಕಲಾತ್ಮಕ ಅಂಶ.

ಈ ಚೌಕಟ್ಟಿನಲ್ಲಿ ಕಣ್ಣಿಗೆ ಗೋಚರಿಸುವ ಪ್ರತಿಯೊಂದು ವಸ್ತುವೂ, ಸುತ್ತುವರಿದ ಹಿರಿ- ಕಿರಿಯರೂ, ಫೋಕಸ್ ಮಾಡುತ್ತಿರುವ ಕ್ಯಾಮೆರಾ ಕಣ್ಣುಗಳೂ,  ಎಲ್ಲ ಒಂದೇ ಆಶಯದೆಡೆ (ಸಂತನಂತೆ ಕುಳಿತವನ ಪಾಡಿನೆಡೆಗೆ)  ನಮ್ಮ ಕಣ್ಣು- ಮನಸ್ಸನ್ನು ಸೆಳೆಯುತ್ತದೆಯೆಂಬುದೇ, ಇದರ ಹೆಚ್ಚುಗಾರಿಕೆ.

ನೀವೂ ಚಿತ್ರ ಕಳುಹಿಸಿ
ಬೆಂಗಳೂರಿನ ಬದುಕು ಬಿಂಬಿಸುವ ಚಿತ್ರಗಳಿಗೆ ಸ್ವಾಗತ.
ಇಮೇಲ್– metropv@prajavani.co.in ಮಾಹಿತಿಗೆ– 080 25880636.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT